ಕಳಪೆ ಬಿತ್ತನೆಬೀಜ ಮಾರಿದರೆ ಮೊಕದ್ದಮೆ

7

ಕಳಪೆ ಬಿತ್ತನೆಬೀಜ ಮಾರಿದರೆ ಮೊಕದ್ದಮೆ

Published:
Updated:
ಕಳಪೆ ಬಿತ್ತನೆಬೀಜ ಮಾರಿದರೆ ಮೊಕದ್ದಮೆ

ಚಿತ್ರದುರ್ಗ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಾದ್ಯಂತ 61,500 ಮೆಟ್ರಿಕ್ ಟನ್ ರಸಗೊಬ್ಬರದ ಅಗತ್ಯವಿದ್ದು, ಇದರ ಪೂರೈಕೆಗೆ ಎಲ್ಲ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಎ.ಎಸ್. ನಿರ್ವಾಣಪ್ಪ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ರೈತ ಮುಖಂಡರು, ರಸಗೊಬ್ಬರ ವಿತರಕರು, ಉತ್ಪಾದನಾ ಕಂಪೆನಿಯವರೊಂದಿಗೆ ನಡೆದ ಸಮರ್ಪಕ ರಸಗೊಬ್ಬರ ಪೂರೈಕೆ ಮತ್ತು ವಿತರಣಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರೈತರಿಗೆ ಬಹು ಮುಖ್ಯವಾಗಿ ಯೂರಿಯಾ, ಡಿಎಪಿ, ಎಂಒಸಿ, ಕಾಂಪ್ಲೆಕ್ಸ್ ರಸಗೊಬ್ಬರದ ಅಗತ್ಯವಿದೆ. ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆಯಾಗಿರುವುದರಿಂದ ಈ ವರ್ಷವೂ ಉತ್ತಮವಾದ ಮಳೆಯಾಗುವ ನಿರೀಕ್ಷೆಯಿದೆ. ಕಳೆದ ಸಾಲಿಗಿಂತ ಪ್ರಸಕ್ತ ಸಾಲಿನಲ್ಲಿ 9,375  ಮೆಟ್ರಿಕ್ ಟನ್ ಹೆಚ್ಚುವರಿಯಾಗಿ ರಸಗೊಬ್ಬರ ಪೂರೈಕೆಗೆ ಕ್ರಮ ವಹಿಸಲಾಗಿದೆ ಎಂದರು.ರಸಗೊಬ್ಬರ ಪೂರೈಕೆಯ ಗುರಿಯಲ್ಲಿ ಯೂರಿಯಾ 20ಸಾವಿರ, ಡಿಎಪಿ 18ಸಾವಿರ, ಪೊಟ್ಯಾಷ್ 4,200, ಕಾಂಪ್ಲೆಕ್ಸ್ 19,300 ಮೆಟ್ರಿಕ್ ಟನ್ ಹೊಂದಲಾಗಿದೆ. ಇದಲ್ಲದೆ ಮುಂಚಿತವಾಗಿ ಈಗಾಗಲೇ 18,450 ಮೆಟ್ರಿಕ್ ಟನ್ ರಸಗೊಬ್ಬರವನ್ನು ಎಲ್ಲ ತಾಲ್ಲೂಕುಗಳಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ರಸಗೊಬ್ಬರವನ್ನು ಕಂಪೆನಿಯ ನಿಗದಿತ ಬೆಲೆಯಲ್ಲೆಯೇ ಮಾರಾಟ ಮಾಡಬೇಕು. ಹೆಚ್ಚುವರಿ ಸಾಗಾಣಿಕೆ ವೆಚ್ಚ ತಗಲುವುದರಿಂದ ಪ್ರತಿ ಚೀಲಕ್ಕೆ ್ಙ 15 ನಿಗದಿ ಮಾಡಲಾಗಿದೆ. ವಿತರಕರು ಯಾವುದೇ ಕಾರಣಕ್ಕೂ ಬೆಲೆಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ನಿರ್ವಾಣಪ್ಪ ತಿಳಿಸಿದರು.ಸರ್ಕಾರ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಕಾಳಸಂತೆಯಲ್ಲಿ ಹಾಗೂ ಅಧಿಕ ದರದಲ್ಲಿ ಮಾರಾಟ ಮಾಡುವುದನ್ನು ತಡೆಗಟ್ಟಲು ಜಾಗೃತ ದಳವನ್ನು ನೇಮಕ ಮಾಡಿದೆ. ಕೃಷಿ ಇಲಾಖೆಯಲ್ಲಿಯೂ ಸಹ ರೈತರ ಸಹಾಯಕ್ಕೆ ಸಹಾಯವಾಣಿ ಸ್ಥಾಪಿಸಲಾಗುವುದು. ಇದರಿಂದ ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರ ಬಗ್ಗೆ ದೂರುಗಳನ್ನು ನೀಡಲು ಸಹಾಯಕವಾಗಲಿದೆ ಎಂದರು.ಜಿಲ್ಲಾಡಳಿತ ಜಿಲ್ಲೆಯಲ್ಲಿ ರಸಗೊಬ್ಬರದ ಸಮಸ್ಯೆಯಾಗದಂತೆ ಗಮನಹರಿಸಲಿದೆ. ಜಿಲ್ಲೆಯಲ್ಲಿನ ಸಹಕಾರ ಸಂಘಗಳ ಮೂಲಕವೂ ರಸಗೊಬ್ಬರ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಸಹಕಾರ ಸಂಘಗಳಿಗೆ ಬಂಡವಾಳವನ್ನು ಜಿಲ್ಲಾ ಸಹಕಾರ ಬ್ಯಾಂಕಿನಿಂದ ನೀಡಲು ಕ್ರಮ ಜರುಗಿಸಲಾಗಿದೆ. ಹತ್ತಿರದಲ್ಲಿಯೇ ರಸಗೊಬ್ಬರ ಸಿಗುವುದರಿಂದ ರೈತರಿಗೆ ಸಾಗಾಣಿಕೆ ವೆಚ್ಚ ಕಡಿಮೆಯಾಗಿ ಸಕಾಲದಲ್ಲಿ ದೊರೆಯಲಿದೆ ಎಂದರು.ಕಳಪೆ ಹಾಗೂ ಅನಧಿಕೃತ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಮಾರಾಟವಾಗದಂತೆ ಕಟ್ಟೆಚ್ಚರ ವಹಿಸಲಾಗುವುದು. ಮಾರಾಟಗಾರರು ಅನಧಿಕೃತವಾಗಿ ಮಾರಾಟ ಮಾಡಿದಲ್ಲಿ ಕಾನೂನು ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು. ಜಿಲ್ಲೆಗೆ ಮುಂಗಾರು ಹಂಗಾಮಿಗೆ ಎಲ್ಲ ಬೆಳೆಗಳು ಸೇರಿ 83 ಸಾವಿರ ಕ್ವಿಂಟಲ್ ಬಿತ್ತನೆ ಬೀಜದ ಆವಶ್ಯಕತೆ ಇದೆ. ಇದರಲ್ಲಿ 60 ಸಾವಿರ ಕ್ವಿಂಟಲ್ ಶೇಂಗಾ ಬಿತ್ತನೆ ಬೀಜ ಸೇರಿದೆ. ರಸಗೊಬ್ಬರ ಹಾಗೂ ಬಿತ್ತನೆ ಬೀಜದ ದಾಸ್ತಾನಿಗೆ ಈಗಾಗಲೇ ಕ್ರಮ ವಹಿಸಲಾಗಿದೆ. ರೈತರ ಹಿತದೃಷ್ಟಿಯಿಂದ ಕಳಪೆ ಬಿತ್ತನೆಬೀಜದ ಪೂರೈಕೆ ಆಗದಂತೆ ನೋಡಿಕೊಳ್ಳಲು ಕೃಷಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.ಜಂಟಿ ಕೃಷಿ ನಿರ್ದೇಶಕ ಡಾ.ಎ. ರಾಮದಾಸ್ ಸಭೆಗೆ ಸಂಪೂರ್ಣ ವಿವರ ನೀಡಿದರು.  ಡಿವೈಎಸ್ಪಿ ನಾಗರಾಜ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಜಿ.ಎಂ. ತಿಮ್ಮಪ್ಪ, ರೈತ ಸಂಘದ ಶಂಕರಪ್ಪ, ತಿಮ್ಮಪ್ಪ, ವೀರಣ್ಣ, ಕೊಂಚೆ ಶಿವರುದ್ರಪ್ಪ, ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry