ಕಳೆಗೆಡುತ್ತಿದೆ ಐತಿಹಾಸಿಕ ಕೆರೆ!

7

ಕಳೆಗೆಡುತ್ತಿದೆ ಐತಿಹಾಸಿಕ ಕೆರೆ!

Published:
Updated:
ಕಳೆಗೆಡುತ್ತಿದೆ ಐತಿಹಾಸಿಕ ಕೆರೆ!

ರಾಯಚೂರು: ನಗರದ ಐತಿಹಾಸಿಕ ಕೆರೆ ಮಾವಿನ ಕೆರೆ (ಆಮ್ ತಲಾಬ್) ಅಭಿವೃದ್ಧಿಗೊಳ್ಳುವ ಬದಲು ವರ್ಷದಿಂದ ವರ್ಷಕ್ಕೆ ಹದಗೆಡುತ್ತ ಹೋಗುತ್ತಿದೆ. ಸ್ಥಳೀಯ ನಗರಸಭೆ, ಜಿಲ್ಲಾಡಳಿತ ಈ ಐತಿಹಾಸಿಕ ಕೆರೆ ಅಭಿವೃದ್ಧಿಗೆ ಪ್ರತಿ ವರ್ಷವೂ ಏನೆಲ್ಲಾ ಭರವಸೆಗಳನ್ನು ನೀಡುತ್ತವೆ. ಆದರೆ ಭರವಸೆ ಅನುಷ್ಠಾನ ರೂಪ ಪಡೆದಿದ್ದು ಶೂನ್ಯ. ನಗರದ ಹೃದಯ ಭಾಗದಲ್ಲಿ ಇರುವ ಈ ಕೆರೆ ಸುತ್ತಮುತ್ತಲೂ ಗುಡ್ಡ, ಐತಿಹಾಸಿಕ ಕೋಟೆ ಹೊಂದಿದೆ. ಸ್ವಲ್ಪ ಕೆರೆ ಅಭಿವೃದ್ಧಿಗೆ ಗಮನಹರಿಸಿದರೆ ಈ ಐತಿಹಾಸಿಕ ಕೆರೆ ನಗರಕ್ಕೆ ಭೂಷಣವಾಗುತ್ತದೆ.

ಆದರೆ, ಕೆರೆ ಅಭಿವೃದ್ಧಿ ವಿಚಾರವನ್ನು ರಾಜಕೀಯ ಅಸ್ತ್ರವಾಗಿಸಿಕೊಂಡಿರುವ ಜನಪ್ರತಿನಿಧಿಗಳಿಗಾಗಲಿ ಅಥವಾ ಯೋಜನೆ ರೂಪಿಸಿ ಅನುಷ್ಠಾನ ಮಾಡಬಲ್ಲ ಆಡಳಿತ ಯಂತ್ರಕ್ಕೆ ಇದು ಬೇಕಾಗಿಲ್ಲ.ಮಾವಿನ ಕೆರೆ ವಿಸ್ತೀರ್ಣ ಮೂಲತಃ ಸುಮಾರು 170ಕ್ಕೂ ಹೆಚ್ಚು ಎಕರೆ. ಆದರೆ, ಈಗ 125 ಎಕರೆ ಮಾತ್ರ ಉಳಿದಿದೆ. ಅತಿಕ್ರಮಣ ಹಾವಳಿ, ಒತ್ತುವರಿಗೆ ಐತಿಹಾಸಿಕ ಕೆರೆ ನಲುಗಿದೆ. ಪ್ರತಿ ವರ್ಷ ಕೆರೆಯ ನೀರು ಕಡೆಯಾದಂತೆ ಕೆರೆಯ ಜಮೀನು ಕಡಿಮೆಯಾಗುತ್ತಲೇ ಇರುತ್ತದೆ ಎಂಬ ಆರೋಪ ಸಾಮಾನ್ಯವಾಗಿದೆ.

 

ಹೀಗಾಗಿ ಈ ಕೆರೆ ಈಗ ಘನತ್ಯಾಜ್ಯ ವಸ್ತು, ಸತ್ತ ಹಂದಿ, ನಾಯಿ, ಥರ್ಮಕೋಲ್, ಕಸದ ರಾಶಿಯನ್ನೇ ತಂದು ಸುರಿಯುವ ತಿಪ್ಪೆ ಗುಂಡಿಯಂತಾಗಿದೆ. ನಗರದ ಕೆಲ ಬಡಾವಣೆಯ ಚರಂಡಿ ನೀರು ಈ ಕೆರೆ ಸೇರುತ್ತಿದೆ. ಈ ಎಲ್ಲ ಸ್ಥಿತಿಯಿಂದ ಈ ಕೆರೆ ನಾಗರಿಕ ಬಳಕೆಗೆ ಅಯೋಗ್ಯ ಎಂದು ನಿರ್ಧರಿಸಿಯಾಗಿದೆ. ಕೆರೆಯ ದಂಡೆಯ ಮೇಲೆ ನಗರಸಭೆ ಉದ್ಯಾನವನ ನಿರ್ಮಿಸಿದೆ. ಕುಳಿತುಕೊಳ್ಳಲು ಆಸನಗಳನ್ನೂ ಹಾಕಲಾಗಿದೆ.

 

ಕೆರೆಯಲ್ಲಿ ತ್ಯಾಜ್ಯ ವಸ್ತು ಹೆಚ್ಚಾಗಿರುವದು, ದುರ್ವಾಸನೆ ಬೀರುತ್ತಿರುವದು, ಸ್ವಚ್ಛ ನೀರು ಹಸಿರು ರೂಪ ಪಡೆದಿರುವುದು ಈ ಕೆರೆ ದಂಡೆಯ ಉದ್ಯಾನವನಕ್ಕೆ ನಾಗರಿಕರನ್ನು ಬರದಂತೆ ಮಾಡಿವೆ.

 

ಖಾಸಬಾವಿ ಗಲೀಜು ನೀರೂ ಮಾವಿನ ಕೆರೆಗೆ: ಮಾವಿನ ಕೆರೆ ಪಕ್ಕವೇ ಒಂದು ಐತಿಹಾಸಿಕ ಬಾವಿ ಇದೆ. ಅದರ ಹೆಸರು ಖಾಸ ಬಾವಿ. ಗಣೇಶ ಹಬ್ಬದಲ್ಲಿ ನಗರದ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಗಣೇಶ ಮೂರ್ತಿ ಈ ಬಾವಿಯಲ್ಲಿಯೇ ವಿಸರ್ಜನೆಗೊಳ್ಳುತ್ತವೆ. ಹದಗೆಟ್ಟು, ಹೊಲಸಿನಿಂದ ಈ ಬಾವಿ ಕೂಡಿತ್ತು. ಅಕ್ಕಪಕ್ಕದ ಬಡಾವಣೆಯ ಒಳಚರಂಡಿ ಲೈನ್ ಕೂಡ ಈ ಬಾವಿ ಸಂಪರ್ಕ ಪಡೆದುಕೊಂಡಿದ್ದವು.

 

ನಿರಂತರ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ಈ ಖಾಸ ಬಾವಿ ಸ್ವಚ್ಛಗೊಳಿಸಿ ಅಭಿವೃದ್ಧಿ ಪಡಿಸಲು ಮುಂದಾಗಿದೆ. ಆದರೆ, ಈ ಬಾವಿ ಸ್ವಚ್ಛಗೊಳಿಸುವ ಕಾಳಜಿಯಲ್ಲಿ ಇದರಲ್ಲಿನ ಗಲೀಜು ನೀರನ್ನು ಪಕ್ಕದ ಮಾವಿನ ಕೆರೆಗೆ ಕಾಂಪ್ರೆಸರ್ ಮೂಲಕ ಹರಿಸಲಾಗುತ್ತಿದೆ. ಬಾವಿ ನೀರು ಹೊರ ಹಾಕದೇ ಬಾವಿ ಸ್ವಚ್ಛ ಅಸಾಧ್ಯ. ಹೀಗಾಗಿ ಈ ಮೂಲಕ ನೀರು ಹೊರ ಬಿಡಲಾಗುತ್ತದೆ ಎಂಬ ಸ್ಪಷ್ಟನೆ ದೊರಕುತ್ತದೆ. ಆದರೆ, ಒಂದು ಬಾವಿ ಸ್ವಚ್ಛಗೊಳಿಸುವ ನೆಪದಲ್ಲಿ ಕೆರೆಯನ್ನೇ ಮಲೀನಗೊಳಿಸಿದರೆ ಹೇಗೆ ಎಂದು ಪ್ರಶ್ನಿಸಬೇಕಾದ ನಗರಸಭೆ ಆಡಳಿತ ಮಂಡಳಿ, ನೈರ್ಮಲ್ಯ ಅಧಿಕಾರಿಗಳು ಕಣ್ತೆರೆದು ನೋಡಿಲ್ಲ.

 

ಎಡಿಬಿ ಯೋಜನೆಯಡಿ ಅಭಿವೃದ್ಧಿ: ನಗರಸಭೆ ಏಷಿಯನ್ ಡೆವಲಪ್‌ಮೆಂಟ್ ಅಭಿವೃದ್ಧಿ ಸಹಾಯಧನ ಯೋಜನೆಯಡಿ ಈ ಕೆರೆ ಅಭಿವೃದ್ಧಿಗೆ ನಗರಸಭೆ ಹಿಂದಿನ ಅಧ್ಯಕ್ಷ ಎ ಮಾರೆಪ್ಪ ಅವರ ಅಧ್ಯಕ್ಷ ಅವಧಿಯಲ್ಲಿ ರೂ.2 ಕೋಟಿ ಮೊತ್ತದ ಯೋಜನೆ ರೂಪಿಸಿತ್ತು. ಈ ಕೆರೆ ಅಭಿವೃದ್ಧಿ ಪ್ರಸ್ತಾವನೆಗೆ ಒಪ್ಪಿಗೆಯೂ ದೊರಕಿದೆ. ಆದರೆ ಕಾಮಗಾರಿ ಮಾತ್ರ ಆರಂಭವಾಗಿಲ್ಲ.

ಎಡಿಬಿ ನೆರವಿನ ಯೋಜನೆಯಡಿ ಮೊದಲ ಹಂತದಲ್ಲಿ ಕುಡಿಯುವ ನೀರು, ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.  ಎರಡನೇ ಹಂತದಲ್ಲಿ ಕೆರೆ ಅಭಿವೃದ್ಧಿ ಕೈಗೊಳ್ಳುವ ಬಗ್ಗೆ ನಗರಸಭೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದ್ದರೂ ಈ ಕುರಿತು ಉತ್ಸುಕತೆ ಮಾತ್ರ ಕಂಡು ಬರುತ್ತಿಲ್ಲ ಎಂಬುದು ನಗರದ ಜನತೆಯ ಅಸಮಾಧನಕ್ಕೆ ಕಾರಣವಾಗಿದೆ.

 

ಅಲ್ಲದೇ, ಕೆಲ ತಿಂಗಳು ಹಿಂದೆ ನಗರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು ಈ ಕೆರೆ ದಂಡೆಯ ಮೇಲೆ ವಾಯುವಿಹಾರ ಮಾಡಿದ್ದರು. ಈ ಸಂದರ್ಭದಲ್ಲಿ ‘ಗುಲ್ಬರ್ಗ ಕೆರೆ ಅಭಿವೃದ್ಧಿ’ ಕಾರ್ಯ ಚೆನ್ನಾಗಿದೆ. ಅದೇ ಮಾದರಿಯಲ್ಲಿ ಈ ಕೆರೆ ಅಭಿವೃದ್ಧಿಪಡಿಸಿ. ಹಣ ದೊರಕಿಸುತ್ತೇನೆ ಎಂದು ಜಿಲ್ಲಾಧಿಕಾರಿ ವಿ ಅನ್ಬುಕುಮಾರ ಅವರಿಗೆ ಸೂಚಿಸಿದ್ದರು. ಹೀಗೆ, ನಗರಸಭೆ, ಜಿಲ್ಲಾಡಳಿತ, ಮುಖ್ಯಮಂತ್ರಿಯಾದಿಯಾಗಿ ಕೆರೆ ಅಭಿವೃದ್ಧಿ ಬಗ್ಗೆ ಕಾಳಜಿ ಮಾತುಗಳು ಹರಿದು ಬರುತ್ತವೆ. ಈ ಕಾಳಜಿಪೂರ್ವಕ ಮಾತುಗಳು ಅನುಷ್ಠಾನಕ್ಕೆ ಬಂದಲ್ಲಿ ಈ ‘ಆಮ್ ತಲಾಬ್’ ಗುಲ್ಬರ್ಗದ ಅಪ್ಪನಕೆರೆಗಿಂತ ಸುಂದರವಾಗಿ ಗೋಚರಿಸಬಲ್ಲದು. ಆ ಕಾರ್ಯ ಎಂದು ಆಗುವುದೋ ಕಾಯ್ದು ನೋಡಬೇಕಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry