ಬುಧವಾರ, ಜೂನ್ 16, 2021
22 °C

ಕಲ್ಲುರ್ಟಿ ಗುಡಿ ಉಳಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಟ್ವಾಳ: ಮಂಗಳೂರು–-ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣ­ಗೊಳ್ಳುತ್ತಿದ್ದು, ತಾಲ್ಲೂಕಿನ ಬಿ.ಸಿ.ರೋಡ್-–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮ­ಗಾರಿ ತ್ವರಿತವಾಗಿ ಕೈಗೆತ್ತಿಕೊಳ್ಳಲು ಬಿ.ಸಿ.­ರೋಡ್‌ನಿಂದ ಹಾಸನ ರಸ್ತೆ  ನಡುವೆ ಸರ್ವೇ ಕಾರ್ಯವೂ ಚುರುಕುಗೊಂಡಿದೆ.ಬಂಟ್ವಾಳ ತಾಲ್ಲೂಕಿನಲ್ಲಿ ಹೆದ್ದಾರಿ ವಿಸ್ತರಣೆ ನೆಪದಲ್ಲಿ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾರಣಿಕ ಪ್ರಸಿದ್ಧ ಕಲ್ಲುರ್ಟಿ ಗುಡಿ ತೆರವುಗೊಳಿಸದೆ ಹಾಗೆಯೇ ಉಳಿಸಿಕೊಳ್ಳಬೇಕು ಎಂಬ ಆಗ್ರಹ ಇಲ್ಲಿನ ನಾಗರಿಕರಿಂದ ಕೇಳಿ ಬಂದಿದೆ.ಇಲ್ಲಿನ ಕಾರಣಿಕ ಪ್ರಸಿದ್ಧ  ಕಲ್ಲುರ್ಟಿ ಗುಡಿ ಆರ್ಥಿಕವಾಗಿಯೂ ಬಲಾಢ್ಯವಾಗಿದ್ದು, ಪ್ರತೀ ವಾರಕ್ಕೆ ಎರಡು ಬಾರಿ ಭಕ್ತರಿಂದ ಅಗೇಲು ಸೇವೆ ಸ್ವೀಕರಿಸಲಾಗುತ್ತಿದೆ. ಗುಡಿಯನ್ನು ತೆರವು­ಗೊಳಿಸದಂತೆ ಸ್ಥಳೀಯ ನಾಗರಿಕರು ಜನಪ್ರತಿನಿಧಿಗಳು ಮತ್ತು ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಮೊರೆ ಹೋಗಿದ್ದಾರೆ.ಸ್ಥಳೀಯ ನರಿಕೊಂಬು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮೇಶ ಬೋಳಂತೂರು ನೇತೃತ್ವದ ನಿಯೋ­ಗ­ವೊಂದು ಮಂಗಳವಾರ ಬೆಂಗಳೂರಿಗೆ ತೆರಳಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರಿಗೆ ಮನವಿ ಸಲ್ಲಿಸಿ ಈ ಬಗ್ಗೆ ಗಮನ ಸೆಳೆದಿರುವುದಾಗಿ ತಿಳಿಸಿದೆ.ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಿರಿ­­­ಯ ಮಹಾಪ್ರಬಂಧಕ ಮಾಥೂರ್ ಮತ್ತಿತರ ಅಧಿಕಾರಿಗಳ ಸಭೆ  ನಡೆಸಿದ ಸಚಿವ ರೈ ಅವರು ಕಲ್ಲುರ್ಟಿ ಗುಡಿ ತೆರವುಗೊಳಿಸದೆ ಎದುರಿನ ಜಾಗ­ದಲ್ಲಿ ರಸ್ತೆ ವಿಸ್ತರಣೆ ನಡೆಸುವಂತೆ ಸೂಚಿಸಿದ್ದಾರೆ. ಕಲ್ಲಡ್ಕದಲ್ಲಿ  ಒಟ್ಟು 45 ಮೀಟರ್ ಅಗಲ ರಸ್ತೆ ಮತ್ತು ಮೇಲ್ಸೇತುವೆಗೆ ಬದಲಾಗಿ ರಸ್ತೆಯ ಎರಡೂ ಬದಿ ತಲಾ ಹದಿನೇಳೂವರೆ ಮೀಟರಿನಂತೆ ವಿಸ್ತರಿಸಿ ಒಟ್ಟು 35 ಮೀಟರ್ ಅಗಲ ರಸ್ತೆ ವಿಸ್ತರಣೆಯಾಗಲಿದೆ ಎಂದು ನಿಯೋಗಕ್ಕೆ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ. ನಿಯೋಗದಲ್ಲಿ ಸತ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಮತ್ತು ಕಲ್ಲಡ್ಕ ಪೇಟೆ ಉಳಿಸಿ ಹೋರಾಟ ಸಮಿತಿ  ಪದಾಧಿಕಾರಿಗಳಾದ ಬಾಲಕೃಷ್ಣ ಮಾಸ್ತರ್, ರಮೇಶ ಬೋರುಗುಡ್ಡೆ, ಲೋಕೇಶ, ದಿನೇಶ ಶೆಣೈ ಕಲ್ಲಡ್ಕ,  ಮತ್ತಿತರರು ಪಾಲ್ಗೊಂಡಿದ್ದಾಗಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.