ಕಳಪೆ ರಸ್ತೆ: ಸಂಸದ ಜೋಶಿ ಅಸಮಾಧಾನ

ಗುರುವಾರ , ಜೂಲೈ 18, 2019
24 °C

ಕಳಪೆ ರಸ್ತೆ: ಸಂಸದ ಜೋಶಿ ಅಸಮಾಧಾನ

Published:
Updated:

ಧಾರವಾಡ: ಕಳೆದ 23 ತಿಂಗಳಿಂದ ರೂ 84.4 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ 38.5 ಕಿಲೋ ಮೀಟರ್ ಉದ್ದದ ಧಾರವಾಡ-ಸವದತ್ತಿ ರಸ್ತೆ ನಿರ್ಮಾಣ ಕಾಮಗಾರಿ ಕಳಪೆಯಾಗಿದ್ದು, ರಸ್ತೆ ನಿರ್ಮಾಣ ಸಂದರ್ಭದಲ್ಲಿ ಸುರಕ್ಷಾ ವಿಧಾನಗಳನ್ನು ಅನುಸರಿಸಲಾಗಿಲ್ಲ. ಆದ್ದರಿಂದ ಸರ್ಕಾರ ರಸ್ತೆಯ ಗುಣಮಟ್ಟದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸಂಸದ ಪ್ರಹ್ಲಾದ ಜೋಶಿ ಒತ್ತಾಯಿಸಿದರು.ಮಂಗಳವಾರ ಧಾರವಾಡದಿಂದ ಹಾರೊಬೆಳವಡಿವರೆಗೆ ರಸ್ತೆಯ ಕಾಮಗಾರಿಗಳನ್ನು ಖುದ್ದು ವೀಕ್ಷಿಸಿದ ಜೋಶಿ, ಡಾಂಬರ್ ಹಾಕುವ ಮುನ್ನ ಹಾಕಲಾದ ಮಣ್ಣಿನ ಗುಣಮಟ್ಟದ ಬಗ್ಗೆಯೂ ಸಂಶಯ ವ್ಯಕ್ತಪಡಿಸಿದರು. `ಜೂನ್ 30ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿದ್ದರೂ ಏಕಿಷ್ಟು ತಡವಾಗಿದೆ' ಎಂದು ಕೆಶಿಪ್‌ನ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಪ್ರಶ್ನಿಸಿದರು.ಹಾರೊಬೆಳವಡಿ ಗ್ರಾಮಸ್ಥರು ಈ ರಸ್ತೆಯನ್ನು ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು ಹಾಗೂ ಮೇಲ್ವಿಚಾರಣೆ ಮಾಡುತ್ತಿರುವ ಕೆಶಿಪ್ ಅಧಿಕಾರಿಗಳ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಮಾಡಿದರು. ರಸ್ತೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಕೆಂಪು ಪಟ್ಟಿಯನ್ನು ರಸ್ತೆಯುದ್ದಕ್ಕೂ ಅಳವಡಿಸದಿರುವುದು, ತಿರುವು ತೆಗೆದುಕೊಳ್ಳುವ ಫಲಕವನ್ನು ಹಾಕದಿರುವುದನ್ನು ಗಮನಿಸಿದ ಜೋಶಿ, `ಜನರ ಜೀವವೆಂದರೆ ನಿಮಗೆ ಇಷ್ಟೊಂದು ನಿಕೃಷ್ಟವೇ? ಕೂಡಲೇ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಿ' ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.`ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ರಸ್ತೆಯ ಆಚೆ ಹರಿಯಬೇಕಿದ್ದ ನೀರು, ಗುತ್ತಿಗೆದಾರರಾದ ರೆಡ್ಡಿ ವೀರಣ್ಣ ಕನ್‌ಸ್ಟ್ರಕ್ಷನ್ಸ್ ಅವರ ನಿರ್ಲಕ್ಷ್ಯದಿಂದಾಗಿ ಹಲವು ಮನೆಗಳಿಗೆ ನುಗ್ಗಿತ್ತು. ರಸ್ತೆಯ ಕೆಳಭಾಗದಿಂದ ನೀರು ಹರಿಯಲು ಅಗತ್ಯವಾದ ಹೆಚ್ಚುವರಿ ಸಿಮೆಂಟ್‌ಗಳನ್ನು ಅಳವಡಿಸದೇ ಇದ್ದುದರಿಂದ ಈ ಅವಾಂತರ ಸಂಭವಿಸಿದ್ದು, ನೀರು ಮನೆಗಳಿಗೆ ನುಗ್ಗಿ ಆದ ನಷ್ಟಕ್ಕೆ ಅತ್ಯಂತ ಕಡಿಮೆ ಪರಿಹಾರ ನೀಡಲಾಗಿದೆ' ಎಂಬ ಗ್ರಾಮಸ್ಥರ ಆರೋಪಗಳಿಂದಲೂ ಜೋಶಿ ಅಧಿಕಾರಗಳ ವಿರುದ್ಧ ಗರಂ ಆದರು. `ಯಾವನ್ರೀ ಅವನು, ಇಷ್ಟು ಕಡಿಮೆ ಪರಿಹಾರ ನೀಡಲು ಅನುಮತಿ ನೀಡಿದವನು' ಎಂದು ಹರಿಹಾಯ್ದರು.`ಒಂದು ವಾರದೊಳಗಾಗಿ ನಷ್ಟದ ಪ್ರಮಾಣವನ್ನು ಮರು ಸಮೀಕ್ಷೆ ಮಾಡಿಸಿ ಎಷ್ಟು ನಷ್ಟವಾಗಿದೆಯೋ ಅಷ್ಟು ಪರಿಹಾರ ಕೊಡಿಸಬೇಕು. ತಪ್ಪಿದರೆ ಗ್ರಾಮಸ್ಥರೊಂದಿಗೆ ಸೇರಿಕೊಂಡು ಹೋರಾಟ ನಡೆಸಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದರು.`ರಸ್ತೆ ನಿರ್ಮಾಣ ಕಾಮಗಾರಿ ಅಷ್ಟೊಂದು ತೃಪ್ತಿಕರವಾಗಿ ನಡೆಯುತ್ತಿಲ್ಲ' ಎಂದು ಮಾಜಿ ಶಾಸಕಿ ಸೀಮಾ ಮಸೂತಿ ದೂರಿದರು.ಶಾಸಕ ಅರವಿಂದ ಬೆಲ್ಲದ, ತಾ.ಪಂ. ಅಧ್ಯಕ್ಷೆ ಸುಮಂಗಲಾ ಕೌದೆನ್ನವರ, ಕೆಶಿಪ್ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಜಿ.ಕುಲಕರ್ಣಿ, ಕೆಶಿಪ್ ಅಧಿಕಾರಿ ಶ್ರೀಧರ್, ಬಿಜೆಪಿ ಮುಖಂಡರಾದ ಈರೇಶ ಅಂಚಟಗೇರಿ, ಈಶ್ವರ ಶಿವಳ್ಳಿ ಈ ಸಂದರ್ಭದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry