ಕಳಪೆ ಬಿತ್ತನೆಬೀಜ; ಪರಿಹಾರಕ್ಕೆ ಆಗ್ರಹ
ತುಮರಿ: ಹೋಬಳಿಯಲ್ಲಿ ಕಳಪೆ ಬೀಜದ ಭತ್ತದ ಕಾರಣದಿಂದ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡಬೇಕು ಎಂದು ವಿವಿಧ ಸಂಘಟನೆಯ ಮುಖಂಡರು ಆಗ್ರಹಿಸಿದರು.ತುಮರಿಯ ಕೃಷಿ ರೈತ ಸಂಪರ್ಕ ಕೇಂದ್ರದ ಮುಂದೆ ಗುರುವಾರ ಅಳೂರಿನ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಕೃಷಿ ಇಲಾಖೆಯ ವರ್ತನೆಯನ್ನು ಖಂಡಿಸಲಾಯಿತು.
ತುಮರಿ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಭರತ್ಕುಮಾರ್ ಮಾತನಾಡಿ, ಹೋಬಳಿಯಲ್ಲಿ ಪಾರಂಪರಿಕ ಕೃಷಿಯಿಂದ ವಿಮುಖಗೊಂಡಿರುವ ರೈತರು ಕೃಷಿ ಇಲಾಖೆಯ ಮಾರ್ಗದರ್ಶನವನ್ನೇ ಬಹುವಾಗಿ ನೆಚ್ಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕಳಪೆ ಬಿತ್ತನೆ ಬೀಜದ ಭತ್ತ ಸರ್ಕಾರಿ ಇಲಾಖೆಯಿಂದ ಹಂಚಿಕೆಯಾಗಿದೆ. ತಕ್ಷಣವೇ ಸರಬರಾಜು ಮಾಡಿದ ಕಂಪೆನಿಯ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ರಕ್ಷಣಾ ವೇದಿಕೆ ಹೋಬಳಿ ಘಟಕದ ಅಧ್ಯಕ್ಷ ಗಣೇಶ್ ರೈತರಿಗೆ ಆದ ಅನ್ಯಾಯ ಪುನರಾವರ್ತನೆ ಆಗದಂತೆ ಇಲಾಖೆ ಎಚ್ಚರಿಕೆ ವಹಿಸಬೇಕು. ನಷ್ಟಗೊಂಡ ರೈತನಿಗೆ ಪರಿಹಾರವನ್ನು ವಾರದಲ್ಲಿ ವಿತರಿಸಬೇಕು ಎಂದು ಆಗ್ರಹಿಸಿದರು.
ತುಮರಿ ಗ್ರಾ.ಪಂ ಉಪಾಧ್ಯಕ್ಷೆ ಜಯಲಕ್ಷ್ಮೀ ಶ್ರೆಪಾದ, ಸದಸ್ಯ ಸಾಲೆಕೊಪ್ಪರಾಜಪ್ಪ, ಮಾಜಿ ಗ್ರಾ.ಪಂ ಅಧ್ಯಕ್ಷ ಪಟೇಲ್ಸುಭ್ರಾವ್, ರಕ್ಷಣಾವೇದಿಕೆಯ ಮಹೇಶ್ ಮೂರಕೈ, ಶ್ರೀಧರ ಕರೂರು, ಸಂತೋಷ್ಕುಮಾರ್ ಶೆಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕೃಷಿ ಅಧಿಕಾರಿಗಳ ಭೇಟಿ: ಸಾಗರ ತಾಲ್ಲೂಕು ಕೃಷಿ ಅಧಿಕಾರಿ ಶಿವಕುಮಾರ್ ಅಧಿಕಾರಿಗಳೊಂದಿಗೆ ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತನಿಗೆ ನ್ಯಾಯ ಕೊಡಿಸಲು ಶ್ರಮಿಸುವುದಾಗಿ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.