ಶನಿವಾರ, ಫೆಬ್ರವರಿ 27, 2021
26 °C

ಕಲ್ಲು ಅರಳುವ ಸಮಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲ್ಲು ಅರಳುವ ಸಮಯ

ಇನ್ನು ಮುಂದೆ ನಗರದಲ್ಲಿ ಕಲ್ಲುಗಳೂ ಮಾತಾಡಲಿವೆ. ಇಲ್ಲಿ ಒಂದೊಂದು ಶಿಲ್ಪವೂ ಒಂದೊಂದು ಭಾವಗಳ ಪ್ರತೀಕವಾಗಲಿದೆ. ಹಲವು ಶಿಲ್ಪಿಗಳ ಕನಸುಗಳಿಲ್ಲಿ ಸಾಕಾರ. ಭಾಷೆ, ರೂಪದ ಹಂಗನ್ನು ಮೀರುವ ಈ ಶಿಲ್ಪಕಲೆಗಳಿಗೆ ನೆಲೆ ಕಲ್ಪಿಸಿರುವುದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ). ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸುವ ಉಮೇದಿನಿಂದ ಬಿಡಿಎ ನೂತನ ಶಿಲ್ಪೋದ್ಯಾನ ನಿರ್ಮಿಸಲು ಮುಂದಾಗಿದೆ. ಕೇವಲ ಶಿಲ್ಪಗಳಿಂದ ಅಲಂಕೃತಗೊಳ್ಳಲಿರುವ ಈ ಉದ್ಯಾನದ ಕಾಮಗಾರಿಯ ಶಂಕುಸ್ಥಾಪನೆ ಏಪ್ರಿಲ್ 3ರಂದು ನಡೆಯಿತು. 
ಶಿಲ್ಪ ಕಲಾವಿದರ ಕೇಂದ್ರ

ಭಾರತದಲ್ಲಿ ಶಿಲ್ಪೋದ್ಯಾನದ ಚಿಂತನೆ ಇದೇ ಮೊದಲು. ಶಿಲ್ಪಗಳಿಗೆಂದೇ ಸುಮಾರು 8 ಎಕರೆ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಪ್ರತ್ಯೇಕ ಉದ್ಯಾನ ಶಿಲ್ಪೋದ್ಯಾನ. ಉದ್ಯಾನ ಕೇವಲ ಶಿಲ್ಪಗಳಿಗೆ ಮಾತ್ರವಲ್ಲದೆ ಶಿಲ್ಪಕಲಾವಿದರ ಕೇಂದ್ರವೂ ಆಗಲಿದೆ. ಇದು ಕಲಾವಿದರಿಗೆ ಕಲೆಗೆ ಸಂಬಂಧಿಸಿದ ವಿಚಾರ ವಿನಿಮಯಕ್ಕೆ ವೇದಿಕೆಯೂ ಆಗಲಿದೆ. ಇಲ್ಲಿ ಶಿಲ್ಪಕಲೆ ಕುರಿತು ಸಂಪೂರ್ಣ ಮಾಹಿತಿಯೂ ಸಾರ್ವಜನಿಕರಿಗೆ ಒದಗಲಿದೆ. ಜೊತೆಗೆ ಶಿಲ್ಪ ಕೆತ್ತನೆಗೆ ಬೇಡಿಕೆಯನ್ನೂ ನೀಡಬಹುದು.

ಬನಶಂಕರಿಯಿಂದ ಉತ್ತರಹಳ್ಳಿ ಮಾರ್ಗವಾಗಿ ಹಾದುಹೋಗುವಾಗ ಸಿಗುವ ಚನ್ನಸಂದ್ರದ ವಿಶಾಲ ಪ್ರದೇಶದಲ್ಲಿ (ಬನಶಂಕರಿ 6ನೇ ಹಂತ, 1ನೇ ಬ್ಲಾಕ್) ಶಿಲ್ಪೋದ್ಯಾನ ತಲೆ ಎತ್ತಲಿದೆ. ಉದ್ಯಾನನಗರಿ ಬೆಂಗಳೂರು ಕಲಾನಗರಿಯಾಗುವ ಹಂಬಲದೊಂದಿಗೆ ಈ ಹೆಜ್ಜೆ ಇಟ್ಟಿದೆ.ಬೆಂಗಳೂರಿನಲ್ಲಿ ಉದ್ಯಾನವನಗಳು ಕಡಿಮೆಯಿಲ್ಲ. ಆದರೆ ಕೇವಲ ಉದ್ಯಾನವಲ್ಲದೆ ಜನರಲ್ಲಿ ಕಲಾಭಿರುಚಿಯನ್ನೂ ಮೂಡಿಸುವ, ಶಿಲ್ಪಕಲಾವಿದರ ಕೇಂದ್ರವಾಗುವ ಸ್ಥಳವೊಂದು ನಿರ್ಮಾಣವಾಗಬೇಕೆಂಬ ಹಂಬಲದಿಂದ ಈ ಶಿಲ್ಪೋದ್ಯಾನ ಆರಂಭಗೊಳ್ಳುತ್ತಿದೆ.ಸೂಕ್ಷ್ಮ ಸಂವೇದನೆಗಳನ್ನು ಶಿಲ್ಪಗಳ ಮೂಲಕ ಅಭಿವ್ಯಕ್ತಪಡಿಸಹೊರಟಿರುವುದು ಈ ವಿನೂತನ ಯೋಜನೆಯ ವಿಶೇಷ. ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಕೇವಲ ಶಿಲ್ಪಗಳಿಗೆಂದೇ ಉದ್ಯಾನ ರೂಪುಗೊಳ್ಳುತ್ತಿದೆ. ಶಿಲ್ಪಗಳ ಜೊತೆ ಹಸಿರು ಹಾಸು, ಬಣ್ಣಬಣ್ಣದ ಹೂಗಿಡಗಳು, ನೀರಿನ ಚಿಲುಮೆಗಳು ಉದ್ಯಾನದ ಸೊಬಗಿಗೆ ಬೋನಸ್ಸು! ದೇಶದ ಸಮಾಕಾಲೀನ ಯುವ ಕಲಾವಿದರ ಅನೇಕ ಶಿಲ್ಪಗಳು ಇಲ್ಲಿ ಅರಳಲಿದೆ. ಐತಿಹಾಸಿಕ, ಪೌರಾಣಿಕ ಶಿಲ್ಪಗಳ ಬದಲಾಗಿ  ಸಮಕಾಲೀನ ಚಿಂತನೆ, ಆಶಯಗಳನ್ನು ಬಿಂಬಿಸುವ ಶಿಲ್ಪಗಳಿಗೆ ಇಲ್ಲಿ ಹೆಚ್ಚು ಒತ್ತು ನೀಡಲಾಗಿದೆ.ಮನುಷ್ಯನ ಭಾವನೆಗಳನ್ನೇ ಮೂಲವಾಗಿಸಿಕೊಂಡು  ತಯಾರಿಸಲಾಗಿರುವ ಈ ಶಿಲ್ಪಗಳು ಜನರ ಮನಸೆಳೆಯಲಿವೆ. ಒಂದೊಂದು ಶಿಲ್ಪವೂ ಒಂದೊಂದು ಕತೆಯನ್ನೇ ತೆರೆದಿಡುವಂತಿದೆ. ಕಲೆಯ ಜೀವಂತಿಕೆಯನ್ನು ನೋಡಬಯಸುವವರಿಗೆ ಇದೊಂದು ಅತ್ಯುತ್ತಮ ತಾಣ.ಶಿಲ್ಪೋದ್ಯಾನದ ಪೂರ್ವತಯಾರಿಯಾಗಿ 2010 ಮತ್ತು 11ರಲ್ಲಿಯೇ ಎರಡು ಕಲಾ ಶಿಬಿರಗಳನ್ನು ಏರ್ಪಡಿಸಲಾಗಿತ್ತು. ಕಲಾವಿದರಾದ ಮುಂಬೈನ ಆನಂದ ಪ್ರಭು ದೇಸಾಯಿ, ಜಹಂಗೀರ್ ಜಾನಿ, ವಿಶಾಖಪಟ್ಟಣಂನ ಹರಿಪ್ರಸಾದ್, ಬರೋಡಾದ ವೇದಗುಪ್ತಾ, ದೀಪಕ್ ರಸೈಲಿ, ಅಪೂರ್ವ ನಂದಿ, ವಿನೋದ್ ಪಟೇಲ್, ದೀಪಕ್ ಖತ್ರಿ, ಹೈದರಾಬಾದ್‌ನ ಅಲೆಕ್ಸ್ ಮ್ಯಾಥ್ಯೂ, ಮೈಸೂರಿನ ಸಿ.ಸುಚೇಂದರ್, ದೆಹಲಿಯ ವೇಣು ಗೋಪಾಲ್, ಬೆಂಗಳೂರಿನ ಪ್ರದೀಪ್ ಕಂಬತ್ತಳ್ಳಿ, ಜಿ.ಸುರೇಶ್ ಕುಮಾರ್ ಹಾಗೂ ಉದಯ ವೀರ್ ಸಿಂಗ್ ಶಿಬಿರದಲ್ಲಿ ಭಾಗವಹಿಸಿ 25 ಕಲಾನಿಪುಣರಿಂದ ತರಬೇತಿ ಪಡೆದು ಬೃಹತ್ ಶಿಲ್ಪಗಳನ್ನು ತಯಾರು ಮಾಡಿದರು. ಈ ಶಿಲ್ಪೋದ್ಯಾನಕ್ಕೆ ಇವುಗಳದ್ದೇ ಮುನ್ನುಡಿ.ಸುಮಾರು ಎಂಟು ಎಕರೆ ಪ್ರದೇಶದಲ್ಲಿ ತೆರೆದುಕೊಳ್ಳಲು ಸಜ್ಜಾಗಿರುವ ಈ ಶಿಲ್ಪ ಪ್ರಪಂಚವನ್ನು ಜನರಲ್ಲಿ  ಕಲಾಭಿರುಚಿ ಹೆಚ್ಚಿಸಲು ಮತ್ತು ಶಿಲ್ಪ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆರಂಭಿಸಲಾಗಿದೆ. ಈ ಉದ್ಯಾನದ ಕಾಮಗಾರಿ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದ ಕಾಮಗಾರಿ 2012ರಲ್ಲಿ ಪೂರ್ಣಗೊಂಡರೆ, ಎರಡು ಮತ್ತು ಮೂರನೇ ಹಂತದ ಕಾಮಗಾರಿ 2013ರಲ್ಲಿ ಸಂಪೂರ್ಣಗೊಳ್ಳಲಿದೆ.ಅಷ್ಟೇ ಅಲ್ಲ, ಇಲ್ಲಿ ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕಲಾವಿದರು ಒಂದೆಡೆ ಚರ್ಚಿಸಲು, ಕಲಾ ಚಿಂತನೆ ವಿನಿಮಯ ಮಾಡಿಕೊಳ್ಳುವ ವ್ಯವಸ್ಥೆಯೂ ಇದೆ. ಈ ಶಿಲ್ಪೋದ್ಯಾನವನ್ನು ವಿಶ್ವದ ಪ್ರವಾಸೀ ತಾಣವನ್ನಾಗಿ ಅಭಿವೃದ್ಧಿಪಡಿಸುವ ಕನಸನ್ನೂ ಹೊಂದಿದೆ.    

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.