ಕಳಸ: ರಸ್ತೆ ವಿಸ್ತರಣೆ ಕಾಮಗಾರಿ ಆರಂಭ

7

ಕಳಸ: ರಸ್ತೆ ವಿಸ್ತರಣೆ ಕಾಮಗಾರಿ ಆರಂಭ

Published:
Updated:

ಕಳಸ: ವಿವಾದಕ್ಕೊಳಗಾಗಿ ಮುಂದೂಡಿದ್ದ ಇಲ್ಲಿನ ಮುಖ್ಯ ರಸ್ತೆಯ ವಿಸ್ತರಣೆ ಕಾರ್ಯ ಗುರುವಾರ ಆರಂಭಗೊಂಡಿತು.



ಗ್ರಾಮ ಪಂಚಾಯಿತಿ ಮುಂಭಾಗದಲ್ಲಿದ್ದ 10 ಅಡಿ ಎತ್ತರದ ಕಟ್ಟೆಯನ್ನು 6 ಅಡಿ ಅಗಲಕ್ಕೆ ಕೆಡಹುವ ಕೆಲಸ ಗುರುವಾರ ಬೆಳಿಗ್ಗೆ ಆರಂಭಗೊಂಡಿತು. ಪಂಚಾಯಿತಿ ಅಧ್ಯಕ್ಷ ಸಂತೋಷ್ ಹಿನಾರಿ, ಸದಸ್ಯರಾದ ರಫೀಕ್, ಶಾಹುಲ್, ತಾಲ್ಲೂಕು ಪಂಚಾಯಿತಿ ಸದಸ್ಯ ಶೇಷಗಿರಿ ಸ್ಥಳದಲ್ಲಿದ್ದು ಕಾಮಗಾರಿಗೆ ಬೆಂಬಲ ಸೂಚಿಸಿದರು.



ಮಧ್ಯಾಹ್ನದವರೆಗೂ ನಡೆದ ಕಾರ್ಯಾಚರಣೆಯಲ್ಲಿ ಪಂಚಾಯಿತಿ ಕಚೇರಿ ಮುಂಭಾಗದ ಕಟ್ಟೆ ಪೂರ್ಣ ತೆರವುಗೊಳಿಸಲಾಯಿತು. ಪಂಚಾಯಿತಿ ಕಚೇರಿಗೆ ಪ್ರತ್ಯೇಕ ದಾರಿ ನಿರ್ಮಿಸಲಾಯಿತು. ನಂತರ ಪಕ್ಕದ ನಾಗರಿಕರಿಬ್ಬರು ಜಾಗ ತೆರವು ಕೆಲಸ ಕೈಗೊಂಡರು. ರಸ್ತೆಯ ಎರಡೂ ಬದಿಯ ಎಲ್ಲ ನಿವಾಸಿಗಳೂ ರಸ್ತೆ ಮಧ್ಯ ಭಾಗದಿಂದ ಎರಡೂ ಕಡೆ ತಲಾ 21.5 ಅಡಿ ಜಾಗ ತೆರವುಗೊಳಿಸಿಕೊಡಬೇಕಿದೆ. ಒಂದೆರಡು ದಿನದಲ್ಲೇ ರಸ್ತೆ ಅಂಚಿನಲ್ಲಿ 3 ಅಡಿ ಅಗಲ ಮತ್ತು ಎತ್ತರದ ಕಾಂಕ್ರಿಟ್ ಬಾಕ್ಸ್ ಚರಂಡಿ ಕಾಮಗಾರಿ ಆರಂಭವಾಗಲಿದೆ.



ಚರಂಡಿಗೆ ಹೊಂದಿಕೊಂಡಂತೆ ಕುಡಿಯುವ ನೀರಿನ ಪೈಪ್‌ಲೈನ್ ಮತ್ತು ದೂರವಾಣಿ ಕೇಬಲ್ ಅಳವಡಿಸಲು ಒಂದು ಅಡಿ ಆಳದ ಮತ್ತೊಂದು ಸಣ್ಣ ಚರಂಡಿ (ಡಕ್ಟ್) ನಿರ್ಮಿಸಲಾಗುತ್ತದೆ. ರಸ್ತೆ ಪಕ್ಕ ಎರಡೂ ಬದಿ ಇರುವ ವಿದ್ಯುತ್ ಮಾರ್ಗ ಸ್ಥಳಾಂತರಿಸಲು ಮೆಸ್ಕಾಂ ವರದಿ ಸಿದ್ಧಪಡಿಸುತ್ತಿದೆ. ಒಂದೆರಡು ದಿನದಲ್ಲೇ ನಿಗದಿತ ಠೇವಣಿ ಪಾವತಿಸಿ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.



ಚರಂಡಿ ನಿರ್ಮಾಣ ನಂತರ ಕಾಂಕ್ರಿಟ್ ಮುಚ್ಚಳ ಹಾಕಲಾಗುತ್ತದೆ. ನಂತರ ರಸ್ತೆಗೆ ಕಾಂಕ್ರಿಟ್ ಹಾಕಲಾಗುತ್ತದೆ. 25 ಅಡಿ ಅಗಲದ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಡುವಿನ ಸ್ಥಳದಲ್ಲಿ ಮಣ್ಣು ತುಂಬಿ ಡಾಂಬರು ಹಾಕಲು ಅನುವು ಮಾಡಿಕೊಡಲಾಗುತ್ತದೆ. ಮುಚ್ಚಿದ ಚರಂಡಿ ಬಳಸಿಕೊಂಡು ಪಾದಚಾರಿ ಮಾರ್ಗ ನಿರ್ಮಿಸಬಹುದಾಗಿದೆ ಎಂದು ಗುತ್ತಿಗೆದಾರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry