ಕಳೆದು ಹೋದ ಪ್ರೀತಿಗಳ ಕತೆಯಾಗಿ ವಾಲ್ಮೀಕಿಯ ರಾಮಾಯಣ

7

ಕಳೆದು ಹೋದ ಪ್ರೀತಿಗಳ ಕತೆಯಾಗಿ ವಾಲ್ಮೀಕಿಯ ರಾಮಾಯಣ

Published:
Updated:

`ಓ ದೇವತೆಗಳೇ ನಾನು ಯಾರೆಂಬುದನ್ನು ತಿಳಿಸಿ. ದಶರಥನ ಪುತ್ರನಾದ ನಾನು ಮನುಷ್ಯ ಮಾತ್ರನೆಂದು ತಿಳಿದಿರುವೆ. ದಯವಿಟ್ಟು ತಿಳಿಸಿ. ನಾನು ಎಲ್ಲಿಂದ ಬಂದೆ? ಏಕೆ ಈ ಭೂಮಿಗೆ ಬಂದೆ?~

-ಶ್ರೀರಾಮಚಂದ್ರ

(ಯುದ್ಧಕಾಂಡದ ಕೊನೆಯಲ್ಲಿ)

ಎ.ಕೆ. ರಾಮಾನುಜನ್‌ರ ವಿವಿಧ ರಾಮಾಯಣಗಳನ್ನು ಕುರಿತ ಬರಹ ವಿನಾಕಾರಣ ಸುದ್ದಿಯಲ್ಲಿರುವ ಸಮಯದ್ಲ್ಲಲೇ ವಾಲ್ಮೀಕಿಯ ರಾಮಾಯಣವನ್ನು ಕುರಿತಂತೆ ವಿಶಿಷ್ಟ ನೆಲೆ ಮತ್ತು ಹೊಸ ಒಳನೋಟಗಳಿರುವ ‘Lost Loves- Exploring Rama’s Anguish’ (ಪೆಂಗ್ವಿನ್ ಪ್ರಕಾಶನ-2011) ಎಂಬ ಪ್ರಬಂಧ - ಚಿಂತನಾ ಗುಚ್ಛವನ್ನು ಬೆಂಗಳೂರು ನಿವಾಸಿ ಅರ್‌ಷಿಯಾ ಸತ್ತಾರ್ ಹೊರತಂದಿದ್ದಾರೆ. ವಾಲ್ಮೀಕಿಯ ರಾಮಾಯಣ ಮತ್ತು ಕಥಾಸರಿತ್ಸಾಗರದ ಇಂಗ್ಲಿಷ್ ಭಾಷಾಂತರಕಾರರಾಗಿ ಪ್ರಸಿದ್ಧವಾಗಿರುವ ಸತ್ತಾರ್ ತಾವೇ ಹೇಳಿಕೊಂಡಿರುವ ಹಾಗೆ ಸ್ತ್ರೀವಾದದ ನೆಲೆಗಳನ್ನು ಮತ್ತೆ ಮತ್ತೆ ಪರೀಕ್ಷಿಸಿಕೊಳ್ಳುತ್ತಿರುವ ಸ್ತ್ರೀವಾದಿ ಮತ್ತು ರಂಗಕರ್ಮಿ. ಭಾರತೀಯ ಉಪಖಂಡದ ಕಥನ ಕ್ರಮಗಳ ಬಗ್ಗೆ ವಿಶೇಷ ಕುತೂಹಲ ಉಳ್ಳವರು.1980, 1990ರ ದಶಕದಲ್ಲಿ ಮೂಡಿಬಂದ ರಾಜಕೀಯ, ಸಾಂಸ್ಕೃತಿಕ ವಾತಾವರಣದಲ್ಲಿ ಮುನ್ನಲೆಗೆ ಬಂದ ರಾಮನ ಚಿತ್ರ, ಮತ್ತು ಈ ಚಿತ್ರದ ಹಿಂದೆ ರಾಮನ ಸ್ವಭಾವ-ಆಕಾಂಕ್ಷೆಯ ಸ್ವರೂಪ ಉತ್ಸವಮೂರ್ತಿಯೇ ಮುಂದಾಗಿ ಮೂಲದೇವರನ್ನೇ ಮರೆಸಿದಂತೆ ವಾಲ್ಮೀಕಿಯ ರಾಮಾಯಣದಲ್ಲಿ ಚಿತ್ರಗೊಂಡಿದ್ದ, ಶೋಧಿಸಿದ್ದ ರಾಮನ ಪ್ರತಿಮೆಗಿಂತ ಭಿನ್ನವಾಗಿತ್ತು.ಇಷ್ಟಲ್ಲದೆ ರಾಮನನ್ನು ಕೇವಲ ಭಕ್ತಿ, ಆರಾಧನೆಯ ನೆಲೆಗಳಲ್ಲಿ ನೋಡುವುದು, ಇಲ್ಲ ಸೀತೆಯ ಕಷ್ಟ-ಕೋಟಲೆಗಳ ಮೂಲಕ ಮಾತ್ರ ಗ್ರಹಿಸುವುದು ಕೂಡ ಲಾಗಾಯ್ತಿನಿಂದ ಚಾಲ್ತಿಯಲ್ಲಿದೆ. ಸತ್ತಾರ್ ಚಿಂತನಾ ಲಹರಿ - ಚೌಕಟ್ಟು ಈ ನೆಲೆಗಳಿಂದ ತೀರಾ ಭಿನ್ನವಾಗಿದೆ. ರಾಮನಿಗೆ ತಾನು ದಶಾವತಾರಗಳಲ್ಲಿ ಒಬ್ಬ, ದೈವಾಂಶಸಂಭೂತ ಎಂದು ತಿಳಿದಿತ್ತೇ, ಹಾಗೆ ತಿಳಿದಿದ್ದರೆ ಯಾವಾಗ ತಿಳಿಯಿತು, ತಿಳಿಯುವತನಕ ರಾಗದ್ವೇಷಗಳನ್ನೊಳಗೊಂಡ ಎಲ್ಲ ಮನುಷ್ಯರಂತೆಯೇ ವರ್ತಿಸುತ್ತಿದ್ದು, ಯುದ್ಧಕಾಂಡದ ಕೊನೆಯಲ್ಲಿ ಸೀತೆಯ ಚಾರಿತ್ರ್ಯ ಪರೀಕ್ಷೆಯ ನಂತರ ದೇವರುಗಳು ಪ್ರತ್ಯಕ್ಷವಾಗಿ ನೀನು ಭಗವಂತನೆಂದು ತಿಳಿಸಿದ ಮೇಲೆ ರಾಮನ ನೈತಿಕತೆಯ ಕಲ್ಪನೆಯ ಸ್ವರೂಪ, ಸ್ವಧರ್ಮ ಕುರಿತ ತಿಳಿವಳಿಕೆ ಭಿನ್ನವಾಯಿತೆ? ತಾನು ಎಷ್ಟು ಮನುಷ್ಯ-ಎಷ್ಟು ದೇವರು, ಯಾವಾಗ ಎಷ್ಟು ಎಂಬುದರ ಬಗ್ಗೆ ರಾಮನಿಗಿದ್ದ ವಿಸ್ಮೃತಿ ಒಂದು ಕಡೆಯಾದರೆ ಓದುಗರಾದ ನಮಗೂ ಒಂದು ವಿಸ್ಮೃತಿ. ನಾವೇ ರಾಮನನ್ನು ಯಾವಾಗ ದೇವರಂತೆ ನೋಡುತ್ತೇವೆ, ಮತ್ತೆ ಯಾವಾಗ ಮನುಷ್ಯನಂತೆ ಕಾಣಬಯಸುತ್ತೇವೆ. ಈ ಪ್ರಶ್ನೆಯ ಜೊತೆಗೆ ಸತ್ತಾರ್ ಇಡೀ ರಾಮಾಯಣವನ್ನು ರಾಮ ಮತ್ತು ಸೀತೆ ಇಬ್ಬರೂ ಪರಸ್ಪರ ಪ್ರೀತಿ, ಒತ್ತಾಸೆಗಳನ್ನು ಕಳೆದುಕೊಂಡ ಪಯಣವನ್ನಾಗಿ ಕೂಡ ನೋಡುತ್ತಾರೆ. ರಾಮ-ಸೀತೆ ಇಬ್ಬರೂ ರಾಮಾಯಣದುದ್ದಕ್ಕೂ ಬದಲಾಗುತ್ತಾರೆ. ದೇಶಾಂತರ, ಖಂಡಾಂತರಗಳ ಪಯಣದಲ್ಲಿ ತೊಡಗುತ್ತಾರೆ. ದಾಂಪತ್ಯದ ಯಶಸ್ಸು ಫಲವಂತಿಕೆಗೆ ಬೇಕಾದ ಮಾರ್ದವತೆ, ಅನುರಕ್ತಿಯನ್ನು ಕಳೆದುಕೊಂಡು ಒಬ್ಬರಿಂದ ಇನ್ನೊಬ್ಬರು ಹೇಗೆ ಮಾನಸಿಕವಾಗಿ ದೂರವಾಗುತ್ತಾರೆ, ಸೆಟೆದುಕೊಳ್ಳುತ್ತಾರೆ ಎಂಬುದು ಸತ್ತಾರ್ ಚಿಂತನೆಯ ಇನ್ನೊಂದು ನೆಲೆ. ಸೀತೆಯ ಮೂಲಕ ರಾಮಾಯಣವನ್ನು ಓದುವುದಕ್ಕಿಂತ ರಾಮನ ತಳಮಳಗಳ ಮೂಲಕವೇ ಓದುವುದು ಹೆಚ್ಚು ಧ್ವನಿಪೂರ್ಣವಾಗಿ, ಸಮಕಾಲೀನವಾಗಿ ಸ್ತ್ರೀವಾದಿಯಾದ ತಮಗೂ ಕಂಡಿದೆಯೆಂದು ಸತ್ತಾರ್ ತಮಾಷೆಯಿಂದಲೇ ಸೂಚಿಸುತ್ತಾರೆ. ದೂರವಾಗುವಿಕೆ, ಕೊರಗುವಿಕೆಯ ಪ್ರತಿಮೆಯಿಂದಲೇ ತಾನೇ ರಾಮಾಯಣ ಶುರುವಾಗುವುದು. ವಾಲ್ಮೀಕಿ ಮೊದಲು ಕಂಡ ಕ್ರೌಂಚ ಪಕ್ಷಿಗಳ ಅಗಲುವಿಕೆಯ ಪ್ರತಿಮೆ ದಂಪತಿಗಳ ನಡುವಿನ, ತಂದೆ-ಮಕ್ಕಳ ನಡುವಿನ, ಸಹೋದರರ ನಡುವಿನ, ನಗರ ಕಾಡುಗಳ ನಡುವಿನ ಹಾಗೆಯೇ ನಾಗರೀಕತೆ ಮತ್ತು ಜೀವನಶೈಲಿಗಳ ವಿವಿಧ ಸ್ತರಗಳ ನಡುವಿನ ದೂರವಾಗುವಿಕೆಯನ್ನೇ ಕೃತಿಯುದ್ದಕ್ಕೂ ಮೂಲಸ್ತೋತ್ರವಾಗಿ ಇಟ್ಟುಕೊಂಡಿರುವುದನ್ನು ಸತ್ತಾರ್ ಮತ್ತೆ ಮತ್ತೆ ಪ್ರಸ್ತಾಪಿಸುತ್ತಾರೆ.`ಓ ದೇವತೆಗಳೇ, ನಾನು ಯಾರೆಂಬುದನ್ನು ತಿಳಿಸಿ. ದಶರಥನ ಪುತ್ರನಾದ ನಾನು ಮನುಷ್ಯ ಮಾತ್ರನೆಂದು ತಿಳಿದಿರುವೆ. ದಯವಿಟ್ಟು ತಿಳಿಸಿ. ನಾನು ಎಲ್ಲಿಂದ ಬಂದೆ? ಏಕೆ ಈ ಭೂಮಿಗೆ ಬಂದೆ?~ ಎನ್ನುವ ರಾಮನಿಗೆ ಬಾಲಕಾಂಡದಲ್ಲಾಗಲೀ, ಉತ್ತರಕಾಂಡದಲ್ಲಾಗಲೀ ತಾನು ದೈವಾಂಶಸಂಭೂತನೆಂದು ತಿಳಿದಿಲ್ಲ. ಈ ಎರಡೂ ಕಾಂಡಗಳು ಮೂಲ ರಾಮಾಯಣದ ಭಾಗಗಳಲ್ಲವೆಂಬ ವಾದವೂ ಇದೆಯಲ್ಲ. ತನ್ನ ದೈವತ್ವದ ತಿಳಿವು ಮೂಡಿದ ಮೇಲೂ ಮನುಷ್ಯನಾದ ರಾಮನ ಗೊಂದಲ-ತಳಮಳಗಳು ಇನ್ನೂ ಬಿಗಡಾಯಿಸುವುದಷ್ಟೇ. ತಂದೆ ದಶರಥ ಕೇವಲ ಹೆಣ್ಣಿನ ಪ್ರೀತಿಗಾಗಿ ತನ್ನ ರಾಜಧರ್ಮದ ಕರ್ತವ್ಯವನ್ನು ಬದಿಗಿಟ್ಟು ಸೋತದ್ದು ರಾಮನನ್ನು ನಿರಂತರವಾಗಿ ಬಾಧಿಸಿದ ಒಂದು ಮಾನಸಿಕ ಹೊರೆ. ರಾಜಧಾನಿಯಾದ ಅಯೋಧ್ಯೆಯಲ್ಲಿ ರಾಮ ಕಂಡಿದ್ದ ದಾಂಪತ್ಯದ ಸ್ವರೂಪದಲ್ಲಿ ಸಂಪತ್ತು, ರಾಜಾಧಿಕಾರ, ರತಿಗೇ ಮುಖ್ಯಸ್ಥಾನ. ನಂತರ ಕಾಡಿನಲ್ಲಿ ರಾಮನಿಗೆ-ಸೀತೆಗೆ ಕಂಡಿದ್ದು ಮೆಚ್ಚಿಗೆಯಾದದ್ದು ದಂಪತಿಗಳಂತಲ್ಲದೆ ಒಡನಾಡಿಗಳಾಗಿ ಸಂಯಮದಿಂದ, ಪ್ರೀತಿಯಿಂದ, ಒತ್ತಾಸೆಯಿಂದ ಬದುಕುತ್ತಿದ್ದ ಋಷಿಗಳ ನಿಗ್ರಹ-ಪ್ರೀತಿ ಎರಡೂ ತುಂಬಿದ ಜೀವನಶೈಲಿ. ರಾಮ-ಸೀತೆ ಮಾತ್ರ ಕಾಡಿಗೆ ಹೋದದ್ದಲ್ಲ, ಹಿಂದೂಗಳು, ಜೈನರು, ಬೌದ್ಧರೂ ಕೂಡ ನಗರ ಜೀವನಶೈಲಿಗೆ ಬೇಸತ್ತು ಕಾಡುಗಳ ಕಡೆಗೆ ನಡೆದ ಕಾಲಾವಧಿಯಿದೆಂದು ಸತ್ತಾರ್ ಪುಸ್ತಕವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ವೆಂಡಿ ಡೊನಿಗೈಲ್ ಬರೆಯುತ್ತಾರೆ. ರಾಮ-ಸೀತೆ ಕಾಡಿನಲ್ಲಿ, ಮುನಿವರರ ನಡುವೆಯೇ ತಮ್ಮ ಪ್ರೀತಿಯನ್ನು ಕಂಡುಕೊಂಡದ್ದು, ವಿಸ್ತರಿಸಿಕೊಂಡದ್ದು. ಹಕ್ಕಿಗಳ ಹೆಸರನ್ನು ಸೀತೆಗೆ ಹೇಳಿಕೊಡುವುದು, ಸೀತೆಗಾಗಿ ಹೂ ಕೊಯ್ಯುವುದು ಇದನ್ನೆಲ್ಲ ರಾಮ ಮಾಡಿದ್ದು ಕಾಡಿನಲ್ಲೇ. ವಿರಾಧನನ್ನು ಹಿಂಸಾತ್ಮಕವಾಗಿ ಕೊಂದಾಗ ಹಿಂಸೆಯ ವಿರುದ್ಧವಾಗಿ ಸೀತೆ ರಾಮನಿಗೆ ಉಪದೇಶಿಸಿದ್ದು ಕೂಡ ಕಾಡಿನಲ್ಲಿ. ಬದುಕಿದರೆ ಹೀಗೇ, ಇಲ್ಲೇ ಪ್ರೀತಿಯಿಂದ ಬದುಕಿಬಿಡಬೇಕು ಎಂಬಾಸೆ ಇಬ್ಬರಲ್ಲೂ ಮೂಡಿತ್ತು. ನಂತರದ ಬೆಳವಣಿಗೆಗಳಲ್ಲಿ ರಾಮನಿಗೆ ಹೀಗೆ ಮಾರ್ದವವಾಗಿ, ಮೃದುವಾಗಿ ಇರಲು ಸಾಧ್ಯವೇ ಆಗಲಿಲ್ಲ. ತಾನು ಹೀಗಿರಲು ಸಾಧ್ಯವಾಗಲಿಲ್ಲವೆಂಬ ಕೊರಗು ರಾಮನಿಗೆ ತಂದೆ ಮಾಡಿದ ತಪ್ಪಿನ ಜೊತೆ ಮಾನಸಿಕವಾಗಿ ಉದ್ದಕ್ಕೂ ಕಾಡಿದೆ.ಯಾವೊಂದು ತಪ್ಪನ್ನೂ ತಾನು ಮಾಡದೆ, ಯಾರಿಂದಲೂ ದೂಷಣೆಗೆ ಒಳಗಾಗದೆ ತನ್ನ ಕರ್ತವ್ಯವನ್ನು ನಿರ್ವಹಿಸಬೇಕೆಂಬ ಧೋರಣೆಯ ಜೊತೆಗೆ ರಾಮಾಯಣದ ಮಧ್ಯದಲ್ಲಿ ತಿಳಿವ `ದೈವತ್ವ~ವು ಕೂಡ ರಾಮನಿಗೆ ಇನ್ನೊಂದು ಹೊರೆಯಾಯಿತೆ? ರಾಮ ದೇವರು ಮಾತ್ರವೇ ಎಂದು ಯೋಚಿಸಿದರೆ ವಾಲಿವಧೆ, ಶಂಭೂಕವಧೆ, ವಿರಾಧ-ಕಾಕಾಸುರ ಇಂತಹ ಪ್ರಕರಣಗಳಲ್ಲಿ ಕಂಡುಬರುವ ಮಿತಿ ಮೀರಿದ ಹಿಂಸೆಯನ್ನು ನಾವು ಒಪ್ಪಿಕೊಳ್ಳಬಹುದು- ಯಾವುದೇ ತಕರಾರಿಲ್ಲದೆ. ಆದರೆ ಸೀತೆಗಾಗಿ ಕಣ್ಣೀರಿಡುವ, ಪ್ರಲಾಪಿಸುವ, ಎಷ್ಟೋ ಸಂದರ್ಭಗಳಲ್ಲಿ ಸಿಟ್ಟು ಮಾಡಿಕೊಳ್ಳುವ, ವ್ಯಗ್ರನಾಗುವ ಮನುಷ್ಯನಾಗಿಯೂ ರಾಮ ನಮಗೆ ಕಾಣಿಸಿಕೊಳ್ಳುತ್ತಾನೆ. ರಾಮ ಮನುಷ್ಯ ಮಾತ್ರ, ದೈವತ್ವವೂ ಕೂಡ ಆತನಿಗೆ ಒಂದು ಹೊರೆಯಾಗಿ, ಯೋಚನೆಗಳು, ನಿರ್ಧಾರಗಳು ಇನ್ನೂ ಸಂಕೀರ್ಣಗೊಂಡವು ಎಂದು ಯೋಚಿಸ ಹೊರಟರೆ ರಾಮ ಎಲ್ಲ ಮನುಷ್ಯರಂತೆಯೇ ಕಾಣುತ್ತಾನೆ. ಇಂತಹ ರಾಮ ನಮಗೂ-ಇಂದಿಗೂ ಪ್ರಸ್ತುತನಾಗುತ್ತಾನೆ.ವರ್ಣಾಶ್ರಮ ಧರ್ಮ ಮತ್ತು ಕ್ಷತ್ರಿಯ ಧರ್ಮಕ್ಕಿಂತಲೂ ಮಿಗಿಲಾದ ಧರ್ಮದ ಕಲ್ಪನೆಗನುಗುಣವಾಗಿ ತಾನು ಬದುಕಬೇಕು, ತನ್ನನ್ನು ಶೋಧಿಸಿಕೊಳ್ಳಬೇಕೆಂದು ಹೊರಟ ರಾಮನಿಗೆ ಬದುಕಿನಲ್ಲಿ ಎದುರಾಗುವುದು ಮತ್ತೆ ಮತ್ತೆ ಕ್ಷತ್ರಿಯ ಧರ್ಮ- ರಾಜಧರ್ಮಕ್ಕೆ ಹಿಂತಿರುಗುವಂತೆ ಸೂಚಿಸುವ ಪ್ರೇರಣೆಗಳೇ. ಯುದ್ಧ - ಹಿಂಸೆ ಮಾತ್ರವಲ್ಲದೆ, ವಾಲಿಯನ್ನು ಮೋಸದಿಂದ ಸಂಹರಿಸಬೇಕಾಗಿ ಬಂದದ್ದು, ಎಲ್ಲಕ್ಕಿಂತ ಮಿಗಿಲಾಗಿ ಯುದ್ಧದ ನಂತರ ಸಿಕ್ಕ ಸೀತೆಯನ್ನು ಪರೀಕ್ಷಿಸಲು ತನ್ನ ಮೇಲೆ ತಾನೇ ಹಾಕಿಕೊಂಡ ಒತ್ತಾಯ, ಸಾರ್ವಜನಿಕ ಅಭಿಪ್ರಾಯಕ್ಕೆ ತಲೆಬಾಗುವಂತೆ ಕಾಣಲು ಸೀತೆಯನ್ನು ಮತ್ತೆ ಬಹಿಷ್ಕರಿಸಿದ್ದು ಇಲ್ಲೆಲ್ಲ ನಮಗೆ ಕಾಣುವ ರಾಮ- ಕ್ಷತ್ರಿಯ ಧರ್ಮ ಪರಿಪಾಲಕ ಆದರ್ಶ ರಾಜನಾಗಲು ಹೊರಟು, ಹಾಗೆ ಕಾಣಿಸಲು ತವಕಿಸುವ ರಾಮ.ಈ ಎಲ್ಲದರ ನಡುವೆ ರಾಮ-ಸೀತೆ ಪ್ರೀತಿಯನ್ನು, ಪರಸ್ಪರರನ್ನು ಕಳೆದುಕೊಳ್ಳುತ್ತಾರೆ, ಹಾಗಾಗಿ ರಾಮಾಯಣವು ಕಳೆದುಹೋಗುವ, ಮಾಸಿಹೋಗುವ ಪ್ರೀತಿಯ ಕತೆಯೆಂದು ಸತ್ತಾರ್‌ರವರ ಸೂಚನೆ. ವನವಾಸದ ನಂತರ ಸೀತೆಗೆ ಕಾಣಿಸುವ ರಾಮ ಕಾಡಿನಲ್ಲಿ ಮುನಿವರರು ಗಿಡ-ಪಕ್ಷಿಗಳ ಜೊತೆ ಮಾರ್ದವತೆಗಾಗಿ ಹಂಬಲಿಸುತ್ತಿದ್ದ ರಾಮನಲ್ಲಿ ಧರ್ಮ ಪರಿಪಾಲನೆ, ಕ್ಷತ್ರಿಯ ಧರ್ಮ ಪರಿಪಾಲನೆಯ ಭಾರದಿಂದ ನಂತರ ದೈವತ್ವದ ಭಾರದಿಂದ ಸೆಟೆದುಕೊಂಡು, ತನ್ನಂತರಂಗದ ಮಾರ್ದವತೆ-ಪ್ರೀತಿಯನ್ನು ಮುಚ್ಚಿಡಬಯಸುವ ರಾಮ.ಈ ರಾಮ ಸೀತೆಯಲ್ಲಿ ಯಾವ ಭಾವನೆಯನ್ನೂ ಹುಟ್ಟಿಸಲಾರ. ಹಾಗಾಗಿ ಸೀತೆಗೆ ಬಹಿಷ್ಕಾರಕ್ಕೊಳಗಾದ ನಂತರ ರಾಮನನ್ನು ಬಿಡುವುದು, ಕೊನೆಗೆ ವಸುಂಧರೆಯಲ್ಲಿ ವಿಲೀನವಾಗುವುದು ಸಹಜವಾದ ನಿರ್ಧಾರಗಳು. ಈ ಕಾರಣಕ್ಕೇ ಸೀತೆ, ಕಾಡಿನಲ್ಲಿ ತನ್ನನ್ನು ಬಿಟ್ಟು ಹೋಗುವ ಲಕ್ಷ್ಮಣನಿಗೆ `ರಾಜನಿಗೆ~ ಏನೇನನ್ನು ತಿಳಿಸಬೇಕು, ರಾಜ್ಯಭಾರವನ್ನು ಹೇಗೆ ಮಾಡಬೇಕೆಂದು ಸೂಚಿಸುತ್ತಾಳೆಯೇ ಹೊರತು, ಪತಿ ರಾಮನಿಗೆ ಯಾವ ಸಂದೇಶವನ್ನೂ ನೀಡುವುದಿಲ್ಲವೆಂಬುದು ಗಮನಾರ್ಹ.ರಾಮ ಸೀತೆಯ ನೆನಪಿನಿಂದ ತಪ್ಪಿಸಿಕೊಂಡನೆ? ಸೀತೆಯನ್ನು ಇನ್ನಿಲ್ಲದ ಹಾಗೆ ಪ್ರೀತಿಸುತ್ತಿದ್ದ ಗಿಡ ಮರ ಪಕ್ಷಿ, ಪೃಥ್ವಿ, ಆಕಾಶಗಳಲ್ಲೆಲ್ಲ ಸೀತೆಯನ್ನೇ ಪ್ರತಿಕ್ಷಣವೂ ಕಂಡು ಹಂಬಲಿಸುತ್ತಿದ್ದ ರಾಮನಿಗೆ ಇದು ಸಾಧ್ಯವೇ ಇಲ್ಲ. ಸೀತೆಯಿಲ್ಲದ ಸಾಮ್ರಾಜ್ಯದಲ್ಲೂ ರಾಜನಾಗಿಯೇ ಉಳಿಯುವ ರಾಮ ಹೆಂಡತಿಯಿರಬೇಕಾದ ಎಲ್ಲ ಯಾಗ-ಯಜ್ಞಗಳು, ಧಾರ್ಮಿಕ ಸಮಾರಂಭಗಳಲ್ಲೆಲ್ಲಾ ಸೀತೆಯ ಚಿನ್ನದ ಪುತ್ಥಳಿಯನ್ನು ಇಡಬೇಕೆಂದು ಸೂಚಿಸುತ್ತಾ ಸೀತೆಯ ನೆನಪಿನ ಭಾರದಿಂದಲೇ ಬದುಕುತ್ತಾನೆ. ನೆನಪು ಸ್ಮೃತಿಗಳಿಂದ ರಾಮಾಯಣದ ಪಾತ್ರಗಳಿಗೆ ಬಿಡುಗಡೆಯೇ ಇಲ್ಲ. ವಿಸ್ಮೃತಿ ಕೂಡ ಇನ್ನು ಯಾವುದೋ ಒಂದು ನೆನಪನ್ನು ತೀವ್ರವಾಗಿ ಸೂಚಿಸುವ ರೀತಿಯಷ್ಟೇ. ಈ ನೆನಪು ವಿಸ್ಮೃತಿಗಳ ಬಗ್ಗೆಯೇ ವಿಶೇಷ ಗಮನದ ಅಗತ್ಯವಿದೆಯೆಂದು ಹೇಳುವ, ವಿಸ್ಮೃತಿ ಕೂಡ ಮನುಷ್ಯ ಜೀವನದ ಪ್ರಮುಖ ಘಟ್ಟಗಳಲ್ಲಿ ನಿರ್ಣಾಯಕವಾಗಿರುತ್ತದೆಂದು ಸೋದಾಹರಣವಾಗಿ ಸೂಚಿಸುತ್ತಾರೆ. ನೆನಪನ್ನು ಪ್ರಚೋದಿಸುತ್ತಲೇ ರಾಮಾಯಣದಲ್ಲಿ ಎಷ್ಟೊಂದು ಉಪಕಥೆಗಳು! ಮತ್ತು ವಿಸ್ಮೃತಿ ಸಹಜವೇ, ಉದ್ದೇಶಪೂರ್ವಕವೇ, ಸಾಮಾಜಿಕ ಒತ್ತಾಯ, ಇಲ್ಲ ದೈವಾಜ್ಞೆಯೇ ಎಂಬುದರ ಬಗ್ಗೆ ಈ ಶತಮಾನದಲ್ಲಿ ದೊಡ್ಡ ಚರ್ಚೆಯೇ ನಡೆದಿದೆ. ರಾಮನ ಎಷ್ಟೋ ನಿರ್ಧಾರಗಳನ್ನು ಆತ ದೈವತ್ವ-ಮನುಷ್ಯ ಕಲ್ಪನೆಯ ನಡುವೆ ಆಗಾಗ್ಗೆ ಅನುಭವಿಸುತ್ತಿದ್ದ ವಿಸ್ಮೃತಿಯ ಮೂಲಕ ವಿವರಿಸಲು ಸಾಧ್ಯವೇ ಎಂಬುದು ಕೂಡ ಮುಖ್ಯವಾದ ಪ್ರಶ್ನೆ. ಭವಭೂತಿಯ `ಉತ್ತರ ರಾಮಚರಿತ~, ಕಾಳಿದಾಸನ `ಶಾಕುಂತಲ~, ವಾಲ್ಮೀಕಿಯ `ರಾಮಾಯಣ~ದಲ್ಲಿ ಕಂಡು ಬರುವ ನೆನಪು-ವಿಸ್ಮೃತಿಗಳ ಹೋಲಿಕೆಗಾಗಿಯೇ ಸತ್ತಾರ್ ಒಂದು ಪ್ರಬಂಧವನ್ನು ಮೀಸಲಿಟ್ಟಿದ್ದಾರೆ.ಏಳು ಪ್ರಬಂಧಗಳಿರುವ ಈ ಪುಸ್ತಕದಲ್ಲಿ ನವ್ಯೋತ್ತರ ಚಿಂತನೆ ಮತ್ತು ಸಮಾಜಶಾಸ್ತ್ರಗಳ ಹಿನ್ನೆಲೆಯಲ್ಲಿ ರಾಮಾಯಣವನ್ನು ವಿಶ್ಲೇಷಿಸಬಲ್ಲವರಿಗೂ ಉಪಯುಕ್ತವೆನಿಸುವ ಒಳನೋಟಗಳುಳ್ಳ ಎರಡು ಪ್ರಬಂಧಗಳಿವೆ. ರಾಮಾಯಣದಲ್ಲಿ ಮೂರು ನಗರಗಳಿವೆ, ನಾಗರೀಕತೆಗಳಿವೆ. ಮನುಷ್ಯರು, ರಾಜರು, ತುಂಬಿದ ರಾಜಧಾನಿಯಾದ ಅಯೋಧ್ಯಾನಗರಿ, ವಾನರ ಕಿಷ್ಕಿಂಧಾ ಪ್ರಾಂತ್ಯ, ರಾಕ್ಷಸರ ಲಂಕಾ- ಇದಲ್ಲದೆ ಮುನಿವರರು ವಾಸಿಸುವ ಕಾಡು. ಈ ನಾಲ್ಕೂ ಸ್ಥಳಗಳಲ್ಲಿ ದಾಂಪತ್ಯದ ಶೀಲದ, ನೈತಿಕತೆಯ ಕಲ್ಪನೆ, ಗಂಡು-ಹೆಣ್ಣುಗಳ ಸಂಬಂಧದ ಸ್ವರೂಪ ಬೇರೆ ಬೇರೆ ರೀತಿಯದು. ದಶರಥ ಕೈಕೇಯಿಗೆ ಸೋತದ್ದಾಗಲೀ, ಸೀತೆ ರಾವಣನಿಂದ ಅಪಹರಿಸಿದ್ದಾಗಲೀ, ಮೂಲದಲ್ಲಿ - ಲಂಕಾದಲ್ಲೋ ಕಿಷ್ಕಿಂಧೆಯಲ್ಲೋ ನಡೆದಿದ್ದರೆ ಹೇಗೆ ಕಾಣುತ್ತಿತ್ತು. ಮುಕ್ತ ಲೈಂಗಿಕ ಸಂಬಂಧಗಳು ಕಿಷ್ಕಿಂಧೆಯಲ್ಲಿ, ಬಹುಪತ್ನಿತ್ವ ಲಂಕೆಯಲ್ಲಿ, ಒಡನಾಡಿ ಕಲ್ಪನೆ ಮುನಿಗಳೇ ತುಂಬಿದ ಕಾಡಿನಲ್ಲಿ. ರಾಮಾಯಣದ ಕತೆ ಈ ಎಲ್ಲ ಪ್ರದೇಶಗಳಲ್ಲೂ ನಡೆದಿರುವುದೇ ದಾಂಪತ್ಯದ ಬೇರೆ ಬೇರೆ ಕಲ್ಪನೆ ಸಾಧ್ಯತೆಗಳನ್ನು ಸೂಚಿಸಲು, ಸಫಲತೆಯ ಹಾದಿ ಕುರಿತಂತೆ ಆಲೋಚಿಸಲು ಪ್ರೇರೇಪಿಸಲು.ಕೃತಿ - ಕೃತಿಕಾರನಿಗಿರುವ ಸಂಬಂಧದ ಸ್ವರೂಪ ಯಾವುದಿರಬೇಕು ಎಂಬುದು ಈವತ್ತು ಒಂದು ಮಹತ್ವದ ಜಿಜ್ಞಾಸೆ. ವಾಲ್ಮೀಕಿಯ ಕತೆಗೂ, ವಾಲ್ಮೀಕಿಗೂ ವಿಶೇಷವಾಗಿ ಸೀತೆ - ಲವ - ಕುಶರಿಗೂ ಇರುವ ಸಂಬಂಧ ಯಾವ ರೀತಿಯದು. ವಾಲ್ಮೀಕಿ ಕೇವಲ ಕೃತಿಕಾರನೇ, ಸೀತೆ - ಲವ - ಕುಶರಿಗೆ ಆತ ಏಕೆ ಒತ್ತಾಸೆಯಾಗಿ ನಿಂತ? ಸೀತೆ ಮುಗ್ಧೆಯಲ್ಲದಿದ್ದರೆ, ಕಳಂಕ ರಹಿತಳಲ್ಲದಿದ್ದರೆ ತನ್ನ ಪ್ರತಿಭೆಯೆಲ್ಲ ನಾಶವಾಗಿ ಹೋಗಲಿ ಎಂದು ರಾಮನೆದುರಿಗೆ ಘೋಷಿಸುವ, ಲವ-ಕುಶರನ್ನು ಸಾಕಿ ಸಲಹುವ, ರಾಮನ ಪಾತ್ರದ ಸ್ವಭಾವ ಸ್ವರೂಪ ತಿಳಿದಿದ್ದೂ ಮಕ್ಕಳಿಬ್ಬರಿಗೆ ರಾಮಾಯಣದ ಕತೆಯನ್ನೇ ಹೇಳಿಕೊಟ್ಟು ಮತ್ತದನ್ನು ರಾಮನಿಗೆ ಒಪ್ಪಿಸುವಂತೆ ಪ್ರೇರೇಪಿಸುವ ವಾಲ್ಮೀಕಿ, ಎಲ್ಲಿ, ಎಷ್ಟು, ಕೃತಿಕಾರ, ಪಾತ್ರ, ಮನುಷ್ಯ? ಇವೆಲ್ಲ ಒಂದೇ ಜವಾಬ್ದಾರಿಯೇ? ಇ್ಲ್ಲಲ, ಬದಲಾಗುತ್ತಾ ಹೋಗುವ ಜವಾಬ್ದಾರಿಗಳೇ? ರಾಮಾಯಣದ ಕೃತಿ ರಚನೆಯುದ್ದಕ್ಕೂ ವಾಲ್ಮೀಕಿಗೆ ಈ ಭಿನ್ನ ಜವಾಬ್ದಾರಿಗಳ ಪ್ರಜ್ಞೆಯಿತ್ತೆ? ಸತ್ತಾರ್ ಈ ಪ್ರಶ್ನೆಯನ್ನು ರಾಮನ ತಳಮಳಗಳ ಹಿನ್ನೆಲೆಯಲ್ಲಿ ಸೀತೆಯ ಪ್ರೀತಿ ಕರಗಿಹೋಗುವ ಪರಿಪ್ರೇಕ್ಷದಲ್ಲಿ ವಿವರವಾಗಿ ಪರಿಶೀಲಿಸುತ್ತಾರೆ.ಇಂತಹ ಪ್ರಶ್ನೆಗಳನ್ನೆತ್ತುವ ಸತ್ತಾರ್ ಪ್ರಬಂಧಗಳ ಎದ್ದು ಕಾಣುವ ಗುಣವೆಂದರೆ ತೀವ್ರವಾದ ಸಂವೇದನಾಶೀಲ ಪಠ್ಯನಿಷ್ಠೆ. ಅವರು ಉಲ್ಲೇಖಿಸುವುದು ವಾಲ್ಮೀಕಿಯ ಪಠ್ಯದಿಂದಲೇ. ನಂತರ ರಚಿತವಾದ ಭಕ್ತಿರಸ ಪ್ರಧಾನ `ತುಳಸಿ ರಾಮಾಯಣ~ವನ್ನಲ್ಲ. ಕಾಲಧರ್ಮಕ್ಕನುಗುಣವಾಗಿ ನಾನಾ ರೀತಿಯ ಪ್ರಕ್ಷೇಪಗಳನ್ನು ಒಳಗೊಂಡ ರಚನೆಗಳನ್ನಲ್ಲ. ವಾಲ್ಮೀಕಿಯ ರಾಮಾಯಣವನ್ನು ಇಂಗ್ಲಿಷಿಗೆ ಭಾಷಾಂತರಿಸಲು ರಾಮಾಯಣದ ವನವಾಸಕ್ಕಿಂತಲೂ ದೀರ್ಘವಾದ ಕಾಲಾವಧಿಯನ್ನು ಸತ್ತಾರ್ ಸಮರ್ಪಿಸಿದ್ದಾರೆ. ಇಂತಹ ತನಗೂ - ಧಾರ್ಮಿಕ ಮೂಲಭೂತವಾದ ವಿಕಾರವಾಗಿ ಬೆಳೆದ 90ರ ದಶಕದಲ್ಲಿ ರಾಮಾಯಣದ ಬಗ್ಗೆ, ರಾಮನ ಬಗ್ಗೆ ತಾತ್ಕಾಲಿಕವಾಗಿ ಮೂಡಿದ್ದ ಮಂಕು, ಹಿಂಜರಿಕೆಯ ಬಗ್ಗೆ ಲೇಖಕಿಯೇ ವಿಷಾದದಿಂದ ಬರೆದುಕೊಂಡಿದ್ದಾರೆ.ಧಾರ್ಮಿಕ ಮೂಲಭೂತವಾದವನ್ನು ಜಾತ್ಯತೀತವಾಗಿಸಲು, ಪ್ರಗತಿಶೀಲರಾಗಿರಲು ನಮಗಿರುವ ಹಕ್ಕಿನ ಬಗ್ಗೆ ಬೊಬ್ಬೆ ಎಬ್ಬಿಸಿ ಎದುರಿಸಬೇಕೋ, ಇಲ್ಲ ಸತ್ತಾರ್ ಮಾಡಿರುವ ಹಾಗೆ ಮತ್ತೆ ಮತ್ತೆ ಪಠ್ಯಕ್ಕೆ ಹಿಂದಿರುಗಿ ಎದುರಿಸಬೇಕೋ ಎಂಬುದೇ ಈಗಿರುವ ಪ್ರಶ್ನೆ. ಆಧುನಿಕತೆ ಮತ್ತು ಪಶ್ಚಿಮದ ಪ್ರಭಾವಕ್ಕೆ ಒಳಗಾಗುವ ಮುನ್ನ ನಮ್ಮ ಸಮಾಜದ ಬಹುಪಾಲು ಜನ ಧಾರ್ಮಿಕ ಪ್ರವೃತ್ತಿಯುಳ್ಳವರಾಗಿಯೂ ಮೂಲಭೂತವಾದಿಗಳಾಗದೇ ಶತಶತಮಾನಗಳುದ್ದಕ್ಕೂ ಉಳಿದಿದ್ದವರು. ಪಠ್ಯದ ವಿಕೃತ, ಸೀಮಿತ ಮತ್ತು ರಂಜಕ ಓದು - ಮಂಡನೆಯಿಂದಾಗಿ ಮೂಲಭೂತವಾದಿಗಳು ತಾತ್ಕಾಲಿಕವಾಗಿ ಜನಸಮೂಹವನ್ನು ಮೂಲಭೂತವಾದಕ್ಕೆ ಪರಿವರ್ತಿಸುವುದರಲ್ಲಿ ತಾತ್ಕಾಲಿಕವಾಗಿ ಯಶಸ್ವಿಯಾಗಿದ್ದರು.ಈಚಿನ ವರ್ಷಗಳಲ್ಲಿ ಮತ್ತೆ ರಾಮಾಯಣದ ಪಠ್ಯನಿಷ್ಠ ಓದು ಜಾಗೃತವಾಗಿ ಸಂವೇದನಾಶೀಲವಾದ ನೃತ್ಯ-ನಾಟಕ ಪ್ರಯೋಗಗಳಲ್ಲಿ, ಬೊಂಬೆಯಾಟಗಳಲ್ಲಿ ಹೊಸ ಸಮೂಹ ಮಾಧ್ಯಮಗಳ ಅಗತ್ಯಕ್ಕನುಗುಣವಾಗಿ ನಾನಾ ರೂಪದಲ್ಲಿ ಆವೃತ್ತಿಗಳಲ್ಲಿ ಕಂಡು ಬರುತ್ತಿದೆಯೆಂದು ಸತ್ತಾರ್ ಸೂಚಿಸುತ್ತಾರೆ. ಸತ್ತಾರ್ ಪ್ರಬಂಧಗಳು ಏಕಕಾಲಕ್ಕೇ ವಿಶಿಷ್ಟ ರೀತಿಯ ಸಹಾನುಭೂತಿಯನ್ನು, ತೀವ್ರ ಪಠ್ಯನಿಷ್ಠೆಯನ್ನು, ಸಾಂಘಿಕ ಧರ್ಮವನ್ನು ಮೀರಿದ ಮನುಷ್ಯ ಧರ್ಮದ ಪ್ರೀತಿಯನ್ನು ಪ್ರಚೋದಿಸುವ ಮೂಲಕ ಹೊಸ ಕಾಲದ ಓದುಗರ ಗಮನ ಮತ್ತು ಕೃತಜ್ಞತೆಗೆ ತವಕಿಸುತ್ತಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry