ಭಾನುವಾರ, ನವೆಂಬರ್ 17, 2019
29 °C

ಕಳಂಕಿತರ ಕೈಬಿಡಲು ಆಗ್ರಹ

Published:
Updated:

ಬೆಂಗಳೂರು: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಚಿವರನ್ನು ಸಂಪುಟದಿಂದ ತಕ್ಷಣವೇ ಕೈಬಿಡಬೇಕು ಎಂಬ ಬೇಡಿಕೆ ಮುಂದಿಡುವ ಮೂಲಕ ಬಿಜೆಪಿ ಅತೃಪ್ತ ಶಾಸಕರ ಬಣ ಹೊಸ ದಾಳ ಉರುಳಿಸಿದೆ. `ಕಳಂಕಿತ~ರು ಸಚಿವರಾಗಿ ಮುಂದುವರಿಯುವುದಾದರೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ನೀಡಿ ಎಂಬ ಬೇಡಿಕೆಯನ್ನು ಪಕ್ಷದ ಹೈಕಮಾಂಡ್ ಮುಂದಿಡಲು ಈ ಬಣ ಸಜ್ಜಾಗುತ್ತಿದೆ.

ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಬಿಜೆಪಿಯ ರಾಜ್ಯ ನಾಯಕರ ವಿರುದ್ಧ ಸಿಟ್ಟಿಗೆದ್ದಿರುವ ಅತೃಪ್ತ ಶಾಸಕರು ಭಾನುವಾರವೂ ಸಭೆ ನಡೆಸಿದರು. ಶಾಸಕ ಜಿ.ಕರುಣಾಕರ ರೆಡ್ಡಿ ನೇತೃತ್ವದಲ್ಲಿ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಬೇಳೂರು ಗೋಪಾಲಕೃಷ್ಣ, ಎಂ.ಪಿ.ಕುಮಾರಸ್ವಾಮಿ, ಎಂ.ಚಂದ್ರಪ್ಪ ಮತ್ತಿತರರು ಪಾಲ್ಗೊಂಡಿದ್ದರು. ತಮ್ಮ ಬೇಡಿಕೆ ಈಡೇರದೇ ಇದ್ದಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಹಣಕಾಸು ಮಸೂದೆಯನ್ನು ಮತಕ್ಕೆ ಹಾಕುವಾಗಿ ಸದನಕ್ಕೆ ಗೈರು ಹಾಜರಾಗುವ ಬಗ್ಗೆಯೂ ಈ ಬಣದ ಪ್ರಮುಖರು ಶಾಸಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.

ಇದೇ 19ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದೆ. ಅದೇ ದಿನ ಮತ್ತೊಂದು ಸುತ್ತಿನ ಸಭೆ ನಡೆಸಲು ಅತೃಪ್ತ ಶಾಸಕರು ನಿರ್ಧರಿಸಿದ್ದಾರೆ. ಸಂಪುಟ ರಚನೆ ಕುರಿತು ಅಸಮಾಧಾನ ಹೊಂದಿದ್ದೂ, ಅದನ್ನು ಬಹಿರಂಗಪಡಿಸದೇ ಇರುವ ಕೆಲ ಶಾಸಕರನ್ನೂ ಈ ಬಣ ಸಂಪರ್ಕಿಸುತ್ತಿದೆ. 19ರಂದು ಸಭೆಗೆ ಹಾಜರಾಗುವಂತೆ ಮನವೊಲಿಕೆ ಪ್ರಯತ್ನ ನಡೆಯುತ್ತಿದೆ. 20ಕ್ಕೂ ಹೆಚ್ಚು ಶಾಸಕರನ್ನು ಒಗ್ಗೂಡಿಸಿ, ಒಮ್ಮತದ ನಿರ್ಧಾರ ಕೈಗೊಂಡ ಬಳಿಕ ಬಹಿರಂಗವಾಗಿ ತಮ್ಮ ಬೇಡಿಕೆಯನ್ನು ಮಂಡಿಸಲು ಸಿದ್ಧತೆ ನಡೆಸಿದೆ ಎಂದು ಅತೃಪ್ತ ಶಾಸಕರ ಬಣದ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಭಾನುವಾರದ ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕರುಣಾಕರ ರೆಡ್ಡಿ, `ಸಂಪುಟ ರಚನೆಯಲ್ಲಿ ಆಗಿರುವ ಅನ್ಯಾಯದಿಂದ ಅಸಮಾಧಾನಗೊಂಡಿರುವ 20ಕ್ಕೂ ಹೆಚ್ಚು ಶಾಸಕರು ಒಟ್ಟಿಗೆ ಇದ್ದೇವೆ. 19ರ ವೇಳೆಗೆ ಮತ್ತಷ್ಟು ಶಾಸಕರು ನಮ್ಮ ಜೊತೆ ಬರುತ್ತಾರೆ ಎಂಬ ವಿಶ್ವಾಸವಿದೆ. ಎಲ್ಲ ಶಾಸಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಒಮ್ಮತದ ನಿರ್ಧಾರವನ್ನು ಪ್ರಕಟಿಸುತ್ತೇವೆ~ ಎಂದರು.

`ಕಳಂಕಿತರ ಕೈಬಿಡಿ~: `ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರು ಮತ್ತು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಹಲವರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದು ಸರಿಯಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆರೋಪ ಎದುರಾದಾಗ ಅಧಿಕಾರ ತ್ಯಜಿಸಿದರು. ಅವರು ಅಪರಾಧಿ ಎಂದು ಸಾಬೀತಾಗಿಲ್ಲ. ಇದೇ ಮಾನದಂಡವನ್ನು ಸಚಿವರ ವಿಷಯದಲ್ಲೂ ಅನುಸರಿಸಬೇಕು~ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.

ಮೂಲಗಳ ಪ್ರಕಾರ, ಕಳಂಕಿತರನ್ನು ಕೈಬಿಡಿ ಎಂಬ ಬೇಡಿಕೆ ಮುಂದಿಟ್ಟುಕೊಂಡು ಈ ಬಣ ಆರಂಭದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸೇರಿದಂತೆ ರಾಜ್ಯ ಬಿಜೆಪಿಯ ಪ್ರಮುಖ ನಾಯಕರನ್ನು ಭೇಟಿ ಮಾಡಲು ಯೋಚಿಸಿದೆ. ನಂತರ ದೆಹಲಿಗೆ ತೆರಳಿ ಬಿಜೆಪಿ ವರಿಷ್ಠರಿಗೂ ಇದೇ ಮನವಿ ಸಲ್ಲಿಸಲು ಚಿಂತನೆ ನಡೆಸಿದೆ. ಸಚಿವ ಸ್ಥಾನದಲ್ಲಿ ಇರುವವರು ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸದಂತೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವನ್ನು ಮುಂದಿಡಲು ಸಿದ್ಧತೆ ನಡೆಸಿದೆ.

ಪ್ರತಿಕ್ರಿಯಿಸಿ (+)