ಕಲ್ಲು ತೂರಾಟ: 9 ಪೊಲೀಸರಿಗೆ ಗಾಯ

7
ಬೂದನಗುಡ್ಡ ಬಸವಣ್ಣನ ಪಲ್ಲಕ್ಕಿ ಉತ್ಸವದ ವೇಳೆ ಹಲ್ಲೆ - ಘರ್ಷಣೆ

ಕಲ್ಲು ತೂರಾಟ: 9 ಪೊಲೀಸರಿಗೆ ಗಾಯ

Published:
Updated:

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಚಳಮಟ್ಟಿ ಬೂದನಗುಡ್ಡದ ಬಸವಣ್ಣನ ಜಾತ್ರೆಯಲ್ಲಿ ಸೋಮವಾರ ಪಲ್ಲಕ್ಕಿ ತೆಗೆದುಕೊಂಡು ಹೋಗುವ ವಿಷಯಕ್ಕೆ ಆರಂಭವಾದ ಜಗಳದಲ್ಲಿ ಗ್ರಾಮವೊಂದರ ಜನರು ಕಲ್ಲು ತೂರಿದ್ದರಿಂದ 9 ಪೊಲೀಸರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮೂರು ವಾಹನಗಳಿಗೆ ಜಖಂ ಆಗಿದೆ. ಕಲ್ಲು ತೂರಾಟದಲ್ಲಿ ತೊಡಗಿದ್ದವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.ಗ್ರಾಮಸ್ಥರು ಬಡಿಗೆಯಿಂದ ಹಲ್ಲೆ ನಡೆಸಿ, ಕಲ್ಲುಗಳನ್ನು ತೂರಿದ್ದರಿಂದ ಕಲಘಟಗಿ ಠಾಣೆಯ ಇನ್ಸ್‌ಪೆಕ್ಟರ್ ಅಮರೇಶ್ ಬಾರಕೇರ ಅವರ ತಲೆಗೆ ಪೆಟ್ಟಾಗಿದೆ. ಗಾಯಗೊಂಡಿರುವ ಎಲ್ಲ ಪೊಲೀಸರನ್ನು ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಲೋಕೇಶ್ ಕುಮಾರ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.ಪಿಎಸ್‌ಐ ಸುರೇಶ ಯಳ್ಳೂರ, ಮಹಿಳಾ ಎಎಸ್‌ಐ ಚಾಮುಂಡೇಶ್ವರಿ, ಹಿರಿಯ ಪೇದೆ ಬಿ.ಎಂ. ಮಡಿವಾಳರ, ಪೇದೆಗಳಾದ ಎಲ್.ಎ. ಪಾಠಕ್, ಎಸ್.ಎ. ಹುಡೇದ, ಆರ್.ಎಂ. ಭದ್ರಾಪುರ, ಸಶಸ್ತ್ರ ಪೊಲೀಸ್ ಪೇದೆಗಳಾದ ಪಿ.ಎಸ್. ಗತ್ತಿ, ದೊಡ್ಡಮನಿ ಗಾಯಗೊಂಡಿದ್ದಾರೆ ಎಂದು ಲೋಕೇಶ್ ಕುಮಾರ್ ತಿಳಿಸಿದರು.ಚಳಮಟ್ಟಿಯಿಂದ ಸುಮಾರು ಮೂರು ಕಿ.ಮೀ. ದೂರವಿರುವ ಬೂದನಗುಡ್ಡದಲ್ಲಿ ಪ್ರತಿ ವರ್ಷದ ಶ್ರಾವಣ ಸೋಮವಾರ ದೊಡ್ಡ ಜಾತ್ರೆ ನಡೆಯುತ್ತದೆ.ಇಲ್ಲಿಗೆ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಗ್ರಾಮಗಳ ಪಲ್ಲಕ್ಕಿಗಳು ಬರುತ್ತವೆ. ಆದರೆ ಕೆಲವು ಗ್ರಾಮಸ್ಥರು ತಮ್ಮ ಊರಿನಿಂದ ತಂದಿದ್ದ ಮೂರೂ ಪಲ್ಲಕ್ಕಿಗಳನ್ನು ಒಮ್ಮೆಗೇ ತೆಗೆದುಕೊಂಡು ಹೋಗಬೇಕೆಂದು ಹಠ ಹಿಡಿದರು. ನೂಕು ನುಗ್ಗಲು ಉಂಟಾಬಹುದು ಎಂದು ಒಬ್ಬೊಬ್ಬರಾಗಿ ಹೋಗುವಂತೆ ಪೊಲೀಸರು ಸೂಚಿಸಿದಾಗ, ಇದನ್ನು ಧಿಕ್ಕರಿಸಿದ ಗ್ರಾಮಸ್ಥರು, ಪೊಲೀಸರ ಜೊತೆ ವಾಗ್ವಾದಕ್ಕಿಳಿದರು. ಪೊಲೀಸರು ಒಪ್ಪದಿದ್ದಾಗ ಅವರ ಮೇಲೇ ಬಡಿಗೆಯಿಂದ ಹಲ್ಲೆ ನಡೆಸಿ, ಕಲ್ಲುಗಳನ್ನು ತೂರಿದರು.ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ದೇವಸ್ಥಾನ ಸುತ್ತಮುತ್ತ ಪರಿಸ್ಥಿತಿ ಹತೋಟಿಯಲ್ಲಿದೆ. ಪ್ರಕರಣ ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಲೋಕೇಶ್ ಕುಮಾರ್ ತಿಳಿಸಿದರು.`ಸುಮಾರು 70ರ ದಶಕದಲ್ಲಿಯೂ ಇದೇ ರೀತಿ ಘಟನೆ ನಡೆದಿತ್ತು. ಎಲ್ಲರೂ ರಾಜೀಸಂಧಾನದಿಂದ ಪ್ರಕರಣ ಇತ್ಯರ್ಥವಾಗಿತ್ತು. ಈ ಬಾರಿ ಧುಮ್ಮವಾಡದ ಕೆಲವು ದುಷ್ಕರ್ಮಿಗಳು ಮದ್ಯ ಸೇವಿಸಿ ಈ ಕೃತ್ಯ ಎಸಗಿದ್ದಾರೆ' ಎಂದು ಚಳಮಟ್ಟಿಯ ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ ಕಲ್ಲೂರು ಆಪಾದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry