ಕಳಪೆ ಊಟ: ವಿದ್ಯಾರ್ಥಿಗಳ ಪ್ರತಿಭಟನೆ

ಸೋಮವಾರ, ಮೇ 27, 2019
23 °C

ಕಳಪೆ ಊಟ: ವಿದ್ಯಾರ್ಥಿಗಳ ಪ್ರತಿಭಟನೆ

Published:
Updated:

ಗೌರಿಬಿದನೂರು: ಕಳಪೆ ಊಟ ನೀಡಲಾಗುತ್ತಿದ್ದು, ಗುಣಮಟ್ಟದ ಊಟ ನೀಡಬೇಕು, ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಹೊರವಲಯದ ಕಲ್ಲೂಡಿ ಸಮೀಪದ ಪರಿಶಿಷ್ಟ ಜಾತಿಯ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಮಂಗಳವಾರ ರಾತ್ರಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಊಟ ಮಾಡದ ವಿದ್ಯಾರ್ಥಿಗಳು ನಿಲಯದ ಮೇಲ್ವಿಚಾರಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.`ವಿದಾರ್ಥಿನಿಲಯದಲ್ಲಿ ಸರಿಯಾದ ಸಮಯಕ್ಕೆ ತಿಂಡಿ, ಊಟ ನೀಡುತ್ತಿಲ್ಲ. ಕಳಪೆ ಗುಣಮಟ್ಟದ ಆಹಾರವನ್ನೇ ನೀಡಿ, ಅದನ್ನೇ ತಿನ್ನುವಂತೆ ಹೇಳುತ್ತಾರೆ. ಸ್ವಚ್ಛತೆಯಿಲ್ಲದ ನಿಲಯದಲ್ಲಿ ಕಿಟಕಿಬಾಗಿಲುಗಳು ಮುರಿದು ಹೋಗಿವೆ.

 

ಸೊಳ್ಳೆಗಳ ಕಾಟ ವಿಪರೀತವಿದ್ದು, ಅವುಗಳಿಂದ ಕಡಿಸಿಕೊಂಡು ಕಾಯಿಲೆಗೆ ತುತ್ತಾಗಬೇಕಿದೆ. ನಿಲಯದಲ್ಲಿ ವಿದ್ಯುತ್ ಸ್ವಿಚ್‌ಬೋರ್ಡ್‌ಗಳು ಸರಿಯಿಲ್ಲ. ಮುಟ್ಟಿದರೆ ಶಾಕ್ ಹೊಡೆಯುತ್ತವೆ. ಇಷ್ಟೆಲ್ಲ ಸಮಸ್ಯೆಗಳು ಇದ್ದರೂ ಅವುಗಳನ್ನು ಪರಿಹರಿಸಲು ಯಾರೂ ಸಹ ಮುಂದೆ ಬರುತ್ತಿಲ್ಲ~ ಎಂದು ವಿದ್ಯಾರ್ಥಿಗು ಆರೋಪಿಸಿದರು.`ವಾರಕ್ಕೊಮ್ಮೆ ಬರುವ ಮೇಲ್ವಿಚಾರಕರಿಗೆ ಸಮಸ್ಯೆಗಳನ್ನು ಹೇಳಿದರೆ, ಇಲ್ಲಸಲ್ಲದ ನೆಪಗಳನ್ನು ಹೇಳುತ್ತಾರೆ. ಮೇಲ್ವಿಚಾರಕರು ಒಮ್ಮೆಯೂ ವಿದ್ಯಾರ್ಥಿಗಳ ಕೋಣೆ ಪ್ರವೇಶಿಲ್ಲ. ದುರ್ನಾತ ಬೀರುವ ಶೌಚಾಲಯವನ್ನು ಶುಚಿಗೊಳಿಸುವ ಕಡೆಗೂ ಗಮನಹರಿಸಿಲ್ಲ. ಸೌಕರ್ಯಗಳನ್ನು ಪೂರೈಸುವಂತೆ ಒತ್ತಾಯಿಸಿದರೆ, ನಮಗೆ ಬೆದರಿಕೆ ಒಡ್ಡಲಾಗುತ್ತದೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.`ಕಳೆದ ಏಳು ತಿಂಗಳುಗಳಿಂದ ವಿದ್ಯಾರ್ಥಿ ನಿಲಯದ ವಿದ್ಯುತ್‌ಬಿಲ್ ಪಾವತಿಸಿಲ್ಲ, ಮೂರು ತಿಂಗಳಿಂದ ಅಡುಗೆ ನೌಕರರಿಗೆ ವೇತನ ನೀಡಿಲ್ಲ. ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ಇದೇ ರೀತಿಯಲ್ಲಿ ಮುಂದುವರೆದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ಮಾಡಬೇಕಾಗುತ್ತದೆ~ ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.

ವಿದ್ಯಾರ್ಥಿಗಳಾದ ಗಂಗರಾಜು, ನಾಗರಾಜ್, ಪ್ರವೀಣ್‌ಕುಮಾರ್, ಮಂಜುನಾಥ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry