ಕಳಚಿದ ಅರಮನೆ ಕಲಾವಿದರ ಕೊನೆ ಕೊಂಡಿ

7

ಕಳಚಿದ ಅರಮನೆ ಕಲಾವಿದರ ಕೊನೆ ಕೊಂಡಿ

Published:
Updated:

ಮೈಸೂರು: ಅರಮನೆ ಭಿತ್ತಿಯಲ್ಲಿರುವ ದಸರಾ ಮೆರವಣಿಗೆ ಚಿತ್ರಗಳನ್ನು ನೋಡುತ್ತಾ ಹೋದಂತೆ ಮಹಾರಾಜ ಮತ್ತವರ ಸಿಬ್ಬಂದಿ, ದಿವಾನರು, ಖಾಸಾ ಪರಿವಾರ, ಸಿಪಾಯಿಗಳು, ಕಾಲಾಳುಗಳು ಮೊದಲ್ಗೊಂಡಂತೆ ಎಲ್ಲರನ್ನು ಇವರು ಇಂತಹವರೇ ಎಂದು ಗುರುತಿಸುವಂತೆ ರಚಿಸಿದ್ದಾರಲ್ಲಾ! ಈಗ ಅಂತಹ ಕಲಾವಿದರು ಇದ್ದಾರೆಯೇ? ಎಂದು ಹುಬ್ಬೇರಿಸುವಂತೆ ಮಾಡುತ್ತದೆ.ಇಂತಹ ಅಪರೂಪದ ಅರಮನೆಯ ಕಲಾವಿದರ ಕೊನೆಯ ಕೊಂಡಿಯಾಗಿದ್ದ ರಾಮನರಸಯ್ಯ ಅವರು ಶ್ರೀ ಜಯಚಾಮರಾಜ ಒಡೆಯರ್ ಅವರ ಕೊನೆಯ ದರ್ಬಾರ್ ಚಿತ್ರವನ್ನು 6 ವರ್ಷ ಸತತವಾಗಿ ರಚಿಸಿದ್ದರು. 7/12 ಅಡಿ ಉದ್ದಗಲದ ಈ ಚಿತ್ರ ಇಂದಿಗೂ ಜಗನ್ಮೋಹನ ಅರಮನೆಯಲ್ಲಿ ನೋಡಬಹುದಾಗಿದೆ.ಆಳೆತ್ತರದ ಜಯಚಾಮರಾಜ ಒಡೆಯರ್ ಅವರು ದರ್ಬಾರ್ ಪೋಷಾಕಿನಲ್ಲೇ ಕುರ್ಚಿ ಪಕ್ಕ ನಿಂತಿರುವ, ಕುದುರೆ ಸವಾರಿ ಮಾಡುತ್ತಿರುವ ಮತ್ತು ಅವರ ಕುಟುಂಬದವರ, ದಿವಾನರುಗಳ ಚಿತ್ರಗಳನ್ನು ಅವರು ರಚಿಸಿದ್ದು, ಸರ್ಕಾರಿ ಅರಮನೆ, ಶ್ರೀಕಂಠದತ್ತ ಒಡೆಯರ್ ಅವರ ಖಾಸಗಿ ಅರಮನೆ, ಜಗನ್ಮೋಹನ ಅರಮನೆಯಲ್ಲಿ ರಾರಾಜಿಸುತ್ತಿವೆ.

ಮೈಸೂರಿನ ಚಾಮರಾಜೇಂದ್ರ ವೃತ್ತಿ ಶಿಕ್ಷಣ ಶಾಲೆ (ಕಾವಾ)ಯಲ್ಲಿ ಡಿಪ್ಲೋಮಾ ಮಾಡಿದ ಇವರು ಅರಮನೆಗೆ ಪ್ರವೇಶ ಮಾಡಿದ್ದು ತಮ್ಮ ಕಲಾಕೃತಿಯ ಮೂಲಕವೇ.ಸುಮಾರು 5 ಅಡಿ ಎತ್ತರದ ಜಯಚಾಮರಾಜ ಒಡೆಯರ್ ಅವರ ತೈಲಚಿತ್ರವನ್ನು ರಾಮನರಸಯ್ಯ ಬರೆದು ತಾತನ ಮೂಲಕ ಮಹಾರಾಜರಿಗೆ ಅರ್ಪಿಸಿದರು. ಇದರಿಂದ ಸಂತೋಷಭರಿತರಾದ ಮಹಾರಾಜರು ಅವರನ್ನು ಅರಮನೆ ಕಲಾವಿದರನ್ನಾಗಿಸಿಕೊಂಡರು (1947). ಅರಸೊತ್ತಿಗೆ ಹೆಚ್ಚು ಕಾಲ ಉಳಿಯಲಿಲ್ಲವಾದ್ದರಿಂದ ಅವರು ಅಲ್ಲಿಂದ ನಿವೃತ್ತಿ ಹೊಂದಿದ್ದು 1978 ರಲ್ಲಿ. ನಂತರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನಶಿಸಿ ಹೋಗುತ್ತಿದ್ದ ಸಂಪ್ರದಾಯ ಕಲೆ ಉಳಿಸಿ ಬೆಳೆಸಬೇಕೆಂಬ ಉದ್ದೇಶದಿಂದ ಜಗನ್ಮೋಹನ ಅರಮನೆಯ ಒಂದು ಭಾಗದಲ್ಲಿ ಸ್ಥಳ ನೀಡಿ ಆಸಕ್ತರಿಗೆ ತರಬೇತಿ ನೀಡಲು ಪ್ರೋತ್ಸಾಹಿಸಿದರು.ಅಲ್ಲಿ ರಾಮನರಸಯ್ಯ ಅವರಿಂದ ಸುಮಾರು 400-500 ವಿದ್ಯಾರ್ಥಿಗಳು ಸಂಪ್ರದಾಯ ಕಲೆ ತರಬೇತಿ ಪಡೆದರು. ಅವರೇ ಇಂದು ಮೈಸೂರಿನಲ್ಲಿ ಆ ಕಲೆಯನ್ನು ಉಳಿಸಿ ಬೆಳೆಸುತ್ತಿರುವವರೆಂದರೆ ಆಶ್ಚರ್ಯವಿಲ್ಲ. ಇವರೆಲ್ಲರೂ ಕೂಡಿ `ಕಲಾಂಜಲಿ' ಎಂಬ ಗೌರವ ಸಂಭಾವನ ಗ್ರಂಥ ಪ್ರಕಟಿಸಿ ಗುರುವಂದನೆ ಸಲ್ಲಿಸಿದರು.ಶ್ರೀರಾಮ ಪಟ್ಟಾಭಿಷೇಕ, ಗಜೇಂದ್ರ ಮೋಕ್ಷ, ಶ್ರೀಕೃಷ್ಣ, ಸರಸ್ವತಿ, ತಾಂಡವಮೂರ್ತಿ, ಚಾಮುಂಡೇಶ್ವರಿ ಮುಂತಾದವು ಇವರ ಹೆಸರಿಸಬಹುದಾದ ಸಂಪ್ರದಾಯ ಕಲೆಗಳು. ನೈಜ ಕಲೆ (ರಿಯಲಿಸ್ಟಿಕ್ ಆರ್ಟ್) ಮತ್ತು ಸಂಪ್ರದಾಯ ಕಲೆ (ಟ್ರೆಡಿಷನಲ್ ಪೇಂಟಿಂಗ್) ಎರಡನ್ನೂ ಕರಗತ ಮಾಡಿಕೊಂಡಿದ್ದ ಇವರು ರಸಾಯನಶಾಸ್ತ್ರ ತಿಳಿದಿದ್ದರು. ಸ್ವತಃ ಬಣ್ಣ ತಯಾರಿಕೆ ಮಾಡಿಕೊಳ್ಳುವುದರೊಂದಿಗೆ ಅಳಿಲಿನ ಬಾಲ, ಬಿಳಿಹಂದಿಯ ಕತ್ತಿನ ಕೂದಲುಗಳನ್ನು ಬಳಸಿಕೊಂಡು ಕುಂಚ ತಯಾರಿಸುತ್ತಿದ್ದರು.91 ವರ್ಷ ಜೀವಿಸಿದ್ದ (1922-2012) ರಾಮನರಸಯ್ಯ ಅವರಿಗೆ ಚಿತ್ರಕಲಾನಿಧಿ ಎಂಬ ಬಿರುದು, ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ದಸರಾ ವಸ್ತುಪ್ರದರ್ಶನ ಸಮಿತಿ ಪ್ರಶಸ್ತಿ ಗೌರವ, ಎಂ.ಟಿ.ವಿ.ಆಚಾರ್ಯ ಪ್ರಶಸ್ತಿ ಸಹ ದೊರಕಿತ್ತು. 6 ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳಿಗೂ  ಚಿತ್ರಕಲೆಯನ್ನು  ಕಲಿಸಿದ್ದರು. ಅವರಲ್ಲಿ ಚಂದ್ರಿಕಾ, ಸುಧಾ ಅವರು ಬಹಳ ಉತ್ಕೃಷ್ಟವಾಗಿ ಚಿತ್ರಿಸುತ್ತಿದ್ದಾರೆ. ರಾಮನರಸಯ್ಯ ಅವರು ಎಂದೂ ಸುಮ್ಮನೆ ಕುಳಿತವರೇ ಅಲ್ಲ. ನಿರಂತರವಾಗಿ ಕಲಾರಚನೆಯಲ್ಲಿ ತೊಡಗಿರುತ್ತಿದ್ದರು.`ಏನ್ ಸಾರ್ ನೀವು ಪ್ಯಾಲೆಸ್ ಆರ್ಟಿಸ್ಟ್. ಈ ಇಳಿ ವಯಸ್ಸಿನಲ್ಲಿ ಏಕೆ ದುಡಿಯುತ್ತಿದ್ದೀರಿ' ಎಂದು ಪ್ರಶ್ನಿಸಿದರೆ `ನಿಜ ಸ್ವಾಮಿ ನಾವು ಪ್ಯಾಲೆಸ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದವರು. ಕಡಿಮೆ ಸಂಬಳ, ದುಡಿಮೆ ಅಧಿಕ. ಈಗ ನಾವು ಪೇ ಲೆಸ್ ಕಲಾವಿದರು' ಎನ್ನುತ್ತಿದ್ದರು.ಇಂದು ಅವರು ನೆನಪಾಗಿ ಮಾತ್ರ ಉಳಿದಿದ್ದಾರೆ. ಅವರ ಕಲಾಕೃತಿಗಳು ಮಾತ್ರ ಅವರ ಜೀವಂತಿಕೆ ಬಿಂಬಿಸುತ್ತಿವೆ. ರಾಮನರಸಯ್ಯ ಅವರ ಹಿರಿಯ ಮತ್ತು ಕಿರಿಯ ಸಮಕಾಲೀನರಾಗಿದ್ದ ಎಂ.ಜೆ.ಶುದ್ಧೋದನ, ರಘೋತ್ತಮ ಪುಟ್ಟೆ, ಕಾಳಪ್ಪ, ಎನ್.ಹುನಮಯ್ಯ, ರಾ.ಸೀತಾರಾಂ, ಎಂ.ಇ.ಗುರು, ಪಿ.ಆರ್.ತಿಪ್ಪೇಸ್ವಾಮಿ ಇವರೆಲ್ಲಾ ಮೈಸೂರಿನ ಕಲಾ ಲೋಕದಲ್ಲಿ ಧ್ರುವ ತಾರೆಗಳಾಗಿ ಮಿಂಚಿ ಮಾಯವಾದವರ ಸಾಲಿಗೆ ಈ ಹಿರಿಯ ಜೀವವೂ ಈಗ ಸೇರಿರುವುದು ಕಲಾ ಲೋಕಕ್ಕೆ ದೊಡ್ಡ ನಷ್ಟವೇ ಎನ್ನಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry