ಕಳಸದಲ್ಲಿ ರೈತ ಆತ್ಮಹತ್ಯೆ

7

ಕಳಸದಲ್ಲಿ ರೈತ ಆತ್ಮಹತ್ಯೆ

Published:
Updated:

ಕಳಸ: ಹೋಬಳಿಯ ಕೃಷಿಕರನ್ನು ತಲ್ಲಣಗೊಳಿಸಿರುವ ಇನಾಂ ಭೂಮಿಯ ಭೂತ ಸೋಮವಾರ ಮೊದಲ ಬಲಿ ತೆಗೆದುಕೊಂಡಿದೆ. ಒತ್ತುವರಿ ಜಮೀನು ಖುಲ್ಲಾ ಆಗುವ ಭಯದಿಂದ ಕಳಸ ಸಮೀಪದ ದೇವರಗುಡ್ಡದ ಕೃಷಿಕ ಪೌಲ್ ಪಿಂಟೋ (57) ಅವರು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.



  ಭಾನುವಾರ ರಾತ್ರಿ ವಿಷ ಸೇವಿಸಿದ್ದ ಅವರನ್ನು ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದೊಯ್ಯುತ್ತಿದಾಗ ಸಂಸೆ ಸಮೀಪ ಅವರು ಪ್ರಾಣ ಬಿಟ್ಟರು ಎಂದು ಮೃತರ ಮಕ್ಕಳು ತಿಳಿಸಿದ್ದಾರೆ. ಪೌಲ್ ಮಾವಿನಕರೆ ಗ್ರಾಮದ ಸರ್ವೆ ನಂಬರ್ 176ರ 5 ಎಕರೆ ಪ್ರದೇಶದಲ್ಲಿ ಅಪಾರ ಶ್ರಮವಹಿಸಿ ಕಾಫಿ, ಅಡಿಕೆ, ಕಾಳುಮೆಣಸು, ಏಲಕ್ಕಿಯಂತಹ ಬೆಳೆಗಳನ್ನು ಬೆಳೆಯುತ್ತಿದ್ದರು. ಅವರ ಕೃಷಿ ಭೂಮಿಯೆಲ್ಲವೂ ಒತ್ತುವರಿಯೇ ಆಗಿತ್ತು. 



  ಕಳೆದ ತಿಂಗಳ ಅಂತ್ಯದಲ್ಲಿ ಬಂದ ಹೈಕೋರ್ಟ್ ತೀರ್ಪಿನ ನಂತರ ಇನಾಂ ಭೂಮಿ ಖುಲ್ಲಾ ಮಾಡಬೇಕಾದ ಸ್ಥಿತಿ ಬರುತ್ತದೆ ಎಂದು ಪೌಲ್ ಕಳೆದ ಒಂದು ವಾರದಿಂದ ಚಿಂತಿತರಾಗಿದ್ದರು. 30 ವರ್ಷಗಳಿಂದ ಶ್ರಮಪಟ್ಟು ಬೆಳಿಸಿದ್ದ ತೋಟವು ಅರಣ್ಯ ಇಲಾಖೆಯ ಪಾಲಾಗುತ್ತದೆ ಎಂದು ಪೌಲ್ ಬಹಳ ನೊಂದುಕೊಳ್ಳುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಪೌಲ್ ಅವರ ಸಾವಿನೊಂದಿಗೆ  ಇನಾಂ ಭೂಮಿ ವಿವಾದ ತಾರಕಕ್ಕೇರಿದಂತಾಗಿದೆ.



ಅವಸರದ ನಿರ್ಧಾರ ಬೇಡ~: ಪೌಲ್ ಅವರ ಸಾವಿನ ಸುದ್ದಿ ತಿಳಿದು ಅವರ ಅಂತ್ಯ ಸಂಸ್ಕಾರ ನಡೆದ ಸ್ಮಶಾನಕ್ಕೆ ಇನಾಂ ಭೂಮಿ ಸಂತ್ರಸ್ತರ ಹೋರಾಟ ಸಮಿತಿ ಸಂಚಾಲಕ ಎಂ.ಎ.ಶೇಷಗಿರಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹೋರಾಟ ಸಮಿತಿಯು ಕೃಷಿಕರ ಜಮೀನು ಖುಲ್ಲಾ ಮಾಡದಂತೆ ಹೋರಾಟ ರೂಪಿಸಲಿದೆ. ಇನಾಂ ಭೂಮಿಯ ಸಂತ್ರಸ್ತರು ಧೈರ್ಯದಿಂದ ಇರಲು ಅವರು ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry