ಕಲ್ಲು ಗಣಿಗಾರಿಕೆ: ನಲುಗಿದ ಗೊಮ್ಮಟಮೂರ್ತಿ!

7

ಕಲ್ಲು ಗಣಿಗಾರಿಕೆ: ನಲುಗಿದ ಗೊಮ್ಮಟಮೂರ್ತಿ!

Published:
Updated:

ಪ್ರಜಾವಾಣಿ ವಾರ್ತೆ

ಮದ್ದೂರು: ಗಂಗರ ಕಾಲದ ಪ್ರಸಿದ್ಧ ಜೈನಕ್ಷೇತ್ರವಾಗಿದ್ದ ಅರೆತಿಪ್ಪೂರು ಬೆಟ್ಟ ಹಾಗೂ ಬೆಟ್ಟದ ಮೇಲಿರುವ ಗೊಮ್ಮಟ ಮೂರ್ತಿ ಸ್ಥಳೀಯರ ಕಲ್ಲು ಗಣಿಗಾರಿಕೆಯಿಂದ ಈಗಾಗಲೇ ನಲುಗಿದೆ ಎಂದು ಸಾಹಿತಿ ತೈಲೂರು ವೆಂಕಟಕೃಷ್ಣ ವಿಷಾದಿಸಿದರು.ತಾಲ್ಲೂಕಿನ ಪ್ರಸಿದ್ಧ ಜೈನಕ್ಷೇತ್ರ ಅರೆತಿಪ್ಪೂರು ಹಾಗೂ ಅರುವನಹಳ್ಳಿಗೆ ಮಂಗಳವಾರ ಭೇಟಿ ನೀಡಿದ ಮಂಡ್ಯ ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಧ್ಯಯನ ಶಿಬಿರದಲ್ಲಿ ಅವರು ಮಾತನಾಡಿದರು.ಅರೆತಿಪ್ಪೂರು ಉತ್ತಮ ಪ್ರವಾಸಿ ಕೇಂದ್ರವಾಗುವ ಎಲ್ಲ ಲಕ್ಷಣಗಳು ಇದ್ದು, ಕೂಡಲೇ ತಾಲ್ಲೂಕು ಆಡಳಿತ ಗಮನ ಹರಿಸಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.ಮೊದಲಿಗೆ ವಿದ್ಯಾರ್ಥಿಗಳು ಅರುವನಹಳ್ಳಿಗೆ ಭೇಟಿ ನೀಡಿ, ಅಲ್ಲಿನ ವೀರಕಲ್ಲು, ಮಾಸ್ತಿಕಲ್ಲುಗಳ ಬಗೆಗೆ ಮಾಹಿತಿ ಸಂಗ್ರಹಿಸಿದರು.

ನಂತರ ಅಲ್ಲಿಂದ ಅರೆತಿಪ್ಪೂರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ, ಶ್ರಮದಾನ ಮೂಲಕ ಅಲ್ಲಿನ ಕಸ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಿದರು. ಸಾಹಿತಿ ಮಹಮದ್ ಕಲೀವುಲ್ಲಾ, ಎರಡು ಕ್ಷೇತ್ರಗಳ ಚಾರಿತ್ರಿಕ ಹಿನ್ನೆಲೆ ಹಾಗೂ ಮಹತ್ವವನ್ನು ವಿವರಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟಸ್ವಾಮಿ, ಮಾಜಿ ಅಧ್ಯಕ್ಷ ಆರ್.ಸಿ.ಶಿವಲಿಂಗೇಗೌಡ ಆಗಮಿಸಿದ್ದ 24 ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಿ ಬೀಳ್ಕೊಟ್ಟರು. ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಲಾರಾ ಪ್ರಸನ್ನ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಕೃಷ್ಣೇಗೌಡ, ಉಪನ್ಯಾಸಕಿ ಪುಷ್ಪಾ, ಸಂತೋಷ್, ಮುಖಂಡರಾದ ತೈಲೂರು ಸಿದ್ದರಾಜು ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry