ಕಳೆದ ಬಾಳುವೆಯ ಬೆಲೆಗಟ್ಟುವ ನೋಟ

7

ಕಳೆದ ಬಾಳುವೆಯ ಬೆಲೆಗಟ್ಟುವ ನೋಟ

Published:
Updated:

ಪ್ರವಾಸಕಥನದಲ್ಲಿ ಸಹಜವಾಗಿ ಸುತ್ತಾಟದ ಅನುಭವವಿರುತ್ತದೆ. ಆದರೆ ಆತ್ಮಕಥೆಯೂ ಸುತ್ತಾಟದ ಅನುಭವಗಳಿಂದ ಕೂಡಿರಬಹುದೇ? ಸಿ.ಎನ್. ರಾಮಚಂದ್ರನ್ ಅವರ ‘ನೆರಳುಗಳ ಬೆನ್ನುಹತ್ತಿ’ ಆತ್ಮಕಥೆಯ ವಿಷಯದಲ್ಲಿದು ನಿಜ.ವಿಶೇಷವೆಂದರೆ, ಸುತ್ತಾಟದ ಅನುಭವಗಳನ್ನು ಈ ಆತ್ಮಕಥೆಯು ಚಿಲಕುಂದ, ಮೈಸೂರು, ಸೊಲ್ಲಾಪುರ, ಸೋಮಾಲಿಯಾ, ನಿಪ್ಪಾಣಿ, ಆಕ್ಸ್‌ಫರ್ಡ್, ಒಹಾಯೊ, ರಿಯಾದ್, ಕೊಣಾಜೆ- ಮಂಗಳೂರು ಎಂದು ಊರ ಹೆಸರಲ್ಲಿ ವಿಂಗಡಿಸಿಕೊಟ್ಟಿರುವುದು. ಈ ಅಧ್ಯಾಯಕ್ರಮವು, ವ್ಯಕ್ತಿಯ ಬಾಳಿನ ಪಯಣವು ಪುಟ್ಟ ಊರಿನಿಂದ ಶುರುವಾಗಿ ಭಾರತದ ಮತ್ತು ಜಗತ್ತಿನ ಬೇರೆಬೇರೆ ಸ್ಥಳಗಳಲ್ಲಿ ತಿರುಗಾಡಿ ಮರಳಿ ಸ್ವದೇಶಕ್ಕೆ ಬರುವ ದೊಡ್ಡದೊಂದು ಪರಿಭ್ರಮಣೆಯ ಚಿತ್ರವೊಂದನ್ನು ಕಣ್ಮುಂದೆ ನಿಲ್ಲಿಸುತ್ತದೆ.ಈ ಪರಿಭ್ರಮಣೆ ಕೇವಲ ವ್ಯಕ್ತಿಯ ಭೌತಿಕ ಪಯಣಕ್ಕೆ ಅಥವಾ ಅನುಭವ ಸಂಚಯಕ್ಕೆ ಸಂಬಂಧಿಸಿದ್ದಲ್ಲ; ಬೌದ್ಧಿಕ ವಿಕಸನಕ್ಕೂ ಚಿಂತನಾಕ್ರಮದ ಪಲ್ಲಟಗಳಿಗೂ ಸಂಬಂಧಿಸಿದ್ದು. ಈ ಮಹಾಸುತ್ತಾಟವು ಬದುಕನ್ನು ಕಟ್ಟಿಕೊಳ್ಳಲು ಲೇಖಕರು ಮಾಡಿದ ಹೋರಾಟದ ಪ್ರತೀಕವೂ ಆಗಿದೆ; ಲೇಖಕರು ಬೇರೆಬೇರೆ ಪದವಿ ಪಡೆಯಲು ಹಾಗೂ ವೃತ್ತಿಗಳನ್ನು ನಿರ್ವಹಿಸಲು ದೇಶಗಳನ್ನು ‘ಬೆನ್ನುಹತ್ತು’ವ ಪರಿ ದಿಗ್ಭ್ರಮೆ ಮೂಡಿಸುತ್ತದೆ. ತಮಿಳುಮೂಲದ ಸಂಕೇತಿ ಮನೆಮಾತಿನ ಹಾಗೂ ಸಂಸ್ಕೃತ ವಿದ್ವತ್ತಿನ ಹಿನ್ನೆಲೆಯಿಂದ ಬಂದ ಲೇಖಕರು, ಆಂಗ್ಲಭಾಷೆಯ ಅಧ್ಯಾಪಕರಾಗುವುದು ಮತ್ತು ಕೊನೆಯ ಘಟ್ಟದಲ್ಲಿ ಕನ್ನಡ ಲೇಖಕರಾಗಿ ರೂಪಾಂತರ ಪಡೆಯುವುದು, ಒಂದು ಬಗೆಯ ಭಾಷಿಕ ಸುತ್ತಾಟವೂ ಅನಿಸುತ್ತದೆ.ಈ ಆತ್ಮಕಥೆ ನಾಲ್ಕು ಕಾರಣಗಳಿಂದ ಮುಖ್ಯವೆನಿಸುತ್ತದೆ. 1. ಬದುಕಿನ ಬೇರೆಬೇರೆ ಘಟ್ಟದ ವಿಶಿಷ್ಟವಾದ ಅನುಭವಗಳನ್ನು ಒಳಗೊಂಡಿರುವುದರಲ್ಲಿ. 2. ಈ ಅನುಭವ ನಿರೂಪಣೆಯಲ್ಲಿರುವ ಆತ್ಮವಿಮರ್ಶೆ ಮತ್ತು ನಮ್ರತೆಯಲ್ಲಿ. 3. ಅನುಭವಗಳನ್ನು ದಾಖಲಿಸುವ ‘ನಿರ್ಲಿಪ್ತ’ ಭಾವದಲ್ಲಿ. 4. ಬಾಳನ್ನು ಕುರಿತು ತಳೆದಿರುವ ದಾರ್ಶನಿಕ ನಿಲುವಿನಲ್ಲಿ.ಇಲ್ಲಿ, ಸಂಪ್ರದಾಯವಾದಿ ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿದ ಒಬ್ಬ ವ್ಯಕ್ತಿ, ಆ ಸಮುದಾಯದ ಸದಸ್ಯನಾಗಿ ಅಗ್ರಹಾರದಲ್ಲಿ, ಬಳಿಕ ಸಾಹಿತ್ಯದ ವಿದ್ಯಾರ್ಥಿಯಾಗಿ ಶಾಲಾ ಕಾಲೇಜುಗಳಲ್ಲಿ, ಮಧ್ಯಮವರ್ಗದ ಗೃಹಸ್ಥನಾಗಿ ನಗರಗಳಲ್ಲಿ, ಇಂಗ್ಲಿಷ್ ಅಧ್ಯಾಪಕನಾಗಿ ತರಗತಿಗಳಲ್ಲಿ, ಭಾರತೀಯ ನಾಗರಿಕನಾಗಿ ಯೂರೋಪ್, ಅಮೆರಿಕ, ಆಫ್ರಿಕಾಗಳಲ್ಲಿ, ಲೇಖಕನಾಗಿ ಸಾರಸ್ವತ ಲೋಕದಲ್ಲಿ ಪಡೆದ ಅನುಭವಗಳು ದಾಖಲಾಗಿವೆ. ಆತ್ಮಕಥೆಗಳಲ್ಲಿ ಸಾಮಾನ್ಯವಾಗಿ ಕಾಣುವಂತೆ ಇಲ್ಲೂ ಬಾಲ್ಯಕಾಲದ ಅನುಭವಲೋಕ ದಟ್ಟವಾಗಿದೆ ಮತ್ತು ಆಪ್ತವಾಗಿದೆ. ಇದಕ್ಕೆ ಕಳೆದುಹೋದ ಜಗತ್ತುಗಳನ್ನು ಶೋಧಿಸುತ್ತ ಹೋದಾಗ ಹುಟ್ಟುವ ಹಳಹಳಿಕೆ ಮತ್ತು ಭಾವತೀವ್ರತೆಗಳೂ ಕಾರಣ.ಸಾಮಾಜಿಕವಾಗಿ ಬಡತನದಿಂದ ಬಂದ ಕೀಳರಿಮೆ ಮತ್ತು ಉಚ್ಚಜಾತಿಯಲ್ಲಿ ಹುಟ್ಟಿದ ವೈದಿಕ ಮನೆತನದ ಧಾರ್ಮಿಕ ಗೌರವ- ಪರಸ್ಪರ ವಿರುದ್ಧವೆನಿಸುವ ಇಂತಹ ಪರಿಸರದಲ್ಲಿ ಬೆಳೆಯುತ್ತ ಲೇಖಕರು ದಾಖಲಿಸುವ ಅನೇಕ ಘಟನೆಗಳು ಕುತೂಹಲಕರವಾಗಿವೆ. ಕೆಲವು ದಿಗಿಲು ಹುಟ್ಟಿಸುವಂತಿವೆ. ಚಲನೆಯಿಲ್ಲದ ವೈದಿಕ ವೃತ್ತಿಯಿಂದ ತಪ್ಪಿಸಿಕೊಂಡು ಇಂಗ್ಲಿಷು, ನಗರ, ಆಧುನಿಕ ಬದುಕು, ವಿದೇಶಗಳಿಗೆ ಹೋಗುವುದೇ ಹೊಸಬಾಳಿಗೆ ದಾರಿ ಎಂಬ ಮನೋಭಾವವು, ಇಲ್ಲಿ ‘ಪಿತೃಹತ್ಯೆ’ಯ ವಿಚಿತ್ರ ಮನೋಭಾವಕ್ಕೂ ಕಾರಣವಾಗಿದೆ. ಲೇಖಕರು ತಂದೆಯನ್ನು ವ್ಯಂಗ್ಯವಾಗಿ ಚುಚ್ಚುವ ಸನ್ನಿವೇಶಗಳ, ತಾಯಿಯ ಅಸಹಾಯಕತೆ ಮತ್ತು ದುರಂತ ಸಾವು, ತಂದೆಯ ಕೊನೆಯ ದಿನಗಳು, ಇವೆಲ್ಲ ಜೀವಂತವಾಗಿ ಚಿತ್ರಣಗೊಂಡಿದ್ದು, ಮನಸ್ಸನ್ನು ಕಲಕುತ್ತವೆ. ತನ್ನನ್ನು ಬಿಂಬಿಸಿಕೊಳ್ಳುವುದಕ್ಕಿಂತ, ತನ್ನ ಬಾಲ್ಯದ ಪರಿಸರದ ಬದುಕನ್ನು ಬಿಂಬಿಸುವುದು  ಮುಖ್ಯವಾಗಿರುವ ಕಾರಣ, ಆತ್ಮಕಥೆಯು ವ್ಯಕ್ತಿಕೇಂದ್ರಿತ ನೆಲೆಯನ್ನು ದಾಟಿ ಸಮುದಾಯದ ಅಥವಾ ಒಂದು ತಲೆಮಾರಿನ ಬಾಳಿನ ಕಥನವಾಗಿದೆ.ಆದರೆ ಆತ್ಮಕಥೆಯ ಎರಡನೇ ಭಾಗದಲ್ಲಿ, ಮೊದಲ ಭಾಗದಲ್ಲಿದ್ದ ಸಾಮಾಜಿಕ ಜೀವನದ ದಟ್ಟಬದುಕು ಇಲ್ಲವಾಗುತ್ತ ಹೋಗುತ್ತದೆ. ಇಲ್ಲಿ ಲೇಖಕರ ದೇಶವಿದೇಶಗಳ ತಿರುಗಾಟಗಳಲ್ಲಿ ಎದುರಿಸಿದ ಬಿಕ್ಕಟ್ಟುಗಳ ಚಿತ್ರಗಳು ಬರುತ್ತಾ ಹೋಗುತ್ತವೆ. ಈ ಬಿಕ್ಕಟ್ಟುಗಳು ಭಾಷಿಕ, ಜನಾಂಗೀಯ, ವೃತ್ತಿಜಗತ್ತಿನ ದ್ವೇಷಾಸೂಯೆಗಳ ಪರಿಸರದಲ್ಲಿ ಹುಟ್ಟುವುದರಿಂದ, ಇಲ್ಲೂ ಮೊದಲಿನ ಭಾವತೀವ್ರತೆಯಿದೆ. ಆದರೆ ಮೊದಲ ಘಟ್ಟದಲ್ಲಿದ್ದ ಸಾಮುದಾಯಿಕ ಬದುಕಿನ ಸಾಮಾಜಿಕ ಹರಹಿಲ್ಲ. ಇಲ್ಲಿ ಆತ್ಮಕಥೆಯು ಸಂಸ್ಥೆಗಳ ಮತ್ತು ವ್ಯಕ್ತಿಗಳ ಚರಿತ್ರೆಯಾಗುತ್ತ ಸಾಗುತ್ತದೆ. ಇದು ಮಧ್ಯಮವರ್ಗದ ಯಾವುದೇ ವ್ಯಕ್ತಿ ಬರೆಯುವ ಆತ್ಮಕಥೆಗಳಲ್ಲಿ ತಪ್ಪಿಸಲಾಗದ ವೈರುಧ್ಯವೆಂದು ತೋರುವುದು.ಆತ್ಮಕಥೆಯ ಶುರುವಿನಲ್ಲಿ ಲೇಖಕರು ‘ನಾನೊಬ್ಬ ಸಾಮಾನ್ಯ ಮನುಷ್ಯ ಮತ್ತು ನನ್ನ ಬದುಕು ನನ್ನ ಸಮಕಾಲೀನರಾದ ಸಾವಿರಾರು ಜನರ ಬದುಕಿಗಿಂತ ಭಿನ್ನವಾದುದೇನೂ ಅಲ್ಲ’ ಎಂದು ಹೇಳುತ್ತಾರೆ. ಈ ಸಂಕೋಚ, ಅಳುಕು, ನಮ್ರತೆಗಳು ಕೃತಿಯುದ್ದಕ್ಕೂ ಕೆಲಸ ಮಾಡಿವೆ. ಇದರಿಂದ ಮಾಗಿದ ಜೀವವೊಂದು ತನ್ನ ಬಾಳ ಕಥನವನ್ನು ಕೃತಕತೆ, ಹುಸಿಭಾವುಕತೆ, ಭೋಳೆತನ ಅಹಮಿಕೆಯಿಲ್ಲದೆ ತೆರೆದಿಡಲು ಸಾಧ್ಯವಾಗಿದೆ.ರಾಮಚಂದ್ರನ್ ಒಬ್ಬ ಕಥೆಗಾರರೂ ಆಗಿರುವುದರಿಂದ ಇಲ್ಲಿನ ಬರಹಕ್ಕೆ ಸರಾಗವಾಗಿ ಓದಿಸಿಕೊಂಡು ಹೋಗುವ ಕಥನಶೀಲತೆ ಬಂದಿದೆ. ಇಲ್ಲಿ ಯಶಸ್ವೀ ಜೀವನದ ಬೆನ್ನುಹತ್ತಿ ಮಾಡಿದ ಪಯಣ, ಪಟ್ಟಬವಣೆ ಹಾಗೂ ಗೈದ ‘ಸಾಧನೆ’ಗಳ ದಿಗ್ವಿಜಯ ಭಾವವಿಲ್ಲ; ಬದಲಿಗೆ ಯಶಸ್ಸು ಎಂದು ಬೆನ್ನುಹತ್ತಿ ಸಾಧಿಸಿದ್ದು ಅಷ್ಟೇನು ದೊಡ್ಡದಾಗಿರಲಿಲ್ಲ, ಅದನ್ನು ಪಡೆಯಲು ಮಾಡಿದ ಹೋರಾಟದಲ್ಲಿ ಪಡೆದುದಕ್ಕಿಂತ ಕಳೆದುಕೊಂಡಿದ್ದೂ ಇದೆ ಎಂಬ ವಿಷಣ್ಣತೆಯಿದೆ; ‘ನೆರಳುಗಳ ಬೆನ್ನುಹತ್ತಿ’ ಎಂಬ ತಲೆಬರೆಹದಿಂದಲೇ ಈ ಸ್ವವಿಮರ್ಶೆ ಆರಂಭವಾಗುತ್ತದೆ.‘ಬೆನ್ನುಹತ್ತಿ’ ಹೋಗುವಿಕೆಯೇ ಒಂದು ವಾಂಛೆಯ, ಹಟದ ಹುಡುಕಾಟದ ಕ್ರಿಯೆ. ಆದರೆ ಬಾಳಿನ ನಿರ್ದಿಷ್ಟ ಹಂತದಲ್ಲಿ ನಿಂತು ಹೊರಳಿ ನೋಡುವಾಗ, ಬೆನ್ನುಹತ್ತಿ ಹೋಗಿದ್ದು ಛಾಯೆಗೆ ಎನ್ನುವ ದನಿಯೂ ಇಲ್ಲಿದ್ದಂತಿದೆ.ಈ ಹಿನ್ನೆಲೆಯಲ್ಲಿ, ಇಲ್ಲಿರುವ ವಸಾಹತುಶಾಹಿ ಆಳ್ವಿಕೆಯ ಫಲವಾಗಿ ಇಂಗ್ಲಿಷ್ ಹಾಗೂ ಯೂರೋಪ್ ಬಗ್ಗೆ ಭಾರತೀಯರಲ್ಲಿರುವ ಆಕರ್ಷಣೆ, ಅವು ಹುಟ್ಟಿಸುವ ಕೀಳರಿಮೆ ಮತ್ತು ದೈನ್ಯ, ಅವನ್ನು ಗೆಲ್ಲಲು ಮಾಡುವ ಸೆಣಸಾಟ ಮತ್ತು ಸೋಲುಗಳ ಚಿತ್ರಗಳನ್ನು ಗಮನಿಸಬೇಕು. ಈ ಚಿತ್ರಗಳಿಂದಾಗಿ ಆತ್ಮಸಂಭಾವಿತನದಿಂದ ಕೂಡಿರುವ, ಪಶ್ಚಿಮದ ಮೇಲೆ ದಿಗ್ವಿಜಯ ಸಾಧಿಸಿದ ಮನೋಭಾವದಲ್ಲಿ ಹುಟ್ಟಿರುವ ಕನ್ನಡದ ಕೆಲವು ಆತ್ಮಕಥೆಗಳಿಗೆ ಹೋಲಿಸಿದರೆ ಸದರಿ ಆತ್ಮಕಥೆ ಭಿನ್ನವಾಗುತ್ತದೆ.ಕೌಟುಂಬಿಕವಾದ ಬಡತನ ಮತ್ತು ಅಪಮಾನಗಳ ಜತೆಗೆ ಲೇಖಕರು ಪಡುವ ಕಷ್ಟಗಳು ಮುಖ್ಯವಾಗಿರುವಷ್ಟೇ, ಯುರೋಪಿನಿಂದ ಆಳಿಸಿಕೊಂಡಿರುವ ಸಮಾಜದಲ್ಲಿ, ಪಶ್ಚಿಮದ ನಾಗರಿಕತೆ ಮತ್ತು ಸಂಸ್ಕೃತಿಗಳ ಪ್ರತಿನಿಧಿಯಂತಿರುವ ಇಂಗ್ಲಿಷ್ ಹುಟ್ಟಿಸುವ ಹುಸಿಪ್ರತಿಷ್ಠೆ ಮತ್ತು ಕೀಳರಿಮೆಯ ಸಂಕೀರ್ಣ ಮನಸ್ಥಿತಿಯ ತೊಳಲಾಟಗಳೂ ಚಾರಿತ್ರಿಕವಾಗಿವೆ. ಲಂಕೇಶ್ ಅವರ ಬರೆಹದಲ್ಲೂ ಈ ತೊಳಲಾಟಗಳ ಝಲಕನ್ನು ಕಾಣಬಹುದು. ಬಹುಶಃ ವೃತ್ತಿಯಿಂದ ಆಂಗ್ಲ ಪ್ರಾಧ್ಯಾಪಕರಾಗಿ ಕನ್ನಡದ ಬರೆಹಗಾರರಾದ ಬಹುತೇಕ ಲೇಖಕರ ಬರೆಹಗಳಲ್ಲಿ ಈ ತೊಳಲಾಟದ ಅಂಶವು ಬೇರೆಬೇರೆ ವಿನ್ಯಾಸದಲ್ಲಿ ಕಾಣಿಸಿಕೊಳ್ಳುತ್ತದೆ. ಗೂಗಿ ವಾ ಥಿಯಾಂಗೊ, ಚಿನುವಾ ಅಚಿಬೆ, ವೋಲೆ ಶೊಯೆಂಕಾ ಮುಂತಾದ ಆಫ್ರಿಕನ್ ಲೇಖಕರ ಬರೆಹದಲ್ಲಿಯೂ ಇದಿದೆ.ಆತ್ಮಕತೆಯಲ್ಲಿ ಘಟನೆಗಳನ್ನು ಕಾಣಿಸುತ್ತ ಹೋಗುವ ದಾಖಲಾತಿಯ ಗುಣವು ಪ್ರಧಾನವಾಗಿದೆ. ಜತೆಗೆ ಸ್ವಂತ ಸಾಧನೆಗಳನ್ನು ಬಿಂಬಿಸುವುದಕ್ಕಿಂತ ತನ್ನ ದೋಷ ಹಾಗೂ ತಪ್ಪು ನಿರ್ಧಾರಗಳನ್ನು ನಿಷ್ಠುರವಾಗಿ ವಿಮರ್ಶೆಗೆ ಒಳಪಡಿಸಿಕೊಳ್ಳುವ ಮನೋಭಾವವು, ಆತ್ಮಕಥೆಗೆ ಒಂದು ಬಗೆಯ ಪ್ರಾಮಾಣಿಕತೆಯನ್ನು ಒದಗಿಸಿದೆ. ತನ್ನನ್ನು ತಾನೇ ವಿಮರ್ಶೆಗೆ ಮತ್ತು ಗೇಲಿಗೆ ಒಳಪಡಿಸಿಕೊಳ್ಳುವ ಲೇಖಕರ ಮನೋಭಾವವು  ನಿರೂಪಣಾ ಕ್ರಮಕ್ಕೆ ವಿನೋದಪರತೆಯನ್ನೂ ಆಪ್ತತೆಯನ್ನೂ ಜೋಡಿಸಿದೆ. ಈ ವಿನೋದಪರತೆಯು ಬಾಳಿನ ವೈರುಧ್ಯಗಳನ್ನು ನಿಷ್ಠುರವಾಗಿ ಕಾಣಿಸುವ ಕೆಲಸವನ್ನು ಸಹ ಮಾಡುತ್ತದೆ. ಹೀಗಾಗಿಯೇ ಸಂಕೇತಿಗಳಿಗೆ ಬಡತನ, ಸಂಸ್ಕೃತ ಪಾಂಡಿತ್ಯ, ಇಂಗ್ಲಿಷ್ ವ್ಯಾಮೋಹ, ಗದ್ದೆಕೆಲಸ ಹಾಗೂ ಇಸ್ಪೀಟಾಟಗಳು ಪಿತ್ರಾರ್ಜಿತ ಆಸ್ತಿಯಂತೆ ಬಂದಿವೆ ಎಂದು ಇಲ್ಲಿ ಲೇಖಕರು ನಿರಾಳವಾಗಿ ಹೇಳಬಲ್ಲರು.ಕನ್ನಡದ ಕೆಲವು ಲೇಖಕರ ಆತ್ಮಕಥೆಗಳಲ್ಲಿ ಢಾಳಾಗಿ ಕಾಣುವ ಆತ್ಮಸಂಭಾವನೆ, ಸ್ವವೈಭವೀಕರಣ, ಶತ್ರುಸಂಹಾರದ ತುರುಸು, ಮಾಗದೆ ಉಳಿಯುವ ಕಹಿತನಗಳು ಇಲ್ಲಿಲ್ಲ. ಬದಲಿಗೆ ಕಳೆದುಹೋದ ಬಾಳುವೆಯನ್ನು ಬೆಲೆಗಟ್ಟುವ ಒಂದು ನೋಟದಿಂದ, ಘಟನೆಗಳನ್ನು ಕಾಣಿಸುವ ಮತ್ತು ಜನರನ್ನು ಚಿತ್ರಿಸುವ ದಾಖಲಾತಿ ವಿಧಾನವಿದೆ. ಈ ವ್ಯಕ್ತಿಚಿತ್ರಗಳು ತಮಾಷೆ, ವ್ಯಂಗ್ಯ, ಅನುಕಂಪಗಳಿಂದ ಕೂಡಿವೆ. ತಕ್ಷಣಕ್ಕೆ ಸೊಲ್ಲಾಪುರದಲ್ಲಿ ಬೇಂದ್ರೆಯವರ ಸಂವಾದ, ಪ್ರೊ.ಸಿ.ಡಿ.ಎನ್ ಅವರ ಪಾಠಕ್ರಮ ಇತ್ಯಾದಿ ಘಟನೆಗಳು ನೆನಪಾಗುತ್ತವೆ. ಒಂದು ಘಟನೆಗೆ ಹಲವು ಅರ್ಥಗಳಿವೆ ಮತ್ತು ಇತರರಿಗೂ ಅದನ್ನು ನೋಡುವ ಅವರದೇ ಆದ ದೃಷ್ಟಿಯಿದೆ ಎಂಬ ಉದಾರತೆಯಿಂದ ಹುಟ್ಟಿದ ದೃಷ್ಟಿಕೋನವು, ಇಲ್ಲಿನ ಅನುಭವ ಕಥನಕ್ಕೆ ಒಂದು ದಾರ್ಶನಿಕ ಆಯಾಮವನ್ನೂ ಡೆಮಾಕ್ರಟಿಕ್ ಪರಿಪ್ರೇಕ್ಷ್ಯವನ್ನೂ ಒದಗಿಸಿದೆ.ಸಾವಿನ ಸಮ್ಮುಖದಲ್ಲಿ ಬಾಳನ್ನು ಹೊರಳಿ ನೋಡುತ್ತ ಹುಟ್ಟುವ ಎಲ್ಲ ಆತ್ಮಕಥೆಗಳಲ್ಲಿ ಇರುವ ಜಿಜ್ಞಾಸೆ ಮತ್ತು ದುಗುಡ ಇಲ್ಲೂ ಇದೆ. ಈ ಜಿಜ್ಞಾಸುತನಕ್ಕೆ ಆತ್ಮಕಥೆಯ ಆರಂಭದಲ್ಲಿ ಬಂದಿರುವ ಕವನವೂ, ಕೊನೆಯಲ್ಲಿ ಬಂದಿರುವ ಜೀವಂತವಿರುವಾಗಲೇ ತಾನು ಬದುಕಿರುವ ಬಗ್ಗೆ ಪ್ರಮಾಣಪತ್ರ ಒದಗಿಸುವ ಅಸಂಗತ ಘಟನೆಯೂ ಒಂದು ಚೌಕಟ್ಟನ್ನು ಒದಗಿಸಿವೆ.ಈಚೆಗೆ ಕನ್ನಡದಲ್ಲಿ ಅನೇಕ ಆತ್ಮಕಥೆಗಳು ಪ್ರಕಟವಾದವು. ಉದಾಹರಣೆಗೆ- ಗಿರೀಶ ಕಾರ್ನಾಡರ ‘ಆಡಾಡ್ತ ಆಯುಷ್ಯ’, ಅನಂತಮೂರ್ತಿಯವರ ‘ಸುರಗಿ’, ಇಂದಿರಾ ಲಂಕೇಶರ ‘ನನ್ನ ಹುಳಿಮಾವಿನ ಮರ’, ಉಮಾಶ್ರೀಯವರ ‘ಬೆಂಕಿಬೆಡಗು’, ಪ್ರತಿಭಾ ನಂದಕುಮಾರರ ‘ಅನುದಿನದ ಅಂತರಗಂಗೆ’, ಎಂ. ಮದರಿಯವರ ‘ಗೊಂದಲಿಗ್ಯಾ’ ಇತ್ಯಾದಿ. ಇವುಗಳ ಸಾಲಿಗೆ ರಾಮಚಂದ್ರನ್ ಅವರ ಆತ್ಮಕಥೆಯೂ ಸೇರುತ್ತದೆ. ಸಿಎನ್ನಾರ್, ವಿಮರ್ಶಕರಾಗಿ ಕಾದಂಬರಿಕಾರರಾಗಿ, ಅನುವಾದಕರಾಗಿ, ಚಿಂತಕರಾಗಿ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲೆಲ್ಲ ವಿಶಿಷ್ಟ ಅನುಭಗಳಿಂದಲೂ ಚಿಂತನೆ ಹುಟ್ಟಿಸಬಲ್ಲ ನೋಟಗಳಿಂದಲೂ ಕೂಡಿರುವ ಈ ಆತ್ಮಕಥೆ, ಅವರ ಅತ್ಯುತ್ತಮ ಕೃತಿಯೆನ್ನಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry