ಕಲ್ಲು ತೂರಾಟ, ಗಲಭೆ: ಪ್ರಕರಣ ಕೈಬಿಡಲು ಚಿಂತನೆ

7

ಕಲ್ಲು ತೂರಾಟ, ಗಲಭೆ: ಪ್ರಕರಣ ಕೈಬಿಡಲು ಚಿಂತನೆ

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ): `ಸುವರ್ಣ ವಿಧಾನಸೌಧದ ಎದುರು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಮಂಗಳವಾರ ಪ್ರತಿಭಟನೆ ಮಾಡುತ್ತಿದ್ದಾಗ ನಡೆದ ಗಲಭೆಗೆ ಸಂಬಂಧಿಸಿದಂತೆ ದಾಖಲಿಸಿಕೊಂಡ ಎಲ್ಲ ಪ್ರಕರಣಗಳನ್ನು ಕೈಬಿಡಲು ಕಾನೂನು ಇಲಾಖೆ ಜೊತೆ ಚರ್ಚಿಸಲಾಗುವುದು' ಎಂದು ಗೃಹ ಸಚಿವ ಆರ್. ಅಶೋಕ ತಿಳಿಸಿದರು.ವಿಧಾನ ಪರಿಷತ್ತಿನಲ್ಲಿ ಬುಧವಾರ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಮತ್ತು ಜೆಡಿಎಸ್ ಸದಸ್ಯ ಪಟೇಲ್ ಶಿವರಾಂ ಶೂನ್ಯ ವೇಳೆಯಲ್ಲಿ ಮಂಡಿಸಿದ ಸೂಚನೆಗೆ ಅವರು ಸ್ಪಷ್ಟನೆ ನೀಡಿದರು. `ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲು ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಘಟನೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆಯನ್ನೂ ಕೊಡಿಸಲಾಗಿದೆ' ಎಂದು ತಿಳಿಸಿದರು. `ಪ್ರತಿಭಟನಾಕಾರರಿಗೆ ಸುವರ್ಣ ವಿಧಾನಸೌಧ ಎದುರಿನ ಭರತೇಶ ಜಿನಗೌಡ ಆಸ್ಪತ್ರೆ ಆವರಣದಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿತ್ತು.ಆದರೆ, ನಿಗದಿಪಡಿಸಿದ ಸ್ಥಳಕ್ಕೆ ಹೋಗದೆ ರಾಷ್ಟ್ರೀಯ ಹೆದ್ದಾರಿ ಮೇಲೆ ಅವರೆಲ್ಲ ಜಮಾಯಿಸಿದರು. ಗಂಟೆಗೂ ಅಧಿಕ ಹೊತ್ತು ಹೆದ್ದಾರಿಯನ್ನು ತಡೆದರು. ಬೆಳಗಾವಿಯಿಂದ ಇನ್ನೊಂದು ಗುಂಪು ಬಂದ ಬಳಿಕ ಅಲ್ಲಿದ್ದ ಬ್ಯಾರಿಕೇಡ್ ಮುರಿಯಲು ಯತ್ನಿಸಲಾಯಿತು. ಏಕಾಏಕಿ ಕಲ್ಲು ತೂರಾಟವೂ ಶುರುವಾಯಿತು' ಎಂದು ಘಟನೆ ಕುರಿತಂತೆ ಮಾಹಿತಿ ನೀಡಿದರು.`ಕಲ್ಲು ತೂರಾಟದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಲವರಿಗೆ ಗಾಯಗಳಾದವು. ಸರ್ಕಾರಿ ಮತ್ತು ಖಾಸಗಿ ವಾಹನಗಳೂ ಜಖಂಗೊಂಡವು. ಆಗ ಪರಿಸ್ಥಿತಿಯನ್ನು ನಿಯಂತ್ರಿಸಲು 30 ಅಶ್ರುವಾಯು ಸೆಲ್‌ಗಳನ್ನು ಸಿಡಿಸಲಾಯಿತು. ಲಾಠಿ ಪ್ರಹಾರವನ್ನೂ ಮಾಡಲಾಯಿತು' ಎಂದು ಹೇಳಿದರು.`ಘಟನೆಯಲ್ಲಿ 17 ಜನ ಸಾರ್ವಜನಿಕರು, 19 ಜನ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. 152 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಜಾಮೀನಿನ ಮೇಲೆ ಎಲ್ಲರನ್ನೂ ಈಗಾಗಲೇ ಬಿಡುಗಡೆ ಮಾಡಲಾಗಿದೆ' ಎಂದು ವಿವರಿಸಿದರು.

ಸೂಚನೆ ಮಂಡಿಸಿದ ಪಾಟೀಲ,`ಸರ್ಕಾರದಿಂದ ಸೌಲಭ್ಯ ಕೇಳಲು ಬಂದ ದಲಿತರ ಮೇಲೆ ಲಾಠಿ ಬೀಸಲು ಇದೇನು ಪೊಲೀಸ್ ರಾಜ್ಯವೇ' ಎಂದು ಪ್ರಶ್ನಿಸಿದರು.

`ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಹಾಗೂ ಅಮಾಯಕರ ಮೇಲಿನ ಪ್ರಕರಣ ಕೈಬಿಡಬೇಕು' ಎಂದು ಆಗ್ರಹಿಸಿದರು. ಬಿಜೆಪಿಯ ಕೆ.ಬಿ. ಶಾಣಪ್ಪ, `ದಲಿತರು ಇಲ್ಲಿಗೆ ಆಟವಾಡಲು ಏನೂ ಬಂದಿರಲಿಲ್ಲ. ಪೊಲೀಸರು ಸುತ್ತಲೂ ನೆರೆದು ಅಮಾಯಕರನ್ನು ಮನಬಂದಂತೆ ಹೊಡೆದಿದ್ದಾರೆ ಎಂದರು.

ಶೋಷಿತರ ಅಳಲು

`ಹಿಂಡಿ ಹಿಪ್ಪೇ ಆದ ದಂಡಿ ದಂಡಿ 

ದಂಡೋರ ಜನರು ಚಂಡಿಯಂಗೆ  

ಬಂಡೆದ್ದರೋ'

-ವಿಧಾನ ಪರಿಷತ್ ಸದಸ್ಯರೂ ಆದ ಕವಿ ಡಾ. ದೊಡ್ಡರಂಗೇಗೌಡ ಚರ್ಚೆಯಲ್ಲಿ ಪಾಲ್ಗೊಂಡು ಸದನದಲ್ಲೇ ಬರೆದ ಕವಿತೆಯ ಪಲ್ಲವಿ ಇದು. ಪ್ರತಿಭಟನೆ ಮಾಡಿದವರ ಮೇಲೆ ಲಾಠಿ ಪ್ರಹಾರವನ್ನು ವಿರೋಧಿಸುವ ಆಶಯ ಕವನದಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry