ಬುಧವಾರ, ನವೆಂಬರ್ 20, 2019
20 °C

`ಕಳಪೆ ಆಡಳಿತದಿಂದ ಜೀವನಮಟ್ಟ ಕುಸಿತ'

Published:
Updated:
`ಕಳಪೆ ಆಡಳಿತದಿಂದ ಜೀವನಮಟ್ಟ ಕುಸಿತ'

ಬೆಂಗಳೂರು: `ದೇಶವು ಇನ್ನೂ ಬಡತನ, ಹಸಿವು, ಅಪೌಷ್ಟಿಕತೆ, ಕಾಯಿಲೆಗಳು, ಅಶುಚಿತ್ವ ಮತ್ತು ಶೋಚನೀಯ ಜೀವನ ಮಟ್ಟವನ್ನು ಹೊಂದಿರುವುದಕ್ಕೆ ಕಳಪೆ ಪ್ರಭುತ್ವ ಮತ್ತು ಆಡಳಿತವೇ ಕಾರಣವಾಗಿದೆ' ಎಂದು `ರಾಷ್ಟ್ರೀಯ ಸಾಮಾಜಿಕ ಕಾವಲು ಪಡೆ'ಯ ಸಂಶೋಧನಾ ಸಮನ್ವಯಕಾರ ಡಾ.ಭಾಸ್ಕರ್ ರಾವ್ ಅಭಿಪ್ರಾಯಪಟ್ಟರು.ಕರ್ನಾಟಕ ಸಾಮಾಜಿಕ ಕಾವಲು ಪಡೆಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ಅರಣ್ಯ ಹಕ್ಕು ಕಾಯ್ದೆ 2006 ರ ಜಾರಿ ಕುರಿತು ಸಮಿತಿಯ ಅಧ್ಯಕ್ಷರಾದ ಡಾ.ಎನ್.ಸಿ. ಸಕ್ಸೇನ ಅವರು ಬರೆದ ಕೃತಿ `ಉತ್ತಮ ಸರ್ಕಾರಕ್ಕಾಗಿ ಆಡಳಿತ ಸುಧಾರಣೆ' ಕುರಿತು ಉಪನ್ಯಾಸವನ್ನು ನೀಡಿದರು.`ಸಕ್ಸೇನ ಅವರು ಪುಸ್ತಕದಲ್ಲಿ ದೇಶದ ಬೆಳವಣಿಗೆಗೆ ಅಡ್ಡಿಯಾದ ಅಂಶಗಳು ಮತ್ತು ಸಮಾಜದ ಅಭಿವೃದ್ಧಿಗೆ ಮಾರಕವಾದ ಅಂಶಗಳ ಬಗ್ಗೆ ವಿವರಿಸಿದ್ದಾರೆ. ನಾಗರಿಕ ಸೇವೆಯನ್ನು ಜನಸ್ನೇಹಿಯಾಗಿ ಮಾಡುವುದು ಹೇಗೆ ಎಂಬುದರ ಬಗ್ಗೆ ವಿವರಿಸಿದ್ದಾರೆ' ಎಂದರು.`ಪೈಪ್‌ಲೈನ್ ವ್ಯವಸ್ಥೆಯಲ್ಲಿ ಶೇ 70 ರಷ್ಟು ಪೈಪ್‌ಗಳು ಒಡೆದುಹೋಗಿ ನೀರು ಸೋರಿಹೋಗುತ್ತಿದ್ದರೆ, ಆ ಪೈಪ್‌ಲೈನ್ ವ್ಯವಸ್ಥೆಯನ್ನೆ ಬದಲಿಸಬೇಕು. ಹಾಗೆಯೇ ವ್ಯವಸ್ಥೆಯು ಭ್ರಷ್ಟಗೊಂಡರೆ ಇಡೀ ವ್ಯವಸ್ಥೆಯನ್ನೇ ಬದಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ' ಎಂದರು.`ಸ್ವಾತಂತ್ರ್ಯಾನಂತರ ಭಾರತದಲ್ಲಿ ಪ್ರಜಾಪ್ರಭುತ್ವಕ್ಕಿಂತ ನೌಕರಶಾಹಿ ಆಡಳಿತವು ಜಾರಿಗೆ ಬಂದಿತು. ಕೇಂದ್ರ ಮತ್ತು ರಾಜ್ಯಗಳಲ್ಲಿ ಸ್ವಲ್ಪ ನಿಯಂತ್ರಣದಲ್ಲಿದ್ದರೂ, ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ನೌಕರಶಾಹಿಗಳ ದರ್ಪವೇ ಹೆಚ್ಚಿದೆಯೆಂದು ಅವರು ವಿವರಿಸಿದ್ದಾರೆ' ಎಂದು ಹೇಳಿದರು.`ಕೇಂದ್ರ ಸರ್ಕಾರವು ಸುಮಾರು ್ಙ  6.5 ಲಕ್ಷ ಕೋಟಿಯನ್ನು ಪ್ರತಿ ವರ್ಷವೂ ರಾಜ್ಯಗಳಿಗೆ ವರ್ಗಾವಣೆ ಮಾಡುತ್ತದೆ. ಆದರೆ, ಇದರ ಅರ್ಧದಷ್ಟು ಹಣವನ್ನು ಏಳು ಕೋಟಿ ಬಡ ಕುಟುಂಬಗಳಿಗೆ ನೇರವಾಗಿ ನೀಡಿದರೆ, ಅವರು ಪ್ರತಿದಿನ ರೂ130 ಹೆಚ್ಚು ಪಡೆಯುತ್ತಾರೆ ಎಂದು ಸಕ್ಸೇನ ಅವರು ತಮ್ಮ ಈ ಪುಸ್ತಕದಲ್ಲಿ ನಮೂದಿಸಿದ್ದಾರೆ' ಎಂದರು.`ವ್ಯವಸ್ಥೆಯ ಮೇಲೆ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಲಾಬಿಯು ಹೆಚ್ಚಾಗಿದೆ. ಅವರಿಗೆ ಶೀಘ್ರ ಬಡ್ತಿ ನೀಡುವ ಸಲುವಾಗಿಯೇ ಅನವಶ್ಯಕವಾಗಿ ಅಸಂಖ್ಯಾತ ಉನ್ನತ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಕೆಲವೊಮ್ಮೆ ಹಿರಿಯ ಹುದ್ದೆಗಳನ್ನು ವಿಭಜಿಸಿರುವುದರಿಂದ ಆ ಹುದ್ದೆಗಿದ್ದ ಜವಾಬ್ದಾರಿ ಮೊಟಕಾಗಿ ಮತ್ತು ದುರ್ಬಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ' ಎಂದು ಹೇಳಿದರು.`ಸರ್ಕಾರದ ಎಲ್ಲಾ ಅಂಗಗಳು ಅಸಾಮರ್ಥ್ಯದಿಂದ ಕೂಡಿವೆ. ರಾಜಕೀಯ ಕಾರ್ಯನಿರ್ವಾಹಕರು, ಶಾಸಕರು, ಅಧಿಕಾರಿ ವರ್ಗ, ನ್ಯಾಯಾಂಗ ಹಾಗೂ ಯಾವುದೇ ಹಂತದ ಅಧಿಕಾರಿಗಳು ತಮ್ಮ ಅಧಿಕಾರದಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ವಿವರಿಸಿದ್ದಾರೆ' ಎಂದರು.`ಸೈನ್ಯದಲ್ಲಿರುವ ಹಾಗೆ 52 ರಿಂದ 55 ವಯೋಮಾನದಲ್ಲಿರುವ ಅಧಿಕಾರಿಗಳನ್ನು ನಿವೃತ್ತಗೊಳಿಸಬೇಕು. ಆಡಳಿತ ಮಾಡುವವರನ್ನು ಸಾರ್ವಜನಿಕರು ಸುಲಭವಾಗಿ ತಲುಪುವಂತೆ ಜನಸ್ನೇಹಿಯಾದ ಆಡಳಿತ ವ್ಯವಸ್ಥೆಯನ್ನು ಜನರಿಗೆ ಒದಗಿಸಬೇಕು ಎಂದು ತಮ್ಮ ಪುಸ್ತಕದಲ್ಲಿ ಪರಿಹಾರಗಳನ್ನು ಸೂಚಿಸಿದ್ದಾರೆ' ಎಂದು ಹೇಳಿದರು.

ಪ್ರತಿಕ್ರಿಯಿಸಿ (+)