ಶನಿವಾರ, ಜನವರಿ 28, 2023
24 °C

ಕಲ್ಲು ತೂರಾಟ, ಲಾಠಿ ಪ್ರಹಾರ, ಜನಜೀವನ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲ್ಲು ತೂರಾಟ, ಲಾಠಿ ಪ್ರಹಾರ, ಜನಜೀವನ ಅಸ್ತವ್ಯಸ್ತ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಮೊಕದ್ದಮೆ ಹೂಡಲು ರಾಜ್ಯಪಾಲರು ಅನುಮತಿ ನೀಡಿದ್ದನ್ನು ಖಂಡಿಸಿ ಬಿಜೆಪಿ ಕರೆ ನೀಡಿದ್ದ ರಾಜ್ಯ ವ್ಯಾಪಿ ಬಂದ್ ವೇಳೆ ನಗರದಲ್ಲಿ ಶನಿವಾರ ಕಲ್ಲು ತೂರಾಟ, ಪ್ರತಿಭಟನೆ ಮತ್ತು ಲಘು ಲಾಠಿ ಪ್ರಹಾರದಂತಹ ಘಟನೆಗಳು ನಡೆದಿರುವುದನ್ನು ಹೊರತುಪಡಿಸಿದರೆ ಪರಿಸ್ಥಿತಿ ಬಹುತೇಕ ಶಾಂತಿಯುತವಾಗಿತ್ತು.ನಗರದ ವಿವಿಧ ಬಸ್ ಡಿಪೊಗಳ ಮುಂದೆ ನಿಂತಿದ್ದ ಬಿಎಂಟಿಸಿ ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿ ಮಾಡಿದ್ದಾರೆ. ಇದರಿಂದ ಸುಮಾರು 20ಕ್ಕೂ ಹೆಚ್ಚು ಬಸ್‌ಗಳಿಗೆ ಹಾನಿಯಾಗಿದೆ. ಗಂಗಾನಗರದಲ್ಲಿ ಬಿಎಂಟಿಸಿ ಬಸ್ ತಡೆದು ಬೆಂಕಿ ಹಚ್ಚಲೆತ್ನಿಸಿದ ದುಷ್ಕರ್ಮಿಗಳ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು. ಸುಂಕದಕಟ್ಟೆಯಲ್ಲಿ ರಸ್ತೆ ತಡೆ ಮಾಡಿ ಟೈರ್‌ಗಳಿಗೆ ಬೆಂಕಿ ಹಚ್ಚಿದವರಿಗೂ ಪೊಲೀಸರು ಲಾಠಿ ರುಚಿ ತೋರಿಸಿದರು.ಗಾಂಧಿ ಬಜಾರ್‌ನಲ್ಲಿರುವ ಶಿವಸಾಗರ್ ಹೋಟೆಲ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿ ದಾಂದಲೆ ನಡೆಸಿದರು. ಬೈಕ್‌ನಲ್ಲಿ ಬಂದಿದ್ದ ಸುಮಾರು ಎಂಟು ಮಂದಿ ಈ ಕೃತ್ಯ ಎಸಗಿದರು. ಏಕಾಏಕಿ ಹೋಟೆಲ್‌ನ ಒಳಗೆ ನುಗ್ಗಿದ ಅವರು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಪರಾರಿಯಾದರು. ಸ್ಥಳದಲ್ಲಿ ಪೊಲೀಸರಿದ್ದರೂ ಆರೋಪಿಗಳನ್ನು ಬಂಧಿಸಲಿಲ್ಲ ಎಂದು ಸ್ಥಳೀಯರು ಆರೋಪಿಸಿದರು.ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಿಎಂಟಿಸಿ ಬಸ್ ಮೇಲೆ ನವರಂಗ್ ಚಿತ್ರಮಂದಿರದ ಸಮೀಪ ಕಿಡಿಗೇಡಿಗಳ ಗುಂಪೊಂದು ಕಲ್ಲು ತೂರಿತು. ಇದರಿಂದಾಗಿ ಬಸ್‌ನ ಕಿಟಕಿ ಗಾಜುಗಳು ಪುಡಿಪುಡಿಯಾದವು. ಅದೃಷ್ಟವಶಾತ್ ಪ್ರಯಾಣಿಕರಿಗೆ ಗಾಯಗಳಾಗಲಿಲ್ಲ. ಜಯನಗರ ಟಿ.ಬ್ಲಾಕ್‌ನಲ್ಲಿ ನಿಲ್ಲಿಸಿದ್ದ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಿದ್ದಾರೆ. ಕೋರಮಂಗಲದ ಬಸ್ ಡಿಪೊ ಎದುರು ನಿಲ್ಲಿಸಿದ್ದ ಬಸ್‌ಗಳ ಗಾಜುಗಳನ್ನು ಪುಡಿ ಮಾಡಿದ್ದಾರೆ.ಜಯನಗರ, ಕೆ.ಆರ್.ಪುರ, ಯಶವಂತಪುರದಲ್ಲಿಯೂ ಬಸ್‌ಗಳ ಮೇಲೆ ಕಲ್ಲು ತೂರಾಟ ಮಾಡಿದ ಘಟನೆಗಳು ನಡೆದಿವೆ. ಮುಖ್ಯಮಂತ್ರಿಗಳ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಬೆಂಬಲಿಸಿ ರಸ್ತೆಗಳಿದ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದನ್ನು ಖಂಡಿಸಿ ಕಾಂಗ್ರೆಸ್ ಸದಸ್ಯರು ಮೈಸೂರು ರಸ್ತೆಯ ಸಿರ್ಸಿ ವೃತ್ತದಲ್ಲಿ ರಸ್ತೆ ತಡೆ ಮಾಡಿದರು.ಬಿಜೆಪಿ ಕಾರ್ಯಕರ್ತರು ಗೂಂಡಾ ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿದ ಅವರು ಈ ಬಗ್ಗೆ ದೂರು ದಾಖಲಿಸಲಾಗುತ್ತದೆ ಎಂದರು. ‘ಕಾಂಗ್ರೆಸ್ ಪಕ್ಷದ ಏಜೆಂಟರಂತೆ ವರ್ತಿಸುತ್ತಿರುವ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕು’ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಶಾಸಕರಾದ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಅರವಿಂದ ಲಿಂಬಾವಳಿ, ಎಂ.ಶ್ರೀನಿವಾಸ್, ಎಸ್.ರಘು ಮತ್ತಿತರ ಮುಖಂಡರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು. ನಗರದ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸಿದ ಬಿಜೆಪಿ ಕಾರ್ಯಕರ್ತರು ಭಾರದ್ವಾಜ್ ಅವರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ನಿಲ್ಲಿಸಿದ್ದ ಬಸ್‌ಗೆ ಬೆಂಕಿ

ಜಯನಗರ ನಾಲ್ಕನೇ ಬ್ಲಾಕ್‌ನ 18ನೇ ತಿರುವಿನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್‌ಗೆ ಕಿಡಿಗೇಡಿಗಳು ಶುಕ್ರವಾರ ರಾತ್ರಿ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ವಾಹನ ಸಂಪೂರ್ಣ ಸುಟ್ಟು ಹೋಗಿದೆ. ಈ ಬಗ್ಗೆ ಬಸ್ ಮಾಲೀಕ ಜಯಣ್ಣ ಎಂಬುವರು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಷೇಧಾಜ್ಞೆ: ಬಂದ್ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಅವರು ಶನಿವಾರ ಬೆಳಿಗ್ಗೆ 8.30ರಿಂದ ಭಾನುವಾರ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಮೂವತ್ತು ತುಕಡಿ ಮತ್ತು ಸುಮಾರು 18 ಸಾವಿರ ಮಂದಿ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು. ನಗರದ ಪ್ರಮುಖ ಪ್ರದೇಶಗಳಲ್ಲಿ ಮಫ್ತಿ ಸಿಬ್ಬಂದಿಯನ್ನು ನಿಯೋಜಿಸಿದ್ದರು.‘ಬಂದ್ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಬಸ್‌ಗೆ ಬೆಂಕಿ ಹಚ್ಚಲು ಯತ್ನಿಸಿದ ಕಿಡಿಗೇಡಿಗಳ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಸುಮಾರು ಇನ್ನೂರು ಮಂದಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿತ್ತು’ ಎಂದು ಬಿದರಿ ತಿಳಿಸಿದ್ದಾರೆ.ಜನರ ಮೇಲೆ ಪರಿಣಾಮ

ಬಂದ್ ನಗರದ ಜನರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿತು. ಅಂಗಡಿ ಮುಂಗಟ್ಟುಗಳು, ಬ್ಯಾಂಕ್‌ಗಳು, ಜೀವ ವಿಮೆ ಕಚೇರಿಗಳಲ್ಲಿ ಇಡೀ ದಿನ ವಹಿವಾಟು ನಡೆಯಲಿಲ್ಲ. ಬಹುತೇಕ ಶಾಲಾ ಕಾಲೇಜುಗಳಿಗೆ ಮುಂಚಿತವಾಗಿ ಶುಕ್ರವಾರವೇ ರಜೆ ಘೋಷಿಸಲಾಗಿತ್ತು. ಪೆಟ್ರೋಲ್ ಬಂಕ್‌ಗಳು, ಔಷಧ ಮಾರಾಟ ಮಳಿಗೆಗಳು, ಹೋಟೆಲ್‌ಗಳಲ್ಲಿ ಪ್ರತಿನಿತ್ಯದಂತೆ ವಹಿವಾಟು ನಡೆಯಿತು. ಮೆಜೆಸ್ಟಿಕ್ ಪ್ರದೇಶದಲ್ಲಿರುವ ಪ್ರಮುಖ 14 ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನವನ್ನು ಬೆಳಿಗ್ಗೆಯಿಂದಲೇ ರದ್ದು ಮಾಡಲಾಗಿತ್ತು. ಆದರೆ ಬೇರೆ ಬಡಾವಣೆಗಳಲ್ಲಿರುವ ಚಿತ್ರಮಂದಿರಗಳಲ್ಲಿ ಎಂದಿನಂತೆ ಪ್ರದರ್ಶನ ನಡೆಯಿತು. ಆದರೆ ಪ್ರೇಕ್ಷಕರ ಸಂಖ್ಯೆ ಕಡಿಮೆ ಇತ್ತು.ನ್ಯಾಯಾಲಯಗಳಲ್ಲಿ, ಕೆಲ ಸರ್ಕಾರಿ ಕಚೇರಿಗಳಲ್ಲಿ ಎಂದಿನಂತೆಯೇ ಕಾರ್ಯ ಚಟುವಟಿಕೆಗಳು ನಡೆದವು. ಆದರೆ ನೌಕರರ ಹಾಜರಾತಿ ಸಂಖ್ಯೆ ಕಡಿಮೆ ಇತ್ತು. ಬಿಎಂಟಿಸಿ ಬಸ್ ಸೇವೆ ಸ್ಥಗಿತಗೊಂಡಿದ್ದರಿಂದ ರಸ್ತೆಗಳಲ್ಲಿ ಹೆಚ್ಚಿನ ವಾಹನ ದಟ್ಟಣೆ ಇರಲಿಲ್ಲ. ಸದಾ ಹೆಚ್ಚು ಜನಜಂಗುಳಿ ಇರುತ್ತಿದ್ದ ಮೆಜೆಸ್ಟಿಕ್, ನಗರ ರೈಲು ನಿಲ್ದಾಣ, ಸಿಟಿ ಮಾರುಕಟ್ಟೆ, ಕೆಂಪೇಗೌಡ ರಸ್ತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಜನಸಂದಣಿ ವಿರಳವಾಗಿತ್ತು. ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪ್ರಮುಖ ಅಂಗಡಿ ಮುಂಗಟ್ಟುಗಳು, ಪೆಟ್ರೋಲ್ ಬಂಕ್‌ಗಳು, ಚಿತ್ರಮಂದಿರಗಳು, ಪ್ರತಿಭಟನೆಗಳು ನಡೆಯುತ್ತಿದ್ದ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.