ಮಂಗಳವಾರ, ಮೇ 24, 2022
21 °C

ಕಳಪೆ ಬೀಜ ಪೂರೈಕೆ: ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಗುಂದ: ಪಟ್ಟಣ ಸೇರಿದಂತೆ  ತಾಲ್ಲೂಕಿನ ವಿವಿಧ ಗ್ರಾಮದ ರೈತರು  ಕಳಪೆ ಬೀಜ ಮಾರಾಟ ಮಾಡಿದ  ಜೆಕೆ ಸೀಡ್ಸ್  ಕಂಪೆನಿ ವಿರುದ್ಧ ಆಕ್ರೋಶಗೊಂಡು ಸೋಮವಾರ ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಹೊರ ಹಾಕಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಕಳೆದ ಎರಡು ತಿಂಗಳುಗಳ ಹಿಂದೆ ಮೆಕ್ಕೆ ಜೋಳದ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿದ್ದ ಸಂದರ್ಭದಲ್ಲಿ ಮೊಳಕೆ ಹಂತದಲ್ಲಿಯೇ ಕಮರಿ ಹೋಗ್ದ್ದಿದವು.  ಇದರ ಬಗ್ಗೆ ಪರಿಹಾರ ನೀಡುತ್ತೇನೆಂದು ಕಂಪೆನಿಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಹೇಳಿದ್ದರು. ಆದರೆ ಇಲ್ಲಿಯವರೆಗೂ ಅವರ ಸುಳಿವೇ ಇಲ್ಲದ್ದಕ್ಕೆ ರೈತರು ತೀವ್ರ ಆಕ್ರೋಶಗೊಂಡರು.ಕೃಷಿ ಅಧಿಕಾರಿ ಮಂಜುನಾಥ ಅವರೊಂದಿಗೆ ತೀವ್ರ ವಾಗ್ವಾದ ಉಂಟಾಯಿತು. ಕಂಪೆನಿ ಅಧಿಕಾರಿಗಳು ಹಾಗೂ ಜಂಟಿ ನಿರ್ದೇಶಕರು ಬರಬೇಕು. ಅಲ್ಲಿಯವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು  ರೈತರು ಪಟ್ಟು ಹಿಡಿದರು. ಸುಮಾರು ಎರಡು ತಾಸುಗಳ ಕಾಲ ಕಚೇರಿ ಎದುರು ಬೀಡು ಬಿಟ್ಟರು. ಸ್ಥಳಕ್ಕೆ ಪೊಲೀಸ್ ಸಿಪಿಐ ವಿಜಯ ಕುಮಾರ ಆಗಮಿಸಿ ರೈತರಿಗೆ  ಸಮಾಧಾನ ಹೇಳಿದರೂ  ರೈತರು  ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು ಪುನರುಚ್ಛರಿ ಸಿದರು.ಆದರೂ ಕೊನೆಗೂ ರೈತರ ಮನವೊಲಿಸುವಲ್ಲಿ ಯಶಸ್ವಿಯಾದ ವಿಜಯಕುಮಾರ  ಕಚೇರಿ  ಬೀಗ ತೆರೆಸಿದರು.  ನಂತರ ಅಧಿಕಾರಿಗಳೊಡನೆ ಮಾತುಕತೆ ನಡೆಸಿದರು. ಆದರೆ ಜಂಟಿ ನಿರ್ದೇಶಕರು ಬರಬೇಕೆಂದು ಪಟ್ಟು ಹಿಡಿದರು. ನಂತರ ಕೆಲವು ರೈತ ಮುಖಂಡರು ಹಾಗೂ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು  ಹುಬ್ಬಳ್ಳಿಯ ಜೆಕೆ ಕಂಪೆನಿಗೆ  ಹೋಗಿ ವಿಚಾರಿಸಲು ಮುಂದಾದಾಗ ಪ್ರತಿಭಟನೆ  ನಿಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಮಂಜುನಾಥ ಹಾಗೂ ರೈತರು ಅಲ್ಲಿ  ಹುಬ್ಬಳ್ಳಿಗೆ ತೆರಳಿ ಕಂಪೆನಿಯ ಕಚೇರಿಯಲ್ಲಿ   ವಾಸ್ತವ ಸ್ಥಿತಿ ಹೇಳಿದ್ದಾರೆ. ಆದರೆ ಕಂಪೆನಿ ಅಧಿಕಾರಿಗಳು ಸ್ಪಂದಿಸದೇ ಇರುವುದು ತಿಳಿದು ಬಂದಿದೆ. ಆದ್ದರಿಂದ ಕಂಪೆನಿ ವಿರುದ್ಧ ಪೊಲೀಸ್ ಠಾಣೆಗೆ ದೂರು  ಸಲ್ಲಿಸುವುದಾಗಿ ಮಂಜುನಾಥ `ಪ್ರಜಾವಾಣಿ~ಗೆ ಹೇಳಿದರು.ಈ ಸಂದರ್ಭದಲ್ಲಿ ಫಕೀರಪ್ಪ ಜೋಗಣ್ಣವರ, ಸುರೇಶ ಹುಡೇದಮನಿ, ಬಿ.ಎಸ್.ಪಾಟೀಲ, ಜಿ.ಜಿ.ಹಿರೇಮಠ, ಮೈಲಾರಪ್ಪ ಹಂಪಿ, ಎಂ.ಎಸ್.ಸಿದ್ದಾಪೂರ, ರಂಗರೆಡ್ಡಿ ರಾಯರೆಡ್ಡಿ, ವಿ.ಕೆ.ಸಾತನ್ನವರ, ಬಸಪ್ಪ ಕೊಣ್ಣೂರು, ಎಸ್.ಎಂ.ಮೂಗನೂರು ಹಲವಾರು ರೈತರು ಭಾಗವಹಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.