ಗುರುವಾರ , ಮೇ 26, 2022
30 °C

ಕಳಚಿತು ಪಕ್ಕಾ ಸಮಾಜವಾದದ ಕೊಂಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಮಹೇಶ್ವರಪ್ಪ ಅವರನ್ನು ಭೇಟಿ ಮೊದಲು ಮಾಡಿದ್ದು ಮೈಸೂರಿನ ವಸ್ತುಪ್ರದರ್ಶನವೊಂದರಲ್ಲಿ. ಜೆ.ಎಚ್. ಪಟೇಲರ ತಮ್ಮ ಎಂದು ನನ್ನನ್ನು ಗುರುತಿಸಿ, `ಏಯ್ ಬಾರೋ ಇಲ್ಲಿ. ನಿಮ್ಮಣ್ಣ ನನಗೆ ಚೆನ್ನಾಗಿ ಗೊತ್ತು~ಎಂದು ಅವರೇ ಪರಿಚಯಿಸಿಕೊಂಡಿದ್ದರು. 1961ರ ನಂತರ ನನ್ನ ಮತ್ತು ಮಹೇಶ್ವರಪ್ಪ ಅವರ ಬಾಂಧವ್ಯ ಮತ್ತಷ್ಟು ಗಟ್ಟಿಗೊಂಡಿತು. ಅಲ್ಲಿಂದ ಶುರುವಾದ ಒಡನಾಟ ನನ್ನ ಬದುಕಿನುದ್ದಕ್ಕೂ ಮುಂದುವರಿಯಿತು.ಅಣ್ಣನ ನಂತರ ಹೆಚ್ಚು ಆಪ್ತವಾಗಿ ಹಚ್ಚಿಕೊಂಡಿದ್ದು ನಾನು ಮಹೇಶ್ವರಪ್ಪ ಅವರನ್ನು ಮಾತ್ರ. ಏಕೆಂದರೆ ಪಕ್ಕಾ ಸಮಾಜವಾದಿ ಚಳವಳಿಯಿಂದ ಬಂದಿದ್ದ ಮಹೇಶ್ವರಪ್ಪ ನನಗೆ ಆದರ್ಶವಾಗಿದ್ದರು. ಒಂದು ಕಾಲದಲ್ಲಿ ಖಾದ್ರಿ ಶಾಮಣ್ಣ, ಬಾಪು ಕೃಷ್ಣಮೂರ್ತಿ, ಶಾಂತವೇರಿ ಗೋಪಾಲಗೌಡ, ಕಾಗೋಡು ತಿಮ್ಮಪ್ಪ, ಎಸ್. ಬಂಗಾರಪ್ಪ, ಎಸ್.ಎಸ್. ಕುಮುಟಾ, ಬಿ.ಎಸ್. ಚಂದ್ರಶೇಖರ್, ಬಂದಗದ್ದೆ ರಮೇಶ್ ಅವರ ಜತೆ ರಾಜ್ಯದಲ್ಲಿ ಸೋಷಲಿಸ್ಟ್ ಪಕ್ಷ ಹುಟ್ಟುಹಾಕಿದ್ದ `ಕೆಜಿಎಂ~ ನನ್ನಂತಹ ಹಲವು ಯುವಕರಿಗೆ ಆಗ ಆದರ್ಶಪ್ರಾಯವಾಗಿದ್ದರು. ಆದರೆ, ಇಂದು ಅವರ ಸಾವಿನೊಂದಿಗೆ ಸಮಾಜವಾದದ ಕೊಂಡಿಯೊಂದು ಕಳಚಿದಂತಾಗಿದೆ.ಒಂದೇ ಜಾತಿ, ಅದು ಸಮಾಜವಾದಿ: ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರು... ಹೀಗೆ ಯಾವ ಜಾತಿಯ ತಾರತಮ್ಯ, ಭೇದವಿಲ್ಲದೇ ಬೆಳೆದವರು ಮಹೇಶ್ವರಪ್ಪ. ಅವರು ಮೇಲ್ವರ್ಗದಲ್ಲಿ ಹುಟ್ಟ್ದ್ದಿದರೂ, ಅದು ಅವರನ್ನೆಂದೂ ಅಹಂಗೆ ದೂಡಲಿಲ್ಲ. ಅತ್ಯಂತ ಸರಳತೆ ಅವರಲ್ಲಿತ್ತು.ಮುಖ್ಯವಾಗಿ ಅವರು ಉತ್ತಮ ಮನುಷ್ಯರಾಗಿದ್ದರು. ಯಾರೊಂದಿಗೆ ಸಿಟ್ಟಿನಿಂದ ಮಾತನಾಡಿದವರೂ ಅಲ್ಲ. ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಅಹಂ ಇಲ್ಲದೇ ಭಾಗವಹಿಸುತ್ತಿದ್ದರು. ಮೂರು ವರ್ಷದ ಹಿಂದೆಯಷ್ಟೇ ಅಣ್ಣ ಜೆ.ಎಚ್. ಪಟೇಲ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಅವರೊಂದಿಗೆ ಭಾಗವಹಿಸಿದ್ದರು.

 

ಬಹುಶಃ ಅದೇ `ಕೆಜಿಎಂ~ ಅವರ ಕೊನೆಯ ಕಾರ್ಯಕ್ರಮ. ಮತ್ತೆಂದೂ ನಾನು ಅವರನ್ನು ವೇದಿಕೆಯಲ್ಲಿ ಕಾಣಲೇ ಇಲ್ಲ. ವಯೋಸಹಜ ಅನಾರೋಗ್ಯ, ಮರೆಗುಳಿತನದಿಂದ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನೇ ಬಿಟ್ಟಿದ್ದರು. ವೈಯಕ್ತಿಕ ಜೀವನದಲ್ಲಿ ಹಲವು ದುರಂತಗಳನ್ನು ಕಂಡಿದ್ದ `ಕೆಜಿಎಂ~ ಅವುಗಳನ್ನು ಮೀರಿ ರಾಜಕಾರಣದಲ್ಲಿ ಸಕ್ರಿಯವಾಗಿದ್ದರು. ಬಹುಶಃ ಅವರ ಮಗನ ಸಾವಿನ ದುಃಖ ಮರೆಯಲೆಂದೇ ಅವರು ಅಷ್ಟು ಬದ್ಧತೆಯಿಂದ ಸಮಾಜವಾದಿ ಚಳವಳಿ ಮತ್ತು ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡರು ಅನಿಸುತ್ತದೆ.ಪಕ್ಕಾ ಸೋಷಲಿಸ್ಟ್ ಆಗಿದ್ದ `ಕೆಜಿಎಂ~, ಅಧಿಕಾರದ ರುಚಿ ಕಂಡು ಸ್ವಲ್ಪಸ್ವಲ್ಪವೇ ಬದಲಾಗುತ್ತಿದ್ದಾಗ, ಸಮಾಜವಾದದ ವೇಷ ಕಳಚತೊಡಗಿತು ಎಂದು ನಾನು ಒಳಗೊಳಗೇ ಬೇಸರಗೊಳ್ಳುತ್ತಿದ್ದೆ. ಆದರೂ ಅವರ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ.ಏಕೆಂದರೆ ಅವರೊಬ್ಬ ಸಜ್ಜನ ರಾಜಕಾರಣಿಯಾಗಿದ್ದರು. ಪಕ್ಷಗಳು ಯಾವುದೇ ಇರಲಿ ಅವರ ಮನೆ-ಮನಸಿನೊಳಗೆ ಮುಕ್ತ ಪ್ರವೇಶವಿರುತ್ತಿತ್ತು. ಹಾಗಾಗಿ, ಅವರು ಸತ್ತಾಗ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕಮ್ಯುನಿಸ್ಟ್  ಗೆಳೆಯರು ಪಕ್ಷಾತೀತರಾಗಿ ಬಂದು ಅವರ ಅಂತಿಮ ದರ್ಶನ ಪಡೆದರು.ದಾವಣಗೆರೆ ತಾಲ್ಲೂಕಿನ ಕುರ್ಕಿ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿದ್ದ `ಕೆಜಿಎಂ~ (ಜನನ: ಏಪ್ರಿಲ್ 24, 1928) ರಾಜ್ಯಸಭಾ ಸದಸ್ಯ, ಶಾಸಕ ಸ್ಥಾನ ಪಡೆದಿದ್ದರೂ ಹಳ್ಳಿಯ ಒಡನಾಟ ತೊರೆದಿರಲಿಲ್ಲ. ರೈತರನ್ನು ಕಂಡರೆ ಅಪಾರ ಪ್ರೀತಿ, ಕಾಳಜಿ ಇತ್ತು. ರಾಮ ಮನೋಹರ ಲೋಹಿಯಾ ಅವರಿಂದ ಪ್ರಭಾವಿತರಾಗಿದ್ದ ಅವರು,  ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಧೋರಣೆ ವಿರೋಧಿಸಿದ್ದರು. ನಾವೆಲ್ಲಾ ಬಂಧಿತರಾಗಿ ಜೈಲಿನಲ್ಲಿದ್ದೆವು. ಆದರೆ, `ಕೆಜಿಎಂ~ ಅವರಂತಹ ಸಾತ್ವಿಕ ವ್ಯಕ್ತಿತ್ವದವರನ್ನು ಪೊಲೀಸರು ಬಂಧಿಸದೇ ಹಾಗೇ ಬಿಟ್ಟಿದ್ದರು!.

ಬಹುಶಃ `ಕೆಜಿಎಂ~ ಅವರ ವಿಶೇಷತೆ ಎಂದರೆ ಇದೇ. ಶತ್ರುಗಳೂ ಕೂಡಾ ಅವರ ಸ್ನೇಹಕ್ಕೆ ಹಾತೊರೆಯುವಂತಹ ವ್ಯಕ್ತಿತ್ವ ಅವರದಾಗಿತ್ತು.ಇಂದಿನ ಕೊಳಕು ರಾಜಕಾರಣದಲ್ಲಿ `ಕೆಜಿಎಂ~ ಅವರಂತಹ ಸಜ್ಜನ ರಾಜಕಾರಣಿಯನ್ನು ದುರ್ಬೀನು ಹಾಕಿ ಹುಡುಕಿದರೂ ಸಿಗಲಾರರು. ಒಬ್ಬ ರಾಜಕಾರಣಿ ಹೇಗಿರಬೇಕೆಂಬುದಕ್ಕೆ ಅವರು ಉದಾಹರಣೆಯಾಗಿದ್ದರು.ಕೊಂಡಜ್ಜಿ ಬಸಪ್ಪ ಅವರ ಸಂಬಂಧಿಕರಾದರೂ ಕಾಂಗ್ರೆಸ್‌ನತ್ತ ಮುಖ ಮಾಡಲಿಲ್ಲ. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರಂತೂ ಒಮ್ಮೆ ಕೆ.ಆರ್. ಜಯದೇವಪ್ಪ ಅವರ ಮೂಲಕ ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಿದ್ದರು.`ಮುಖ್ಯಮಂತ್ರಿ~ ಪಟ್ಟದ ಆಮಿಷ ಒಡ್ಡಿದ್ದರೂ `ಕೆಜಿಎಂ~ ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಉತ್ತಮ ವಕೀಲರೂ ಆಗಿದ್ದ ಅವರ ಮನಸ್ಸು ಮಾಡಿದ್ದರೆ ಕೈತುಂಬಾ ಹಣ ಸಂಪಾದಿಸಿ ಆರಾಮವಾಗಿ ಇರಬಹುದಿತ್ತು. ಆದರೆ, ಸಮಾಜವಾದದ ಕಾವು ಅವರನ್ನು ಬಂಡವಾಳಶಾಹಿಯನ್ನಾಗಿಸಲಿಲ್ಲ. ಅಣ್ಣ ಜೆ.ಎಚ್. ಪಟೇಲರ ನಂತರ ಆಪ್ತವಾಗಿದ್ದ `ಕೆಜಿಎಂ~ ಅವರು ನನ್ನ ಜತೆಯಲ್ಲಿಲ್ಲ ಎಂಬುದು ನನ್ನನ್ನು ಈ ಕ್ಷಣ ಕಾಡುತ್ತಿರುವ ದೊಡ್ಡ ನೋವು.

(ಲೇಖಕರು  ಕೆ.ಜಿ. ಮಹೇಶ್ವರಪ್ಪ ಅವರ ಒಡನಾಡಿ ಹಾಗೂ ಕಾನೂನು ತಜ್ಞ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.