ಕಳಂಕಿತರ ಸೇರ್ಪಡೆ: 6ಕ್ಕೆ ಬಿಜೆಪಿ ಪ್ರತಿಭಟನೆ

7

ಕಳಂಕಿತರ ಸೇರ್ಪಡೆ: 6ಕ್ಕೆ ಬಿಜೆಪಿ ಪ್ರತಿಭಟನೆ

Published:
Updated:

ಬೆಂಗಳೂರು: ಸಚಿವ ಸಂಪುಟಕ್ಕೆ ಕಳಂಕಿತ­ರನ್ನು ಸೇರಿಸಿಕೊಳ್ಳಲಾಗಿದೆ ಎಂದು ಆರೋಪಿಸಿ  ಜ.6ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ.ಗುರುವಾರ ಪಕ್ಷದ ಕೋರ್‌ ಕಮಿಟಿ ಮತ್ತು ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್‌ ಜೋಶಿ, ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರು ಕಳಂಕಿತ­ರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದರೆ, ಈಗ ಹಲವು ಆರೋಪಗಳನ್ನು ಎದುರಿಸುತ್ತಿರುವ ರೋಷನ್‌­ಬೇಗ್‌ ಮತ್ತು ಡಿ.ಕೆ. ಶಿವ­ಕುಮಾರ್‌ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಮುಖ್ಯ­ಮಂತ್ರಿ ಅವರೇ ತಮ್ಮ ಮಾತಿನಂತೆ ನಡೆದುಕೊಂಡಿಲ್ಲ. ಕಾಂಗ್ರೆಸ್‌ ಸರ್ಕಾರದ ಈ ನಿಲುವು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.ಸಂಸತ್ತಿನಲ್ಲಿ ಲೋಕ್‌ಪಾಲ್‌ ಮಸೂದೆ ಅಂಗೀಕಾರವಾದ ಕೀರ್ತಿ­ಯನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್‌­ಗಾಂಧಿ ಅವರು ಪಡೆದುಕೊಳ್ಳಲು ಯತ್ನಿ­ಸಿದ್ದರು. ಆದರೆ, ಈಗ ರಾಹುಲ್ ಗಾಂಧಿ ಅವರ ಒತ್ತಡದ ಮೇಲೆಯೇ ಸಂಪುಟಕ್ಕೆ ಕಳಂಕಿತರನ್ನು ಸೇರಿಸಿಕೊಳ್ಳಲಾಗಿದೆ. ಇದು ಕಾಂಗ್ರೆಸ್‌ ಪಕ್ಷದ ಇಬ್ಬಗೆಯ ನೀತಿ­ಯನ್ನು ಪ್ರದರ್ಶಿಸುತ್ತಿದೆ ಎಂದು ಟೀಕಿಸಿದರು.ಅಡುಗೆ ಅನಿಲ ಬೆಲೆ ಏರಿಕೆ ವಿರೋ­ಧಿಸಿ ಜ.3ರಂದು ಎಲ್ಲ ಜಿಲ್ಲಾ ಕೇಂದ್ರ­ಗಳಲ್ಲಿ ಯುವಮೋರ್ಚಾ ಕಾರ್ಯ­ಕರ್ತರು ಹಾಗೂ ಜ.8ರಂದು ಮಹಿಳಾ ಮೋರ್ಚಾ ಕಾರ್ಯಕರ್ತರು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ­ಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು.ಲೋಕಸಭೆ ಚುನಾವಣೆ ಹಿನ್ನೆಲೆ­ಯಲ್ಲಿ ಜ.9 ಮತ್ತು 10ರಂದು ಎಲ್ಲ ಲೋಕಸಭಾ ಕ್ಷೇತ್ರಗಳ ಕೋರ್‌ ಕಮಿಟಿ ಸದಸ್ಯರ ಸಭೆ ನಡೆಸಲಾಗುವುದು. ಈ ಸಭೆ­ಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆಯೂ ನಡೆಯಲಿದೆ. ನಂತರ ಕೇಂದ್ರ ಚುನಾವಣಾ ಸಮಿತಿಗೆ ಸಂಭವ­ನೀಯ ಅಭ್ಯರ್ಥಿಗಳ ಪಟ್ಟಿಯನ್ನು ಕಳುಹಿ­ಸಲಾಗುವುದು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry