ಕಳಸ: ಖಗೋಳ ವೀಕ್ಷಣೆ ರೋಮಾಂಚನ

7

ಕಳಸ: ಖಗೋಳ ವೀಕ್ಷಣೆ ರೋಮಾಂಚನ

Published:
Updated:
ಕಳಸ: ಖಗೋಳ ವೀಕ್ಷಣೆ ರೋಮಾಂಚನ

ಕಳಸ: ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ರಾತ್ರಿ 10 ಗಂಟೆಯವರೆಗೂ ಅನೇಕ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಜಮಾಯಿಸಿದ್ದರು. ಅಲ್ಲಿ ಪಾಠ ಪ್ರವಚನ ನಡೆಯುತ್ತಿರಲಿಲ್ಲ. ಬದಲಿಗೆ ಎಲ್ಲರೂ ಆಗಸದತ್ತ ದೃಷ್ಟಿ ಹಾಯಿಸುತ್ತಾ ಖಗೋಳ ವೀಕ್ಷಣೆಯ ವಿಶಿಷ್ಟ ಅನುಭವ ಪಡೆಯುತ್ತಿದ್ದರು.ಕಳಸ ಸರ್ಕಾರಿ ಪ್ರೌಢಶಾಲೆಯ ಪ್ರಗತಿ ವಿಜ್ಞಾನ ಮತ್ತು ಪರಿಸರ ಸಂಘವು ಆಯೋಜಿಸಿದ್ದ ಈ  ಕಾರ್ಯಕ್ರಮದಲ್ಲಿ ಮಂಗಳೂರಿನ ಸೇಂಟ್ ಆಗ್ನೇಸ್ ಕಾಲೇಜಿನ ರಾಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಜಯಂತ್ ಖಗೋಳ ವೀಕ್ಷಣೆ ಬಗ್ಗೆ ಮಾಹಿತಿ ನೀಡಿದರು.ಹಬ್ಬಗಳು, ರಾಶಿ ನಕ್ಷತ್ರ ಮತ್ತು ಕ್ಯಾಲೆಂಡರ್ ಬಗ್ಗೆ ಮಾತ್ರ ತಿಳಿಯುವ ನಾವು ಅದಕ್ಕೆಲ್ಲಾ ಆಕಾಶಕಾಯಗಳೊಂದಿಗೆ ಸಂಬಂಧ ಇದೆ ಎಂಬುದನ್ನು ಮರೆತುಬಿಡುತ್ತೇವೆ ಎಂದು ಜಯಂತ್ ಖಗೋಳ ವೀಕ್ಷಣೆಯ ಮಹತ್ವದ ಬಗ್ಗೆ ತಿಳಿಸಿದರು.ಆಕಾಶ ಎಂಬುದು ಇಲ್ಲ. ಅದು ಗೋಲಾಕಾರದಲ್ಲೂ ಇಲ್ಲ. ಹಾಗೊಂದು ಕಲ್ಪನೆಯ ಮೂಲಕ ಆಕಾಶ ಕಾಯಗಳನ್ನು ನಾವು ವೀಕ್ಷಿಸುತ್ತೇವೆ ಅಷ್ಟೇ. ಗ್ರಹಗಳ ಪಥ ಬದಲಾಗುತ್ತದೆ. ಆದರೆ ನಕ್ಷತ್ರಗಳ ಮತ್ತು ನಕ್ಷತ್ರಪುಂಜಗಳ ಪಥ ಬದಲಾಗುವುದಿಲ್ಲ ಎಂದು ಅವರು ಮಕ್ಕಳಿಗೆ ತಿಳಿಹೇಳಿದರು.ಪಟ್ಟಣದ ಸರ್ಕಾರಿ ಪ್ರೌಢಶಾಲೆ, ಜೆಇಎಂಶಾಲೆ, ಪ್ರಬೋಧಿನಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು, ಗಣಿತ, ವಿಜ್ಞಾನ ಶಿಕ್ಷಕರು ಮತ್ತು ಕೆಲ ಸಾರ್ವಜನಿಕರೂ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ .ಜಯಂತ್, ಆಕಾಶದಲ್ಲಿದ್ದ ಚಂದ್ರನ ಜೊತೆಗೆ ಶನಿಗ್ರಹವನ್ನೂ ತೋರಿಸಿದರು. ಸೈರಸ್ ಎಂಬ ಅತಿ ಪ್ರಖರ ನಕ್ಷತ್ರ, ಮಹಾವ್ಯಾಧ ಎಂಬ ನಕ್ಷತ್ರಪುಂಜವನ್ನು ಮತ್ತು ಮೇಷ, ವೃಷಭ, ಕನ್ಯಾ, ತುಲಾ ಮುಂತಾದ ರಾಶಿಗಳನ್ನು ಕಂಡು ಮಕ್ಕಳು ಪುಳಕಿತರಾದರು.ಅದೇ ವೇಳೆಗೆ ಪ್ರಾಧ್ಯಾಪಕರಲ್ಲಿ ಪ್ರಶ್ನೆ ಕೇಳಲು ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅವಕಾಶ ಇತ್ತು. ಪ್ರಶ್ನೆಗಳಿಗೆ ಉತ್ತರಿಸಿದ ಪ್ರೊ .ಜಯಂತ್, ಹಿಂದಿನ ಕಾಲದಲ್ಲಿ ಹೇಗೆ ಹಬ್ಬಗಳ ಆಚರಣೆ ಆರಂಭವಾಯಿತು. ಭರಣಿ-ಕೃತ್ತಿಕೆಯ ಮಹತ್ವ ಎಷ್ಟು ಎಂಬ ಬಗ್ಗೆ ಮಾಹಿತಿ ನೀಡಿದರು.ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು, ಸೂಪರ್ ಮೂನ್ ಆಗಾಗ್ಗೆ ಸಂಭವಿಸುವ ಸಹಜ ಪ್ರಕ್ರಿಯೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ತಪ್ಪು ಎಂದರು. ಶನಿಗ್ರಹ ಹತ್ತಿರ ಬಂದಿದೆ ಎಂಬ ಪುಕಾರು ಕೂಡ ಅಷ್ಟು ಮಹತ್ವದ್ದಲ್ಲ. ನಿಯಮಿತವಾಗಿ ಆಕಾಶ ವೀಕ್ಷಿಸುವ ಅಭ್ಯಾಸ ಮಾಡಿಕೊಂಡರೆ ಈ ವಿಷಯಗಳೆಲ್ಲ ಸರಳವಾಗಿ ಅರ್ಥವಾಗುತ್ತವೆ ಎಂದರು.ನವೆಂಬರ್‌ನಲ್ಲಿ ತಮ್ಮ ಟೆಲಿಸ್ಕೋಪ್‌ನೊಂದಿಗೆ ಮತ್ತೆ ಇಲ್ಲಿ ಖಗೋಳ ವೀಕ್ಷಣೆ ನಡೆಸುವುದಾಗಿಯೂ ಜಯಂತ್ ಭರವಸೆ ನೀಡಿದರು.

ಉಪಪ್ರಾಂಶುಪಾಲ ಯಜಮಾನ ಆಚಾರ್, ತಾ.ಪಂ. ಸದಸ್ಯ ಶೇಷಗಿರಿ, ಗ್ರಾ.ಪಂ. ಸದಸ್ಯ ರಂಗನಾಥ್, ಶಿಕ್ಷಕರಾದ ಮಾಲತಿ, ರೀನಾ, ಸಿದ್ದೇಗೌಡ, ಅಶೋಕ್,ಲೋಕೇಶ್ ಸತೀಶ್, ಅರವಿಂದ್ ಮತ್ತಿತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry