ಕಳಪೆ ಕಾಮಗಾರಿ: ಜನರಲ್ಲಿ ಆತಂಕ

7

ಕಳಪೆ ಕಾಮಗಾರಿ: ಜನರಲ್ಲಿ ಆತಂಕ

Published:
Updated:

ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಯ 36ನೇ ವಿತರಣಾ ಕಾಲುವೆಯ ದುರಸ್ತಿ ಕಾಮಗಾರಿಯು ಕಳಪೆಯಾಗಿ, ಅವೈಜ್ಞಾನಿಕವಾಗಿ ನಿರ್ವಹಿಸಿದ ಪರಿಣಾಮ ಕಾಲುವೆ ಯಾವ ಸಮಯದಲ್ಲಿ ಒಡೆದು ಹೋಗುತ್ತದೆಯೋ ಎಂದು ರೈತರು ಆತಂಕಪಡುವಂತಾಗಿದೆ.ಕಳೆದ ವರ್ಷ ಕೈಗೆತ್ತಿಕೊಂಡಿದ್ದ ವಿತರಣಾ ಕಾಲುವೆಯ ದುರಸ್ತಿ ಕಾಮಗಾರಿ ಜವಾಬ್ದಾರಿ ಹೊತ್ತ ಡಿ.ವೈ.ಉಪ್ಪಾರ ಉಪಗುತ್ತಿಗೆದಾರರಿಗೆ ಕಾಮಗಾರಿ ವಹಿಸಿದ್ದರು. ಆದರೆ ಅವರು ತಜ್ಞರ ವಿನ್ಯಾಸದಂತೆ ಕಾಮಗಾರಿ ನಿರ್ವಹಿಸಿಲ್ಲ. ಕಾಲುವೆಯ ಎರಡೂ ಗೋಡೆಗಳು ನಿಗದಿತ ಪ್ರಮಾಣದಲ್ಲಿ ಎತ್ತರವಾಗದಿರುವುದರಿಂದ ನೀರಿನ ಮಟ್ಟ ಮೇಲ್ಭಾಗದಲ್ಲಿ ಬಂದಿದೆ. ದೊಡ್ಡ ಪ್ರಮಾಣದ ಮಳೆಯಾದರೆ ಹೆಚ್ಚಿನ ನೀರು ಕಾಲುವೆಗೆ ಹರಿದು ಬೋಂಗಾ ಬೀಳುವುದರಲ್ಲಿ ಸಂಶಯವಿಲ್ಲ ಎನ್ನುತ್ತಾನೆ ರೈತ ಸುಬ್ಬಾರಾವ್.ಆದದ್ದೇನು: 36ನೇ ವಿತರಣಾ ಕಾಲುವೆಯ ಚೈನ್ ನಂ.380ರಿಂದ 391ರವರೆಗೆ ನಿರ್ಮಿಸಿರುವ ಕಾಲುವೆಯ ಎರಡೂ ದಂಡೆಗಳು ನಿಗದಿತ ಪ್ರಮಾಣದಲ್ಲಿ ಎತ್ತರವಾಗಿರುವುದಿಲ್ಲ. ಅಲ್ಲದೆ ಕಾಲುವೆಯ ಬೆಡ್ ಸಹ ಕೆಳಭಾಗದಲ್ಲಿರುವುದರಿಂದ ಕೆಳಭಾಗದ ರೈತರಿಗೆ ಸರಿಯಾಗಿ ನೀರು ಹರಿಯದಂತಾಗಿದೆ. ಕಾರಣ ಎರಡೂ ಗೋಡೆಗಳನ್ನು ಎತ್ತರಿಸದಿದ್ದರೆ ಮುಂದೊಂದು ದಿನ ಕಾಲುವೆ ಒಡೆದು ರೈತರು ಬೆಳೆದ ನೂರಾರು ಎಕರೆ ಬತ್ತ ನಾಶವಾಗುವ ಸಂಭವವಿದೆ ಎನ್ನುತ್ತಾನೆ ಮತ್ತೋರ್ವ ರೈತ ನಿಂಗಪ್ಪ.36ನೇ ವಿತರಣಾ ಕಾಲುವೆಯ ಕಾಮಗಾರಿ ನಡೆಯುವ ಸಮಯದಲ್ಲಿಯೇ ಅಧಿಕಾರಿಗಳು, ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಿರಿಯ ಎಂಜಿನೀಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಗಮನಕ್ಕೆ ತಂದರೂ ಲಕ್ಷ್ಯ ವಹಿಸದೆ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕಳಪೆ ಕಾಮಗಾರಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಟಿದ್ದಾರೆ ಎನ್ನುವುದು ಸಾಂಬಶಿವರಾವ್ ಅವರ ಆರೋಪ.ಈ ಕಾಲುವೆಯ ಹಲವಾರು ಕಡೆಗಳಲ್ಲಿ ಈ ರೀತಿ ಅವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸಿದ ಬಗ್ಗೆ ರೈತರು ಆರೋಪಿಸುತ್ತಿದ್ದಾರೆ. ಮುಖ್ಯವಾಗಿ ಚೈನ್ ನಂ.380ರಿಂದ 391ರವರೆಗಿನ ಕಾಲುವೆ ನೋಡುಗರಲ್ಲಿಯೂ ಸಹ ಆತಂಕ ಹುಟ್ಟಿಸುವಂತಿದೆ. ಶಾಸಕ ವೆಂಕಟರಾವ್ ನಾಡಗೌಡರು ಕಾಲುವೆಯ ದುರಸ್ತಿ ಕಾರ್ಯ ನಡೆಯುವ ಸಮಯದಲ್ಲಿ ಹಲವು ಬಾರಿ ವೀಕ್ಷಣೆ ಮಾಡಿದ್ದರೂ ಅವರ ಗಮನಕ್ಕೆ ಬಂದಿರುವುದಿಲ್ಲವೇ ಎಂದು ರೈತ ಮುಖಂಡರು ಪ್ರಶ್ನಿಸಿದ್ದಾರೆ.ಇನ್ನಾದರೂ ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನೀಯರ್‌ರಿಗೆ ಕ್ರಮಕೈಗೊಳ್ಳುವಂತೆ ಸೂಚಿಸುವ ಮೂಲಕ ರೈತರು ಸಂಕಷ್ಟ ಅನುಭವಿಸುವ ಪೂರ್ವದಲ್ಲಿ ಕಾಲುವೆಗೆ ಬೋಂಗಾ ಬೀಳದಂತೆ ಎರಡೂ ದಂಡೆಯ ಗೋಡೆಗಳನ್ನು ಎತ್ತರಿಸುವಂತೆ ನಿಗಾವಹಿಸಬೇಕೆನ್ನುವುದು ಸಾರ್ವಜನಿಕರ ಆಶಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry