ಕಳಪೆ ಸಕ್ಕರೆ ವಿತರಣೆ ಖಂಡಿಸಿ ಪ್ರತಿಭಟನೆ

7

ಕಳಪೆ ಸಕ್ಕರೆ ವಿತರಣೆ ಖಂಡಿಸಿ ಪ್ರತಿಭಟನೆ

Published:
Updated:

ಮದ್ದೂರು: ಕಬ್ಬು ಪೂರೈಕೆ ಮಾಡಿದ ರೈತರಿಗೆ ಕಳಪೆ ಗುಣಮಟ್ಟದ ಸಕ್ಕರೆ ವಿತರಣೆಯನ್ನು ಖಂಡಿಸಿ ತಾಲ್ಲೂಕಿನ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಆಡಳಿತ  ಕಚೇರಿ ಎದುರು ಅಖಿಲ ಕರ್ನಾಟಕ ಎಚ್. ಡಿ.ಕುಮಾರಸ್ವಾಮಿ ರೈತಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.ಸಂಘದ ಜಿಲ್ಲಾಧ್ಯಕ್ಷ ಮೂಡ್ಯಚಂದ್ರು ಮಾತನಾಡಿ, ಕಬ್ಬು ಪೂರೈಕೆ ಮಾಡಿದ ರೈತರಿಗೆ ಕಾರ್ಖಾನೆಯು ಟನ್‌ವೊಂದಕ್ಕೆ ಕೇವಲ ಅರ್ಧ ಕೆ.ಜಿ ಸಕ್ಕರೆ ನೀಡುತ್ತಿದ್ದು, ಇದು ಕಳಪೆ ಗುಣಮಟ್ಟದ ಪುಡಿ ಪುಡಿ ಸಕ್ಕರೆಯಾಗಿದೆ. ಇದಲ್ಲದೇ ರಿಯಾಯಿತಿ ದರದಲ್ಲಿ ಕಾರ್ಖಾನೆ ರೈತರಿಗೆ ಸಕ್ಕರೆ ವಿತರಿಸುತ್ತಿದೆ. ಇದು ಕೇವಲ  ಎರಡು ತಿಂಗಳಿಗೆ ಮಾತ್ರ ಸೀಮಿತವಾಗಿದ್ದು, ವರ್ಷಪೂರ್ತಿ ಸಕ್ಕರೆ ವಿತರಿಸಲು ಆಡಳಿತ ಮಂಡಳಿ ಅವಕಾಶ ಕಲ್ಪಿಸಬೇಕಿದೆ ಎಂದು ಆಗ್ರಹಿಸಿದರು.ಕಾರ್ಖಾನೆಯು ಉಪ ಉತ್ಪನ್ನ ಘಟಕದ ಮೂಲಕ ಉತ್ಪಾದಿಸುತ್ತಿರುವ ವಿದ್ಯುತ್ ಅನ್ನು ಹೊರ ನಗರಗಳಿಗೆ ಮಾರಾಟ ಮಾಡುತ್ತಿದೆ. ಇಲ್ಲಿ  ತಯಾರಾಗುವ  ವಿದ್ಯುತ್ ಅನ್ನು ಕಾರ್ಖಾನೆಯ 10 ಕಿ.ಮೀ. ವ್ಯಾಪ್ತಿಯ ಗ್ರಾಮಗಳಿಗೆ ಪೂರೈಸಲು ಅಗತ್ಯ ಕ್ರಮ ಜರುಗಿಸಬೇಕು. ಹೊಸ ಉಪ ಉತ್ಪನ್ನ ಘಟಕಗಳ ವಿಸ್ತರಣೆಗೆ  ಮುಂದಾಗಬಾರದು ಎಂದು ಒತ್ತಾಯಿಸಿದರು. ಇಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಮನಗೋಳಿ ಮಾತನಾಡಿ, ಉತ್ತಮ ಗುಣಮಟ್ಟದ ಸಕ್ಕರೆ ವಿತರಿಸಲಾಗುವುದು. ಅಲ್ಲದೇ ಬೇಡಿಕೆಗಳನ್ನು ಆಡಳಿತ ಮಂಡಳಿಯ ಮುಂದಿಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.ಜಿಲ್ಲಾ ಉಪಾಧ್ಯಕ್ಷ ಸ್ವಾಮಿಗೌಡ, ಮುಟ್ಟನಹಳ್ಳಿ ವೆಂಕಟೇಶ್, ಎಂ.ಸಿ.ಲಿಂಗರಾಜು, ಬೆಟ್ಟಸ್ವಾಮಿ, ಪ್ರಕಾಶ್, ಜಗದೀಶ್, ಎಂ.ಎಚ್.ಚಂದ್ರು, ರಾಜೇಶ್, ತಿಮ್ಮೇಗೌಡ, ರಾಜೇಗೌಡ, ಕರೀಗೌಡ, ಬಿಳಿಗೌಡ, ಚಿಕ್ಕಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry