ಗುರುವಾರ , ಜೂನ್ 24, 2021
25 °C
ಖಾಸಗಿ ಕಂಪೆನಿಗಳ ವಿರುದ್ಧ ಕ್ರಮಕ್ಕೆ ರೈತರ ಆಗ್ರಹ

ಕಳಪೆ ಬಿತ್ತನೆ ಬೀಜ; ಅಪಾರ ಬೆಳೆ ನಷ್ಟ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ಬಿತ್ತನೆ ಮಾಡಿರುವ ಈರುಳ್ಳಿ ಬೀಜ ಕಳಪೆಯಾಗಿದ್ದು, ಬೀಜ ವಿತರಿಸಿರುವ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.



ಚಳ್ಳಕೆರೆ ತಾಲ್ಲೂಕಿನಲ್ಲಿ ಖಾಸಗಿ ಕಂಪೆನಿಗಳಿಂದ ರೈತರು ಈರುಳ್ಳಿ ಬೀಜ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಬೆಳೆ ಕಟಾವಿನ ವೇಳೆಯೊಳಗೆ ಸಂಪೂರ್ಣ ನಷ್ಟವಾಗಿದ್ದು, ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸಿದರು.



ತಾಲ್ಲೂಕಿನ ಸೋಮಗುದ್ದು, ಹಿರೇಮಧುರೆ, ಚಿಗತನಹಳ್ಳಿ, ಚಿಕ್ಕಮಧುರೆ, ಉಪ್ಪಾರಹಟ್ಟಿ, ಗಂಜಿಗುಂಟೆ, ಕಾಪರಹಳ್ಳಿ, ಜಡೇಕುಂಟೆ ಈ ಗ್ರಾಮಗಳ ರೈತರು ಚಳ್ಳಕೆರೆಯಲ್ಲಿನ ಕೆಲವು ಅಂಗಡಿಗಳಲ್ಲಿ ಈರುಳ್ಳಿ ಬೀಜ ಖರೀದಿ ಮಾಡಿ ತಾಲ್ಲೂಕಿನಾದ್ಯಂತ ಸುಮಾರು ಸಾವಿರ ಎಕರೆಯಲ್ಲಿ ಬಿತ್ತನೆ ಮಾಡಿದ್ದು, ಫಲ ಕೊಡದೆ ನಷ್ಟ ಉಂಟಾಗಿದೆ ಎಂದು ದೂರಿದರು.



ರೈತರು ಒಂದು ಎಕರೆ ಬಿತ್ತನೆಗೆ ಸುಮಾರು ₨ 25 ರಿಂದ 30ಸಾವಿರ ಖರ್ಚು ಮಾಡಿದ್ದಾರೆ. ಬಿತ್ತನೆ ಮಾಡಿ  4 ತಿಂಗಳಾದರೂ ಈರುಳ್ಳಿ ಕಾವುಗಳು ಗೆಡ್ಡೆ ಕಟ್ಟದೆ, ಸಂಪೂರ್ಣ ನಾಶವಾಗಿವೆ. ಈ ಕಾರಣ ಜಿಲ್ಲಾಡಳಿತ ಸಂಬಂಧಪಟ್ಟ ತಜ್ಞರನ್ನು ಕರೆಸಿ ಪರಿಶೀಲಿಸಬೇಕು. ಕಳಪೆ ಬೀಜ ವಿತರಿಸಿರುವ ಕಂಪೆನಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಬೀಜ ಮಾರಾಟ ಮಾಡಿದ ಅಂಗಡಿಗಳ ಪರವಾನಿಗೆ ರದ್ದು ಮಾಡಬೇಕು. ಜತೆಗೆ ಬೆಳೆ ನಷ್ಟವಾಗಿರುವ ಪ್ರತಿ ರೈತ ಕುಟುಂಬಕ್ಕೆ 1 ಎಕರೆಗೆ ₨ 1 ಲಕ್ಷ ಪರಿಹಾರ ಕೊಡಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.



ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಪ್ರಧಾನ ಕಾರ್ಯದರ್ಶಿ ನಾಗರಾಜ್‌, ಕಾರ್ಯದರ್ಶಿ ಕೆ.ಪಿ.ಭೂತಯ್ಯ ಇತರರು ಇದ್ದರು.



ಪ್ರತ್ಯೇಕ ಮನವಿ: ಇದೇ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ಕಿಸಾನ್‌ ಸಂಘ ಕರ್ನಾಟಕ ಪ್ರದೇಶ ದಕ್ಷಿಣ ಪ್ರಾಂತ ಚಳ್ಳಕೆರೆ ಘಟಕದ ಕಾರ್ಯದರ್ಶಿ ಏಕಾಂತ್‌ ಹಿರೇಮಧುರೆ, ಶಶಿಧರ್‌, ಮಲ್ಲಿಕಾರ್ಜುನ್‌, ಬಸವರಾಜ್‌, ಪರಶುರಾಮ್‌, ತಿಪ್ಪೇಸ್ವಾಮಿ, ಓಂಕಾರಪ್ಪ ಇತರರು ಜಿಲ್ಲಾಡಳಿತಕ್ಕೆ ಪ್ರತ್ಯೇಕ ಮನವಿ ಸಲ್ಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.