ಶುಕ್ರವಾರ, ಮೇ 27, 2022
23 °C

ಕಳಚಿದ ಸಾಂಸ್ಕೃತಿಕ ಕೊಂಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡಿಗರು ಹೊರ ರಾಜ್ಯಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆಯಾ ರಾಜ್ಯಗಳ ಜನಜೀವನ, ಸಂಸ್ಕೃತಿಗಳೊಂದಿಗೆ ಬೆರೆತು, ಕನ್ನಡವನ್ನೂ ಉಸಿರಾಡುತ್ತ ಅವರ ಭಾಷೆಯನ್ನೂ ಕನ್ನಡಕ್ಕೆ ಅನುವಾದ ಮಾಡಿಕೊಳ್ಳುತ್ತ ಬದುಕುತ್ತಿರುವ ಕನ್ನಡಿಗರು ತಮ್ಮ ತಮ್ಮ ಮಿತಿಯಲ್ಲಿ ಸ್ಮರಣೀಯ ಕೆಲಸಗಳನ್ನು ಮಾಡಿ, ಸೈ ಎನಿಸಿಕೊಂಡವರಿದ್ದಾರೆ. ಅನ್ಯ ಭಾಷೆಯ ನಾಡಿ ಹಿಡಿದು, ತಮ್ಮ ಮಾತೃ ಭಾಷೆಯ ಮಿಡಿತಗಳಿಗೆ ಹೊಂದಿಸಿ ಸಂಸ್ಕೃತಿಗಳ ಸಂಗಮ ಮಾಡಿದವರಲ್ಲಿ ಜಿ. ಕುಮಾರಪ್ಪ ಅವಿಸ್ಮರಣೀಯರು.ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತದಲ್ಲಿನ ರಾಷ್ಟ್ರೀಯ ಗ್ರಂಥಾಲಯದ ಕನ್ನಡ ವಿಭಾಗದ ಮುಖ್ಯ ಅಧಿಕಾರಿಯಾಗಿದ್ದ ಕುಮಾರಪ್ಪ, ಬಂಗಾಳಿ ಭಾಷೆಯನ್ನು ಶ್ರದ್ಧೆಯಿಂದ ಕಲಿತು, ಅಪಾರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟವರು.ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ಬಸಾಪುರದಲ್ಲಿ ಜನಿಸಿದ ಕುಮಾರಪ್ಪ,  ಗ್ರಂಥಾಲಯ ವಿಜ್ಞಾನದಲ್ಲಿ ಪದವಿ ಪಡೆದು, ರಾಷ್ಟ್ರೀಯ ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿದರು. ಸಾಮಾನ್ಯ ಗ್ರಂಥಪಾಲಕರಾಗಿಯಷ್ಟೇ ಉಳಿದಿದ್ದರೆ, ಅವರ ಬಗ್ಗೆ ಏನೂ ಹೇಳಬೇಕಾಗಿರಲಿಲ್ಲ. ಕನ್ನಡ  ಉಸಿರಾಡುತ್ತ ಬಂಗಾಳಿ  ಅರಗಿಸಿಕೊಳ್ಳುತ್ತ ಅಲ್ಲಿನ ಸಂಸ್ಕೃತಿಯನ್ನು ಕನ್ನಡ ಜಗತ್ತಿಗೆ ಪರಿಣಾಮಕಾರಿಯಾಗಿ ಪರಿಚಯಿಸಿದ್ದರಿಂದಲೇ ಅವರು ಅನನ್ಯರಾಗಿ ಉಳಿಯುತ್ತಾರೆ.ಯಾವುದೇ ಬಂಗಾಳಿ ಭಾಷಿಕನಿಗಿಂತ ಸುಲಲಿತವಾಗಿ ಬಂಗಾಳಿ ಮಾತನಾಡುತ್ತಿದ್ದ ಅವರನ್ನು ಬಂಗಾಳಿಗಳೇ ಬೆರಗಿನಿಂದ ನೋಡುತ್ತಿದ್ದರು. ತಮ್ಮ ಚುರುಕುತನ, ಹಾಸ್ಯಮಿಶ್ರಿತ ಮಾತುಗಾರಿಕೆ, ಅಗಾಧ ಮಾನವೀಯತೆ, ಅನುಪಮ ಆತಿಥ್ಯದ ಗುಣಗಳಿಂದಾಗಿ ಕರ್ನಾಟಕದಿಂದ ಅಲ್ಲಿಗೆ ಹೋದ ಕನ್ನಡಿಗರಿಗೆ ಅತ್ಯಂತ ಆತ್ಮೀಯರಾಗಿದ್ದವರು ಅವರು. ಅಷ್ಟೇ ಅಲ್ಲ ಬಂಗಾಳದ ಧೀಮಂತ ಸಾಹಿತಿಗಳಿಗೂ ಅವರು ಚಿರಪರಿಚಿತರಾಗಿದ್ದರು.ಕರ್ನಾಟಕದಿಂದ ಯಾರೇ ಕೊಲ್ಕತ್ತಗೆ ಹೋಗಬೇಕೆಂದರೆ ಕುಮಾರಪ್ಪ ಅವರ ಪರಿಚಯದ ಮೂಲಕವೇ ಆ ಮಹಾನಗರದ ಹೆಬ್ಬಾಗಿಲನ್ನು ದಾಟಬೇಕಾಗಿತ್ತು. ಹೀಗೆ ಹೋದ ಕನ್ನಡದ ಅಗ್ರಗಣ್ಯ ಸಾಹಿತಿಗಳು ಕವಿಗಳು, ವಿಮರ್ಶಕರು ಕುಮಾರಪ್ಪ ಅವರನ್ನು ತಮ್ಮ ಮನದಾಳದಲ್ಲಿ ಇಟ್ಟುಕೊಂಡಿದ್ದಾರೆ.ನಾಡಿನ ಅನೇಕ ಸಾಹಿತ್ಯ ದಿಗ್ಗಜರು ಕಮಾರಪ್ಪನವರ ಆತಿಥ್ಯವನ್ನೂ, ಅಹಂಕಾರ ರಹಿತ ವ್ಯಕ್ತಿತ್ವವನ್ನೂ ಈಗಲೂ ಸ್ಮರಿಸುತ್ತಾರೆ.ಪಶ್ಚಿಮ ಬಂಗಾಳದ ಮಹತ್ವದ ಸಾಹಿತಿ ಮಹಾಶ್ವೇತಾದೇವಿ ಅವರಿಗೆ ತುಂಬಾ ಹತ್ತಿರವಾಗಿದ್ದ ಕುಮಾರಪ್ಪ, ಮಹಾಶ್ವೇತಾದೇವಿ ತಮ್ಮನ್ನು, ತಮ್ಮ ಮಗನಂತೆ ಮಾತಾಡಿಸುತ್ತಿದ್ದರೆಂದು ಹೇಳುತ್ತಿದ್ದರು. ಅವರ ಕೃತಿಗಳನ್ನೂ ಕೂಡ ಕನ್ನಡಕ್ಕೆ ತಂದಿದ್ದಾರೆ.ತಮ್ಮ ಅಪಾರ ಓದಿನಿಂದ, ಬಂಗಾಳಿ, ಹಿಂದಿ, ಇಂಗ್ಲಿಷ್ ಭಾಷೆಗಳ ಆಳವಾದ ಅರಿವಿನಿಂದ ಕನ್ನಡದಿಂದ ಬಂಗಾಳಿಗೆ, ಬಂಗಾಳಿಯಿಂದ ಕನ್ನಡಕ್ಕೆ ಅವರು ಅನುವಾದಿಸಿದ ಕೃತಿಗಳು ಅಸಂಖ್ಯ.ಹಿಂದಿಯಿಂದಲೂ ಕೆಲವು ಕೃತಿಗಳನ್ನು ಅವರು ಅನುವಾದಿಸಿದ್ದಾರೆ. ಇಂತಹ ಸ್ತುತ್ಯ ಕಾರ್ಯಕ್ಕಾಗಿ ಸಾಹಿತ್ಯ ಅಕಾಡೆಮಿಯಂತಹ ಸಂಸ್ಥೆಗಳು ಅವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.ಕನ್ನಡ ಬಂಗಾಳಿಯ ಸಾಂಸ್ಕೃತಿಕ ಕೊಂಡಿಯೊಂದು ತನ್ನ ಉಸಿರಾಟವನ್ನು ಸ್ಥಬ್ದಗೊಳಿಸಿದೆ. ಈಗ ಅವರು ಬರೀ ನೆನಪು ಮಾತ್ರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.