ಬುಧವಾರ, ಆಗಸ್ಟ್ 21, 2019
28 °C

ಕಳಪೆ ಇಟ್ಟಿಗೆ: ಮುಗಿಯದ ಕಾಮಗಾರಿ

Published:
Updated:
ಕಳಪೆ ಇಟ್ಟಿಗೆ: ಮುಗಿಯದ ಕಾಮಗಾರಿ

ಕೊಪ್ಪಳ: ನಗರದ ಒಳಚರಂಡಿ ಯೋಜನೆಗೆ ಬಳಸಲಾದ ಸಾಮಗ್ರಿಗಳು ಕಳಪೆಯಾಗಿದ್ದು, ದೀರ್ಘಕಾಲ ಬಾಳಿಕೆ ಬಗ್ಗೆ ನಾಗರಿಕರು ಶಂಕೆ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ನಗರಸಭೆ ಅಧಿಕಾರಿಗಳೇ ಮೌಖಿಕವಾಗಿ ಒಪ್ಪಿಕೊಂಡಿದ್ದರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಅಸಹಾಯಕರಾಗಿದ್ದಾರೆ.

ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ನ ನೆರವಿನಿಂದ ನಗರದಲ್ಲಿ ರೂ 17.99 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಒಳಚರಂಡಿ, ಪೈಪ್‌ಲೈನ್, ಮ್ಯಾನ್‌ಹೋಲ್‌ಗಳಿಗೆ ಬಳಸಲಾದ ಇಟ್ಟಿಗೆ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದೆ. ಮಾತ್ರವಲ್ಲ ಸಾಧಾರಣ ಆಘಾತ ತಡೆದುಕೊಳ್ಳುವ ಶಕ್ತಿ ಅದಕ್ಕಿಲ್ಲ.

ಸುಮಾರು 50 ವರ್ಷವಾದರೂ ಬಾಳಿಕೆ ಬರಬೇಕಾದ ಮ್ಯಾನ್‌ಹೋಲ್ ರಸ್ತೆ ಮೇಲಿನ ಒತ್ತಡಕ್ಕೆ ಶೀಘ್ರವೇ ಕುಸಿಯುವ ಸಾಧ್ಯತೆಯಿದೆ ಎಂದು ನಗರಸಭಾ ಮಾಜಿ ಸದಸ್ಯ ಗವಿಸಿದ್ಧಪ್ಪ ಮುಂಡರಗಿ ಆರೋಪಿಸಿದ್ದಾರೆ. ಕಾಮಗಾರಿಯನ್ನು ಅಹಮದಾಬಾದ್‌ನ ಜಿ.ಎಸ್.ಜೆ. ಅರವಿಂದ (ಜೆವಿ) ಪ್ರೈವೇಟ್ ಲಿ. ಸಂಸ್ಥೆ ಗುತ್ತಿಗೆಗೆ ಪಡೆದಿದೆ. ಆದರೆ, ನಿಗದಿಯಂತೆ ಕಾಮಗಾರಿ ನಡೆಯುತ್ತಿಲ್ಲ. ಕಾಲಮಿತಿ ಮೊದಲೇ ಇಲ್ಲ. ಚರಂಡಿ, ಮ್ಯಾನ್‌ಹೋಲ್ ನಿರ್ಮಾಣದ ಬಳಿಕ ಕ್ಯೂರಿಂಗ್ ಜವಾಬ್ದಾರಿ ವಹಿಸಿಕೊಂಡಿಲ್ಲ ಎಂದು ಅವರು ದೂರಿದರು.ಬಿ.ಟಿ.ಪಾಟೀಲ ನಗರ ಪ್ರದೇಶದಲ್ಲಿಯೂ ಇದೇ ಪರಿಸ್ಥಿತಿಯಿದೆ. ರಸ್ತೆ ವಿಸ್ತರಣೆಗೆ ಬಳಸಿದ ಗ್ರಾವೆಲ್ (ಗಟ್ಟಿಮಣ್ಣು) ಗುಣಮಟ್ಟವೂ ಸರಿಯಿಲ್ಲ. ರಸ್ತೆಯ ಮೇಲಿನ ಒತ್ತಡ ತಡೆಯಲು ಅಸಾಧ್ಯ ಎಂದು ಸ್ಥಳೀಯ ಉದ್ಯಮಿ ಮಹೇಶ ಮಿಟ್ಲಕೋಡು ಬೇಸರ ವ್ಯಕ್ತಪಡಿಸಿದರು.

ಚರಂಡಿ ಕೆಳಗೆ ರಸ್ತೆ: ರಸ್ತೆಯ ಮೇಲ್ಭಾಗದಲ್ಲಿ ಚರಂಡಿ ನಿರ್ಮಿಸಲಾಗಿದೆ. ಮ್ಯಾನ್‌ಹೋಲ್ ನಿರ್ಮಾಣಕ್ಕೆ ಸ್ಥಳೀಯವಾಗಿ ತಯಾರಿಸಲಾದ ದ್ವಿತೀಯ ದರ್ಜೆಯ ಇಟ್ಟಿಗೆ ಬಳಸಲಾಗಿದೆ.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಚರಂಡಿ ಕೆಟ್ಟುಹೋದರೆ ಮತ್ತೆ ರಸ್ತೆ ಅಗೆಯಬೇಕಾಗುತ್ತದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಕೆ.ಮೋಹನ್ ಆಚಾರ್ಯ ಆಕ್ರೋಶ ವ್ಯಕ್ತಪಡಿಸಿದರು. ಕಾಮಗಾರಿ ಗುಣಮಟ್ಟ ಸಂಬಂಧಿಸಿದ ಆರೋಪಗಳಿಗೆ ಪ್ರತಿಕ್ರಿಯಿಸಲು ನಗರಸಭೆ ಆಯುಕ್ತರು, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಂಪರ್ಕಕ್ಕೆ ಸಿಗಲಿಲ್ಲ.

Post Comments (+)