ಕಳಂಕಿತರ ರಕ್ಷಣೆಗೆ ಸರ್ಕಾರ

7
ಸುಪ್ರೀಂಕೋರ್ಟ್‌ ತೀರ್ಪು ನಿರರ್ಥಕಗೊಳಿಸಲು ಸುಗ್ರೀವಾಜ್ಞೆ

ಕಳಂಕಿತರ ರಕ್ಷಣೆಗೆ ಸರ್ಕಾರ

Published:
Updated:
ಕಳಂಕಿತರ ರಕ್ಷಣೆಗೆ ಸರ್ಕಾರ

ನವದೆಹಲಿ: ಕಳಂಕಿತ ಜನಪ್ರತಿನಿಧಿಗಳ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆ ಪೂರಕವಾಗಿ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ಮಂಗಳವಾರ ತೀರ್ಮಾನಿಸಿದ್ದು, ರಾಷ್ಟ್ರಪತಿಗಳ ಸಹಿ ನಂತರ ಜಾರಿಗೆ ಬರಲಿದೆ.ಅಪರಾಧ ಪ್ರಕರಣಗಳಲ್ಲಿ ಎರಡು  ಅಥವಾ ಅದಕ್ಕಿಂತ ಹೆಚ್ಚು ವರ್ಷ  ಜೈಲು ಶಿಕ್ಷೆಗೆ ಒಳಗಾದ ಸಂಸದರು ಮತ್ತು ಶಾಸಕರ ಸದಸ್ಯತ್ವವನ್ನು ತಕ್ಷಣ ರದ್ದು ಪಡಿಸುವಂತೆ ಸುಪ್ರೀಂಕೋರ್ಟ್‌ ಜುಲೈ 10ರಂದು ತೀರ್ಪು ನೀಡಿತ್ತು.ಈ ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಕೇಂದ್ರ ಸರ್ಕಾರ ಈಗಾಗಲೇ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಆದರೆ, ಈ ಅರ್ಜಿ ಇತ್ಯರ್ಥಗೊಳ್ಳುವ ಮುನ್ನವೇ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿದು ಸುಗ್ರೀವಾಜ್ಞೆ ಜಾರಿಗೆ ನಿರ್ಧರಿಸಿದೆ.ಇದು ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶ ಹೊಂದಿದೆ.ಭ್ರಷ್ಟಾಚಾರ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿರುವ ಕಾಂಗ್ರೆಸ್‌ ಸಂಸದ ರಶೀದ್‌ ಮಸೂದ್‌ ಅವರನ್ನು ರಕ್ಷಿಸಲು ಕೇಂದ್ರ ಸರ್ಕಾರ ಈ ಹೆಜ್ಜೆ ಇಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.1990–91ರ ಅವಧಿಯಲ್ಲಿ ವಿ.ಪಿ. ಸಿಂಗ್‌ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದಾಗ ತ್ರಿಪುರಾ ರಾಜ್ಯದ ಕೋಟಾದಿಂದ ದೇಶದಾದ್ಯಂತ ಇರುವ ವೈದ್ಯಕೀಯ ಕಾಲೇಜುಗಳಲ್ಲಿ ಅನರ್ಹ ಅಭ್ಯರ್ಥಿಗಳಿಗೆ ಸೀಟು ಮಂಜೂರು ಮಾಡಿದ್ದ ಆರೋಪ ಮಸೂದ್‌ ಮೇಲಿತ್ತು. ಕಳೆದ ವಾರವಷ್ಟೇ ಸಿಬಿಐ ನ್ಯಾಯಾಲಯ ಅವರನ್ನು ತಪ್ಪಿತಸ್ಥರು ಎಂದು ಘೋಷಿಸಿತ್ತು.ಶಿಕ್ಷೆಯ ಪ್ರಮಾಣವನ್ನು ಕೋರ್ಟ್‌ ಮುಂದಿನ ತಿಂಗಳು ಪ್ರಕಟಿಸಲಿದೆ.ಆಗ ಅವರ ರಾಜ್ಯಸಭಾ ಸದಸ್ಯತ್ವ ರದ್ದಾಗುವ ಭೀತಿ ಇತ್ತು. ಹೀಗಾಗಿ ಸರ್ಕಾರ ತರಾತುರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ  ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಮುಖ್ಯ ಆರೋಪಿಯಾಗಿರುವ  ಮೇವು ಹಗರಣವೂ ಸೆಪ್ಟೆಂಬರ್‌ 30ರಂದು ಸುಪ್ರೀಂಕೋರ್ಟ್‌ ಮುಂದೆ ವಿಚಾರಣೆಗೆ ಬರಲಿದೆ. ತೀರ್ಪು ಪ್ರಕಟವಾದಲ್ಲಿ ಲಾಲು ಪ್ರಸಾದ್‌ ಸಂಸತ್‌ ಸ್ಥಾನದಿಂದ ಅನರ್ಹಗೊಳ್ಳುವ  ಸಾಧ್ಯತೆಯಿದೆ.ಸುಪ್ರೀಂಕೋರ್ಟ್‌ ತೀರ್ಪಿನ ನಂತರ  ಕಳಂಕಿತ ಸಂಸದರು ಹಾಗೂ ರಾಜ್ಯ ಶಾಸನಸಭೆಗಳ ಪ್ರತಿನಿಧಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸಕಾರ್ರ  ‘ಜನಪ್ರತಿನಿಧಿ  ಕಾಯ್ದೆಯ ಎರಡನೇ ತಿದ್ದುಪಡಿ ಮಸೂದೆ–2013’ ಯನ್ನು ಮಳೆಗಾಲದ ಅಧಿವೇಶದಲ್ಲಿ  ರಾಜ್ಯಸಭೆಯಲ್ಲಿ ಮಂಡಿಸಿತ್ತು. ಆದರೆ,  ಮಸೂದೆಗೆ ಇನ್ನೂ ಸಂಸತ್ತಿನ  ಅಂಗೀಕಾರ ದೊರೆತಿರಲಿಲ್ಲ. ಸರ್ಕಾರದ ಈ ನಿರ್ಧಾರಕ್ಕೆ ಕೆಲವು ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದವು. ಮಸೂದೆಗೆ ಭಿನ್ನ ಧ್ವನಿ ಕೇಳಿ ಬಂದಿದ್ದವು.ಬಿಜೆಪಿ ಖಂಡನೆ: ಕಳಂಕಿತ ಜನಪ್ರತಿನಿಧಿಗಳನ್ನು ಸುಗ್ರೀವಾಜ್ಞೆ ಮೂಲಕ  ರಕ್ಷಿಸಲು ಮುಂದಾಗಿರುವ ಕೇಂದ್ರದ ಕ್ರಮವನ್ನು ಬಿಜೆಪಿ  ತೀವ್ರವಾಗಿ ಖಂಡಿಸಿದೆ.

ಕಾಂಗ್ರೆಸ್‌ ‘ಹಿಂಬಾಗಿಲ ರಾಜಕೀಯ ತಂತ್ರ’ ಅನುಸರಿಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಕಾಂಗ್ರೆಸ್‌ ವಕ್ತಾರ ಪಿ.ಸಿ. ಚಾಕೊ ತಳ್ಳಿಹಾಕಿದ್ದಾರೆ.‘ಸುಗ್ರೀವಾಜ್ಞೆ ಪ್ರಜಾಪ್ರಭುತ್ವ ವಿರೋಧಿ ಕ್ರಮವಲ್ಲ. ಹಿಂಬಾಗಿಲ ಕ್ರಮವೂ ಅಲ್ಲ. ಇದಕ್ಕೆ ಸಂಸತ್ತಿನ ಅನುಮತಿ ಬೇಕಾಗುತ್ತದೆ. ಮುಂದಿನ ಅಧಿವೇಶನದಲ್ಲಿಯೇ ಅದನ್ನು ಸಂಸತ್ತಿನ ಮುಂದೆ ಇಡುತ್ತೇವೆ’ ಎಂದು ಚಾಕೊ ಹೇಳಿದ್ದಾರೆ.ಸುಗ್ರೀವಾಜ್ಞೆಯಲ್ಲಿ ಏನಿದೆ?

*ಶಿಕ್ಷೆಗೆ ಒಳಗಾದ ಸಂಸದ ಅಥವಾ ಶಾಸಕ ತೀರ್ಪು ಬಂದ 90 ದಿನಗಳ ಒಳಗೆ ಮೇಲಿನ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಪಡೆದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಅವರಿಗೆ ಅನ್ವಯವಾಗುವುದಿಲ್ಲ.*ಅಂದರೆ ಅವರ ಸದಸ್ಯತ್ವ ಅನೂರ್ಜಿತಗೊಳ್ಳುವುದಿಲ್ಲ.*ಆದರೆ, ಅವರಿಗೆ ನೀಡಿರುವ ಶಿಕ್ಷೆಯನ್ನು ವಿಚಾರಣಾ ಕೋರ್ಟ್‌  ರದ್ದುಪಡಿಸುವವರೆಗೆ ಅವರು ಸದನದಲ್ಲಿ ಮತ ಚಲಾಯಿಸುವಂತಿಲ್ಲ. ಸಂಬಳ ಅಥವಾ ಭತ್ಯೆಯನ್ನು ಪಡೆಯುವಂತಿಲ್ಲ. ಆದರೆ, ಕಲಾಪದಲ್ಲಿ ಭಾಗವಹಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry