ಕಲ್ಲು ರಸ್ತೆಯಲ್ಲಿನ ಓಡಾಟ ಇನ್ನೆಷ್ಟು ದಿನ..?

7

ಕಲ್ಲು ರಸ್ತೆಯಲ್ಲಿನ ಓಡಾಟ ಇನ್ನೆಷ್ಟು ದಿನ..?

Published:
Updated:

ಹಾವೇರಿ: ಅದೊಂದು ಮಾರುಕಟ್ಟೆಯ ಮುಖ್ಯ ರಸ್ತೆ. ಅದರ ಅಗಲೀಕರಣ ಹಾಗೂ ದುರಸ್ತಿ ಕಾರ್ಯ ನಡೆದು ಬರೊಬ್ಬರಿ ಒಂದು ವರ್ಷ ತುಂಬುತ್ತಾ ಬಂದಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಆರಂಭಗೊಂಡ ಕಾಮಗಾರಿ ಈವರಗೆ ಮುಗಿದಿಲ್ಲ. ಅದು ಮುಗಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಜನತೆಗೆ ತಗ್ಗು, ದಿನ್ನೆ ಹಾಗೂ ಕಲ್ಲುಗಳ ರಸ್ತೆಯಲ್ಲಿ ಓಡಾಡುವುದು ಮಾತ್ರ ತಪ್ಪುತ್ತಿಲ್ಲ.ಇದು ಹಾವೇರಿಯ ಹೃದಯ ಭಾಗ, ವ್ಯಾಪಾರಿ ಕೇಂದ್ರವಾಗಿ ಆಗಿರುವ ಮಹಾತ್ಮಾಗಾಂಧಿ ರಸ್ತೆಯ ದುಸ್ಥಿತಿ.

ಹೌದು, ಹಾವೇರಿ ನಗರಸಭೆ ಹದಿನೈದು ದಿನಗಳಲ್ಲಿ ರಸ್ತೆ ಅಗಲೀಕರಣ ಹಾಗೂ ದುರಸ್ತಿ ಮಾಡುವ ಭರವಸೆಯೊಂದಿಗೆ ಕಳೆದ ಡಿಸೆಂಬರ್‌ನಲ್ಲಿ ರಸ್ತೆ ಅಗಲೀಕರಣ ಕಾರ್ಯಾಚರಣೆ ಆರಂಭಿಸಿತ್ತು. ಜನರು ಕೂಡಾ ನಗರಸಭೆ ಮಾತನ್ನು ನಂಬಿ ಕಾರ್ಯಾಚರಣೆಗೆ ಸಹಕಾರ ನೀಡಿದರು.ಆದರೆ, ನಗರಸಭೆ ಮಾತ್ರ ತನ್ನ ಮಾತನ್ನು ಉಳಿಸಿಕೊಳ್ಳಲಿಲ್ಲ. ಬದಲಾಗಿ ಇಡಿ ಕಾಮಗಾರಿಯನ್ನೇ ಅರ್ಧಕ್ಕೆ ನಿಲ್ಲಿಸಿ ಹಲವು ಅವಘಡಗಳಿಗೆ ಕಾರಣವಾಯಿತು. ಮಳೆಗಾಲದಲ್ಲಿ ರಸ್ತೆಯಿಂದ ಆದ ಅವಾಂತರಗಳಿಗೆ ಬೇಸತ್ತ ಜನರು ಪ್ರತಿಭಟನೆ ಹಾದಿ ಹಿಡಿಯಬೇಕಾಯಿತು.ಆಗ ನಗರಸಭೆ ಗಟಾರು ನಿರ್ಮಿಸುವ ಕೆಲಸ ಮಾಡಲು ಆರಂಭಿಸಿತು. ಈವರೆಗೆ ಅದು ಕೂಡಾ ಪೂರ್ಣವಾಗಿಲ್ಲ.  ಆದರೆ, ರಸ್ತೆಯನ್ನು ದುರಸ್ತಿ ಮಾಡುವ ಗೋಜಿಗೆ ಹೋಗಲಿಲ್ಲ. ಮಳೆಗಾಲದಲ್ಲಿ ಹದಗೆಟ್ಟ ರಸ್ತೆಯಲ್ಲಿ ಓಡಾಡಿ ಕೈಕಾಲು ಮುರಿದುಕೊಂಡವರ ಸಂಖ್ಯೆಗೇನು ಕಡಿಮೆ ಇಲ್ಲ.ಈ ಸಂದರ್ಭದಲ್ಲಿ ಜನರಿಂದ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತವಾದಾಗ ಒಳಚರಂಡಿ ಕಾಮಗಾರಿ ಮಾಡಬೇಕಾದ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ಮಾಡಿಲ್ಲ ಎಂದು ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸಮಜಾಯಿಸಿ ನೀಡಿದ್ದರು.ಈಗಾಗಲೇ ಒಳ ಚರಂಡಿ ಕಾಮಗಾರಿ ಮುಗಿದು ಮೂರ‌್ನಾಲು ತಿಂಗಳುಗಳೇ ಗತಿಸಿವೆ. ಆದರೂ ಏಕೆ ರಸ್ತೆ ಮಾಡುತ್ತಿಲ್ಲ ಎಂಬ ಜನರ ಪ್ರಶ್ನೆಗೆ ನಗರಸಭೆ ಅಧಿಕಾರಿಗಳ ಬಳಿಯಾಗಲಿ, ಸ್ಥಳೀಯ ಜನಪ್ರತಿನಿಧಿಗಳಲ್ಲಾಗಲಿ ಯಾವುದೇ ಉತ್ತರವಿಲ್ಲ. ಬದಲಾಗಿ ಮಾಡುತ್ತೇವೆ ಎಂಬ ಉತ್ತರ ಮಾತ್ರ ಬರುತ್ತಿದೆ.ಇತ್ತೀಚೆಗೆ ನಗರಸಭೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯ ಹಾಗೂ ಅವರ ಕಾರ್ಯವೈಖರಿಗೆ ಬೇಸತ್ತು. ಅವರದೇ ಪಕ್ಷದ ಮುಖಂಡರೊಬ್ಬರ ರಸ್ತೆ ನಿರ್ಮಾಣ ಕಾಮಗಾರಿ ಮಾಡದಿದ್ದರೆ, ನಗರಸಭೆ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಬೇಕಾಯಿತು.ಆಗ ಏಕಾಏಕಿ ನಿದ್ದೆಯಿಂದ ಎಚ್ಚರಗೊಂಡವರಂತೆ ನಗರಸಭೆ ಅಧಿಕಾರಿಗಳು, ಅಧ್ಯಕ್ಷರು, ಸ್ಥಳೀಯ ಶಾಸಕರು ಹಾಳಾದ ಎಂ.ಜಿ.ರಸ್ತೆ ಡಾಂಬರೀಕರಣ ಮಾಡುವುದಕ್ಕೆ ಪೂಜೆ ಸಲ್ಲಿಸಿ ಪ್ರಚಾರ ಗಿಟ್ಟಿಸಿಕೊಂಡರು. ಆದರೆ, ಪೂಜೆ ಸಲ್ಲಿಸಿ 20 ದಿನಗಳಾಗುತ್ತಾ ಬಂದರೂ, ರಸ್ತೆಯಲ್ಲಿ ಹರಡಿರುವ ಕಲ್ಲುಗಸಿಗೆ ಒಂದು ಬೊಗಸೆ ಮಣ್ಣು ಹಾಕಿಲ್ಲ. ಹರಿಡಿರುವ ಕಲ್ಲುಗಳು ವಾಹನಗಳ ಓಡಾಟದಿಂದ ರಸ್ತೆಯಿಂದ ಸರಿದು ಒಂದೇ ಕಡೆ ಗುಡ್ಡೆ ಹಾಕಿದಂತೆಯಾಗಿದೆ ಎನ್ನುತ್ತಾರೆ ಬಿಜೆಪಿ ಸ್ಲಂ ಮೋರ್ಚಾ ಅಧ್ಯಕ್ಷ ಬಸವರಾಜ ಪೇಲನವರ.ಅದು ಅಲ್ಲದೇ ಕಲ್ಲುಗಳ ರಸ್ತೆಯಲ್ಲಿ ವಾಹನಗಳ ಓಡಾಟ ಮಾಡುವುದರಿಂದ ಬಹುತೇಕ ವಾಹನ ಚಾಲಕರು ಸ್ಕಿಡ್ ಆಗಿ ಬಿಳುವುದು, ಟಯರ್ ಅಡಿಗೆ ಸಿಕ್ಕ ಕಲ್ಲು ಒಮ್ಮಿಲೇ ಚಿಮ್ಮಿ ಪಾದಚಾರಿಗಳಿಗೆ ತಲೆ ಬಡಿದು ಗಾಯಗೊಳ್ಳುತ್ತಿದ್ದಾರೆ. ಇಷ್ಟಾಗಿದ್ದರೂ ರಸ್ತೆಗೆ ಡಾಂಬರ್ ಹಾಕುವುದಿರಲಿ ಮಣ್ಣು ಸಹ ಹಾಕದೇ ಹಾಗೆ  ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಒಟ್ಟಿನಲ್ಲಿ ಜಿಲ್ಲಾ ಕೇಂದ್ರದ ಜನರಿಗೆ ಡಾಂಬರು ರಸ್ತೆಯಲ್ಲಿ ಓಡಾಡುವ ಯೋಗ ಇನ್ನೂ ಕೂಡಿ ಬಂದಿಲ್ಲ. ಇನ್ನೂ ಎಷ್ಟು ದಿನ ಆ ಕಲ್ಲುಗಳ ಮಧ್ಯ ಓಡಾಟ ನಡೆಸಬೇಕೋ ಎಂಬುದು  ಮಾತ್ರ ಗೊತ್ತಾಗುತ್ತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry