ಕಳಪೆ ಕಾಮಗಾರಿ:ಲೋಕಾಯುಕ್ತ ತನಿಖೆಗೆ ಶಿಫಾರಸು

7

ಕಳಪೆ ಕಾಮಗಾರಿ:ಲೋಕಾಯುಕ್ತ ತನಿಖೆಗೆ ಶಿಫಾರಸು

Published:
Updated:

ಹುಬ್ಬಳ್ಳಿ: ಅವಳಿ ನಗರದ ಅಭಿವೃದ್ಧಿಗಾಗಿ ಸರ್ಕಾರ ಬಿಡುಗಡೆ ಮಾಡಿರುವ ನೂರು ಕೋಟಿ ರೂಪಾಯಿ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಗೆ ವಹಿಸಿದ 16 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳು ಕಳಪೆಯಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ  ಪಾಲಿಕೆ ಈ ಕಾಮಗಾರಿಗಳ ಬಗ್ಗೆ ಲೋಕಾಯುಕ್ತ ತನಿಖೆಗೆ ಶಿಫಾರಸು ಮಾಡಲು ನಿರ್ಣಯ ಕೈಗೊಂಡಿತು.ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಮುಖಂಡ ದೀಪಕ ಚಿಂಚೋರೆ ಅವರ ಗಮನ ಸೆಳೆಯುವ ಸೂಚನೆಗೆ ಪಕ್ಷ ಭೇದ ಮರೆತು ಬೆಂಬಲ ಸೂಚಿಸಿದ ಸದಸ್ಯರು ಲೋಕೋಪಯೋಗಿ ಇಲಾಖೆ ನಡೆಸಿದ ಕಾಮಗಾರಿಯಲ್ಲಿ ಭಾರಿ ಗೋಲ್‌ಮಾಲ್ ನಡೆದಿದೆ ಎಂದು ಆರೋಪಿಸಿದರು.`ನೂರು ಕೋಟಿ ರೂಪಾಯಿ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಗೆ 16 ಕೋಟಿ ರೂಪಾಯಿ ಕಾಮಗಾರಿಯನ್ನು ವಹಿಸಲಾಗಿತ್ತು. ಇಲಾಖೆ ನಡೆಸಿದ ರಸ್ತೆ ಕಾಮಗಾರಿಗಳು ಅತ್ಯಂತ ಕಳಪೆಯಾಗಿದ್ದು, ಚೆನ್ನಾಗಿದ್ದ ರಸ್ತೆಗಳನ್ನು ಕೂಡ ಹದಗೆಡಿಸಲಾಗಿದೆ. ನಿರ್ಮಿತಿ ಕೇಂದ್ರದವರ ಕಾಮಗಾರಿಗಳಲ್ಲೂ ಅವ್ಯವಹಾರ ನಡೆದಿದೆ~ ಎಂದು ದೀಪಕ ಚಿಂಚೋರೆ ದೂರಿದರು.ಇದಕ್ಕೆ ದನಿಗೂಡಿಸಿದ ಯಾಸಿನ್ ಹಾವೇರಿಪೇಟೆ, ಇಂದಿರಾ ಗಾಜಿನ ಮನೆಯ ಆವರಣದಲ್ಲಿ ಕುಸಿದು ಬಿದ್ದ ಗೋಡೆಯನ್ನು ನಿರ್ಮಿತಿ ಕೇಂದ್ರದವರು ನಿರ್ಮಿಸಿದ್ದರು ಎಂದರು. ವಿರೋಧ ಪಕ್ಷದ ನಾಯಕ ದಶರಥ ವಾಲಿ, ಸದಸ್ಯರಾದ ಸರೋಜಾ ಪಾಟೀಲ, ಸಭಾನಾಯಕ ಪ್ರಕಾಶ ಗೋಡಬೋಲೆ, ಆಡಳಿತ ಪಕ್ಷದ ಮುಖಂಡರಾದ ಸಂಜಯ ಕಪಟಕರ ಮತ್ತಿತರರು ಕೂಡ ಇದಕ್ಕೆ ದನಿಗೂಡಿಸಿದರು.`ಲೋಕೋಪಯೋಗಿ ಇಲಾಖೆ ಹಾಗೂ ನಿರ್ಮಿತಿ ಕೇಂದ್ರದ ವಿರುದ್ಧ ಕೇಸು ದಾಖಲು ಮಾಡಲು ಪಾಲಿಕೆಗೆ ಅಧಿಕಾರವಿಲ್ಲ, ಕೇವಲ ಶಿಫಾರಸು ಮಾಡಲು ಸಾಧ್ಯ~ ಎಂದು ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ ಅಭಿಪ್ರಾಯಪಟ್ಟರು. ಲೋಕೋಪಯೋಗಿ ಇಲಾಖೆ ವಿರುದ್ಧ ತನಿಖೆಗೆ ಶಿಫಾರಸು ಮಾಡಲು, ನಿರ್ಮಿತಿ ಕೇಂದ್ರದವರಿಗೆ ವಹಿಸಿದ ಕಾಮಗಾರಿಗಳನ್ನು ವಾಪಸ್ ಪಡೆದುಕೊಳ್ಳಲು ಹಾಗೂ ಅವರು ಈಗಾಗಲೇ ಆರಂಭಿಸಿರುವ ಕಾಮಗಾರಿಗಳನ್ನು ಶೀಘ್ರ ಮುಗಿಸಲು ಸೂಚನೆ ನೀಡುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.`ನೂರು ಕೋಟಿ ರೂಪಾಯಿ ಅನುದಾನದಲ್ಲಿ 18 ಲಕ್ಷ ರೂಪಾಯಿ ಕಾಮಗಾರಿಗಳಿಗೆ ನೀಡಿದ್ದ ಟೆಂಡರನ್ನು ನಂತರ 15 ಲಕ್ಷ ರೂಪಾಯಿಗೆ ಇಳಿಸಲಾಗಿದೆ~ ಎಂದು ಯಾಸಿನ್ ಹಾವೇರಿಪೇಟೆ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಆಯುಕ್ತರು ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳಲು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಗೆ ಅಧಿಕಾರವಿದೆ ಎಂದು ತಿಳಿಸಿದರು.`ಗೋಕುಲ ರಸ್ತೆಯ ಅಗಲೀಕರಣ ಕಾಮಗಾರಿ ಸಂದರ್ಭದಲ್ಲಿ ಉರುಳಿಸಲಾದ ಬಸ್ ತಂಗುದಾಗಣಗಳ ಮರುನಿರ್ಮಾಣ ಆಗದ ಕಾರಣ ಸಮಸ್ಯೆಯಾಗಿದೆ~ ಎಂದು ರಾಮಪ್ಪ ಬಡಿಗೇರ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಂಟಿ ಆಯುಕ್ತ ವೀರೇಂದ್ರ ಕುಂದಗೋಳ, ಈ ಯೋಜನೆ ಸರ್ಕಾರ ಮಟ್ಟದಲ್ಲಿದ್ದು ತಲಾ 5 ಲಕ್ಷ ರೂಪಾಯಿ ವೆಚ್ಚದ ಬಸ್ ತಂಗುದಾಣಗಳ ನಿರ್ಮಾಣ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದರು.ಧಾರವಾಡದ ಕೆಲವು ಬಡಾವಣೆಗಳಲ್ಲಿ ಅನಧಿಕೃತ ಡಬ್ಬಿ ಅಂಗಡಿಗಳು ತಲೆ ಎತ್ತಿದ್ದು ಇದರ ಬಗ್ಗೆ ದೂರಿದರೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಸಂಜಯ ಕಪಟಕರ ಹೇಳಿದರು. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಮೇಯರ್ ಸೂಚಿಸಿದರು.ನಿವೇಶನ ಹರಾಜು ಪ್ರಕ್ರಿಯೆ ವಿಳಂಬ:ಪಾಲಿಕೆಯ ನಿವೇಶನಗಳ ಹರಾಜು ಪ್ರಕ್ರಿಯೆ ವಿಳಂಬವಾಗಿದೆ ಎಂದು ಆಡಳಿತ ಪಕ್ಷದ ಸತೀಶ ಹಾನಗಲ್ ಆರೋಪಿಸಿದರು. ಇದಕ್ಕೆ ಸಂಬಂಧಿಸಿ ಜಂಟಿ ಆಯುಕ್ತರು ನೀಡಿದ ಉತ್ತರದಿಂದ ತೃಪ್ತರಾಗದ ಮೇಯರ್ ಶೀಘ್ರವಾಗಿ ಕಡತ ವಿಲೇವಾರಿ ಮಾಡುವಂತೆ ಆದೇಶಿಸಿದರು.ಸ್ಮಿತಾ ಪ್ರಮಾಣ ವಚನ: ಅಪಘಾತದಲ್ಲಿ ಮೃತರಾದ ಪಾಲಿಕೆ ಸದಸ್ಯ ಅಶೋಕ ಜಾಧವ ಅವರ ಸ್ಥಾನ ತುಂಬಲು ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಸ್ಮಿತಾ ಅಶೋಕ ಜಾಧವ, ಫಲಿತಾಂಶ ಪ್ರಕಟವಾದ ಎರಡು ತಿಂಗಳ ನಂತರ  ಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.`ಸ್ಥಾಯಿ ಸಮಿತಿ ಕಚೇರಿಗೆ ಬೀಗ~

ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿಯ ಸಭೆಗಳಿಗೆ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಇತರ ಅಧಿಕಾರಿಗಳು ಹಾಜರಾಗಬೇಕು ಎಂಬ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಮುತ್ತಣ್ಣ ಅವರ ಆಗ್ರಹ ಸಭೆಯಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು.ಅವಳಿ ನಗರದಲ್ಲಿ ಅನಧಿಕೃತ ಮಾಂಸದಂಗಡಿಗಳು ತಲೆ ಎತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಾದರೆ ಅಧಿಕಾರಿಗಳ ಸಹಕಾರ ಬೇಕು. ಆದರೆ ಅವರಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ಆರೋಪಿಸಿದ ಮುತ್ತಣ್ಣ, ಅಧಿಕಾರಿಗಳು ಇದೇ ಚಾಳಿ ಮುಂದುವರಿಸುವುದಾದರೆ ಸ್ಥಾಯಿ ಸಮಿತಿಗೆ ಕಚೇರಿಗೆ ಬೀಗ ಹಾಕಿ ಸದಸ್ಯರು ರಾಜೀನಾಮೆ ನೀಡ ಬೇಕಾಗುತ್ತದೆ ಎಂದು ಎಚ್ಚರಿಸಿದರು. ಆಯುಕ್ತರು ಎಲ್ಲ ಸಭೆಗಳಿಗೆ ಹಾಜರಾಗಲೇಬೇಕು ಎಂದೇನಿಲ್ಲ. ಸಮಯವಿದ್ದರೆ ಹೋಗುವುದು ಉಚಿತ ಎಂದು ಮೇಯರ್ ಹೇಳಿದರು.ಕೆರಳಿಸಿದ ಊಟ, ಚಹಾದ ವಿಷಯ

ಪಾಲಿಕೆ ಸಾಮಾನ್ಯ ಸಭೆಯನ್ನು ಮೊದಲು ಕೋರಂ ಅಭಾವದಿಂದ 45 ನಿಮಿಷ ಮುಂದೂಡಲಾಯಿತು. ನಂತರ ಸಭೆ ಆರಂಭವಾಗುತ್ತಿದ್ದಂತೆ ಗಂಭೀರ ವಿಷಯಗಳನ್ನು ಹೆಚ್ಚಿನ ವಿಷಯ ಪಟ್ಟಿಯಲ್ಲಿ ಸೇರಿಸಿದ್ದಕ್ಕೆ ದೀಪಕ ಚಿಂಚೋರೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಅಸಮಾಧಾನಗೊಂಡ ಮೇಯರ್ ಭತ್ಯೆ, ಊಟ, ಚಹಾ ಇತ್ಯಾದಿ ಕೊಡುವಾಗ ಯಾವ ವಿಷಯ ಎಲ್ಲಿದ್ದರೇನಂತೆ ಚರ್ಚೆ ನಡೆಯಬೇಕಷ್ಟೇ ಎಂದು ಹೇಳಿದರು.ಕೆರಳಿದ ವಿರೋಧ ಪಕ್ಷದ ಮುಖಂಡರು ಈ ಮಾತನ್ನು ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿ ದರು. ಆದರೆ ಮೇಯರ್  ಒಪ್ಪಲಿಲ್ಲ. ಈ ಸಂದರ್ಭದಲ್ಲಿ ಮೇಯರ್ ಬಳಿಗೆ ನುಗ್ಗಿದ ಸದಸ್ಯರು ಸುಮಾರು ಅರ್ಧ ತಾಸು  ವಾಗ್ವಾದ ನಡೆಸಿದರು.ಬಹಿಷ್ಕಾರ: ಊಟ ಹಾಗೂ ಚಹಾದ ವಿಷಯ ಪ್ರಸ್ತಾಪ ವಾದ ಹಿನ್ನೆಲೆಯಲ್ಲಿ ದೀಪಕ ಚಿಂಚೋರೆ, ದಶರಥ ವಾಲಿ ಮತ್ತಿತರ ಐದು ಮಂದಿ ಊಟ ಬಹಿಷ್ಕರಿಸಿ ಹೊರಗೆ ಊಟ ಮಾಡಿ ಬಂದರು. ಹೆಚ್ಚುವರಿ ವಿಷಯಗಳ ಕುರಿತ ಚರ್ಚೆಯ ವೇಳೆ ಸ್ವಚ್ಛತಾ ಗುತ್ತಿಗೆಯ ವಿಷಯ ಬಂದಾಗ ಅಸಮಾಧಾನ ಗೊಂಡ ವಿಪಕ್ಷದವರು ವಿಷಯ ಪಟ್ಟಿ ಮೇಯರ್ ಬಳಿಗೆ ಎಸೆದು ಸಭೆ ಬಹಿಷ್ಕರಿಸಿ ಹೊರ ನಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry