ಕಳಂಕಿತರನ್ನು ಕೈಬಿಡಲು ಒತ್ತಾಯಿಸಿ ಪ್ರತಿಭಟನೆ

7

ಕಳಂಕಿತರನ್ನು ಕೈಬಿಡಲು ಒತ್ತಾಯಿಸಿ ಪ್ರತಿಭಟನೆ

Published:
Updated:

ಧಾರವಾಡ: ಹಲವು ಅಕ್ರಮಗಳಲ್ಲಿ ಭಾಗಿ­ಯಾಗಿರುವ ಬಗ್ಗೆ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಚೆಗೆ ಸಂಪುಟಕ್ಕೆ ಸೇರ್ಪಡೆಯಾದ ಡಿ.ಕೆ.ಶಿವಕುಮಾರ್‌ ಮತ್ತು ಆರ್‌.ರೋಷನ್‌ ಬೇಗ್‌ ಅವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.ಕಲಾಭವನ ಮೈದಾನದಿಂದ ಆರಂಭವಾದ ಮೆರವಣಿಗೆ ಅಂಜುಮನ್‌ ಸರ್ಕಲ್‌, ಜ್ಯುಬಿಲಿ ವೃತ್ತ, ಕೋರ್ಟ್‌ ಸರ್ಕಲ್‌ ಮೂಲಕ ಹಾಯ್ದು ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು.ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಗದೀಶ ಶೆಟ್ಟರ್‌, ‘ಅಕ್ರಮ ಗಣಿಗಾರಿಕೆ ಹಾಗೂ ಕಳಂಕಿತರ ವಿರುದ್ಧ ವಿರೋಧ ಪಕ್ಷದಲ್ಲಿದ್ದಾಗ ಬಳ್ಳಾರಿವರೆಗೆ ಪಾದಯಾತ್ರೆ ಕೈಗೊಂಡಿದ್ದ ಸಿದ್ದರಾಮಯ್ಯ ಅವರೇ ಈಗ ಮುಖ್ಯ­ಮಂತ್ರಿಯಾಗಿದ್ದಾರೆ. ತಮ್ಮದು ಸ್ವಚ್ಛ ಸಂಪುಟ ಎನ್ನುತ್ತಲೇ, ಇದೀಗ ಡಿ.ಕೆ.ಶಿವಕುಮಾರ್‌, ರೋಷನ್‌ ಬೇಗ್‌ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಸರ್ಕಾರಕ್ಕೆ ಕಳಂಕ ಹಚ್ಚಿಕೊಂಡಿದ್ದಾರೆ. ಮುಖ್ಯಮಂತ್ರಿಯಾದ ಹೊಸ­ದರಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರ ಮನೆಗೆ ಭೇಟಿ ನೀಡಿದ್ದ ಸಿಎಂ, ಕಳಂಕಿತರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದರು. ಆದರೆ ತಮ್ಮ ಮಾತು ಮುರಿದಿದ್ದಾರೆ’ ಎಂದು ಹರಿಹಾಯ್ದರು.‘ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡ ಸಿಎಂ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಸದನದ ಒಳಗೆ ಹಾಗೂ ಹೊರಗೆ ಬಿಜೆಪಿ ಉಗ್ರ ಪ್ರತಿಭಟನೆ ಮಾಡಲಿದೆ’ ಎಂದು ಎಚ್ಚರಿಸಿದರು.ಶಾಸಕ ಅರವಿಂದ ಬೆಲ್ಲದ, ಮಹಾನಗರ ಜಿಲ್ಲಾ ಅಧ್ಯಕ್ಷ ಲಿಂಗರಾಜ ಪಾಟೀಲ, ಗ್ರಾಮಾಂತರ ಅಧ್ಯಕ್ಷ ಎಂ.ಆರ್.ಪಾಟೀಲ, ವಿಧಾನಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಮಹೇಶ ಟೆಂಗಿನಕಾಯಿ, ಷಣ್ಮುಖ ಗುರಿಕಾರ, ಜಿ.ಪಂ. ಅಧ್ಯಕ್ಷ ಶಂಕ್ರಪ್ಪ ಅಗಡಿ, ಸದಸ್ಯರಾದ ರತ್ನವ್ವ ಕಳ್ಳಿಮನಿ, ಪ್ರೇಮಾ ಕೊಮಾರದೇಸಾಯಿ, ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಶಿವು ಹಿರೇಮಠ, ಸಂಜಯ ಕಪಟಕರ, ಶಂಕರ ಶೇಳಕೆ,  ಈರಣ್ಣ ಜಡಿ, ವಿಜಯ ನಾಡಜೋಶಿ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry