ಕಳೆದವು 5 ವರ್ಷ; ಕಳೆಯಲಿಲ್ಲ ಕಡುಕಷ್ಟ

7

ಕಳೆದವು 5 ವರ್ಷ; ಕಳೆಯಲಿಲ್ಲ ಕಡುಕಷ್ಟ

Published:
Updated:

ತುಮಕೂರು: ನಗರದ ಖಾಸಗಿ ಬಸ್ ನಿಲ್ದಾಣದ ಅಂಗಡಿ ಮಳಿಗೆಗಳನ್ನೆ ನಂಬಿಕೊಂಡು ಜೀವನ ನಡೆಸುತ್ತಿದ್ದ ನೂರಕ್ಕೂ ಹೆಚ್ಚು ಕುಟುಂಬಗಳು ನೆಮ್ಮದಿ ಕಳೆದುಕೊಂಡು ಕಳೆದ ಶುಕ್ರವಾರಕ್ಕೆ ಸರಿಯಾಗಿ ಐದು ವರ್ಷಗಳು ತುಂಬಿವೆ.ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ತಾತ್ಸರದಿಂದಾಗಿ ಇನ್ನೂ ಶಾಪವಿಮೋಚನೆಯಾಗದೆ ಈ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ. ಅಂಗಡಿ ಮಳಿಗೆಗಳು ಸಿಗದೆ ಇಂದಿಗೂ ಬದುಕು ಕಟ್ಟಿಕೊಳ್ಳಲಾಗದೆ ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕ ಎಸ್.ಶಿವಣ್ಣ ಅವರು ತುರ್ತು ಗಮನ ಹರಿಸಿ ಸಮಸ್ಯೆ ಬಗೆಹರಿಸದಿದ್ದರೆ ಈ ಬಾರಿ ಜಿಲ್ಲಾ ಉತ್ಸವದ ದಿನ ಬೃಹತ್ ಪ್ರತಿಭಟನೆ ನಡೆಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಜತೆಗೆ ಹೋರಾಟಕ್ಕೆ ಬಿರುಸು ನೀಡಲು ಹೈಕೋರ್ಟ್ ಮೆಟ್ಟಿಲೇರುವ ತಯಾರಿ ನಡೆಸಲಾಗುತ್ತಿದೆ ಎಂದು ಈ ಹಿಂದಿನ ಖಾಸಗಿ ಬಸ್ ನಿಲ್ದಾಣದ ಅಂಗಡಿ ಮಳಿಗೆಗಳ ಗುತ್ತಿಗೆದಾರರ ಸಂಘದ ಅಧ್ಯಕ್ಷ ಫಯಾಜ್ ವುಲ್ಲಾ ಖಾನ್ ಮತ್ತು ಕಾರ್ಯದರ್ಶಿ ಎನ್.ಎಸ್.ಪಂಡಿತ್ ಜವಹರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.ಜಿಲ್ಲಾ ಸಂಸ್ಕೃತಿ ಉತ್ಸವವೆಂದರೆ ಮನೆಮನೆಯಲ್ಲೂ ಹಬ್ಬದ ಸಂಭ್ರಮ ಇರಬೇಕು. ಇದು ನಮ್ಮ ಭಾವನೆಯಲ್ಲಿ ಊರ ಹಬ್ಬ. ನಾವು ಹಸಿದು, ಕಣ್ಣೀರಿನಲ್ಲಿ ಕೈತೊಳೆಯುತ್ತಿರುವಾಗ ಸಂಭ್ರಮದಿಂದ ಹಬ್ಬದಲ್ಲಿ ಭಾಗವಹಿಸುವುದು ಹೇಗೆ? ನಮ್ಮ ಹೋರಾಟಕ್ಕೆ ನ್ಯಾಯ ದೊರಕಿಸಿಕೊಳ್ಳಲು ಸಂತ್ರಸ್ತರು ಮತ್ತು ಅವರನ್ನು ನಂಬಿಕೊಂಡಿರುವ ಕುಟುಂಬದ ಸದಸ್ಯರು ಹಬ್ಬದ ದಿನ ಬೃಹತ್ ಪ್ರತಿಭಟನೆ ನಡೆಸುವುದು ಅನಿವಾರ್ಯ. ನಾವು ಯಾರನ್ನೂ ದೂರುತ್ತಿಲ್ಲ, ದೂಷಿಸುತ್ತಿಲ್ಲ. ಸಮಸ್ಯೆಯ ಗಂಭೀರತೆಯನ್ನು ಪ್ರತಿ ಬಾರಿಯೂ ಹೇಳುತ್ತಲೆ ಇದ್ದೇವೆ. ಇನ್ನೂ ನ್ಯಾಯ ಸಿಕ್ಕಿಲ್ಲ.ನಮ್ಮ ಕಣ್ಣೀರು ಒರೆಸುವ ಪ್ರಾಮಾಣಿಕ ಪ್ರಯತ್ನ ಆಗುತ್ತಿಲ್ಲ ಎನ್ನುತ್ತಾರೆ ಜವಹರ್.ಬಸ್ ನಿಲ್ದಾಣದ ವಿವಾದ ಮತ್ತು ಸಂತ್ರಸ್ತರ ಸಮಸ್ಯೆ ಬಗ್ಗೆ ‘ಪ್ರಜಾವಾಣಿ’ ಅನೇಕ ಬಾರಿ ಬೆಳಕು ಚೆಲ್ಲಿದೆ. 2010ರ ಆಗಸ್ಟ್‌ನಲ್ಲಿ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಸಂತ್ರಸ್ತರ ಸಮಸ್ಯೆಯನ್ನು 30 ದಿನಗಳೊಳಗೆ ಬಗೆಹರಿಸುವ ಭರವಸೆ ನೀಡಿದ್ದರು. ಅದು ಇನ್ನೂ ಭರವಸೆಯಾಗಿಯೇ ಉಳಿದಿದೆ. ಇನ್ನು ಶಾಸಕರು ಕೂಡ ತಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ ಈ ಹಿಂದೆ ಖಾಸಗಿ ಬಸ್ ನಿಲ್ದಾಣದ ಅಂಗಡಿ ಮಳಿಗೆಗಳಲ್ಲಿ ಬದುಕು ಕಂಡುಕೊಂಡಿದ್ದ ಸಂತ್ರಸ್ತ ಕುಟುಂಬಗಳು.ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿಗೆ ತಲೆ ಎತ್ತಿರುವ ಖಾಸಗಿ ಬಸ್ ನಿಲ್ದಾಣದಲ್ಲಿ 100 ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಈ ಹಿಂದಿನ ಫಲಾನುಭವಿಗಳಿಗೆ ಮೊದಲ ಆದ್ಯತೆಯಲ್ಲಿ ನೀಡುವ ಭರವಸೆ ನೀಡಿ ಜಿಲ್ಲಾಡಳಿತ ಫಲಾನುಭವಿಗಳಿಂದ ತಲಾ ರೂ. 75 ಸಾವಿರ, ಮತ್ತೆ ಕೆಲವರಿಂದ ರೂ. 87500 ಹಣವನ್ನು ಮುಂಗಡ ಕಟ್ಟಿಸಿಕೊಂಡಿದೆ.ಹಣ ಪಾವತಿ ಮಾಡಿ 5 ವರ್ಷಗಳು ತುಂಬಿವೆ. ಈ ರೀತಿ ಪಾವತಿಸಿಕೊಂಡಿರುವ ಹಣವೇ ಸುಮಾರು ಒಂದು ಕೋಟಿಯಾಗಿದೆ. ಇದರಲ್ಲಿ ರೂ. 55 ಲಕ್ಷ ಹಣವನ್ನು ನಿಲ್ದಾಣದ ಕಾಮಗಾರಿಗೆ ಬಳಸಲಾಗಿದೆ. ನಿಲ್ದಾಣ ಉದ್ಘಾಟನೆಯಾಗಿ 5 ತಿಂಗಳು ಕಳೆದರೂ ಅಂಗಡಿ ಮಳಿಗೆಗಳನ್ನು ವಿತರಿಸಲು ಕ್ರಮ ತೆಗೆದುಕೊಂಡಿಲ್ಲ. ಅಂದಾಜು ಪ್ರಕಾರ ಸುಮಾರು 50ರಿಂದ 60 ಲಕ್ಷ ರೂಪಾಯಿ ಬಾಡಿಗೆ ಕೂಡ ನಷ್ಟವಾಗಿದೆ.ಜಿಲ್ಲಾಡಳಿತ ಈ ಹಿಂದೆ ಪಟ್ಟಿ ಮಾಡಿದಂತೆ 64 ಫಲಾನುಭವಿಗಳಿಗೆ ಅಂಗಡಿ ಮಳಿಗೆಗಳನ್ನು ಒದಗಿಸಬೇಕು. ಫಲಾನುಭವಿಗಳ ದಾಖಲಾತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿಯೇ ಅಂಗಡಿ ಮಳಿಗೆಗಳನ್ನು ವಿತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry