ಕಳೆಗುಂದಿದ ಮೈಸೂರು ದಸರಾ

7

ಕಳೆಗುಂದಿದ ಮೈಸೂರು ದಸರಾ

Published:
Updated:

ಮೈಸೂರು: ಕಾವೇರಿ ವಿವಾದ, ಆಡಳಿತ ಬಿಜೆಪಿ ಪಕ್ಷದಲ್ಲಿನ ಭಿನ್ನಾಭಿಪ್ರಾಯ, ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದರ ಕೊರತೆ, ಬಹುತೇಕ ಕಾರ್ಯಕ್ರಮಗಳ ವಿಳಂಬದಿಂದಾಗಿ ಈ ಬಾರಿ ಮೈಸೂರು ದಸರಾ ಕಳೆಗುಂದಿದೆ.ದಸರಾ ಮಹೋತ್ಸವ ಆರಂಭವಾಗಿ ಮೂರು ದಿನಗಳು ಕಳೆದರೂ ಎಲ್ಲಿಯೂ ಜನಸಂದಣಿ ಕಾಣುತ್ತಿಲ್ಲ. ಹೊಟೇಲ್‌ಗಳೂ ಖಾಲಿ ಹೊಡೆಯುತ್ತಿವೆ. ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಚಲನಚಿತ್ರೋತ್ಸವ, ಜಾದು ಪ್ರದರ್ಶನ, ಯುವ ಸಂಭ್ರಮವನ್ನು ಹೊರತು ಪಡಿಸಿ ಉಳಿದ ಕಾರ್ಯಕ್ರಮಗಳಿಗೆ ಜನರು ಬರುತ್ತಿಲ್ಲ.ರಾಜ್ಯ ಬರದಿಂದ ತತ್ತರಿಸುತ್ತಿದ್ದ ಕಾರಣ ದಸರಾವನ್ನು ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿ ರೂ 5.5 ಕೋಟಿಗಳನ್ನು ಬಿಡುಗಡೆ ಮಾಡಿತು. ನಂತರದಲ್ಲಿ ಕಾವೇರಿ  ವಿವಾದ ಭುಗಿಲೆದ್ದಿತು.ಹೀಗಾಗಿ ದಸರಾ ನಡೆಯುತ್ತದೆಯೋ ಎಲ್ಲವೋ ಎನ್ನುವ ಆತಂಕವಿತ್ತು. ಈಗ ಕಾವೇರಿ ಕಾವು ತಣ್ಣಗಾಗಿದೆ. ಆದರೂ ದಸರಾ ಉತ್ಸವದ ಸಂಭ್ರಮ ಕಾಣಿಸುತ್ತಿಲ್ಲ. ಪ್ರವಾಸಿಗರು ನಗರದ ಕಡೆ ಮುಖ ಮಾಡುತ್ತಿಲ್ಲ. ಕಾರ್ಯಕ್ರಮಗಳ ಅವ್ಯವಸ್ಥೆಗೆ ಬೇಸತ್ತ ಸ್ಥಳೀಯರು ಮನೆಯಿಂದ ಹೊರ ಬರುತ್ತಿಲ್ಲ.ಜನರ ಆಕ್ರೋಶ: ಅ.16 ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವ ಉದ್ಘಾಟನೆ ಮಾತ್ರ ನಿಗದಿತ ಸಮಯಕ್ಕೆ ನಡೆಯಿತು. ಇದನ್ನು ಹೊರತು ಪಡಿಸಿದರೆ ಬೇರೆ ಎಲ್ಲ ಕಾರ್ಯಕ್ರಮವೂ ಕನಿಷ್ಠ ಒಂದೂವರೆ ಗಂಟೆಯಾದರೂ ವಿಳಂಬವಾಗಿ ಆರಂಭಗೊಳ್ಳುತ್ತಿದ್ದವು. ಮಕ್ಕಳ ದಸರಾ ಉದ್ಘಾಟನೆ ಭರ್ತಿ ಮೂರು ಗಂಟೆ ಹತ್ತು ನಿಮಿಷ ತಡವಾಗಿ ಉದ್ಘಾಟನೆಗೊಂಡಿತು.ದಸರಾ ಫಲಪುಷ್ಪ ಪ್ರದರ್ಶನ ಉದ್ಘಾಟನೆ ವಿಳಂಬವಾದ ಕಾರಣ ಜನರ ಉಪ ಸಮಿತಿ ಪದಾಧಿಕಾರಿಗಳು ಹಾಗೂ ಅಧಿಕಾರಿಗಳೊಂದಿಗೆ ಜಗಳಕ್ಕೆ ನಿಂತರು. ಬೇರೆ ದಾರಿ ಕಾಣದೆ ಇದ್ದವರೇ ಉದ್ಘಾಟನೆಯನ್ನು ನೆರವೇರಿಸಿದರು. ರಂಗೋತ್ಸವ, ಚಲನಚಿತ್ರೋತ್ಸವ, ರೈತ ದಸರಾ, ಯೋಗ ದಸರಾ ಕಾರ್ಯಕ್ರಮಗಳೂ ವಿಳಂಬವಾದವು.ಸಾಂಪ್ರದಾಯಿಕ ಆಟಗಳನ್ನು ತರಾತುರಿಯಲ್ಲಿ ಆಯೋಜಿಸಿದ್ದರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಆಹಾರ ಮೇಳ ಉದ್ಘಾಟನೆಗೊಳ್ಳುವ ಹೊತ್ತಿಗೂ ಕುಡಿಯುವ ನೀರಿನ ಪೂರೈಕೆ ಇರಲಿಲ್ಲ. ಅರಮನೆ, ಮೃಗಾಲಯದ ನಂತರ ಹೆಚ್ಚು ಜನರನ್ನು ಸೆಳೆಯುವ ದಸರಾ ವಸ್ತುಪ್ರದರ್ಶನ ಬಣಬಣ ಎನ್ನುತ್ತಿದೆ.

 

ಅ.17 ರಂದು ವಿದ್ವತ್ ಗೋಷ್ಠಿಗೆ ಸಚಿವ ರಾಮದಾಸ್ 75 ನಿಮಿಷ ತಡವಾಗಿ ಆಗಮಿಸಿದರು. ಇದರಿಂದ ಕೆರಳಿದ ಅಂತರರಾಷ್ಟ್ರೀಯ ಪರಮಾಣುಶಕ್ತಿ ಏಜೆನ್ಸಿಯ ಸಲಹೆಗಾರ ಡಾ.ಎಂ.ಆರ್.ಶ್ರೀನಿವಾಸನ್ ಅವರು `ರಾಮದಾಸ್ ಏನು ನಮ್ಮಪ್ಪನೇ? ಗಂಟೆಗಟ್ಟಲೆ ಕಾಯೋಕೆ~ ಎಂದು ಸಭಾಂಗಣದ ಹೊರಗೆ ಅಸಮಾಧಾನ ವ್ಯಕ್ತಪಡಿಸಿದರು. ಗುರುವಾರ ಮೈತ್ರಿ ಆಟೊ ಉದ್ಘಾಟನೆ ಸಂದರ್ಭದಲ್ಲಿ ಆಟೊ ಚಾಲಕರು ಪ್ರತಿಭಟನೆ ನಡೆಸಿದರು.ರಾಮದಾಸ್ ಏಕಾಂಗಿ: ದಸರಾ ಮಹೋತ್ಸವ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ರಾಮದಾಸ್ ಬಹುತೇಕ ಏಕಾಂಗಿಯಾಗಿದ್ದಾರೆ. ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್ ದಸರಾಕ್ಕೆ ಬಹಿಷ್ಕಾರ ಹಾಕಿದ್ದಾರೆ.ಇನ್ನೊಬ್ಬ ಶಾಸಕ ಎಚ್.ಎಸ್.ಶಂಕರಲಿಂಗೇಗೌಡ ಯಾವ ಕಾರ್ಯಕ್ರಮದಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಮಂಜುನಾಥ್ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಶಾಸಕರಂತೂ ದಸರಾ ಬದಿಗೆ ಸುಳಿಯುತ್ತಿಲ್ಲ.ದಸರಾ ಉಪಸಮಿತಿಗೆ ಕೆ.ಆರ್.ಕ್ಷೇತ್ರದವರನ್ನೇ ಹೆಚ್ಚಾಗಿ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂಬ ಆರೋಪ ಇದೆ. ಇದೂ ಕೂಡ ಸ್ಥಳೀಯ ಬಿಜೆಪಿ ಮುಖಂಡರು ಸಕ್ರಿಯವಾಗಿ ಭಾಗವಹಿಸದಿರಲು ಕಾರಣವಾಗಿದೆ. ದಸರಾ ವಿಶೇಷ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್ ಕೂಡ ಕಾರ್ಯಕ್ರಮಗಳಿಗೆ ಹಾಜರಾಗುತ್ತಿಲ್ಲ.ಎಲ್ಲ ಉಪ ಸಮಿತಿಯವರು ರಾಮದಾಸ್ ಬರುವ ತನಕ ಕಾರ್ಯಕ್ರಮಗಳನ್ನು ಉದ್ಘಾಟಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ  ಪ್ರತಿ ಕಾರ್ಯಕ್ರಮವೂ ವಿಳಂಬವಾಗಿ ಆರಂಭಗೊಳ್ಳುತ್ತಿವೆ. ವಿವಿಧ ಕಾರ್ಯಕ್ರಮಗಳು ಉದ್ಘಾಟನೆಗೆ ಆಗಮಿಸಬೇಕಿದ್ದ ಸಚಿವರಾದ ಆನಂದ್ ಸಿಂಗ್, ರೇವು ನಾಯಕ ಬೆಳಮಗಿ, ಎಸ್.ಎ. ರವೀಂದ್ರನಾಥ್, ಮುರುಗೇಶ ನಿರಾಣಿ, ಉಮೇಶ್‌ಕತ್ತಿ, ಎಸ್.ಸುರೇಶ್‌ಕುಮಾರ್ ಗೈರು ಹಾಜರಾಗಿದ್ದರು.ಇಂಧನ ಸಚಿವ ಶೋಭಾ ಕರಂದ್ಲಾಜೆ ವಿದ್ಯುದೀಪಾಲಂಕಾರ ಮತ್ತು ಕುಸ್ತಿ ಪಂದ್ಯಾವಳಿ ಉದ್ಘಾಟನೆ ನೆರವೇರಿಸಿದರು. ರಾಜಕೀಯ ಕಾರಣಕ್ಕಾಗಿ ರಾಮದಾಸ್ ಇಲ್ಲಿ ಕಾಣಿಸಿಕೊಳ್ಳಲಿಲ್ಲ.ಅಂಬಾರಿ ಯಾರ ಹೆಗಲಿಗೆ?

ಈ ಬಾರಿ ಅಂಬಾರಿಯನ್ನು ಬಲರಾಮ  ಅಥವಾ ಅರ್ಜುನ ಹೊರುತ್ತಾನೋ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಗೊಂದಲ ಮುಂದುವರಿದಿದೆ. ಆಸ್ಥಾನ ವಿದ್ವಾನ್ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ ಎನ್ನುವುದು ಇನ್ನೂ ಪ್ರಕಟವಾಗಿಲ್ಲ.ರಾಮದಾಸ್ ವಿರುದ್ಧ ಅಸಮಾಧಾನ

`ರಾಮದಾಸ್ ಏನು ನಮ್ಮಪ್ಪನೇ? ಗಂಟೆಗಟ್ಟಲೆ ಕಾಯೋಕೆ~... ಇದು  ಅಂತರರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿಯ ಸಲಹೆಗಾರ ಡಾ. ಎಂ.ಆರ್. ಶ್ರೀನಿವಾಸನ್ ಅವರು ವ್ಯಕ್ತಪಡಿಸಿದ ಅಸಮಾಧಾನದ ವೈಖರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry