ಭಾನುವಾರ, ಏಪ್ರಿಲ್ 18, 2021
32 °C

ಕಲ್ಲು ತೂರಾಟ: ಆರೋಪಿಗಳ ಬಂಧನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಸಕಲೇಶಪುದಲ್ಲಿ ಈಚೆಗೆ ನಡೆದ ಅಪಘಾತದ ಬಳಿಕ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ವ್ಯಾಪಾರಿಗಳಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿದ್ದಾರೆ. ಈ ಕೃತ್ಯ ನಡೆಸಿದವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಕಲೇಶಪುರದ ವರ್ತಕರ ಸಂಘದ ನೇತೃತ್ವದಲ್ಲಿ ವ್ಯಾಪಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.`ಅಪಘಾತದಲ್ಲಿ ಯುವಕ ಪ್ರಾಣ ಬಿಟ್ಟಿರುವುದು ಅತ್ಯಂತ ದುಃಖದ ವಿಚಾರ. ಆ ಬಗ್ಗೆ ನಮಗೂ ಬೇಸರವಿದೆ. ಆದರೆ ಅದನ್ನೇ ಕಾರಣವಾಗಿಟ್ಟುಕೊಂಡು ಅಂಗಡಿಗಳ ಮೇಲೆ, ಸುತ್ತಮುತ್ತಲಿನ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದುರುವುದ, ಪತ್ರಕರ್ತರ ಮೇಲೆ ದಾಳಿ ನಡೆಸಿರುವುದನ್ನು ಸಮರ್ಥಿಸಲಾಗದು. ಇಂಥ ಕೃತ್ಯ ಎಸಗಿದವರನ್ನು ಬಂಧಿಸದಿದ್ದರೆ ಸರ್ಕಾರವೇ ಅವರಿಗೆ ಬೆಂಬಲ ನೀಡಿದಂತಾಗುತ್ತದೆ~ ಎಂದು ಪ್ರತಿಭಟನಾಕಾರರು ನುಡಿದರು.ಈ ಸಂದರ್ಭದಲ್ಲಿ ಮಾತನಾಡಿದ ವಕೀಲ ಶ್ರೀನಿವಾಸಗೌಡ, `ಅಪಘಾತವನ್ನು ನಿಮಿತ್ತ ಮಾಡಿಕೊಂಡು ದುಷ್ಟಕೂಟವೊಂದು ಸಕಲೇಶಪುರದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದೆ. ನ್ಯಾಯಯುತವಾಗಿ ರಸ್ತೆ ಅಗಲಗೊಳಿಸಲು ಯಾರ ವಿರೋಧವೂ ಇಲ್ಲ.  ಆದರೆ ಆ ನೆಪದಲ್ಲಿ ಇಂಥ ಕೃತ್ಯಕ್ಕೆ ಅವಕಾಶ ನೀಡಬಾರದು.ಪಟ್ಟಣದ ಅನೇಕ ಸಂಘಟನೆಗಳು ಆಗಾಗ ಬಂದು ವರ್ತಕರಿಂದ ದೇಣಿಗೆಯನ್ನು ಸಂಗ್ರಹಿಸುತ್ತಿವೆ. ಎಲ್ಲ ಕಾರ್ಯಕ್ರಮಗಳಿಗೂ ಸಹಕಾರ  ನೀಡುವುದರ ಜತೆಗೆ ವ್ಯಾಪಾರಿಗಳೂ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.ಅಪಘಾತದ ಮರುದಿನ ಕರೆದಿದ್ದ ಬಂದ್‌ಗೂ ವ್ಯಾಪಾರಿಗಳು ಸಹಕಾರ ನೀಡಿದ್ದಾರೆ. ಆದರೆ ಕೆಲವು ಪುಂಡರು ಪಟ್ಟಣದಲ್ಲಿ ಭಯದ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಿದ್ದು ಇದಕ್ಕೆ ಅವಕಾಶ ನೀಡಬಾರದು. ಘಟನೆಯನ್ನು ಪೊಲೀಸ್ ವರಿಷ್ಠಾಧಿಕಾರಿಯವರೂ ನೋಡಿದ್ದು, ಕೂಡಲೇ ಕಿಡಿಗೇಡಿಗಳನ್ನು ಬಂಧಿಸುವ ಕೆಲಸ ಮಾಡಬೇಕು~ಎಂದರು.ಕಾಂಗ್ರೆಸ್ ವಕ್ತಾರ ವೈ.ಪಿ. ರಾಜೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ವಿದ್ಯಾಶಂಕರ್ ಹಾಗೂ ವ್ಯಾಪಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ರಕ್ಷಣೆ ನೀಡಲು ಒತ್ತಾಯ

ಸಕಲೇಶಪುರ ವರದಿ: ಪಟ್ಟಣದ ಬೆಂಗಳೂರು- ಮಂಗಳೂರು ರಸ್ತೆಯಲ್ಲಿ ಭಾನುವಾರ ರಸ್ತೆ ಅಪಘಾತ ನಡೆದ ಸಂದರ್ಭದಲ್ಲಿ ವಾಹನಗಳು ಹಾಗೂ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಿ, ತಮಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ವರ್ತಕರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.  ಪಟ್ಟಣದ ಬಿ.ಎಂ. ರಸ್ತೆಯ ವರ್ತಕರು ಬೆಳಿಗ್ಗೆ 6ರಿಂದ ಮಧ್ಯಾಹ್ನ 3 ರವರೆಗೆ ಅಂಗಡಿ ಮುಂಗಟ್ಟು ಮುಚ್ಚಿ ಪ್ರತಿಭಟನೆ ನಡೆಸಿದರು. ಬೆಳಗ್ಗೆ 10 ಗಂಟೆ ಸುಮಾರಿಗೆ ಸಕಲೇಶ್ವರಸ್ವಾಮಿ ದೇಗುಲದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.  ಉಪವಿಭಾಗಾಧಿಕಾರಿ ಕಚೇರಿ ಮುಂದೆ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ವರ್ತಕರು, ಬಿ.ಎಂ. ರಸ್ತೆಯಲ್ಲಿ ಯಾವುದೇ ಅಪಘಾತ ಸಂಭವಿಸಲಿ ರಸ್ತೆಯ ಎಲ್ಲ ಅಂಗಡಿಗಳ ಬಾಗಿಲು ಮುಚ್ಚಿಸಲಾಗುತ್ತದೆ. ಅಪಘಾತಕ್ಕೆ ರಸ್ತೆಯ ಬದಿಯಲ್ಲಿರುವ ಅಂಗಡಿ, ಕಟ್ಟಡ ಮಾಲಿಕರೇ ಕಾರಣ ಎಂದು ಬಾಯಿಗೆ ಬಂದಂತೆ ಬೈಯುತ್ತಾರೆ. ರಸ್ತೆ ವಿಸ್ತರಣೆ ಆಗಬಾರದು ಎಂದು ಒಂದು ದಿನವೂ ಪ್ರತಿಭಟನೆ ಮಾಡುವುದಾಗಲಿ, ನ್ಯಾಯಾಲಯಕ್ಕೆ ಹೋಗುವುದಾಗಲಿ ಮಾಡಿಲ್ಲ. ಕಟ್ಟಡ ಹಾಗೂ ನಿವೇಶನಕ್ಕೆ ಸೂಕ್ತ ಪರಿಹಾರ ಬೇಕು ಎಂಬ ಬೇಡಿಕೆ ಮಾತ್ರ ಕಟ್ಟಡ ಮಾಲಿಕರಿಂದ ಇದೆ. ತಮ್ಮ ಹಕ್ಕು ಕೇಳುವುದನ್ನೇ ತಪ್ಪು ಎಂದು ಬಿಂಬಿಸಿ  ಅಪರಾಧಿಗಳಂತೆ ನೋಡುತ್ತಿರುವುದು. ತಮ್ಮ ಅಂಗಡಿ ಮುಂಗಟ್ಟುಗಳು ಹಾಗೂ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಹಾನಿ ಮಾಡುವುದು, ಅಂಗಡಿಗಳ ಮುಂದೆ ನಿಲ್ಲಿಸಿದ ತಮ್ಮಗಳ ವಾಹನಗಳನ್ನು ಜಖಂಗೊಳಿಸಿರುವುದರಿಂದ ನಷ್ಟ ಉಂಟಾಗಿದೆ. ಭಾನುವಾರದ ಹಿಂಸಾತ್ಮಕ ಘಟನೆಯಿಂದ ತಮ್ಮ ಮನೆಗಳಲ್ಲಿ ಮಹಿಳೆಯರು, ಮಕ್ಕಳು ಭಯದ ನೆರಳಿನಲ್ಲಿದ್ದಾರೆ. ಹಿಂಸೆಯಲ್ಲಿ ತೊಡಗಿದ ದುಷ್ಕರ್ಮಿಗಳನ್ನು ಕೂಡಲೆ ಬಂಧಿಸಿ ಪಟ್ಟಣದಲ್ಲಿ ಇನ್ನು ಮುಂದೆ ಇಂತಹ ಘಟನೆಗಳು ಎಂದಿಗೂ ಮರುಕಳಿಸದಂತೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ಬಿ.ಎಂ. ರಸ್ತೆಯ ವರ್ತಕರಿಗೆ ಪೊಲೀಸರು ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಪಲ್ಲವಿ ಆಕುರಾತಿ ಮಾತನಾಡಿ, ಹಿಸಾತ್ಮಕ ಕೃತ್ಯಗಳನ್ನು ನಡೆಸಿದವವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಅಡಿಷನಲ್ ಎಸ್ಪಿ ಪ್ರಭಾಕರ್ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದರು.ಹಿಂದು ಸಂಘಟನೆಗಳ ಮುಖಂಡ ಸಂತೋಷ್, ಕಾಂಗ್ರೆಸ್ ಮುಖಂಡ ವೈ.ಪಿ.ರಾಜೇಗೌಡ, ಪುರಸಭಾ ಸದಸ್ಯ ಸಂತೋಷ್‌ಕುಮಾರ್ ಜೈನ್, ವರ್ತಕರ ಮುಖಂಡ ಮಹೇಂದ್ರ ಕುಮಾರ್, ಗುಪ್ತಾ, ರಮೇಶ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.