ಶುಕ್ರವಾರ, ಮೇ 27, 2022
23 °C

ಕಳಸಾ-ಬಂಡೂರಿ ನಾಲೆಗೆ 125 ಕೋಟಿ ವೆಚ್ಚ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಳಸಾ- ಬಂಡೂರಿ ನಾಲಾ ಯೋಜನೆಗಾಗಿ ಸರ್ಕಾರ ಇದುವರೆಗೆ 125.39 ಕೋಟಿ ರೂಪಾಯಿ ವೆಚ್ಚ ಮಾಡಿದ್ದು, ನ್ಯಾಯಮಂಡಳಿ ಮುಂದಿರುವ ಈ ವಿವಾದವನ್ನು ಬಗೆಹರಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಸೋಮವಾರ ವಿಧಾನಪರಿಷತ್‌ಗೆ ತಿಳಿಸಿದರು.ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರು ಕಳಸಾ ಬಂಡೂರಿ ನಾಲೆಗಳನ್ನು ಮಲಪ್ರಭಾ ನದಿಗೆ ಜೋಡಿಸುವ ಸಂಬಂಧದ ವಿಷಯವನ್ನು ಪ್ರಸ್ತಾಪಿಸಿದರು. ಈ ಕುರಿತು ಅರ್ಧ ಗಂಟೆ ಚರ್ಚೆ ನಡೆದ ನಂತರ ಸಚಿವರು ಈ ಉತ್ತರ ನೀಡಿದರು.ಹು- ಧಾ ಅವಳಿ ನಗರ ಮತ್ತು ಇತರ 13 ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸಲು ಕಳಸಾ ನಾಲಾದಿಂದ 3.56 ಟಿಎಂಸಿ ಅಡಿ ಮತ್ತು ಬಂಡೂರು ನಾಲಾದಿಂದ 4 ಟಿಎಂಸಿ ಅಡಿ ನೀರನ್ನು ಮಲಪ್ರಭಾ ನದಿಗೆ ಹರಿಸುವ ಈ ಯೋಜನೆಗೆ ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹಾದಾಯಿ ಜಲವಿವಾದ ನ್ಯಾಯಮಂಡಳಿಯನ್ನು ರಚಿಸಿದೆ. ನ್ಯಾಯಮಂಡಳಿ ಮುಂದೆ ರಾಜ್ಯ ಸರ್ಕಾರ ತನ್ನ ವಾದ ಸಮರ್ಥವಾಗಿ ಮಂಡಿಸುತ್ತಿದೆ ಎಂದರು.ಕಳಸಾ ನಾಲಾ ತಿರುವು ಯೋಜನೆಯ ಕೂಡು ಕಾಲುವೆ ಕಾಮಗಾರಿಯನ್ನು ಅರಣ್ಯೇತರ ಪ್ರದೇಶದಲ್ಲಿ ಕೈಗೆತ್ತಿಕೊಳ್ಳಲು 2006ರ ಅ.9ರಂದು ಸರ್ಕಾರ ಅನುಮೋದನೆ ನೀಡಿದೆ. ಆದರೆ, ಈ ಕಾಲುವೆ ನಿರ್ಮಾಣದ ಕಾಮಗಾರಿ ಪ್ರದೇಶದಲ್ಲಿ ಪದೇ ಪದೇ ಭೂಕುಸಿತ ಉಂಟಾಗುತ್ತಿದೆ. ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಇದಾಗಿರುವುದರಿಂದ ವರ್ಷದಲ್ಲಿ 4 ತಿಂಗಳು ಮಾತ್ರ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ.

ಪದೇ ಪದೇ ಉಂಟಾಗುತ್ತಿರುವ ಭೂಕುಸಿತದ ಹಿನ್ನೆಲೆಯಲ್ಲಿ `ಬಾಕ್ಸ್ ಪುಷಿಂಗ್' ತಂತ್ರಜ್ಞಾನ ಬಳಸಿ ಕಾಮಗಾರಿ ಕೈಗೊಳ್ಳಲಾಗಿದೆ. 2014ಕ್ಕೆ ಅರಣ್ಯೇತರ ಪ್ರದೇಶದಲ್ಲಿ ಕಾಮಗಾರಿ ಮುಗಿಸಿ 1.5 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಕಳಸಾ ನಾಲಾ ಯೋಜನೆಗಾಗಿ 124.82 ಕೋಟಿ ರೂಪಾಯಿ ಮತ್ತು ಬಂಡೂರು ನಾಲಾ ಯೋಜನೆಗಾಗಿ 57 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದರು.ಕಾಮಗಾರಿಯಲ್ಲಿ ಅಕ್ರಮ: ಹೊರಟ್ಟಿ

`ಕಳಸಾ-ಬಂಡೂರಿ ನಾಲಾ ಯೋಜನೆಗೆ ಇದುವರೆಗೆ ವೆಚ್ಚವಾಗಿರುವ 125 ಕೋಟಿ ರೂಪಾಯಿಯಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಈ ಹಣ ದುರುಪಯೋಗ ಆಗಿದೆ' ಎಂದು ಬಸವರಾಜ ಹೊರಟ್ಟಿ ದೂರಿದರು.`ಎಲ್ಲ ಸರ್ಕಾರಗಳು ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆಯೇ ಹೊರತು ಅಭಿವೃದ್ಧಿ ಕೈಗೊಳ್ಳುತ್ತಿಲ್ಲ. ಕಳಸಾ ಬಂಡೂರಿ ನಾಲಾ ಯೋಜನೆ ಬಗ್ಗೆಯೂ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಸಹ ಏನೂ ಮಾಡಲಿಲ್ಲ.

ಈಗಿನ ಸರ್ಕಾರ ಸಹ ಯೋಜನೆ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಿಲ್ಲ' ಎಂದು ಟೀಕಿಸಿದರು. ಸದಸ್ಯ ಎಂ.ಸಿ. ನಾಣಯ್ಯ, `ನ್ಯಾಯಮಂಡಳಿ ನಿರ್ಧಾರ ಕೈಗೊಳ್ಳುವವರೆಗೂ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳಬೇಕು. ಇದುವರೆಗಿನ ಕಾಮಗಾರಿಗೆ ಸುಳ್ಳು ಲೆಕ್ಕ ನೀಡಲಾಗಿದ್ದು, 125 ಕೋಟಿ ರೂಪಾಯಿ ವ್ಯರ್ಥ ಮಾಡಲಾಗಿದೆ' ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.