ಕಳಪೆ ಕಾಮಗಾರಿ ನಡೆದಿಲ್ಲ: ಶಾಸಕ ಸ್ಪಷ್ಟನೆ

7

ಕಳಪೆ ಕಾಮಗಾರಿ ನಡೆದಿಲ್ಲ: ಶಾಸಕ ಸ್ಪಷ್ಟನೆ

Published:
Updated:

ಅರಸೀಕೆರೆ: `ಕ್ಷೇತ್ರದ ಅಭಿವೃದ್ಧಿಯನ್ನು ಸಹಿಸದ ಕೆಲವರು ಇಲ್ಲ-ಸಲ್ಲದ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಸಂಪೂರ್ಣವಾಗಿ ಹದಗೆಟ್ಟಿದ್ದ ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳನ್ನು ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಡಾಂಬರೀಕರಣಗೊಳಿಸಲಾಗಿದೆ. ಇದಲ್ಲದೆ ಹಲವು ಜನೋಪಯೋಗಿ ಕಾಮಗಾರಿಗಳನ್ನು ಕ್ಷೇತ್ರದಲ್ಲಿ ಕೈಗೊಳ್ಳಲಾಗಿದ್ದು, ಎಲ್ಲ ಕಾಮಗಾರಿಗಳೂ ಉತ್ತಮ ಗುಣಮಟ್ಟದಲ್ಲಿವೆ' ಎಂದು ಶಾಸಕ ಶಿವಲಿಂಗೇಗೌಡ ಸ್ಪಷ್ಟಪಡಿಸಿದರು.ಜಿಪಂ ಎಂಜಿನಿಯರಿಂಗ್ ಉಪವಿಭಾಗ ಮತ್ತು ಸಣ್ಣ ನೀರಾವರಿ ಇಲಾಖೆಗಳ ವಿವಿಧ ಯೋಜನೆಯಡಿ ಅನುಷ್ಠಾನಗೊಳಿಸಿರುವ ಸುಮಾರು 39 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳ ಕಾಮಗಾರಿ ಕಳಪೆಯಾಗಿದೆ ಎಂದು ರೈತ ಸಂಘದವರು ಈಚೆಗೆ ಆರೋಪಿಸಿದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು ಬಳಿಕ ಪತ್ರಕರ್ತರೊಡನೆ ಮಾತನಾಡಿದರು.ಶಾಸಕರೊಂದಿಗೆ ಬಂದು ಯಳವಾರೆ ಕೆರೆಗೆ ಹಾರನಹಳ್ಳಿ ಕೆರೆಯಿಂದ ನೀರು ಹರಿಸುವ ಕಾಲುವೆ ಕಾಮಗಾರಿಯನ್ನು ವೀಕ್ಷಿಸಿದ ಯಳವಾರೆ ಗ್ರಾಮದ ಮುಖಂಡ ಕೇಶವಮೂರ್ತಿ, ಅಣ್ಣಾಯಕನಹಳ್ಳಿ ಗುರುವಣ್ಣ ಬೋರನಕೊಪ್ಪಲು ರೈತ ಸಂಘದ ಮುಖಂಡ ಜಯರಾಂ, ಮುಂತಾದವರು, `ಕಾಮಗಾರಿ ಸಮರ್ಪಕವಾಗಿದ್ದು, ರೈತ ಸಂಘದ ಮುಖಂಡರು ಯಾರದೋ ಒತ್ತಡಕ್ಕೆ ಮಣಿದು ಸುಳ್ಳು ಆರೋಪ ಮಾಡಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.2009-10 ಹಾಗೂ 2011-12 ನೇ ಸಾಲಿನಲ್ಲಿ ಎಬಿಐಪಿ ಯೋಜನೆಯಡಿ  ರೂ.19ಕೋಟಿ ವೆಚ್ಚದಲ್ಲಿ ರೈತರ ಜಮೀನನಲ್ಲಿ 450ಕ್ಕೂ ಹೆಚ್ಚು ಒಡ್ಡುಗಳನ್ನು ನಿರ್ಮಿಸಲಾಗಿದೆ. ಇದರಿಂದ ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಮಳೆ ಕಡಿಮೆಯಾದರೂ ಅಂತರ್ಜಲ ವೃದ್ಧಿಯಾಗಿದೆ  ಎಂದು ಜಲಾನಯನ ಇಲಾಖೆಯ ಎಂಜಿನಿಯರ್ ಪಾಪಣ್ಣ ನುಡಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸಿದ್ದಾಭೋವಿ, ಮಾಜಿ ಅಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ, ಹರತನಹಳ್ಳಿ ಜಯಣ್ಣ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry