ಗುರುವಾರ , ಮೇ 28, 2020
27 °C

ಕಳಸದಲ್ಲಿ ಮದ್ಯ ವರ್ಜನಾ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: ಪ್ರತಿದಿನವೂ ಬೆಳಗಾಗುತ್ತಲೇ ಮದ್ಯದ ಅಂಗಡಿಗಳಕಡೆಗೆ ತೆರಳುತ್ತಿದ್ದ ಈ ಯುವ ಜನರು ಇದೀಗ ಬೆಳ್ಳಂಬೆಳಿಗ್ಗೆ ಎದ್ದು ವ್ಯಾಯಾಮ, ಯೋಗ, ಧ್ಯಾನದಲ್ಲಿ ನಿರತರಾಗುತ್ತಿದ್ದಾರೆ. ಪ್ರತಿ ರಾತ್ರಿ ಕುಡಿದು ಬಂದು ಹೆಂಡತಿಯರನ್ನು ಬಡಿಯುತ್ತಿದ್ದವರು ಈಗ ತಮ್ಮ ಸತಿಯರೊಂದಿಗೆ  ಸಾಂಸಾರಿಕ ಸುಖದ ನೈಜ ಅನುಭವ ಪಡೆಯುತ್ತಿದ್ದಾರೆ.ಇದು ಕಳಸದ ಮಹಾವೀರ ಭವನದಲ್ಲಿ ಕಳೆದ ಸೋಮವಾರದಿಂದ ಸೃಷ್ಟಿಯಾಗಿರುವ ಚಿತ್ರಣ. ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಮದ್ಯ ವ್ಯಸನವನ್ನು ಬಿಡಿಸುವ ಪ್ರಯತ್ನ ಕಳಸದಲ್ಲಿ ನಡೆದಿದೆ. ಮದ್ಯಕ್ಕೆ ದಾಸರಾಗಿ ಜೀವನದ ಅಂತ್ಯಕ್ಕೆ ತಲುಪಿದ್ದ 90 ಜನರನ್ನು ಶಿಬಿರದಲ್ಲಿ ನೋಂದಾಯಿಸಿ ನಾಲ್ಕೇ ದಿನದಲ್ಲಿ ಈ ಪರಿಯ ಬದಲಾವಣೆ ತಂದಿರುವುದು ನಿಜಕ್ಕೂ ಅಚ್ಚರಿ.8 ದಿನದ ಈ ಶಿಬಿರದಲ್ಲಿ ಪ್ರತಿದಿನ ಬೆಳಿಗ್ಗೆ 4.30ಕ್ಕೆ ಶಿಬಿರಾರ್ಥಿಗಳನ್ನು ನಿದ್ರೆಯಿಂದ ಎಬ್ಬಿಸಲಾಗುತ್ತಿದೆ. ಯೋಗ, ವ್ಯಾಯಾಮದ ನಂತರ ವಠಾರದ ಸ್ವಚ್ಛತೆಯನ್ನು ಕೈಗೊಳ್ಳಲಾಗುತ್ತಿದೆ. ಉಪಹಾರದ ನಂತರ ಆಯಾ ದಿನದಲ್ಲಿ ನಡೆಯುವ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ.ಈ ಹಿಂದೆ ಮದ್ಯ ವ್ಯಸನದಿಂದ ಮುಕ್ತಿ ಹೊಂದಿ ಸಹಜ ಜೀವನ ನಡೆಸುತ್ತಿರುವ ತಲಾ ಇಬ್ಬರು ಪ್ರತಿದಿನ ಶಿಬಿರಾರ್ಥಿಗಳೊಂದಿಗೆ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಮದ್ಯದಿಂದ ಮುಕ್ತರಾಗಲು ಶಿಬಿರಾರ್ಥಿಗಳಿಗೆ ಪ್ರೇರಣೆ ಸಿಗುತ್ತದೆ ಎಂಬುದು ಹೋಬಳಿ ಮೇಲ್ವಿಚಾರಕ ಪಿ.ರಾಘವೇಂದ್ರ ಅಭಿಪ್ರಾಯ.ಮಧ್ಯಾಹ್ನದ ವೇಳೆಗೆ ಶಿಬಿರಾರ್ಥಿಗಳ ಕುಟುಂಬದ ಮಹಿಳೆಯರಿಗೆ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸಿಬ್ಬಂದಿ ಮತ್ತು ಆರೋಗ್ಯ ಶುಶ್ರೂಶಕಿಯರು ಕೌಟುಂಬಿಕ ಸಲಹೆ ನೀಡುತ್ತಾರೆ. ಶಿಬಿರದ ನಂತರವೂ ವ್ಯಸನಮುಕ್ತರನ್ನು ನೋಡಿಕೊಳ್ಳಬೇಕಾದ ಬಗ್ಗೆ ಇಲ್ಲಿ ಸಲಹೆ ನೀಡಲಾಗುತ್ತಿದೆ.ಮಧ್ಯಾಹ್ನ ಊಟದ ನಂತರ ಗಣ್ಯರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ. ಸಂಜೆ ನಡೆಯುವ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಹೋಬಳಿಯ ವಿವಿಧ ಪ್ರಗತಿಬಂಧು ಸಂಘಗಳು ಪ್ರದರ್ಶನ ನೀಡುತ್ತಾ ಮದ್ಯ ವ್ಯಸನಿಗಳ ಮನಸ್ಸು ಸಂತೋಷ ಪಡಿಸುತ್ತಾರೆ. ಮದ್ಯವ್ಯಸನಿಗಳು ಇವರೊಂದಿಗೆ ಕುಣಿದು ಕುಪ್ಪಳಿಸುತ್ತಾರೆ.ಬೆಳ್ತಂಗಡಿಯ ಜನಜೀವನ ವೇದಿಕೆಯ ಶಿಬಿರಾಧಿಕಾರಿ ರಾಘವೇಂದ್ರ ವ್ಯಸನಿಗಳ ಮಸನ್ನು ಪರಿವರ್ತನೆ ಮಾಡುವಲ್ಲಿ ಬಹುತೇಕ ಯಶಸ್ಸು ಕಂಡಿದ್ದಾರೆ. ವೇದಿಕೆಯ ಶಶ್ರೂಶಕಿ ಚಿತ್ರಾ ಶಿಬಿರಾರ್ಥಿಗಳಿಗೆ ಅಗತ್ಯ ವೈದ್ಯಕೀಯ ಸೇವೆ ನೀಡುತ್ತಾ ಮನಗೆದ್ದಿದ್ದಾರೆ.ಶಿಬಿರದ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು ಆಗಾಗ್ಗೆ ಶಿಬಿರಕ್ಕೆ ಭೇಟಿ ನೀಡುತ್ತಾ ಕಾಳಜಿ ವಹಿಸುತ್ತಿದ್ದಾರೆ. ಶಿಬಿರಾರ್ಥಿಗಳ ಜೊತೆಗೆ ಅವರ ಕುಟುಂಬಸ್ಥರಿಗೂ ಊಟೋಪಚಾರ ನಡೆಯುತ್ತಿದ್ದು ಮಹಾವೀರ ಭವನದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.‘ಇಲ್ಲಿ ಬಂದಿದ್ದರಿಂದ ನಾವು ಮದ್ಯ ಬಿಡುವಂತಾಗಿದೆ. ಇನ್ನು ಜೀವಮಾನದಲ್ಲಿ ಹೆಂಡ ಮೂಸಿಯೂ ನೋಡಲ್ಲ’ ಎಂದು ಶಿಬಿರಾರ್ಥಿ ದಿನೇಶ ಹೇಳುತ್ತಾರೆ. ಶಿಬಿರಾರ್ಥಿಗಳ ಪೈಕಿ ಹೆಚ್ಚಿನವರು ಕೃಷಿಕರು, ಕೂಲಿಕಾರ್ಮಿಕರಾದರೆ ಉಳಿದವರು ಗಾರೆ ಮತ್ತು ಮರಗೆಲಸದವರು.ಪ್ರತಿದಿನವೂ 5ರಿಂದ 6 ಬಾಟಲಿ ಮದ್ಯ ಸೇವಿಸುತ್ತಾ 200-250 ರೂಪಾಯಿಯನ್ನು ಇದೇ ಚಟಕ್ಕಾಗಿ ವಿನಿಯೋಗಿಸುತ್ತಿದ್ದವರು ಇದೀಗ ಮದ್ಯದಿಂದ ದೂರಾಗುವುದು ಬಹುತೇಕ ಖಚಿತವಾಗಿದೆ.ಇದರಿಂದ ಅನೇಕ ಸಂಸಾರಗಳಲ್ಲಿ ಮತ್ತೆ ನೆಮ್ಮದಿ ನೆಲೆಸಲಿದೆ ಎಂದು ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶೇಷಗಿರಿ ಹೇಳುತ್ತಾರೆ.ಶಿಬಿರ ನಂತರವೂ 90 ದಿನಗಳವರೆಗೆ ಮದ್ಯವ್ಯಸನ ಬಿಟ್ಟವರ ಯೋಗಕ್ಷೇಮದ ಬಗ್ಗೆ ಗಮನ ಹರಿಸಲಾಗುತ್ತದೆ. ಆನಂತರ ಅವರ ಗುಂಪನ್ನೇ ರಚಿಸಿ ಉಳಿತಾಯ, ಸ್ವ ಉದ್ಯೋಗ ಮುಂತಾದ ಆರ್ಥಿಕ ಚಟುವಟಿಕೆಗೆ ಪ್ರೇರಣೆ ನೀಡಲಾಗುತ್ತದೆ.ಈ ಶಿಬಿರವು ಭಾನುವಾರ ಮುಗಿಯಲಿರುವ ಹಿನ್ನೆಲೆಯಲ್ಲಿ ಹೋಬಳಿಯಲ್ಲಿ ಇನ್ನಷ್ಟು ಇಂತಹುದೇ ಶಿಬಿರಗಳನ್ನು ಆಯೋಜಿಸಬೇಕು ಎಂಬ ಒತ್ತಾಯ ಕುಡಿತದಿಂದ ಬಳಲಿರುವ ಕುಟುಂಬಗಳಿಂದ ಕೇಳಿ ಬರುತ್ತಿದೆ. ಹೋಬಳಿಯ ಎಲ್ಲೆಡೆ ಶಿಬಿರ ನಡೆಸಿದಲ್ಲಿ ನೆರವು ನೀಡಲು ಸಿದ್ಧ ಎಂದು ದಾನಿಗಳು ಪ್ರಕಟಿಸಿದ್ದಾರೆ. 8 ವರ್ಷದ ಹಿಂದೆ ಮದ್ಯಪಾನದಿಂದಾಗಿ ಒಡೆದುಹೋಗಿದ್ದ ಹಿರೇಬೈಲಿನ ಸಂಸಾರವೊಂದು ಬುಧವಾರ ಶಿಬಿರದಲ್ಲಿ ಒಂದಾಗಿದ್ದು ಶಿಬಿರದ ಯಶಸ್ಸಿಗೆ ಹಿಡಿದ ಕೈಗನ್ನಡಿ.

                                       

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.