ಸೋಮವಾರ, ಮಾರ್ಚ್ 1, 2021
29 °C
ನಗರ ಸಂಚಾರ

ಕಲ್ಲು ಒಡೆಯುವವರ ಕರುಣಾಜನಕ ಬದುಕು

ಪ್ರಜಾವಾಣಿ ವಾರ್ತೆ/ ವೆಂಕಟೇಶ ಇಮ್ರಾಪುರ Updated:

ಅಕ್ಷರ ಗಾತ್ರ : | |

ಕಲ್ಲು ಒಡೆಯುವವರ ಕರುಣಾಜನಕ ಬದುಕು

ಗದಗ: ಆಧುನಿಕ ಜಗತ್ತಿಗೆ ಮಾನವ ತನ್ನನ್ನು ಸಮರ್ಪಿಸಿಕೊಂಡ ಮೇಲೆ ಸಾಕಷ್ಟು ಬದಲಾವಣೆ ಕಾಣುತ್ತಿದ್ದೇವೆ. ಬೀಸುವ ಕಲ್ಲು, ಒಳಕಲ್ಲು, ಕಡಬತ್ ಕಲ್ಲು, ಗುಂಡುಕಲ್ಲುಗಳ ಲೋಕ ಮಾಯವಾಗಿ ಮಿಕ್ಸರ್, ಗ್ರೈಂಡರ್, ವಾಷಿಂಗ್ ಮಷಿನ್‌ನಂತಹ ಗೃಹೋಪ ಯೋಗಿ ವಸ್ತುಗಳು ಆವರಿಸಿಕೊಂಡಿವೆ.ಕಲ್ಲುಗಳ ಕೆತ್ತನೆ ಮಾಡುವುದೇ ಕಾಯಕ ಎಂದು ನಂಬಿ ಜೀವನ ನಡೆ ಸುತ್ತಿರುವ ಅನೇಕ ಕುಟುಂಬಗಳು ಅಕ್ಷರಶಃ ಇಂದು ಬೀದಿಗೆ ಬಿದ್ದಿವೆ. ಅಂತಹ ಕುಟುಂಬಗಳು ನಗರದಲ್ಲಿ ಸಾಕಷ್ಟಿವೆ.ಪುಟ್ಟ ಗುಡಿಸಲು, ಗುಡಿಸಲು ಮುಂದೆ ಕಾಣುವ ಒಳಕಲ್ಲುಗಳು, ಪರಿ ಸರದಿಂದ ಪಾಠ ಕಲಿಯುತ್ತಿರುವ ಮಕ್ಕಳು, ದಶಕಗಳಿಂದ  ನಗರದ ಸ್ಟೇಷನ್ ರಸ್ತೆಯ ಐಎಂಎ ರಕ್ತ ಭಂಡಾರ ಎದುರಿಗೆ ಈ ಕುಟುಂಬಗಳು ಜೀವನ ಸಾಗಿಸುತ್ತಿವೆ.ನೆಲವೇ ಹಾಸಿಗೆ, ಆಕಾಶವೇ ಹೊದಿಕೆ ಬಯಲೇ ಮನೆ ಅಂದುಕೊಂಡು ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿ ದ್ದಾರೆ. ರಸ್ತೆ ಬದಿಯ ಚಿಕ್ಕ ಜಾಗದಲ್ಲಿ ಪ್ಲಾಸ್ಟಿಕ್ ಮತ್ತು ಬ್ಯಾನರ್‌ಗಳನ್ನೇ ಗುಡಿಸಲಿಗೆ ಹೊದಿಕೆ ಮಾಡಿಕೊಂಡು ಚಳಿ, ಮಳೆ, ಬಿಸಿಲು ಎನ್ನದೇ ನಾಗೇಶ ಒಡ್ಡರ ಅವರ ಬದುಕಿನ ಬಂಡಿ ಸಾಗುತ್ತಿದೆ.ಕಲ್ಲು ಕೆತ್ತನೆಯಲ್ಲಿ ಹಲವು ವರ್ಷ ಗಳಿಂದ ತೊಡಗಿರುವ ಭೀಮಕ್ಕ ಒಡ್ಡರ ಹೇಳುವ ಪ್ರಕಾರ, ‘ಮನೆಯ ಸದಸ್ಯರಿಗೆ ಈ ವೃತ್ತಿ ಹೊರತು ಪಡಿಸಿದರೆ ಬೇರೆ ಏನೂ ಗೊತ್ತಿಲ್ಲ. ಕರಿಕಲ್ಲು ಬೆಳಗಾವಿ ಯಿಂದ, ಬಿಳಿಕಲ್ಲು ಹನುಮಸಾಗರ ದಿಂದ ತಂದು ಬೀಸುವ ಕಲ್ಲು, ಒಳಕಲ್ಲು, ಕಡಬತ್ ಕಲ್ಲು, ನಾಗಪ್ಪನ ಕಲ್ಲು ಮಾಡ ಲಾಗುತ್ತದೆ. ಒಳಕಲ್ಲು ಮಾಡಲು ಒಂದು ದಿನ ಬೇಕಾದರೆ, ಬೀಸುವಕಲ್ಲು ಮಾಡಲು ಎರಡು ದಿನ ಬೇಕು. ಮದುವೆ, ಮುಂಜಿ, ಹಬ್ಬ ಹರಿ ದಿನಗಳಲ್ಲಿ ಸ್ವಲ್ಪ ಬೇಡಿಕೆ. ಉಳಿದಂತೆ ವರ್ಷ ಪೂರ್ತಿ ವ್ಯಾಪಾರ ಅಷ್ಟಕಷ್ಟೆ ಎನ್ನುತ್ತಾರೆ ಅವರು.

‘ಮೂಲತಃ ಕೊಪ್ಪಲ ಜಿಲ್ಲೆಯ ಹನುಮಸಾಗರ ಗ್ರಾಮದಿಂದ ಬಂದಿ ರುವ ನಾವು ದಶಕಗಳಿಂದ ಇಲ್ಲಿಯೇ ನೆಲೆಸಿದ್ದೇವೆ. ಸ್ವಂತ ಮನೆ ಇಲ್ಲ. ಎರಡು ವರ್ಷಗಳ ಹಿಂದೆ ಪಡಿತರ ಕಾರ್ಡ್‌ ನೀಡಿರುವುದು ಸ್ವಲ್ಪ ನೆಮ್ಮದಿ ಸಿಕ್ಕಿದಂತಾ ಗಿದೆ. ಆದರೂ ಶಾಶ್ವತ ಸೂರಿಗಾಗಿ ಹೋರಾಟ ಮಾಡಲೇಬೇಕು’ ಎಂದು ಅಳಲು ತೋಡಿಕೊಂಡರು.ರಸ್ತೆ ಬದಿ ಜೀವನ ನಡೆಸುತ್ತಿರುವ ಈ ಕುಟುಂಬದ ಕೂಗು ಎಂದಾದರೂ ಒಂದು ದಿನ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳಿಗೆ ಕೇಳಿಸಿಕೊಳ್ಳಬಹುದು ಎಂಬ ಆಶಾಭಾವದೊಂದಿಗೆ ದಿನಗಳನ್ನು ದೂಡುತ್ತಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.