ಕಳಿಂಗ ರಾಜ

7
ಕಥೆ

ಕಳಿಂಗ ರಾಜ

Published:
Updated:

ಕೈಯೊಳಗಿನ ಕನ್ನಡಿಯನ್ನ ಚಪ್ಪನ್ನ ಚೂರಾಗಿಸುವ ಸಿಟ್ಟು ಅವನ ಎದೆಯೊಳಗಿಂದ ಸುಂಟರಗಾಳಿಯಂತೆ ಪುಟಿದೆದ್ದಿತು. ಜೀವಮಾನದಲ್ಲಿ ಇನ್ನೊಮ್ಮೆ ಕನ್ನಡಿಯನ್ನು ನೋಡಬಾರದೆಂಬ ಜಿಗುಪ್ಸೆಯೂ  ಒತ್ತರಿಸಿ ಬಂತು... ಒಣಗಿದ ಕಪ್ಪು ಕೋಲು ಮುಖ, ಬೋಳಾಗಿರುವ ಮಂಡೆ, ಮೊಖದ ಮೇಲೆ ಮೊಳಕೆಯೊಡೆದ ರಾಶಿ ಮೊಡವೆಗಳು.. ಉಬ್ಬಿದ ಮ್ಲಾನ ಕಣ್ಣುಗಳು.. ತರಚಲು ಹುಬ್ಬುಗಳು..ಕತ್ತಲು ಕವಿದ ಖೋಲಿಯಿಂದ ಲೋಕದ ಬೆಳಕಿಗೆ ಮುಖ ಒಡ್ಡಬಾರದೆಂದು ಸಂಕಲ್ಪಿಸಿದವನಂತೆ ಕಾಳಿಂಗರಾಜ ಹಂಗೆ ಹಾಸಿಗೆಗೆ ಬಿದ್ದ. ಹೊರಗೆ ಸೂರ್ಯ ಜಗತ್ತಿನ ಮುಖಕ್ಕೆ ಬೆಳಕಿನ ಪೌಡರನ್ನು ಲೇಪಿಸಿ ಅದನ್ನು ನಿಗಿನಿಗಿ ಹೊಳೆಯಿಸುತ್ತಿದ್ದ. ವೀರಧ್ವಜವನ್ನು ಹೊತ್ತು ಕುದುರೆಯಂತೆ ಲಕಲಕ ಓಡಾಡುವಂತೆ ಮಾಡಬೇಕಿದ್ದ ಯೌವನ ಕಾಳಿಂಗರಾಜನ ಪಾಲಿಗೆ ಅಸಹನೀಯ ಕೀಳರಿಮೆಯನ್ನು  ತಂದಿತ್ತು. ಅವನ ಸಹಪಾಠಿಗಳು ಅವನನ್ನು, ಅವನ ಆಕಾರವನ್ನು ಕಂಡರೆ ಮಾರು ದೂರ ಜಿಗಿಯುತ್ತಿದ್ದರು. ‘ಬಾಲ್ಡಿ’ ಎಂತಲೋ ‘ಹುಳುಕು ಮಾರಿಯವನೇ’ ಎಂದೋ ಅವ ಅವಮಾನದಿಂದ ಕುಗ್ಗಿಹೋಗುವಂತೆ ಜರಿಯುತ್ತಿದ್ದರು.ಕೊಪ್ಪಳದ ಹತ್ತಿರದ ಕುಗ್ರಾಮದವನಾದ ಕಾಳಿಂಗರಾಜ ಎಸ್.ಎಸ್.ಎಲ್.ಸಿ. ಮುಗಿದ ಬಳಿಕ... ಅವನು  ತುಂಬಾ ಶಾನೆ ಇದ್ದಾನೆಂದು ದೊಡ್ಡ ನಗರದಲ್ಲಿ ದೊಡ್ಡ ಕಾಲೇಜಿನಲ್ಲಿ ಓದಿದರೆ ಮುಂದೆ ಡಾಕ್ಟರೋ ಇಂಜಿನಿಯರೋ ಆಗುತ್ತಾನೆಂದು ಅವನಿಗೆ ಕಲಿಸಿದ ಗುರುವರ್ಯರುಗಳು ಭಾವಿಸಿ ಅವನ ಭವಿಷ್ಯ ರೂಪಿಸುವ ಹೊಣೆಯನ್ನು ತಮ್ಮ ಹೆಗಲಿಗೆ ಹಾಕಿಕೊಂಡವರು. ಕೂಲಿನಾಲಿ  ಮಾಡುವ ಅವನ ಅಪ್ಪಅವ್ವಗಳ ಖುದ್ದು ಭೇಟಿ ಮಾಡಿ ಅವರನ್ನು ಇನ್ನಿಲ್ಲದೆ ಒತ್ತಾಯಿಸಿದರು. ಅವರುಗಳು ‘ನಿಮಗೆ ತಿಳಿದಂಗ ಮಾಡ್ರಪ್ಪಾ’ ಅನ್ನಲು ರಜಾ ದಿನಗಳಲ್ಲಿ ಕುರಿ ಮೇಯಿಸಲು ಅಡವಿಗೆ ಹೋಗಿದ್ದ ಕಾಳಿಂಗರಾಜನನ್ನು ಎಳೆ ತಂದು ಈ ಮಹಾನಗರದ ಪ್ರಸಿದ್ಧ ವಿಜ್ಞಾನ ಕಾಲೇಜಿಗೆ ಪಿ.ಯು.ಸಿ. ಕಲಿಯಲು ಹಚ್ಚಿದರು. ಕಾಲೇಜಿನ ಸಮೀಪ ಚಾಳೊಂದರಲ್ಲಿ ಖೋಲಿ ಹಿಡಿದು ಖಾನಾವಳಿಯೊಂದರಲ್ಲಿ ಕೂಳಿಗೆ ವ್ಯವಸ್ಥೆ ಮಾಡಿದರು. ಈ ಮಹಾ ಪ್ರತಿಭಾವಂತನ ಖರ್ಚುವೆಚ್ಚಗಳನ್ನು ನೋಡಿಕೊಳ್ಳುವ ಹೊಣೆ ಕೂಡ  ಹೊತ್ತರು. ಅದೇನಾಯಿತೋ ಏನೋ ಅವ ಈ ಮಹಾನಗರಕ್ಕೆ ಬಂದ ಕೂಡಲೆ  ಮಂಕಾದ. ಏಕಾಂಗಿಯಾದ. ಕನಸಿನಲ್ಲಿ ಅವನ ಪ್ರೀತಿ ಪಾತ್ರ ಕುರಿಗಳೇ ಬ್ಯಾ ಬ್ಯಾ ಎಂದು ಒದರುತ್ತಾ ಅವನ ಸುತ್ತ ನೆರೆಯುತ್ತಿರುವಂತೆ ಅನಿಸತೊಡಗುತ್ತಿತ್ತು. ಅರ್ಥವಿರದ ಅನವಶ್ಯಕ ಕಿರಿಕಿರಿಗಳು ಅವನ ಮೇಲೆ ಎರಗತೊಡಗಿದವು. ಊರಲ್ಲಿ ಬಾಧಿಸಿದ ದೈಹಿಕ ವಿರೂಪತೆಗಳು, ಮಾನಸಿಕ ದುಗುಡಗಳು, ಅಸುರಕ್ಷಿತ ಆತಂಕಗಳು ರೆಕ್ಕೆಪುಕ್ಕ ಹುಟ್ಟಿಸಿಕೊಂಡು ಅವನನ್ನು ಹಗಲು ಇರಳು ಹರಿದು ತಿನ್ನತೊಡಗಿದವು. ಹದಿನಾರನೆ ವಯಸ್ಸಲ್ಲಿ ಮೈಹೊಗುವ ಯೌವನವು ಮೈ ಹೊಕ್ಕವನ ದೇಹ-ಮನಸ್ಸುಗಳಲ್ಲಿ ವಿಚಿತ್ರ ಕಂಪನಗಳನ್ನು, ಕನಸುಗಳನ್ನು ಬಿತ್ತುವುದೆಂಬ ಪಾರಂಪರಿಕ ನಂಬುಗೆಯು ಕಾಳಿಂಗರಾಜನ ಬದುಕಲ್ಲಿ ಉಲ್ಟಾ ಆಯಿತು.ಕೆಲವೊಮ್ಮೆ ಈ ಯೌವನವು ತನ್ನ ಇನ್ನೊಂದು ವಿಲಕ್ಷಣ ಮುಖ ತೋರಲು ದಿಕ್ಕೇಡಿಗಳನ್ನು, ನಿಷ್ಪಾಪಿಗಳನ್ನು ಆರಿಸಿಕೊಳ್ಳುತ್ತದೆಯೋನೋ ಎಂಬಂತೆ ಅದು ಸಾವಿರಾರು ಹುಡುಗರಲ್ಲಿ ದುರದೃವಶಾತ್ ಕಾಳಿಂಗರಾಜನನ್ನೇ ಆರಿಸಿಕೊಂಡಿತು.

ಮೊದಮೊದಲು ಅದು ಅವನ ಕಪ್ಪು ಮುಖದಲ್ಲಿ ಕೆಂಪು ವರ್ಣದ ವ್ರಣಗಳನ್ನು ನಾಟಿ ಮಾಡಿ, ಬಳಿಕ ಅವು ಮೊಳಕೆಯೊಡೆದು ಮುಖದ ತುಂಬ ಹುಲುಸಾಗಿ ಬೆಳೆಯಲು ಅಗತ್ಯವಾದ ಕೊಬ್ಬನ್ನು ಅವನ ಬಡ ದೇಹದಿಂದ ಬಸಿದು ಅವುಗಳ ಬುಡಗಳಿಗೆ ಹರಡಿತು. ತದನಂತರ ಕಾಳಿಂಗರಾಜ ಈ ಮೊಳಕೆಯ ಕುಡಿಗಳ ಮೇಲೆ ಸದಾ ಬೆರಳಾಡಿಸುವಂತೆ, ಇಲ್ಲ ಚಿವುಟುವಂತೆ ನವೆಯ ಹರುಪು ಎಬ್ಬಿಸಿತು. ಇಷ್ಟು ಸಾಲದೆಂಬಂತೆ ಈ ಮೊಡವೆಗಳನ್ನು ಅವನ ಸರ್ವಾಂಗಗಳ ಮೇಲೂ ಹರಡಿ ರಾಡಿ ಎಬ್ಬಿಸಿತು. ಅವನ ಮುಂದಲೆಯ ಗಪ್ಪುಗೂದಲುಗಳಿಗೆ ತನ್ನ ರಕ್ಕಸ ಕೈ ಇಕ್ಕಿ ಹಗಲು ಇರುಳು ಒಂದೊಂದನ್ನೇ ಎಳೆದೆಳೆದು ನೆಲಕ್ಕೆ ಒಗೆಯಿತು. ಅವನ ಹಣೆ ಹಿಂದ ಹಿಂದಕ್ಕೆ ಸರಿದು ಅದು ನೆತ್ತಿಯನ್ನು ಮುಟ್ಟತೊಡಗಿತು. ಈಗ ಅವನಿಗೆ ಕನ್ನಡಿ ಎಂದರೆ ಭಯ. ರಾತ್ರಿ ತಾನು ಅಕಾಲ ಮುಪ್ಪನ್ನು ಎದುರುಗೊಂಡಂತಹ ಬೆಚ್ಚಿ ಬೀಳಿಸುವ ದುಃಸ್ವಪ್ನಗಳು ಅವನಿಗೆ ಬೀಳತೊಡಗಿದವು.ಕಾಲೇಜಿನಲ್ಲಿ ಕಾಳಿಂಗ ರಾಜನ ಸಹಪಾಠಿಯಾಗಿದ್ದ ಮೋಹನ ನಾಯಕ ಎಂಬ ಕಾರವಾರದ ಕಡೆಯವ ಅವನ ಖೋಲಿಯ ಸಹವಾಸಿ. ಈ ಮೋಹನ ಸೂಕ್ಷ್ಮ ಮನಸ್ಸಿನವನು. ಕಾಳಿಂಗರಾಜನಲ್ಲಿ ಕಾಣಿಸಿಕೊಂಡ ವಿಲಕ್ಷಣ ಪರಿವರ್ತನೆಗಳಿಗೆ ಬೆದರಿ ಅವನ ಸಹವಾಸ ತಪ್ಪಿಸತೊಡಗಿದ. ಮುಂಜಾನೆ ಕಾಳಿಂಗರಾಜ ಎದ್ದು ತನ್ನ ಪಿಸರುಗಣ್ಣು ಒರೆಸಿಕೊಳ್ಳುವ ಮೊದಲೇ, ಈ ದರಿದ್ರದವನ ಮುಖ ನೋಡಲಾರೆ ಎನ್ನುವಂತೆ ಮೋಹನನಾಯಕ ನಾಪತ್ತೆಯಾಗಿ ಬಿಡುತ್ತಿದ್ದ. ರಾತ್ರಿ ಹೊತ್ತಲ್ಲದ ಹೊತ್ತಲ್ಲಿ ರೂಮು ಹೊಕ್ಕು ಮಲಗುತ್ತಿದ್ದ.ತನ್ನೂರಿನಲ್ಲಿ ತುಂಬಾ ಶಾನೆ ಹುಡುಗನೆನಿಸಿಕೊಂಡಿದ್ದ ಕಾಳಿಂಗರಾಜನಿಗೆ ಈ ಊರಲ್ಲಿ ತಾನು ಮಹಾ ಪೆದ್ದನೂ ಯಾರೊಟ್ಟಿಗೂ ಹೊಂದಿಕೊಳ್ಳಲಾರದವನೂ ಎನಿಸಿ ಬರುಬರುತ್ತಾ ತನ್ನ ಬುದ್ಧಿಶಕ್ತಿಯ ಬಗ್ಗೆ ಸಂಶಯಾಕುಲಿತನಾದ. ಸಹಪಾಠಿಗಳ, ಅದರಲ್ಲೂ ಚಂದದ ಹುಡುಗಿಯರ ಕಣ್ಣೋಟ ತಪ್ಪಿಸಿಕೊಳ್ಳಲು ತರಗತಿಯ ಹಿಂದಿನ ಬೆಂಚಿನಲ್ಲಿ ಕೂರತೊಡಗಿದ. ಅಪ್ಪಿತಪ್ಪಿ ಹುಡುಗಿಯರ ದೃಷ್ಟಿ ಮೈಮೇಲೆ ಬಿದ್ದರೆ ನಾಚಿಕೆಯಿಂದ ಮುದುಡಿ ಮುದ್ದೆಯಂತಾಗುತ್ತಿದ್ದ. ದೊಡ್ಡಿಯಂತಿದ್ದ ಆ ತರಗತಿಯಲ್ಲಿ ಲೆಕ್ಚರರು ಮಾಡುತ್ತಿದ್ದ ಪಾಠ ಮತ್ತು ಅವರ ದನಿ ದುರ್ಬಲ ತರಂಗಗಳಂತೆ ಅವನನ್ನು ತಲುಪಲಾಗದೆ ಗಾಳಿಯಲ್ಲಿ ಮಾಯವಾಗುತ್ತಿದ್ದವು. ಅವರು ಬೋರ್ಡ್‌ ಮೇಲೆ ಬಿಡಿಸುತ್ತಿದ್ದ ಡಯಾಗ್ರಂಗಳು, ಲೆಕ್ಕಗಳು ಅಸ್ಪಷ್ಟವಾಗಿ, ಅವನ ಏಕಾಗ್ರತೆ ಮತ್ತು ನೆನಪಿನ ಶಕ್ತಿ ದಿನೇ ದಿನೇ ಕ್ಷೀಣಿಸತೊಡಗಿದವು.ಒಮ್ಮೊಮ್ಮೆ ಅವ ವಾರಗಟ್ಟಲೇ ಕಾಲೇಜಿಗೆ ಹೋಗದೆ ಖೋಲಿಯಲ್ಲಿಯೇ ಬಿದ್ದುಕೊಳ್ಳುತ್ತಿದ್ದ. ಎಚ್ಚರವಾದಗಲೆಲ್ಲಾ ಮೊಳಕೆಯೊಡೆದ ಮೊಡವೆಗಳನ್ನು ಚಿವುಟುತ್ತಾ... ಅವುಗಳ ಮೇಲೆ ಏನೇನೋ ಲೇಹ್ಯಗಳ ಸವರುತ್ತಾ ಕಡೆಗೆ ಅಸ್ವಸ್ಥನಾಗಿ ಮತ್ತೆ ಹಾಸಿಗೆಗೆ ರಾವಿಕೊಳ್ಳುತ್ತಿದ್ದ. ಅವನ ಈ ಪ್ರಂಡ ಉಪಚಾರವನ್ನು ಪ್ರತಿಭಟಿಸಲೆಂಬಂತೆ ಆ ಮೊಡವೆಗಳು ಮತ್ತಷ್ಟು ಉಗ್ರರೂಪ ತಾಳುತ್ತಿದ್ದವು. ಬರು ಬರುತ್ತ ಅವನ ಮುಖಮಂಡಲ ಕಪ್ಪಿಡಿದ ರಾತ್ರಿಯ ನಭೋಮಂಡಲವಾಯ್ತು. ಒಮ್ಮೊಮ್ಮೆ ಎಲ್ಲಿಗಾದರೂ ಓಡಿಹೋಗುವ ಪ್ರಬಲೇಚ್ಛೆ ಅಥವ ಆತ್ಮಹತ್ಯೆಯ ಭಾವಗಳು ಅವನನ್ನು ಹಿಡಿದು ಅಲ್ಲಾಡಿಸತೊಡಗಿದವು.ಈ ಮೊಡವೆಗಳ ಸಂಗಾತಿಯಾಗಿ ಅವನ ಬೋಳು ಮಂಡೆ ಅವನನ್ನು ಕಾಡುವ ಮತ್ತೊಂದು ಪರಮಶತ್ರುವಾಯಿತು. ದಿನವೂ ಉದುರುವ ಕೂದಲುಗಳನ್ನು ತಡೆಯುವ ಉಪಾಯ ಹೊಳೆಯದೆ ಅವ ಹತಾಶೆಯಿಂದ ಒಂದೇ ಸವನೆ ನೆತ್ತಿ ಕಿತ್ತು ಬರುವಂತೆ ಬಾಚಣಿಗೆಯಿಂದ ಬಾಚುತ್ತಿದ್ದ. ಅವನ ಪ್ರತಿ ಬಾಚುವಿಕೆಗೆ ಇಗೋ ತಗೋ ಪ್ರತಿಫಲ ಎನ್ನುವಂತೆ ಅವನ ನೆತ್ತಿ ಉಂಡೆ ಉಂಡೆ ಕೂದಲುಗಳ ಕಕ್ಕುತ್ತಿತ್ತು. ಕಾಳಿಂಗರಾಜ ಈಗ ಹಗಲನ್ನೂ ಬೆಳಗನ್ನು ಕಂಡರೆ ಸಿಡಿಮಿಡಿಯತೊಡಗಿದ. ನಿಶಾಚರನಂತೆ ರಾತ್ರಿ ಎಲ್ಲರ ಕಣ್ಣು ತಪ್ಪಿಸಿ ತನ್ನ ದಿನನಿತ್ಯ ಕರ್ಮಗಳನ್ನು ಪೂರೈಸಿಕೊಳ್ಳುವ ಪ್ರಯತ್ನಕ್ಕೆ ಮುಂದಾದ. ಕತ್ತಲು ಅವನಿಗೆ ತಾಯಿಯಂತೆ ಭಾಸವಾಗತೊಡಗಿತು. ಬೆಳಕಿನಲ್ಲಿ ತಳಮಳಗೊಳ್ಳುತ್ತಿದ್ದ ಅವನ ಮನಸ್ಸು ಇರುಳಲ್ಲಿ ಶಾಂತಗೊಳ್ಳುತ್ತಿತ್ತು.ಇರುಳಲ್ಲಿಯೇ ಅವನು ತನ್ನ ಬಯಕೆಗಳ ಬೇಟೆಗೆ ಹೊರಡುತ್ತಿದ್ದ. ಮೊಡವೆ ಮತ್ತು ಕೇಶ ನಾಶಗಳಿಗೇನಾದರೂ ತಕ್ಕ ಮದ್ದು ಪೇಟೆಯಲ್ಲಿ ದಕ್ಕೀತೆ ಎಂದು ಬೀದಿ ಬೀದಿಗಳ ಔಷಧ ಅಂಗಡಿಗಳ ಭೇಟಿಗೆ ಹೊರಟ. ಆ ಅಂಗಡಿಯವರೋ ಈ ಕ್ಲೇಶಗಳಿಗೆ ತಾವೇ ಔಷಧಿ ಕಂಡುಹಿಡಿದವರಂತೆ ನಾನಾ ನಮೂನಿಯ ಉಪದೇಶಗಳೊಂದಿಗೆ ವಿಚಿತ್ರವಾದ ಘನ–ಸಾಂದ್ರ ಲೇಹ್ಯಗಳನ್ನು ಅವನಿಗೆ ಕೊಟ್ಟು ಯಾವುದನ್ನು ಯಾವುದರೊಂದಿಗೆ ಮಿಶ್ರ ಮಾಡಿ ಯಾವ್ಯಾವಾಗ ನುಂಗಬೇಕು, ಸವರಿಕೊಳ್ಳಬೇಕು, ಹೇಗೆ ಸ್ನಾನ ಮಾಡಬೇಕು ಎಂದೆಲ್ಲಾ ಹೇಳಿ ತಮ್ಮ ಬೋಳು ತಲೆಗಳ ಸವರಿಕೊಳ್ಳುತ್ತ ಅವನಿಗೆ ವಿಷಾದದ ವಿದಾಯ ಹೇಳುತ್ತಿದ್ದರು.ಕಾಳಿಂಗರಾಜ ತಾನು ಕೊಂಡು ತಂದ ಮದ್ದುಗಳನ್ನು ತನ್ನ ಖೋಲಿಯಲ್ಲಿ –ತನ್ನ ಖೋಲಿಯೇ ಒಂದು ದವಾಖಾನೆ ಎಂದು ಭಾವಿಸಿ– ತನ್ನ ಸರ್ವಾಂಗಗಳಿಗೂ ಅವುಗಳನ್ನು ಲೇಪನ ಮಾಡಿದ. ಲೇಪನದ ಪರಿಣಾಮದಿಂದ ಅವನ ಇಡೀ ಖೋಲಿ ವಿಚಿತ್ರ ನಾತದಲ್ಲಿ ಮುಳುಗಿತು. ಖೋಲಿಯಲ್ಲಿದ್ದ ಸರ್ವ ಸಾಮಗ್ರಿಗಳು ಈ ವಾಸನಾ ಪ್ರವಾಹದಲ್ಲಿ ತೇಲಿದವು. ಸರಿರಾತ್ರಿ ರೂಮಿಗೆ ಬರುತ್ತಿದ್ದ ಕಾಳಿಂಗರಾಜನ ಸಹಪಾಠಿ ಮೋಹನನಾಯಕ, ದಿನದಿನಕ್ಕೂ ಉಲ್ಬಣಗೊಳ್ಳುತ್ತಿದ್ದ ಈ ನಾತಕ್ಕೆ ಅವನ ನಾಸಿಕಾಗ್ರ ಮತ್ತು ಅವನ ನವರಂಧ್ರಗಳು ಅಲ್ಲೋಲಕಲ್ಲೋಲಗೊಂಡವು. ಅವನು ಮಲಗಿದ್ದಾಗ ಈ ಭೂತ–ನಾತಗಳು ಅವನ ಕರುಳನ್ನು ಪ್ರವೇಶಿಸಿ ಅವ ಈಗಷ್ಟೇ ತಿಂದು ಬಂದ ಪಡಿಪದಾರ್ಥಗಳನ್ನೆಲ್ಲಾ ಹೊರಗೆಳೆಯುವಂತೆ ಕರುಳಲ್ಲಿ ವಾಂತಿಯ ಬುಗ್ಗೆ ಏಳಿಸುತ್ತಿದ್ದವು. ಇದೇನೆಂದು ಕಣ್ಣು ಬಿಟ್ಟು ಕಾಳಿಂಗರಾಜನ  ಕಡೆ ನೋಡಿದರೆ– ಅವನೋ ಮುಖಕ್ಕೆ, ತಲೆಗೆ, ಮೈಗೆ ಬಣ್ಣದ ಲೇಹ್ಯಗಳನ್ನು ಬಳಕೊಂಡು ಬೂದಿಬಡುಕರ ಹಾಗೆ ಕಂಡು, ಅವನು ನಿದ್ದೆಯಿಲ್ಲದೆ ಹೇಗೊ ಬೆಳಗು ಮಾಡುತ್ತಿದ್ದ. ಹೀಗೆ ಮಾಡಿ– ಮಾಡಲಾಗದೆ ಒಂದು ದಿನ ಹೇಳದೆ ಕೇಳದೆ ಖೋಲಿ ಖಾಲಿ ಮಾಡಿ ಪರಾರಿಯಾದ. ಹೀಗೆ ಪರಾರಿಯಾದ ಮೋಹನ ನಾಯಕ ಕಾಲೇಜು ತುಂಬಾ ಕಾಳಿಂಗರಾಜನ ಪ್ರಯೋಗಗಳ ಕುರಿತು ಬಣ್ಣಬಣ್ಣದ ಕತೆಗಳನ್ನು ಗಾಳಿಯಲ್ಲಿ ಬಲೂನುಗಳಂತೆ ಹರಿಬಿಟ್ಟ.ಕತೆ ಕೇಳಿ ರೋಮಾಂಚನಗೊಂಡ ಮೋಹನ ನಾಯಕನ ಗೆಳೆಯರು ಕಾಳಿಂಗರಾಜನ ಪ್ರಯೋಗಗಳನ್ನು ಕಣ್ಣಾರೆ ಕಾಣಬೇಕೆಂಬ ಚಪಲಕ್ಕೆ ಪಕ್ಕಾಗಿ ಅಪವೇಳೆಗಳಲ್ಲಿ ಕಾಳಿಂಗರಾಜನ ಖೋಲಿಗೆ ಕದ್ದು ನೋಡುವ ಕಣ್ಣುಗಳ ಇಟ್ಟರು. ಹೀಗೆ ಕಣ್ಣು ಇಟ್ಟವರು ಹಿಂಗೆ ವಿವರಗಳ ನೇಯತೊಡಗಿದರು...ಒಬ್ಬ: ನಿನ್ನೆ ಸಂಜಿ ಅವನ್ನ ನೋಡನಾ ಅಂತ ಹೋಗಿದ್ದೆ. ಕದ ಹಾಕಿತ್ತು. ಬಾಗಿಲ ಸಂಧಿಯಲ್ಲಿ ಇಣುಕಿ ನೋಡಿದ್ರೆ... ಕಾಟಿನ ಮ್ಯಾಲ ಕುಕ್ಕರಗಾಲಲ್ಲಿ ಕುಂತಿದ್ದ. ಮುಖಕ್ಕೆ ಎಂಥದ್ದೋ ಹಳದಿ ಬಣ್ಣದ ಪೇಸ್ಟ್ ಬಳಕೊಂಡಿದ್ದ. ಅದರ ಮ್ಯಾಲ ಎರಡೂ ಕೈಗಳಿಂದ ಗಸ ಗಸ ಉಜ್ಜಕ್ಕತ್ತಿದ. ಆಮ್ಯಾಕ ದಡ್ಡಕ್ಕನೆ ಮ್ಯಾಲೆದ್ದ. ಕಿಟಕಿ ಹತ್ತಿರ ನೇತು ಹಾಕಿದ್ದ ಕನ್ನಡಿ ಕೈಯಾಗ ತಕ್ಕೊಂಡ. ಆ ಕನ್ನಡಿನಾ ನೋಡ್ತಾ ನೋಡ್ತಾ.... ನಾನು ಈಗ ಹೆಂಗ ಕಾಣ್ತಿನಿ ಬೋಗಳೊ..ಬೊಗಳೋ ಅಂತ ಬೈಯ್ತಾ ಬೈಯ್ತಾ ಒಮ್ಮಗೆ ಗಹಗಹ ನಕ್ಕು ಹಾಸಿಗಿ ಮ್ಯಾಗ ಮಕ್ಕಾಡೆ ಮಕ್ಕಂಬಿಟ್ಟ...ಇನ್ನೊಬ್ಬ: ನಾನು ಕಾಲೇಜಿಗೆ ಹೋಗುವಾಗ ಅವನ ರೂಮತ್ರ ಹೋಗಿದ್ನೆಪಾ.. ಕದ ಹಾಕಿತ್ತು.. ಕದ ಹಾಕ್ಕೊಂಡು ಈ ನನ್ನ ಮಗ ಒಳಗ ಏನ ಮಾಡಕ್ಕತ್ತಾನ ಅಂತ ಕಿಟಕಿಯಾಗ ಬಗ್ಗಿ ನೋಡಿದೆ.  ಮಹರಾಯ ಕಾಚದಾಗ ನಿಂತಗಂಡವನೆ. ತಲಿ ತುಂ ಎಣ್ಣಿ ಸುರಕ್ಕಂಡು ಅದ್ನ ಗಸ ಗಸ ತಿಕ್ಕಿ ಮಸಾಜ್ ಮಾಡ್ತವನೆ. ಕೂದ್ಲ ಜಗ್ಗಿ ಜಗ್ಗಿ ನೋಡತಾನೆ. ಮತ್ತ ಅಂಗೈಗೆ ಏನೋ ಸುರುವಿಕೊಂಡು ಮುಖಕ್ಕೆ ತೀಡತಾವನೆ. ಕೂದ್ಲೆಲ್ಲಾ ಉದುರಿ ಒಂದು ನಮೂನಿ ಮುದಕನ ಥರ ಕಂಡನಪಾ, ನಂಗೆ ಇವನಿಗೇನಾರ ಹುಚ್ಚು ಗಿಚ್ಚು ಹಿಡಿದೈತೋ ಏನೋ ಅಂತ ಹೆದರಿಕೆ ಬಂದು ಹೊಳ್ಳಿ ಬಂದನಪಾ...ಮತ್ತೊಬ್ಬ: ನಾ ನಿನ್ನಿ ರಾತ್ರಿ ಹನ್ನೊಂದರ ಸುಮಾರಿಗೆ ಹೋಗಿದ್ದೆ ಕಣ್ರೋ. ಮುಖದ ಮ್ಯಾಗ ಏನ ಕಳಾ... ನಕ್ಕಂತ ಕೂತನಾ.. ಹಾಡು ಗುನಗತ್ತಾನ.. ಹೇ ಅವನ ಹಗಲ ರೂಪನಾ ಬ್ಯಾರ–ರಾತ್ರಿ ರೂಪನಾ ಬ್ಯಾರ.. ಅವ ಕನ್ನಡಿ ಹಿಡಕಂಡು ಅದ್ನ ನೋಡ್ತಾ ‘ನಾ ಹುಳುಕು ಮುಖದವನೆಂದು ಕುಹಕದ ನಗೆಯ ಚೆಲ್ಲ ಬೇಡೋ ಗೆಳೆಯಾ/ ಹುಳುಕು ಮುಖದಲ್ಲೊಂದು ದಿನ ಹೊಮ್ಮುವುದು ಹೊಸ ಬೆಳಕು ನೀ ತಿಳಿಯಾ’ ಅಂತ ಹಾಡಿದ.. ಆಮ್ಯಾಕ ತನ್ನ ಬೋಳು ತಲಿ ಸವರಿಕೊಳ್ಳುತ್ತಾ ಲಹರಿಯಿಂದ, ‘ತಲಿ ಮ್ಯಾಗಳ ಕರಿ ಕಪ್ಪು ಕೂದಲೇನು ಶಾಶ್ವತವೋ ತಮ್ಮಾ / ಒಂದು ದಿನ ಅದು ಬಿಳಿಯಾಗಿ ಒಣಗಿದ ಹೊಳೆಯಾಗಿ ಕಣ್ಮರೆಯಾಗುವುದೋ  ತಿಮ್ಮಾ / ತೀಡಿ ತಿಕ್ಕಿ ಬಾಚಿ ಭುಜ ಕುಲುಕಿಸುವ ಡೌಲು ನಿಲ್ಲಿಸೋ / ಮಂಡೆಯೊಳಗಿನ ಸಿರಿಯು ಹೊರಹೊಮ್ಮಿಸೋ ಕಲೆಯ ಕಲಿಯೋ’ ಎಂದು ಆ  ಮತ್ತೊಬ್ಬ ಹಾಡಿ ತೊರಿಸಿದ. ಉಳಿದವರೆಲ್ಲಾ ನಕ್ಕರು.***

ಅಂದು ಕಾಳಿಂಗರಾಜ ಬಹುದಿನದಿಂದ ಕ್ಷೌರಕಾಣದ ತನ್ನ ತಲಿಗೂದಲನ್ನು ಕ್ಷೌರಿಕನಿಗೆ ಒಪ್ಪಿಸಲು ಹಗಲೇ ಹೊರಬೀಳಬೇಕಾಯಿತು. ಹಗಲಿನ ಕಿರಣಗಳು ಮತ್ತು ಮನುಷ್ಯರ ಕಣ್ಣುಗಳು ತನ್ನ ಮೇಲೆ ಬೀಳದಿರಲೆಂದು ತನ್ನ ಮುಖ ಮತ್ತು ತಲಿಯ ಸುತ್ತಾ ಬಿಗಿಯಾದ ಮಪ್ಲರ್‌ಸುತ್ತಿಕೊಂಡ. ಕಣ್ಣುಗಳಿಗಷ್ಟೇ ಎರಡು ಬೆಳಕಿನ ಕಿಂಡಿಗಳನ್ನು ಬಿಟ್ಟುಕೊಂಡು ಬೀದಿಯಲ್ಲಿ ನಡೆಯತೊಡಗಿದ. ಎಷ್ಟೋ ವರ್ಷಗಳನಂತರ ಜೈಲಿನಿಂದ ಬಿಡುಗಡೆಯಾಗಿ ಬಂದ ಕೈದಿಯೊಬ್ಬ ಜಗತ್ತನ್ನು ನೋಡುವ ಹಾಗೆ ಬೆಕ್ಕಸ ಬೆರಗಿನಿಂದ ಇಕ್ಕೆಲ ನೋಡುತ್ತಾ ಹೊರಟ. ಬಿಸಿಲು ಸುರಿಯುತ್ತಿತ್ತು. ಜನ ಯಾವುದೋ ಸೌಂದರ್ಯ ಸ್ಪರ್ಧೆಗೆ ಹೊರಟವರಂತೆ ಸರ್ವಾಲಂಕೃತರಾಗಿ ಬೀದಿಗಳ ತುಂಬಿಕೊಂಡಿದ್ದರು. ಕೇವಲ ಆರು ತಿಂಗಳ ಅವಧಿಯಲ್ಲಿಯೇ ಕಾಳಿಂಗರಾಜನ ಬದುಕಲ್ಲಿ ಕ್ಷಿಪ್ರ ಬೆಳವಣಿಗೆಗಳು ಸಂಭವಿಸಿಬಿಟ್ಟಿದ್ದವು. ಹೊಸ ಕಾಲ, ಹೊಸ ಪರಿಸರಕ್ಕೆ ಸ್ಪಂದಿಸದ ಅವನ ದೇಹ–ಮನಸ್ಸುಗಳು ಅವನನ್ನು ರೌರವ ಏಕಾಂತಕ್ಕೆ ತಳ್ಳಿದ್ದವು

ರಸ್ತೆಯ ಇಕ್ಕೆಡೆ ಮುಗಿಲುದ್ಧ ನಿಂತ ಜಾಹರಾತುಗಳು ಅವನ ಕಣ್ಣ ಸೆಳೆದವು.ಆ ಜಾಹೀರಾತುಗಳ ರೂಪದರ್ಶಿಗಳು ಅವನನ್ನು ನೋಡಿ ನಕ್ಕಂತಾಯಿತು. ಈ ಸುಂದರ ಜಗತ್ತಿನಲ್ಲಿ ನೀನೇಕೆ ಹುಟ್ಟಿರುವೆ ಎಂದು ಹಂಗಿಸಿದಂತಾಗಿ ಅವನಿಗೆ ನಾಚಿಕೆ ಆವರಿಸಿಕೊಂಡಿತು. ಅವರೆಲ್ಲರದು ಎಂತಹ ಅಂಗ ಸೌಷ್ಟವ! ಎಂತಹ ರೂಪಲಾವಣ್ಯ! ಅವರ ಅಕ್ಕಪಕ್ಕ, ಮೇಲೆಕೆಳಗೆ ವಿವಿಧ ಬಗೆಯ ಸೌಂದರ್ಯ ವರ್ಧಕ ಸಾಮಗ್ರಿಗಳ ಪ್ರಚಾರದ ಸ್ಲೋಗನ್ನುಗಳು.  ಕ್ಷುಲ್ಲಕ ಕೂದಲಿನಿಂದ ಹಿಡಿದು, ಮಗುವೊಂದು ಇಸ್ಸಿ ಮಾಡಿದರೆ ಅದನ್ನು ಹೇಗೆ ನಾಜೂಕಾಗಿ ವಿಲೇವಾರಿ ಮಾಡಬಹುದು, ಹುಡುಗಿಯೊಬ್ಬಳು ಮುಟ್ಟಾದರೆ ಅದನ್ನು ಇನ್ನೊಬ್ಬರಿಗೆ ತಿಳಿಯದ ಹಾಗೆ ಹೇಗೆ ಮುಚ್ಚಿಡಬಹುದು ಎಂಬಂತಹ ಪ್ರಚಾರಗಳು... ಒಂದೇ-ಎರಡೇ...ಯೌವನ ಮತ್ತು ಅದರ ಸಂಕೇತವಾದ ಪೌರುಷದ ಮೆರವಣಿಗೆ ದಾರಿಯುದ್ಧ ನಡೆದಿದೆ ಎಂದು ಕಾಳಿಂಗರಾಜನಿಗೆ ಭಾಸವಾಯ್ತು. ವಯೋವೃದ್ಧರನ್ನು, ಅಂಗವಿಕಲರನ್ನು, ಕುರೂಪಿಗಳನ್ನು, ಸಾಧಾರಣ ಮನುಷ್ಯರನ್ನು ಹೆಜ್ಚೆ-ಹೆಜ್ಜೆಗೆ ಭಂಗಿಸುವ, ಕೀಳರಿಮೆ ಹುಟ್ಟಿಸುವ ಜಾಹರಾತುಗಳಿವು ಅನ್ನಿಸಿ ಅವನ ಗಂಟಲು ತುಂಬಿತು. ಕಳಾಹೀನನಾದ ನನಗೆ ಈ ಬಣ್ಣದ ಪ್ರಪಂಚದಲ್ಲಿ ಬದುಕುವ ಅರ್ಹತೆ ಇದೆಯೋ  ಎಂಬ ಸಂಶಯ ಅವನನ್ನು ಅಮರಿಕೊಂಡಿತು.ಕಣ್ಣುಗಳು ಮಂಜಾದವು. ಮನಸ್ಸು ಮುದುಡಿತು. ತಾನು ಹುಟ್ಟಿದ ಊರಲ್ಲಿ ಜನಗಳಿಗೆ ಸೌಂದರ್ಯದ ಕಲ್ಪನೆಯಾದರೂ ಇತ್ತೆ? ತನ್ನ ಹಾಗೆಯೇ ಇರುವ ತನ್ನ ಅಪ್ಪ ಅವ್ವ, ಅಜ್ಜ, ಅಜ್ಜಿ.ತಮ್ಮ, ತಂಗಿ, ಊರ ಮಂದಿ– ಎಷ್ಟು ಸಹಜವಾಗಿ ತಮಗೆ ದೇಹವೊಂದು ಇದೆ ಎಂಬ ಪ್ರಜ್ಞೆ ಇಲ್ಲದೆ ಬದುಕುತ್ತಿದ್ದಾರೆ. ಕಾಲಿಲ್ಲದ ತನ್ನ ಅಂಗವಿಕಲ ಗೆಳೆಯ ಊರಲ್ಲಿ ಎಷ್ಟು ಹೆಮ್ಮೆಯಿಂದ ಸ್ವಾಭಿಮಾನದಿಂದ ಬದುಕುತ್ತಾನೆ. ಅವನಲ್ಲಿ ಜೀವನೋತ್ಸಾಹ ಪುಟಿದೇಳುತ್ತಿರುತ್ತದೆ. ಊರ ಸಾಹುಕಾರನಾದರೂ ಮೂಲಿಮನಿ ಸಿದ್ದಣ್ಣ ಎಲ್ಲರಂಗೆ ಒಂದು ಪಂಜಿ, ಬನೀನಲ್ಲಿಯೇ ಊರ ತುಂಬಾ ಯಾವ ಹಮ್ಮುಬಿಮ್ಮು ಇಲ್ಲದ ಓಡಾಡುತ್ತಾನೆ. ಒಂದು ಪಕ್ಷ ನಾನು ಓದಿಗೆಂದು ಈ ಮಹಾನಗರಕ್ಕೆ ಬರದಿದ್ದರೆ, ನಾನು ಅವರ ಹಾಗೆ ಸಹಜವಾಗಿ ಗಾಳಿಯಲ್ಲಿ ತೇಲುವ ಒಂದು  ಹಗುರ ಎಲೆಯ ಹಾಗೆ.. ನದಿಯಲ್ಲಿ ಹರಿವ ನಿರುಮ್ಮಳ ನೀರ ಹಾಗೆ.. ಯಾವುದೋ ಮರದಲ್ಲಿ ಕೂತು ಹಾಡುವ ಹಕ್ಕಿಯ ಹಾಗೆ ಬದುಕುತ್ತಿದ್ದನಲ್ಲವೆ.. ಈ ನಗರಗಳಿಗೆ ಆತ್ಮವೆ ಇಲ್ಲ.. ದೇಹವೆಂಬ ದೆವ್ವದ್ದೇ ಇಲ್ಲಿ  ಎಲ್ಲಾ ಕಾರುಬಾರು ಅನಿಸಿತವನಿಗೆ.ಕಾಳಿಂಗರಾಜನ ಅಲೋಚನೆಗಳು ಕ್ಷೌರದಂಗಡಿಯ ಸಮೀಪ ಬರುತ್ತಿದ್ದಂತೆ ತಟ್ಟನೆ ನಿಂತವು. ಒಮ್ಮೆಗೇ  ದೇಹಪ್ರಜ್ಞೆ ಜಾಗೃತವಾಯಿತು. ತನ್ನ ಮಫ್ಲರನ್ನು ಇನ್ನಷ್ಟು ಬಿಗಿಗೊಳಿಸಿ– ಎರಡೂ ಕೈಯಿಂದ ಒತ್ತಿ ಹಿಡಕೊಂಡು ಆ ಅಂಗಡಿಯ ಹೊಕ್ಕ. ಅದು ಬಹಳ ಹಳೆಯ ಕಾಲದ ಅಂಗಡಿಯಾದರೂ ಕಾಲಕ್ಕೆ ತಕ್ಕಂತೆ ಆಧುನೀಕರಣಗೊಳ್ಳುತ್ತಾ ಬಂದದ್ದರ ಸೂಚನೆಯನ್ನು ಅದು ಬಿಂಬಿಸುತಿತ್ತು. ಅರವತ್ತರ ಸಮೀಪದ ಮನುಷ್ಯನೊಬ್ಬ ಕ್ಷೌರ ಮಾಡುತ್ತಾ ನಿಂತಿದ್ದವ ಇವನನ್ನು ಕಂಡು, ‘ಒಳಗ ಬರ್ರಿ.. ಕೂರ್ರಿ’ ಅಂದ. ಆತ ಯಾರಿಗೋ ಮುಖಕ್ಷೌರ ಮಾಡುತ್ತಾ ಅದನ್ನು ಮುಗಿಸುವ ಹಂತಕ್ಕೆ ಬಂದಿದ್ದ.ಅಂಗಡಿಯ ಮೇಲಂಚಿನ ಮರದ ಕಟ್ಟುಗಳಲ್ಲಿ ಬಗೆಬಗೆಯ ಕ್ಷೌರ ವಿನ್ಯಾಸಗಳನ್ನು ಬಿಂಬಿಸುವ ಚಿತ್ರಪಟಗಳಲ್ಲಿ ಸಿನಿಮಾ ನಟರು, ಅವರಿಗೆ ಸಾಥ್‌ ಕೊಡುವಂತೆ ನಟನಾಮಣಿಯರು ಇದ್ದರು. ಅವರೆಲ್ಲರು ಸಾರುತ್ತಿದ್ದ ಏಕೈಕ ಸಂದೇಶವೆಂದರೆ– ಎಲ್ಲ ಸೌಂದರ್ಯಕ್ಕಿಂತ ಕೇಶ ಸೌಂದರ್ಯವೇ ಶ್ರೇಷ್ಠ ಎಂಬುದು. ಅದು ಕಾಳಿಂಗರಾಜನ ಮನಸ್ಸಿಗೆ ನಾಟಿ, ಅವ ಅವರೆಲ್ಲರ ಕೇಶಾಲಂಕರದ ವಿನ್ಯಾಸಗಳನ್ನು ನೋಡುತ್ತಾ ಕ್ಲೇಶವದನನಾದ. ತನ್ನ ಮಫ್ಲರಿನಲ್ಲಿ ಅವಿತುಕೊಂಡಿರುವ ಬೋಳುಮಂಡೆ, ಮಂಡೆಯ ಹಿಂದೆ ಬೆಳೆದಿರುವ ಕಾಗೆಯ ಪುಕ್ಕಗಳೋಪಾದಿಯಲ್ಲಿರುವ ಒಣ ಕೂದಲುಗಳು, ಮೈದಾನದಂತಹ ಮುಂದೆಲೆ, ಮುಂದಲೆಯ ಮುಂದೆ ಸುಟ್ಟ ಕರಿಕೆಯಂತೆ ಕವಿದಿರುವ ಮೊಡವೆಗಳು, ಮೊಡವೆಗಳಿಗೆ ಅಂಗಳವಾಗಿರುವ ಕಪ್ಪು ಮುಖ– ಈ ಅವತಾರವನ್ನು ನೋಡಿ ಈ ಕ್ಷೌರಿಕ ನಿನ್ನ ಕ್ಷೌರ ಮಾಡೋಲ್ಲ ಎಂದು ತನ್ನನ್ನೆಲ್ಲಿ ಕತ್ತು ಹಿಡಿದು ಹೊರನೂಕುತ್ತಾನೋ ಎಂಬ ದುಗುಡ ಕಾಳಿಂಗರಾಜನನ್ನು ಕಾಡಿತು. ಈಗಷ್ಟೇ ಮುಖ ಕ್ಷೌರ ಮಾಡಿಸಿಕೊಂಡ ಮನುಷ್ಯ ಕಾಳಿಂಗರಾಜನನ್ನು ಯಾವುದೋ ಕಾಡಿನಿಂದ ತಪ್ಪಿಸಿಕೊಂಡ ಬಂದ ಮೃಗ ಇರಬಹುದೆಂಬಂತೆ ಕಣ್ಣ ಕೀಲಿಸಿ ನೋಡಿ ಮುಖವನ್ನು ಅಸಹ್ಯಕ್ಕೆ ತಿರುಗಿಸಿದ.‘ಬಾ ತಮ್ಮ ಕುಂತ್ಕ’– ಆ ವಯಸ್ಸಾದ ಕ್ಷೌರಿಕ ಕಾಳಿಂಗರಾಜುವನ್ನು ಕುರ್ಚಿಯ ಮೇಲೆ ಕೂರಿಸಿದ. ‘ತಲಿ ಮ್ಯಾಗಳ ಬಟ್ಟಿ ತಗಿಯಪ್ಪಾ... ಏನಾರ ಗಾಯಗೀಯ ಮಾಡಿಕೊಂಡಿಯಾ. ಮಫ್ಲರ್‌ತೆಗೆಯಲು ಹಿಂಜರಿಯುತ್ತಿದ್ದ ಕಾಳಿಂಗರಾಜುವಿನ ತಲಿಯ ಮೇಲಣ ವಸ್ತ್ರವನ್ನು ತಾನೇ ಸಹಜವಾಗಿ ಯಾವ ಮುಜುಗರವಿಲ್ಲದೆ ತೆಗೆದ. ಅವನು ಹಾಗೆ ತಲಿಯ ಮೇಗಣ ವಸ್ತ್ರ ಅನಾವರಣ ಮಾಡುತ್ತಿದ್ದಂತೆ ಕಾಳಿಂಗರಾಜುವಿನ ಅಕರಾಳ ವಿಕರಾಳ ಮಂಡೆಯೂ ಮಾರಿಯ ಮೇಗಣ ವ್ರಣಗಳ ನಗ್ನ ದರ್ಶನವೂ ಆಗಿ ಕ್ಷೌರಿಕನ ಬಾಯಿಂದ ‘ಛೇ ಛೇ’ ಎಂಬ ಉದ್ಗಾರ ತನ್ನಿಂದ ತಾನೆ  ಹೊರಟಿತು. ‘ಎನ ತಮ್ಮ, ಯಾರಿಗಾದರೂ ಚಲೋ ಡಾಕ್ಟರಿಗೆ ತೋರಸಕೋಬಾರದಾಗಿತ್ತ... ಹಿಂಗ ಮುಚ್ಚಕಂಡು ಓಡಾಡಿದ್ರ ಗುಣಾಕ್ಕತ...ಈ ವಯಸ್ಸಲ್ಲಿ ಮೊಕದ ಮ್ಯಾಗ ಗುಳ್ಳಿಗಳು ಬರದು ಸಾಜ ಕಣಪ್ಪಾ.. ಏನು ಕಾಲೇಜಿಗೆ ಹೊಕ್ಕಿಯಾ... ಚಿಂತಿ ಮಾಡಿದರೆ ಕೂದ್ಲ ಉದ್ರತಾವ, ಮುಖದ ಕಳೆ ಕೆಟ್ಟೋಕತಿ.. ಹಿಂಗ ಹೇಳ್ತಿನಿ ಅಂತ ತಪ್ಪ ತಿಳ್ಕಬ್ಯಾಡ. ನಮ್ಮತ್ರ ಕಟಿಂಗ್‌ಗೆ ಬರೋ ಹತ್ತ ಮಂದಿಯಾಗ ಒಬ್ಬರಿಗೋ ಇಬ್ಬರಿಗೋ ಏನಾರ ಚರ್ಮದ ಬ್ಯಾನಿ ಇದ್ದ ಇರತದ. ಈಗ ಬಂದವಲ್ಲ ಮುಖಕ್ಕ.. ಮಾರಿಗ.. ತಲಿಗ ಹಚ್ಚಿಗಳವು.. ಅವುಗಳಿಂದಲೇ ಹಿಂಗೆಲ್ಲಾ ಬ್ಯಾನಿ ಬರೋದು. ದೇವರ ನಮ್ಗ ಚಂದನಾ ಕೊಟ್ಟಿರತನಾ.. ಇನ್ನು ಚಂದ ಬೇಕೂ ಅಂತ ಹೋದರ ಹಿಂಗ ಆಗೋದು. ನನ್ನ ಮಕ್ಕಳು ನನ್ನ ಕೆಲಸನಾ  ಮಾಡ್ತರ. ನಾ ಅವರಿಗೆ ಇದ್ನ ಹೇಳತಿನಿ, ಕೇಳಬೇಕಲ್ಲ, ಹೊಸ ಕಾಲದ ಹುಡುಗರು... ‘ನಿಂಗೇನು ಗೊತ್ತಾಗ್ತದ.. ಜನ ಡೈ ಹಚ್ಚರ್ರಿ ಅಂತಾರ... ಫೇಸ್ ವಾಶ್ ಮಾಡ್ರಿ ಅಂತಾರ.. ಕರ್ಲ ಹೇರ್ ಮಾಡ್ರಿ ಅಂತಾರ.. ಯಾವ ಯಾವ ಸಿನೇಮಾದ ಹೀರೋ ಥರ ಕಟ್ ಮಾಡ್ರಿ ಅಂತಾರ.. ನಾವಿದನ್ನೆಲ್ಲಾ ಮಾಡದಿದ್ರ ಮಂದಿನಾ ನಮ್ಮ ಶಾಪ್‌ಗೆ ಬರಲ್ಲ’ ಅಂತಾರ... ಅಂದ ಆ ಮುದುಕ ಕ್ಷೌರಿಕ– ಗಾಜಿನ ಪೆಟ್ಟಿಗೆಯಲ್ಲಿ ಪೇರಿಸಿಟ್ಟ ನಾನಾ ನಮೂನಿಯ ಡೈಗಳನ್ನು, ಆಯಿಲ್ ಬಾಟಲಿಗಳನ್ನು, ಪೌಡರ್ ಡಬ್ಬಿಗಳನ್ನು, ಸೆಂಟ್ ಬಾಟಲಿಗಳನ್ನು ತೋರಸಿ ‘ನೋಡಪ್ಪಾ ಅವ್ನ’ ಅಂದು ಅತ್ತ ಕೈಮಾಡಿದ.‘ನಮ್ಮ ಕಾಲಾದಾಗ ಇವೆಲ್ಲ ಇದ್ದವೆನಪ್ಪಾ ತಮ್ಮ... ಒಂದು ಮಿಷನ್–ಒಂದು ಕತ್ತರಿ.. ಒಂದು ಕತ್ತಿ.. ಒಂದು ಪಟಗ.. ಇಷ್ಟರಾಗ ನಮ್ಮ ಕೆಲಸ ಮುಗಿತಿತ್ತು.. ಈಗ ಅದೇನೋ ಕೇಶವಿನ್ಯಾಸ, ಕೇಶಾಲಂಕಾರ, ಕೇಶವರ್ಧನ, ಕೇಶ ಮರ್ಧನ... ಏನೇನೋ ಅಂತಾರೆ. ಯೀಗೆನೋ ಬೋಳು ತಲಿಯವರಿಗೆ ಕೂದಲು ನಾಟಿ ಬೇರೆ ಮಾಡ್ತರಂತೆ. ಲಕ್ಷ ಲಕ್ಷರೂಪಾಯಿಗಳ ವಿಗ್ ಬಂದವಂತೆ. ಏನು ಮಾಡಿದರೇನು ಬಂತು... ಹೋಗಬೇಕಾದರ ಯಾವನಾದರು ಈ ಕೂದಲು ಹೊತ್ತುಕೊಂಡು ಹೊಕ್ಕಾನ... ಆವಾಗಿನ ಜನರ ಕೂದ್ಲು ಅರವತ್ತು ವರ್ಷ ಆದ್ರೂ ಬೆಳ್ಳಗಾಗುತ್ತಿರಲಿಲ್ಲ. ಉದುರಿ ಮಂಡೆ ಬೋಳಾಗುತ್ತಿರಲಿಲ್ಲ. ಈಗ ನೋಡಪಾ.. ನಿಮ್ಮಂತ ಹುಡುಗರ ಕೂದ್ಲೆ ಬೆಳ್ಳಗಾಗಕತ್ಯಾವ. ಮಂಡೆ ಬೋಳಾಗಕ್ಕತ್ಯಾವ. ತಡಿ ನೋಡ್ತಾ ಇರು... ಮುಂದ ಸಾಲಿಗೆ ಹೋಗೋ ಹುಡುಗರು ವಿಗ್ ಹಾಕ್ಕೊಂಡೋಗ ಕಾಲ ಬರ್ತದೆ...’ ಅಂತ ನಕ್ಕ ಆ ಮನುಷ್ಯ ಯಾವ ಮುಜುಗರವಿಲ್ಲದೆ ಕಾಳಿಂಗರಾಜನ ತಲಿಯ ಮ್ಯಾಲ ಕೈಯಾಡಿಸಿ... ಮುಖವನ್ನು ನೀರಿನಿಂದ ತೀಡಿ ಒರೆಸಿ ತನ್ನ ಕ್ಷೌರ ಆರಂಭಿಸಿದ.ಆ ಮುದುಕ ಕ್ಷೌರಿಕನ ಮಾತು ಕೇಳುತ್ತಾ ಕೇಳುತ್ತಾ ಕಾಳಿಂಗರಾಜ ಉಲ್ಲಸಿತನಾದ. ಒತ್ತಿ ಹಿಡಿದ ಹಲವು ಭಾವನೆಗಳಿಂದ ಬಿಡುಗಡೆಗೊಂಡು ಹಗುರಾದ. ಮೈ ಭಾರವೆಲ್ಲಾ ಮನದ ಭಾರವೆಲ್ಲಾ ಕರಕರಗಿ ನೀರಂತಾದ. ಎದುರುಗನ್ನಡಿಯಲ್ಲಿ ನಿರ್ಭಿಡೆಯಿಂದ ಮುಖ ನೋಡಿಕೊಂಡ. ಆ ಮುಖದ ಕಪ್ಪನ್ನು, ಮೊಡವೆಗಳನ್ನು ಹಿಮ್ಮೆಟ್ಟಿಸಿ ಒಂದು ಮಂದಹಾಸ ತೇಲಿಬಂತು. ಜೀವನೋತ್ಸಾಹ ಚಿಗುರೊಡೆದು ಅವನ ಕಣ್ಣಲ್ಲಿ ಮಿಂಚು ತರಿಸಿತು.ಮುದುಕ ಕ್ಷೌರಿಕನ ಕೈಯಲ್ಲಿ ಜಾದೂ ಮಾಡೋ ಗೆರೆಗಳಿವೆಯೋನೋ? ಅವ ಎಲ್ಲೆಲ್ಲಿ ಮುಟ್ಟುತ್ತಾನೋ ಎಲ್ಲೆಲ್ಲಿ ಸವರುತ್ತಾನೋ ಎಲ್ಲೆಲ್ಲಿ ತಟ್ಟುತ್ತಾನೋ ಅಲ್ಲಿಂದ ಏನೋ ಮಾತಿನಲ್ಲಿ ಹೇಳಲಾಗದ ವಿಶ್ವಾಸದ ಬೀಜಗಳು ಮೊಳಕೆಯೊಡೆದು ಕಾಳಿಂಗರಾಜನ ನರನಾಡಿಗಳಲ್ಲೆಲ್ಲಾ ಪಸರಿಸಿದಂತಾಯ್ತು. ಮೈ ಭಾರ ಇಳಿದು ಹತ್ತಿಯಂತೆ ಹಗುರವಾದಂತನಿಸಿತು. ಕೂದಲು ಉದುರಿದ ಕಾಳಿಂಗರಾಜನ ಬೋಳು ಹಣೆಯನ್ನು ಸವರುತ್ತಾ ಆ ಕ್ಷೌರಿಕ– ‘ಚಿಂತಿ ಮಾಡಬ್ಯಾಡ ತಮ್ಮ .. ನಮ್ಮ ಹುಡುಗ್ರು ನಿನಗಿಂತ ಸಣ್ಣವರ ಅದಾವು... ಅವಕ್ಕೆ ಈಗಲೇ ಕೂದಲು ಉದುರಿ ಅಜ್ಜನ ನಮೂನಿ ಕಾಣ್ತವ... ಕಾಲ ಹಂಗ ಆಗ್ಯಾವಪ... ಬೇಕಾದರ ಆರ್ಯುವೇದದ ಡಾಕ್ಪರ ಶಾಸ್ತ್ರೀ ಅಂತ ಜನತಾ ಬಜಾರದ ಅಟ್ಟದ ಮ್ಯಾಗ ಅದಾರು... ಅವರ ಕೈ ಗುಣ ಚಲೋ ಐತಿ. ಒಮ್ಮೆ ನೀನು ಹೋಗಿ ಬಾ’ ಅಂದ ಕ್ಷೌರಿಕ, ಕಾಳಿಂಗರಾಜನ ಭುಜ ಚಪ್ಪರಿಸಿ ಅವನ ಮೈ ಮೇಲಿನ ಕೂದಲನ್ನೆಲ್ಲಾ ಜಾಡಿಸಿ ‘ಹೋಗಿ ಬರಪಾ... ನೀ ಓದಕಂತ ಬಂದಿ.. ಮುಖದ ಮ್ಯಾಗ ಗುಳ್ಳಿ ಬಂದ್ವು.. ತಲಿ ಮ್ಯಾಗಳ ಕೂದ್ಲು ಹೋದ್ವು ಅಂತ ಚಿಂತಿ ಮಾಡಕ ಬಂದಿಲ್ಲ’ ಅಂದ ಅವ, ‘ನೋಡು ತಮ್ಮಾ, ಮ್ಯಾಲ ಪೋಟದಾಗ ಅದಾರಲ್ಲ ನೀಟಾಗಿ ಕೂದ್ಲು ಬಿಟ್ಟುಕಂಡು.. ಖರೇವಂದ್ರ ಅವರೆಲ್ಲಾ ವಿಗ್ ಹಾಕ್ಕಂಡರಾ... ಅವರನ್ನ ನೋಡಿ ನಮ್ಮ ಕೂದ್ಲು.. ನಮ್ಮ ಮುಖ ಹಂಗೆ ಫ ಫ ಹೊಳಿಲಿ ಅಂದ್ರ ಹೆಂಗ.. ಈಗ ನಿನ್ನೂ ಹಂಗ ಮೇಕಪ್ ಮಾಡಿ ಫೋಟನಾ ಹೊಡೆದ್ರ ಅವರಕ್ಕಿಂತ ಚಲೋ ಕಾಣ್ತಿ. ಜಗತ್ತಿನಾಗ ನಾಟಕ ನಡೆದೈತಪಾ ನಾಟಕ’ ಅಂತ ಆ ಮುದುಕ ವಿಷಾದದ ನಗೆ ನಕ್ಕ.***

‘ಚೌರದ ಯಮುನಪ್ಪ ಕಳಿಸಿದ್ನಾ’ ಜನತಾ ಬಜಾರಿನ ಅಟ್ಟದ ಮ್ಯಾಲಿನ ಖೋಲಿಯೊಂದರಲ್ಲಿ ಅತಿ ಅರಾಮ ಭಂಗಿಯಲ್ಲಿ ಕೂತಿದ್ದ ಶಾಸ್ತ್ರಿಗಳು ಕಾಳಿಂಗರಾಜನಿಗೆ– ನಿನ್ನ ಬಗ್ಗೆ ನಂಗೆ ಎಲ್ಲ ಗೊತ್ತಿದೆ ಎಂಬಂತೆ ಪ್ರಶ್ನಿಸಿದರು. ಶಾಸ್ತ್ರಿಗಳು ಈ ಕಾಲವನ್ನು ಎಲ್ಲ ಬಗೆಯಲ್ಲಿ ವಿರೋಧಿಸುವ ಪ್ರತೀಕದಂತೆ... ತಮ್ಮ ಉಡುಗೆ ತೊಡುಗೆ, ಮಾತುಕತೆ ವರ್ತನೆಗಳಲ್ಲಿದ್ದಂತೆ ಕಾಳಿಂಗರಾಜುವಿನ ಕಂಡರು. ಒಂದು ಗಾದಿ, ಅದರ ಹಿಂದೆ ಒಂದು ದಿಂಬು, ದಿಂಬಿನ ಹಿಂದೆ ಒಂದು ಹಳೆಗಾಲದ ಮರದ ಕಪಾಟು, ಅದರಲ್ಲಿ ಹಳೆಗಾಲದ ಹಳದಿ ಬಣ್ಣದ ದೊಡ್ಡ ದೊಡ್ಡ ಪುಸ್ತಿಕೆಗಳು, ಮುಂದಿನ ಟೇಬಲ್ ಮೇಲೆ ಒಂದು ತಾಮ್ರದ ಬಿಂದಿಗೆ... ತೆರೆದ ಒಂದು ಪುಸ್ತಕ...ತಮ್ಮ ಎದುರಿನ ಬೆತ್ತದ ಕುರ್ಚಿಯಲ್ಲಿ ಕಾಳಿಂಗರಾಜನನ್ನು ಕೂರಿಸಿ ಅವನ ಮುದುಡಿದ ಮನಸ್ಸು ಹಗುರಾಗಲು ಸುಮ್ಮನೆ ಅವನ ಕುಶಲೋಪರಿಯನ್ನು... ಅವನ ಊರು, ತಂದೆ ತಾಯಿ, ಅವನ ಓದು ಇತ್ಯಾದಿಗಳನ್ನು ಕೇಳುತ್ತಾ ನಡುನಡುವೆ ಅವನ ಮಾತುಗಳನ್ನು ಸಾವಧಾನದಿಂದ ಕೇಳಿ... ‘ಈಗ ನಿನ್ನ ಸಮಸ್ಯ ಹೇಳಪ್ಪಾ.. ನಂಗ ಗೊತ್ತದ ನಿನ್ನ ಸಮಸ್ಯಾ.. ಆದರೂ ನಿಂಗ ನೀ ಬಾಯಿಬಿಟ್ಟ ಹೇಳಿದರ ನಿಂಗ ಸಮಧಾನಕ್ಕತಿ.. ಹಿಂಗ ಹೇಳುವಾಗ ನಿನ್ನ ಸಮಸ್ಯಗ ನಿಂಗ ಉತ್ತರ ಹೊಳಿಬಹುದು...ಹೇಳು’ ಅಂದರು ಶಾಸ್ತ್ರಿಗಳು. ಅವರಿಗೆ ಈಗ ಅರವತ್ತರ ಸಮೀಪ ವಯಸ್ಸು ಇದ್ದೀತು. ಗೌರವ ವರ್ಣ. ದುಂಡು ಮುಖದಲ್ಲಿ ಮಾಗಿದ ಪ್ರಸನ್ನತೆ. ಕಾಳಿಂಗರಾಜ ಆ ಸಮ್ಮೋಹಕ ವಾತಾರಣದ ಆಕರ್ಷಣೆಗೆ ಸಿಕ್ಕಿ ಯಾವುದೋ ಅನೂಹ್ಯ ಶಕ್ತಿಗೆ ಪಕ್ಕಾದವನಂತೆ, ತನ್ನ ತ್ವಚಾ ವೃತಾಂತವನ್ನು, ಕೇಶ ಕಥಾಮೃತವನ್ನು, ಅದರ ಹಿಡಿತಕ್ಕೆ ಸಿಕ್ಕು ಬಳಲಿದ ಪರಿಯನ್ನು, ಅನುಭವಿಸಿದ ಅವಮಾನಗಳನ್ನು ಪರಿಪರಿಯಾಗಿ ನಿವೇದಿಸಿದ. ಆಗಾಗ ಅವನ ಗಂಟಲು ಹಿಡಿಯುತ್ತಿತ್ತು. ಕಣ್ಣಾಲಿಗಳು ತುಂಬಿಬರುತ್ತಿದ್ದವು. ಶಾಸ್ತ್ರಿಗಳು ಅವನು ಹಾಗೆ ನಿವೇದಿಸುವ ಗಳಿಗೆಗಳಲ್ಲಿ ಅವನ ಮುಖನೋಡುತ್ತಾ ಅವನ ಮನಸ್ಸಿನಲ್ಲಿ ಆಗಿರಬಹುದಾದ ಗಾಯಗಳನ್ನು ಊಹಿಸುವ ಪ್ರಯತ್ನ ಮಾಡುತ್ತಿದ್ದರು. ಅವನ ಮಾತು ಮುಗಿದ ಬಳಿಕ ಶಾಸ್ತ್ರಿಗಳು–

‘ನೋಡಪ್ಪಾ ಜೀವನದಲ್ಲಿ ಯಾವುದು ಶಾಶ್ವತ, ಯಾವುದು ಅಶಾಶ್ವತ ಎಂಬುದರ ಬಗ್ಗೆ ನಮಗೆ ಸ್ಪಷ್ಟ ಕಲ್ಪನೆ ಇರಬೇಕು. ನೀನು ಯಾವುದು ಅಶಾಶ್ವತವೋ ಅದನ್ನು ಶಾಶ್ವತ ಅಂತ  ತಿಳಿದಿದಿ. ನೋಡು ನಾವು ಉಸಿರಾಡ್ತಿವೆ ಅಂತೀವಿ. ನಾವೇ ಉಸಿರಾಡಾದಗಿದ್ರೆ ನಾಕು ದಿನ ಉಸಿರಾಡದಂಗ ಇರಬಹುದಲ್ಲ, ಆಗುತ್ತಾ...? ನಾವು ನಿದ್ದಿ ಮಾಡ್ತಿವೆ ಅಂತಿವೆ.. ನಾವಾ ನಿದ್ದಿ ಮಾಡದಾಗಿದ್ರ ನೋಡಣ ನಾಕು ದಿನ ನಿದ್ದೆ ಮಾಡಕಾಗುತ್ತ...? ಇದೆಲ್ಲಾ ಪ್ರಕೃತಿ ಧರ್ಮ, ಶರೀರ ಧರ್ಮ... ಹಂಗ ನಿನ್ನ ಚರ್ಮದ ಕತಿ ಐತಿ.. ನಮ್ಮ ಕೈನಲ್ಲಿ ಒಂದು ಕೂದ್ಲ ಹುಟ್ಟಿಸೋ ಶಕ್ತಿ ಇಲ್ಲ. ಬೀಳೋ ಒಂದು ಕೂದಲನ್ನು ನಿಲ್ಲಿಸೊ ಶಕ್ತಿ ಇಲ್ಲ. ಬಿಳಿಯಾಗೋ ಒಂದು ಕೂದಲನ್ನು ತಡಿಯಾಕೂ ಆಗಲ್ಲ ತಿಳ್ಕ...’....ನೋಡು ಇವೆಲ್ಲ  ಒಂದು ದಿನ ಬಂದವಾ, ಒಂದು ದಿನ ಹೊಕ್ಕಾವ. ಹಲ್ಲು ಬರ್‌ತವಾ ಹೊಕ್ಕಾವ... ಕೂದ್ಲು ಬರ್‌ತಾವ ಹೊಕ್ಕಾವ, ಕಣ್ಣು ಬರ್‌ತವಾ ಹೊಕ್ಕಾವ... ಇದು ಶರೀರದ ಧರ್ಮ. ಇದರ ವಿರುದ್ಧ ಹೊಕ್ಕನಿ ಅಂದ್ರ ಇಲ್ಲದ ಬ್ಯಾನಿ ಸುರುವಾಕ್ಕವ. ಈಗ ಆಗ್ತಾ ಇರೋದು ಇದನಾ. ಅದಕ ಈ ನಮೂನಿ ರೋಗ ಶುರುವಾಗ್ಯಾವ... ನೀ ಸುಮ್ನ ಇದ್ದ ಬಿಡು.. ಸುಮ್ನ ಇರೋದ ಈ ಕಾಲದಾಗ ಬಾಳ ಕಷ್ಟ. ನೀ ಕಲೀಲಿಕ್ಕೆ ಬಂದಿ. ಸೌಂದರ್ಯ ಸ್ಪರ್ಧೆಯೊಳಗೆ ಭಾಗವಹಿಸಲಿಕ್ಕೆ ಬಂದಿಲ್ಲ. ಈಸೋಪ ಗೊತ್ತ... ಅರಿಸ್ಟಾಟಲ್ ಗೊತ್ತ.. ಅಷ್ಟಾವಕ್ರ ಗೊತ್ತ.. ನಮ್ಮ ಅಲ್ಲಮಪ್ರಭು ಗೊತ್ತ... ಅವರೆಲ್ಲಾ ಮಹಾ ಕುರೂಪಿಗಳು... ಆದ್ರ ಅವ್ರ ಮುಂದೆ ರಾಜಮಹಾರಾಜರು ಬಂದು ತಲಿ ತಗ್ಗಿಸುತ್ತಿದ್ದರು. ವಿದ್ಯೆಗೆ ಎಲ್ಲವನ್ನೂ ಬಗ್ಗಿಸುವ ಗುಣ ಅದ. ನೀ ಅದನ್ನು ಬಿಟ್ಟ ಬಿದ್ದೋಗ ಕೂದಲಿಗೆ, ಮಣ್ಣಲ್ಲಿ ಕೊಳೆತು ಹೋಗೋ ಚರ್ಮದ ಬಗ್ಗೆ ಚಿಂತಿ ಮಾಡಕ್ಕತ್ತಿ’ ಎಂದು ಶಾಸ್ತ್ರಿಗಳು ಮಾತಾಡುತ್ತಾ ಹೋದ ಹಾಗೆ ಕಾಳಿಂಗರಾಜನನ್ನು ಕವಿದ ಕಾರ್ಗತ್ತಲು ಕರಗತೊಡಗಿತು.

ಮಾರನೇ ದಿನ ಅವ ತನ್ನ ತರಗತಿಯ ಮುಂದಿನ ಬೆಂಚಿನ ಮೇಲೆ ಕೂತು ಉಪನ್ಯಾಸಕರ ಪಾಠದಲ್ಲಿ ಗರ್ಕನಾಗಿದ್ದ. ತನಗೊಂದು ದೇಹವಿದೆ ಎಂಬುದನ್ನೇ ಅವ ಮರೆತುಬಿಟ್ಟಿದ್ದ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry