`ಕಳಂಕಿತ ಆಟಗಾರರಿಂದ ಮೋಸ ಹೋದೆ'

ಶನಿವಾರ, ಜೂಲೈ 20, 2019
28 °C
ಐಪಿಎಲ್ ಸ್ಪಾಟ್ ಫಿಕ್ಸಿಂಗ್: ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ದ್ರಾವಿಡ್

`ಕಳಂಕಿತ ಆಟಗಾರರಿಂದ ಮೋಸ ಹೋದೆ'

Published:
Updated:

ನವದಹೆಲಿ (ಪಿಟಿಐ): `ತಂಡದಲ್ಲಿದ್ದ ಕಳಂಕಿತ ಆಟಗಾರರಿಂದಲೇ ಮೋಸ ಹೋದೆ. ಮೂವರೂ ಆಟಗಾರರಿಗೆ ಅಂತಿಮ ಹನ್ನೊಂದರಲ್ಲಿ ಸ್ಥಾನ ನೀಡಬೇಕೆಂದು ನನ್ನ ಮೇಲೆ ಯಾವುದೇ ಒತ್ತಡವಿರಲಿಲ್ಲ. ಹಿಂದಿನ ಪಂದ್ಯದಲ್ಲಿ ತೋರಿದ ಪ್ರದರ್ಶನದ ಆಧಾರದ ಮೇಲೆ ಸ್ಥಾನ ನೀಡಿದ್ದೆ...'ರಾಜಸ್ತಾನ ರಾಯಲ್ಸ್ ತಂಡದ ನಾಯಕ ರಾಹುಲ್ ದ್ರಾವಿಡ್ ಅವರು ಪೊಲೀಸರ ಎದುರು ನೀಡಿದ ಹೇಳಿಕೆಯಿದು.ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ರಾಯಲ್ಸ್ ತಂಡದ ವೇಗಿ ಎಸ್. ಶ್ರೀಶಾಂತ್, ಅಂಕಿತ್ ಚವಾಣ್ ಹಾಗೂ ಅಜಿತ್ ಚಾಂಡಿಲಾ ಅವರನ್ನು ಪೊಲೀಸರು ಬಂಧಿಸಿದ್ದರು.ಸ್ಪಾಟ್ ಫಿಕ್ಸಿಂಗ್‌ನಲ್ಲಿ ರಾಯಲ್ಸ್ ಆಟಗಾರರು ಪಾಲ್ಗೊಂಡ ಆರೋಪದ ಹಿನ್ನೆಲೆಯಲ್ಲಿ ನವದೆಹಲಿ ಪೊಲೀಸರು ತಂಡದ ನಾಯಕ ದ್ರಾವಿಡ್ ಅವರ ಹೇಳಿಕೆ ಪಡೆದಿದ್ದಾರೆ. ಹೋದ ಬುಧವಾರ ದ್ರಾವಿಡ್ ಅವರ ಬೆಂಗಳೂರಿನ ನಿವಾಸದಲ್ಲಿ ಪೊಲೀಸರು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.`ರಾಯಲ್ಸ್ ತಂಡದ ಮೂವರೂ ಆಟಗಾರರನ್ನು ಅಂತಿಮ ಹನ್ನೊಂದರ ತಂಡದಲ್ಲಿ ಆಯ್ಕೆ ಮಾಡಬೇಕು ಎಂದು ನಿಮ್ಮ ಮೇಲೆ ಯಾರಾದರೂ ಒತ್ತಡ ಹೇರಿದ್ದರೆ ಎಂದು ಪ್ರಶ್ನಿಸಲಾಗಿತ್ತು. ಅದಕ್ಕವರು, ತಮ್ಮ ತಂಡದಲ್ಲಿದ್ದ ಯಾವ ಆಟಗಾರನ ಮೇಲೂ ತಮಗೆ ಕಿಂಚತ್ತೂ ಅನುಮಾನವಿರಲಿಲ್ಲ. ಅವರು ಹಿಂದಿನ ಪಂದ್ಯದಲ್ಲಿ ತೋರಿದ ಪ್ರದರ್ಶನದ ಆಧಾರದ ಮೇಲೆ ಮುಂದಿನ ಪಂದ್ಯದಲ್ಲಿ ಸ್ಥಾನ ನೀಡುತ್ತಿದ್ದೆ ಎನ್ನುವ ಉತ್ತರ ನೀಡಿದರು' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ರಾಯಲ್ಸ್ ತಂಡದ ಕೋಚ್ ಪ್ಯಾಡಿ ಉಪ್ಟನ್ ಅವರ ಹೇಳಿಕೆಯನ್ನೂ ದಾಖಲಿಸಲು ಪೊಲೀಸರ ವಿಶೇಷ ಘಟಕ ಯೋಚಿಸುತ್ತಿದೆ. `ಉಪ್ಟನ್ ಅವರು ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ಅವರು ಭಾರತಕ್ಕೆ ಬಂದ ಮೇಲೆ ಈ ಕುರಿತು ಯೋಚಿಸುತ್ತೇವೆ' ಎಂದೂ ಪೊಲೀಸರು ಹೇಳಿದ್ದಾರೆ.27 ದಿನಗಳ ಕಾಲ ಸೆರೆಮನೆಯಲ್ಲಿದ್ದ ಶ್ರೀಶಾಂತ್ ಹಾಗೂ ಚವಾಣ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಚಾಂಡಿಲ ಸದ್ಯ ಜೈಲಿನಲ್ಲಿಯೇ ಇದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಲ್ಸ್ ತಂಡದ ಮಾಜಿ ಆಟಗಾರ ಅಮಿತ್ ಸಿಂಗ್ ಹಾಗೂ ಕೆಲ ದೇಶಿಯ ಆಟಗಾರರನ್ನು ಬಂಧಿಸಲಾಗಿತ್ತು.ಇದರ ಜೊತೆಗೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ `ಸಿಇಒ' ಹಾಗೂ ಬಿಸಿಸಿಐ ಅಧ್ಯಕ್ಷ (ಅಧಿಕಾರ ರಹಿತ) ಎನ್. ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಮತ್ತು ನಟ ವಿಂದೂ ದಾರಾಸಿಂಗ್ ಅವರನ್ನೂ ಬಂಧಿಸಲಾಗಿತ್ತು. ಮೇಯಪ್ಪನ್ ಹಾಗೂ ವಿಂದು ಸಹ ಜಾಮೀನಿನ ಮೇಲೆ ಹೊರಬಂದಿದ್ದಾರೆ.ದೂರವಾಣಿ ಸಂಭಾಷಣೆ ಬಹಿರಂಗ

ನವದೆಹಲಿ (ಪಿಟಿಐ): ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಮೂಲ ಸೂತ್ರದಾರ ಎಂದು ಹೇಳಲಾಗುತ್ತಿರುವ ದಾವೂದ್ ಇಬ್ರಾಹಿಂ ಹಾಗೂ ಬುಕ್ಕಿಗಳ ನಡುವೆ ನಡೆದ ದೂರವಾಣಿ ಸಂಭಾಷಣೆಯನ್ನು ನವದೆಹಲಿಯ ಪೊಲೀಸರು ಮಂಗಳವಾರ ಕೋರ್ಟ್‌ನಲ್ಲಿ ಬಹಿರಂಗ ಮಾಡಿದರು.ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರ ಚೋಟಾ ಶಕೀಲ್ ಅವರಿಗೆ ಸಂಪರ್ಕದಲ್ಲಿರುವ ಜಾವೇದ್ ಜೊತೆ ಬುಕ್ಕಿ ಅಶ್ವಿನಿ ಅಗರ್‌ವಾಲ್ ಉತ್ತಮ ಸಂಬಂಧ ಹೊಂದಿದ್ದಾರೆ. ಈ ಪ್ರಕರಣದಲ್ಲಿ ಅಶ್ವಿನ್‌ಗೆ ಭೂಗತ ಜಗತ್ತಿನ ಜೊತೆ ನಿಕಟ ಸಂಪರ್ಕವಿದೆ ಎಂದೂ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.ಸೆರೆಮನೆಯಲ್ಲಿರುವ ರಾಯಲ್ಸ್ ತಂಡದ ಆಟಗಾರ ಅಜಿತ್ ಚಾಂಡಿಲ, ಬುಕ್ಕಿ ಅಶ್ವಿನ್, ರಮೇಶ್ ವೈಶ್ಯ, ದೀಪಕ್ ಕುಮಾರ್, ಸುನಿಲ್ ಭಾಟಿಯಾ ಮತ್ತು ಮಾಜಿ ರಣಜಿ ಆಟಗಾರ ಬಾಬುರಾವ್ ಯಾದವ್ ಅವರು ಜಾಮೀನಿಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಪೊಲೀಸರು ದೂರವಾಣಿ ಸಂಭಾಷಣೆಯ ವಿವರವನ್ನು ಬಹಿರಂಗ ಮಾಡಿದ ಕಾರಣ, ಇವರಿಗೆ ಜಾಮೀನು ಲಭಿಸುವುದು ಇನ್ನಷ್ಟು ಕಗ್ಗಂಟಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry