ಕಳವೆ ಎಂಬ ಜಲಕೋಟೆ

7

ಕಳವೆ ಎಂಬ ಜಲಕೋಟೆ

Published:
Updated:

ಕಾಲ ಬದಲಾಗಿದೆ. ಜೂನ್ ವೇಳೆಗೆ ಧೋ ಎಂದು ಸುರಿಯುತ್ತಿದ್ದ ಮಳೆ ಈ ಸಲ ಕೊನೆಗೂ ದರ್ಶನ ಕೊಟ್ಟಿದ್ದೇ ಆಗಸ್ಟ್ ಹೊತ್ತಿಗೆ. ಸಾಮಾನ್ಯವಾಗಿ ಈ ವರ್ಷಧಾರೆಗೆ ಹಳ್ಳ-ಕೊಳ್ಳಗಳು ಸೊಕ್ಕಿ ಹರಿಯುತ್ತವೆ, ಪುಟ್ಟ ಜಲಪಾತಗಳು ಕಿಲಕಿಲ ನಗುತ್ತವೆ.ಮಲೆನಾಡಿನ ಹಳ್ಳಿಗಳಲ್ಲಿ ಮಳೆಯ ಸೊಬಗ ನೋಡುವುದೇ ಒಂದು ಸಂಭ್ರಮ.

ಆದರೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಕಳವೆ ಗ್ರಾಮದ ಚಿತ್ರಣ ಇದಕ್ಕಿಂತ ಸ್ವಲ್ಪ ಭಿನ್ನ.

ಇಳಿಜಾರಿನ ಕಣಿವೆಯಿಂದ ಹಳ್ಳಕ್ಕೆ ಓಡಿ ಹೋಗುವ ನೀರನ್ನು ಕಳವೆ ಮಂದಿ ನೂರಾರು ಎಕರೆ ಬೆಟ್ಟದಲ್ಲಿ ರಚನೆಯಾಗಿರುವ ಜಲಪಾತ್ರೆಗಳಲ್ಲಿ ಹಿಡಿದಿಟ್ಟುಕೊಂಡು ಬೀಗುತ್ತಾರೆ. ಮಳೆ ಬಂದ ಮರುದಿನ ಜಲಪಾತ್ರೆಯಲ್ಲಿನ ನೀರಿನ ಶೇಖರಣೆ ವೀಕ್ಷಿಸುವುದೇ ಊರವರಿಗೆ ಒಂದು ಕೌತುಕ.ಜಲದುರ್ಗದ ಯಶೋಗಾಥೆ : ಜಲಕೊಯ್ಲಿನ ಪುಟ್ಟ ಪ್ರಯತ್ನಕ್ಕೆ ನಾಂದಿಯಾಗಿದ್ದು ಕಳವೆ ಗ್ರಾಮ ಅರಣ್ಯ ಸಮಿತಿಗೆ 2006ರಲ್ಲಿ ದೊರೆತ ಅನುದಾನ. ಅದರ ಸಹಾಯದಿಂದ ಸುಮಾರು ನಾಲ್ಕು ಎಕರೆ ಬೆಟ್ಟದ ಜಾಗದಲ್ಲಿ ಒಂದು ಕೋಟಿ ಲೀಟರ್ ನೀರು ಹಿಡಿದಿಡುವ ನಾಲ್ಕಾರು ಕಣಿವೆ ಕೆರೆಗಳು ರೂಪುಗೊಂಡವು.

ಗುಡ್ಡದ ಮೇಲಿನ ನೀರನ್ನು ಅಯಸ್ಕಾಂತದಂತೆ ಸೆಳೆದುಕೊಂಡವು. ಒಂದೆರಡು ವರ್ಷದಲ್ಲಿ ಮಣ್ಣಿನ ಸತ್ವ ಪ್ರತಿಫಲಿಸುವ ಹುಲ್ಲಿನ ಜಾತಿ ಬದಲಾಯಿತು. ಕರಡ ಬೆಳೆಯುವ ಬೆಟ್ಟದಲ್ಲಿ ಜಲಗ, ಮರದಾಳಿ, ವಾಟಗರಿಕೆ ಜಾತಿಯ ಹುಲ್ಲುಗಳು ಹುಟ್ಟಿಕೊಂಡವು.ಆದರೇನು! ಬೇಸಿಗೆಯಲ್ಲಿ ಅಡಿಕೆ ತೋಟ ಒಣಗುವುದು ತಪ್ಪಲಿಲ್ಲ. ಸೊಪ್ಪಿನ ಬೆಟ್ಟಗಳಿಂದ ಸುತ್ತುವರಿದಿರುವ ಅಡಿಕೆ ತೋಟಗಳಿಗೆ ಬೇಸಿಗೆಯಲ್ಲಿ ಕೃತಕ ವಿಧಾನದ ಮೂಲಕ ನೀರು ಹಾಯಿಸಬೇಕಾದಾಗ ಕಳವೆ ಜನರಿಗೆ ಹೊಳೆದಿದ್ದು ಮತ್ತಷ್ಟು ಗುಡ್ಡ ಅಗೆದು ಮಳೆ ನೀರು ಇಂಗಿಸುವ ಹುಮ್ಮಸ್ಸು.

ಅರಣ್ಯ ಇಲಾಖೆ ಸಹಕಾರ ಪಡೆದು ಗ್ರಾಮ ಅರಣ್ಯ ಸಮಿತಿಯವರು ಸುಮಾರು 125 ಎಕರೆ ಅರಣ್ಯ, ಸೊಪ್ಪಿನ ಬೆಟ್ಟಗಳಲ್ಲಿ ವ್ಯಾಪಕವಾಗಿ ನೀರು ಇಂಗಿಸುವ ರಚನೆಗಳನ್ನು ನಿರ್ಮಿಸಿದರು.ಕಳೆದ ಬೇಸಿಗೆಯಲ್ಲಿ ಜೆಸಿಬಿ ಯಂತ್ರ ಸುಮಾರು ಒಂದು ತಿಂಗಳ ಕಾಲ ಸೊಪ್ಪಿನ ಬೆಟ್ಟದಲ್ಲಿ ಸದ್ದು ಮಾಡಿದ ಪರಿಣಾಮ ಗ್ರಾಮದ ಹಾರನಹಳ್ಳಿ, ಕೆರೆಗದ್ದೆ, ಹಂದಿಜಡ್ಡಿ ಮಜರೆಯ ಬೆಟ್ಟದ ಇಳಿಜಾರಿಗೆ ಅಡ್ಡವಾಗಿ ನೂರಾರು ಅಗಳಗಳು ರೂಪುಗೊಂಡವು.ಅದರ ಫಲ ಎಂಬಂತೆ ಪ್ರಕೃತಿ ಮಡಿಲಲ್ಲಿ ಆಧುನಿಕ ಚಿತ್ತಾರಗಳು ರಂಗು ತುಂಬಿ ಕಂಗೊಳಿಸುತ್ತಿವೆ. ಪ್ರತಿಯೊಂದು ಅಗಳ ಅಥವಾ ನೀರು ಹಿಡಿದಿಡುವ ಹಳ್ಳದಂಥ ರಚನೆ ಸುಮಾರು 8-12 ಸಾವಿರ ಲೀಟರ್ ಸಂಗ್ರಹಣೆಯ ಸಾಮರ್ಥ್ಯ ಹೊಂದಿದೆ. ಮಳೆಯ ಹನಿ ಹನಿಯನ್ನೂ ಬಿದ್ದಲ್ಲೇ ಇಂಗಿಸುವ ಪ್ರಯತ್ನ ಇದು.

ರೈತರ ಬೆಟ್ಟಕ್ಕೆ ಜಾನುವಾರು ಪ್ರವೇಶ ತಡೆಯುವ ಅಗಳಗಳು ಸಹ ನೀರು ಇಂಗಿಸುವ ಗುಂಡಿಗಳಾಗಿವೆ. ಹೀಗಾಗಿ ಕಳವೆ ಬೆಟ್ಟದಲ್ಲಿ ಬಿದ್ದ ಮಳೆ ನೀರಿಗೆ ಓಟದ ಸ್ಪರ್ಧೆಯೇ ಇಲ್ಲ! ಹನಿ ಹನಿ ಕೂಡಿ ತುಂಬಿರುವ ಜಲಪಾತ್ರೆಯಲ್ಲಿ ಮುಖ ನೋಡಿಕೊಳ್ಳುವ ಗಿಡ-ಮರಗಳು ಮಂದಹಾಸ ಬೀರುತ್ತಿವೆ.`ಕೃಷಿಕರ ಸೊಪ್ಪಿನ ಬೆಟ್ಟಗಳಲ್ಲಿ ನೀರು ಇಂಗಿಸುವ ಪ್ರಯತ್ನ ಮಾಡಿದರೆ ಕಣಿವೆಯ ಅಡಿಕೆ ತೋಟದ ನೀರಾವರಿಗೆ ವಿದ್ಯುತ್ ಪಂಪ್ ಬಳಸುವ ಅಗತ್ಯವಿಲ್ಲ. ಇದರಿಂದ ಅಂತರ್ಜಲ ಹೆಚ್ಚುತ್ತದೆ. ಕಳವೆಯ ಗ್ರಾಮದ ಹಾರನಹಳ್ಳಿಯಲ್ಲಿ ಪ್ರಯತ್ನ ಯಶ ಕಂಡಿದೆ~ ಎಂಬುದು ಗ್ರಾಮದ ಶ್ರೀಧರ ಭಟ್ಟ, ನರಸಿಂಹ ದೀಕ್ಷಿತ ಅವರ ಅನುಭವ.

ರಸ್ತೆಗೆ ಮಣ್ಣು ಕಾಡಲ್ಲಿ ಕೆರೆ: ಇದು ಗ್ರಾಮ ಅರಣ್ಯ ಸಮಿತಿ ಪಾಲು ಯೋಜನೆಯಲ್ಲಿ ಪಡೆದ ಹಣದಲ್ಲಿ ನಡೆಸಿದ ಮಾದರಿ ಕಾರ್ಯದ ಒಂದು ಮುಖವಾದರೆ, ಇದರ ಇನ್ನೊಂದು ಮುಖವೇ ಊರಿಗೆ ಬಂದ ರಸ್ತೆಯಿಂದ ಹುಟ್ಟಿಕೊಂಡ ಕೆರೆಗಳ ಕುತೂಹಲದ ಕಥೆ.ಅನೇಕ ವರ್ಷಗಳ ಕೋರಿಕೆ, ಕನಸಿನ ಫಲವಾಗಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಈ ಭಾಗಕ್ಕೊಂದು ರಸ್ತೆ ಮಂಜೂರಿ ಆಯಿತು. ಯೋಜನೆಯಂತೆ ರಸ್ತೆ ನಿರ್ಮಾಣಕ್ಕೆ ಸುಮಾರು 8,600 ಲಾರಿ ಮಣ್ಣು ಅಗತ್ಯವಿತ್ತು.

ಜಲ ಇಂಗಿಸುವ ಗುಂಗಿನಲ್ಲಿದ್ದ ಕಳವೆ ಮಂದಿಗೆ ಥಟ್ಟನೆ ಹೊಳೆದಿದ್ದು ಕೆರೆಯ ಕಲ್ಪನೆ. ರಸ್ತೆ ಸಮೀಪದ ಕಾಡಿನಲ್ಲಿ ಅಗೆದು ಆ ಮಣ್ಣನ್ನು ರಸ್ತೆಗೆ ಸುರಿದರು, ರಸ್ತೆ ಮಾಡಿದರು. ಅರಣ್ಯದಲ್ಲಿ ಅಗೆದ ಜಾಗ ಕೆರೆಯಾಗಿ ಪರಿವರ್ತನೆಗೊಂಡಿತು.ಹೀಗೆ ಏಳು ಕಿಮೀ ರಸ್ತೆಗೆ ಬಳಕೆ ಮಾಡಿದ ಮಣ್ಣಿನಲ್ಲಿ ಒಂದು ರೂಪಾಯಿ ಖರ್ಚಿಲ್ಲದೆ ಐದು ಬೃಹತ್ ಕೆರೆಗಳು ರಚನೆಯಾಗಿವೆ. ಇವುಗಳ ನೀರು ಸಂಗ್ರಹಣಾ ಸಾಮರ್ಥ್ಯ 1.80 ಕೋಟಿ ಲೀಟರ್. ರಸ್ತೆಗೆ ಮಣ್ಣು ಕೊಟ್ಟ ಗುಂಡಿಯಲ್ಲೇ ಈಗ ರಸ್ತೆ ಮೇಲೆ ಹರಿಯುವ ನೀರು ಬಂದು ಸೇರುತ್ತಿದೆ. ಒಂದು ಕೆರೆ ತುಂಬಿ ಉಕ್ಕಿದ ನೀರು ಪಕ್ಕದ ಕೆರೆಗೆ ಧುಮುಕುತ್ತದೆ.ಅಕೇಸಿಯಾಕ್ಕೆ ಇಲ್ಲ ಒಳಪ್ರವೇಶ:
ಜಲಕೊಯ್ಲಿನ ಜೊತೆಗೆ ಅರಣ್ಯ ಅಭಿವೃದ್ಧಿ ಯಶಸ್ಸು ಕಳವೆಯಲ್ಲಿದೆ. ಬೇರೆ ಕಡೆ ನೆಡುತೋಪಿನಲ್ಲಿ ಅಕೇಸಿಯಾ ವಿಜೃಂಭಿಸುತ್ತಿದ್ದರೆ ಕಳವೆಯಲ್ಲಿ ಮಾತ್ರ ಅದಕ್ಕೆ ಬದಲಾಗಿ ಹಣ್ಣು ಹಂಪಲು ಸಸ್ಯಗಳು ನೆಲವೂರಿವೆ.

ಬೆಟ್ಟದ ಬದಿ ಬೇಲಿಗೆ ಮಾತ್ರ ಅಕೇಸಿಯಾ ಗಿಡ. ಒಳಗಿನ 150 ಹೆಕ್ಟೇರ್ ಪ್ರದೇಶದಲ್ಲಿ ಹಲಸು, ಮಾವು, ಮುರುಗಲು, ರಂಜಲು, ನೇರಲು, ಅಂಟವಾಳ, ಉಪ್ಪಾಗೆ, ಸಾಲಧೂಪ, ದಾಲ್ಚಿನ್ನಿ, ಶಿವಣೆ, ಬಿದಿರು, ಬಿಳೆನೇರಲು, ಗೇರು, ಸಿಮಾರುಬಾ ಮತ್ತಿತರ 25 ಜಾತಿಯ ಸಸಿಗಳು ಆಶ್ರಯ ಪಡೆದಿವೆ. ನೀರುಂಡ ನೆಲ ಇವನ್ನು ಮಾರೆತ್ತರಕ್ಕೆ ಬೆಳೆಸಿದೆ.`ಕಳವೆ ಗ್ರಾಮದಲ್ಲಿ 18ಕ್ಕೂ ಹೆಚ್ಚು ವಿವಿಧ ಮಾದರಿಯ ಕಣಿವೆ ಕೆರೆಗಳು ಬರ ನಿರೋಧಕದಂತೆ ಕೆಲಸ ಮಾಡುತ್ತಿವೆ. ಗುಡ್ಡದ ಪ್ರತಿ ಇಳಿಜಾರಿನ ಕೊನೆಯಲ್ಲಿ ಒಂದು ಕೆರೆ ಇದೆ. ಪ್ರತಿ ಬೇಸಿಗೆಯಲ್ಲಿ ಇನ್ನೆರಡು ಕೆರೆಗಳು ರಚನೆಯಾಗುತ್ತವೆ. ಕಣಿವೆ ಕೆರೆಗಳಲ್ಲಿ ಬೇಸಿಗೆಯಲ್ಲೂ ನೀರು ದೊರೆಯುತ್ತಿರುವ ಯಶಸ್ಸು ನಮ್ಮ ಊರಿನಲ್ಲಿದೆ.ಇಲ್ಲಿನ ಪ್ರತಿ ಎಕರೆಯಲ್ಲಿ ವಾರ್ಷಿಕ 85 ಲಕ್ಷ ಲೀಟರ್ ಮಳೆ ಸುರಿಯುತ್ತದೆ. ಈ ಬಾರಿ ಬೆಟ್ಟದಲ್ಲಿ ರೂಪುಗೊಂಡಿರುವ ಜಲ ಚಿತ್ರಗಳು ಮಳೆ ನೀರು ಹಿಡಿದಿಟ್ಟುಕೊಳ್ಳುತ್ತಿವೆ. ಇದರಿಂದ ಕಳವೆಯ ರೈತರ ನೀರಾವರಿ ಪಂಪುಗಳನ್ನು ಮುಂದಿನ ಎರಡು ವರ್ಷ ಬೇಸಿಗೆಯಲ್ಲಿ ಬಳಸುವ ಪ್ರಸಂಗವೇ ಬರಲಿಕ್ಕಿಲ್ಲ.

ಕೆರೆಗಳ ನೀರಿನ ಒರತೆಯೇ ಬೆಳೆಗೆ ಸಾಕಾಗಬಹುದು. ಹಸಿರು ನಕ್ಕರೆ ಜನಜೀವನ ಹಸನಾಗುತ್ತದೆ. ಜಲ ಜಾಗೃತಿಯ ದಾರಿಯಲ್ಲಿ ಕಲಿಕೆ ನಿರಂತರ. ಕಲಿಕೆಯ ಆಸಕ್ತರು ಯಾವತ್ತೂ ಕಳವೆಗೆ ಬರಬಹುದು~ ಎನ್ನುತ್ತಾರೆ ಜಲಕೊಯ್ಲಿನ ಯೋಜನೆ ರೂಪಿಸಿರುವ ಪರಿಸರ ಬರಹಗಾರ ಶಿವಾನಂದ ಕಳವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry