ಕಳಪೆ ಕಾಮಗಾರಿ; ರೈತರಿಗೆ ತಪ್ಪದ ಸಂಕಷ್ಟ

7

ಕಳಪೆ ಕಾಮಗಾರಿ; ರೈತರಿಗೆ ತಪ್ಪದ ಸಂಕಷ್ಟ

Published:
Updated:

ಹೊಳೆಹೊನ್ನೂರು: ಭದ್ರಾ ಅಚ್ಚುಕಟ್ಟು ಪ್ರದೇಶದ ನಾಲೆಯಲ್ಲಿ ನೀರು ಬಿಟ್ಟ ದಿನವೇ ಹೊಸದಾಗಿ ಕಟ್ಟಿದ ತಡೆ ಗೋಡೆಗಳು, ಕಾಂಕ್ರೀಟ್ ಬೆಡ್ ಸೇರಿದಂತೆ ಎರಡೂ ರಸ್ತೆಯ ಮೇಲೆ ನೀರು ಹರಿಯುತ್ತಿರುವ ಪರಿಣಾಮ ಜಮೀನುಗಳಿಗೆ ಹೋಗಲು ರೈತರು ಪರದಾಡುವಂತಾಗಿದೆ.-ಇದು ಭದ್ರಾ ಬಲದಂಡೆ ನಾಲೆ ವ್ಯಾಪ್ತಿಯ ಯಡೇಹಳ್ಳಿ ಸಮೀಪದ ಉಪನಾಲೆಯಿಂದ ಅರಹಾತೊಳಲು ಕೈಮರ-ಹನುಮಂತಾಪುರ ಗ್ರಾಮಗಳ ಮಧ್ಯ ಹರಿಯುತ್ತಿರುವ ನಾಲೆಗಳಿಗೆ ಸಮಗ್ರ ಭದ್ರಾ ಬಲದಂಡೆ ನಾಲೆ ಅಧುನೀಕರಣ ಕಾಮಗಾರಿ 2010ನೇ ಸಾಲಿನಲ್ಲಿ ಮುಂಗಾರು ಬೆಳೆಗೆ ನಾಲೆಯಲ್ಲಿ ಬಿಟ್ಟ ನೀರು ಮಳೆ ನೀರಿನ ಜತೆ ಸಂಪೂರ್ಣ ಕಿತ್ತು ಹೋಗಿತ್ತು! ಮತ್ತೆ 2011ನೇ ಸಾಲಿನ ಡಿಸೆಂಬರ್ ಕಾಮಗಾರಿಯು ಸಹ ಕಳಪೆಯಾದ ಕಾರಣ ನಾಲೆಗಳು, ಉಪ ನಾಲೆಗಳು, ವಿತರಣಾ ನಾಲೆಗಳು ಎಲ್ಲೆಂದರಲ್ಲಿ ಕಿತ್ತು ಕಲ್ಲು, ಮಣ್ಣು ಕೊಚ್ಚಿ ಹೋಗಿ ನಾಲೆಯಲ್ಲಿ ಬಿದ್ದಿದೆ.ಜಲಾಶಯ ನಿರ್ಮಾಣವಾಗಿ 49 ವರ್ಷಗಳಲ್ಲಿ ಐದು ಬಾರಿ ಕಾಮಗಾರಿ ಮತ್ತು ರಿಪೇರಿ ಕೆಲಸವಾದರೂ, ಸಹ ನೀರು ಎಲ್ಲೆಂದರಲ್ಲಿ ಹರಿಯುತ್ತಿದೆ! ಮೊದಲಿದ್ದ ಕಟ್ಟಡ ಗಟ್ಟಿಯಾಗಿತ್ತು. ಈ ನಾಲೆಯಲ್ಲಿ ಧುಮ್ಮಿಕ್ಕಿ ಹರಿಯುತ್ತಿದ್ದ ನೀರು ಜಲಪಾತ ರೀತಿಯಲ್ಲಿ ಮನೋಹರ ದೃಶ್ಯವಾಗಿ ನೋಡುಗರ ಗಮನ ಸೆಳೆಯುತ್ತಿತ್ತು. ಇಂತಹ ಒಂದು ನಾಲೆಯನ್ನು ಕಿತ್ತುಹಾಕಿ ಹೊಸ ತಂತ್ರಜ್ಞಾನದ ಹೆಸರಿನಲ್ಲಿ ಹೊಸದಾಗಿ ನಿರ್ಮಿಸಿದ ನಾಲೆ ಕಾಮಗಾರಿ ನೀರು ಬಿಟ್ಟ ದಿನದಿಂದಲೇ ಕಿತ್ತುಹೋಗುತ್ತಿದೆ.ಕಳಪೆ ತಂತ್ರಜ್ಞಾನ: ಹೊಸ ತಂತ್ರಜ್ಞಾನದ ಪ್ರಕಾರ ನಾಲೆಗೆ ಹಾಕುವ ಲೈನಿಂಗ್ ದಪ್ಪ 4ಇಂಚು ಇರಬೇಕು. ನಿಗದಿತ ಪ್ರಮಾಣದಲ್ಲಿ ಸಿಮೆಂಟ್ ಸಹ ಬಳಸಿಲ್ಲ, ಕಳಪೆ ಮರಳು, ಸಿಮೆಂಟ್ ಕಾಮಗಾರಿಗೆ ಕ್ಯೂರಿಂಗ್ ಇಲ್ಲವೇ ಇಲ್ಲ! ಹಳೆಯ ಕಾಮಗಾರಿಗೆ ಸಿಮೆಂಟ್ ಮೆತ್ತಿಕೊಂಡು ಹೋಗಿರುವುದು ಕಾಣುತ್ತಿದೆ.

 

ಇದರಿಂದಾಗಿ 2011ರ ಡಿಸೆಂಬರ್ ಕಾಮಗಾರಿ  ಸಂಪೂರ್ಣ ಕಳಪೆಯಾಗಿದ್ದು, ಕೊನೆ ಭಾಗದ ರೈತರು ನೀರಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ಜತೆಯಲ್ಲಿ `ಸರ್ಕಾರದ ್ಙ 950 ಕೋಟಿ ಹಣ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತಾಗಿದೆ~ ಎಂದು ಹನುಮಂತಾಪುರ ಗ್ರಾಮದ ಮಲಗೊಪ್ಪಾರ ಈಶ್ವರಪ್ಪ ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.ಅಧಿಕಾರಿಗಳ ಪಾಲು: ಈ ಕಾಮಗಾರಿ ಪರಿವೀಕ್ಷಣೆಗೆಂದು ಅಧಿಕಾರಿಗಳು ವಿಶೇಷವಾಗಿ ನಿಯೋಜನೆಗೊಂಡಿದ್ದರೂ, ಪ್ರಯೋಜನವಾಗಿಲ್ಲ. ಆದ್ದರಿಂದ ಈ ಕಳಪೆ ಕಾಮಗಾರಿಯಲ್ಲಿ ಕರ್ನಾಟಕ ನೀರಾವರಿ ಹಿರಿಯ ಅಧಿಕಾರಿಗಳ ಪಾಲಿದೆ. ಕಾಮಗಾರಿಯ ಗುಣಮಟ್ಟ ಕಣ್ಣಿಗೆ ಹೇಸಿಗೆಯಂತೆ ಕಾಣುತ್ತಿದ್ದರೂ, ಸಹ ಎರಡನೇ ಕಂತಿನ ಹಣ ಪಾವತಿಗೆ ನಿಗಮ ಮುಂದಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲಿಸದೇ ಬಿಲ್ ಪಾವತಿಗೆ ಹೊರಟಿರುವುದು ಮುಖ್ಯ ಎಂಜಿನಿಯರ್ ಕಾರ್ಯನಿರ್ವಹಣಾ ಅಧಿಕಾರಿಯಿಂದ ಹಿಡಿದು ಸ್ಥಳೀಯ ಅಧಿಕಾರಿಗಳವರೆಗೆ ಹಣ ಲೂಟಿ ಮಾಡಿರುವ ಬಗ್ಗೆ ಅನುಮಾನ ಮೂಡಲಾರಂಭಿಸಿದೆ ಎನ್ನುತ್ತಾರೆ ರೈತ ಮುಖಂಡ ಟಿ.ಎಂ. ಚಂದ್ರಪ್ಪ.ಜನ ಸಂಚರಿಸುವ ಸ್ಥಳಗಳಲ್ಲಿಯೇ ಈ ರೀತಿಯ ಕಳಪೆ ಕಾಮಗಾರಿಗಳು ನಡೆದರೆ ಗುಡ್ಡಗಳ ಒಳಗಡೆ ಯಾವ ರೀತಿಯ  ಕಾಮಗಾರಿ ನಡೆದಿರಬಹುದು ?ಎಂದು ಭದ್ರಾವತಿ ತಾ. ಡಿಸಿಸಿ ಬ್ಯಾಂಕು ಮಾಜಿ ಅಧ್ಯಕ್ಷ ಪಿ. ರುದ್ರೇಶನ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.  

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry