ಕಳೆ ನಿಯಂತ್ರಣಕ್ಕೆ ಎಡೆ ಹಿಡಿದ ರೈತರು
ಚಿಂಚೋಳಿ: ತಾಲ್ಲೂಕಿನಲ್ಲಿ ರೈತರು ಕಳೆ ನಿಯಂತ್ರಣಕ್ಕಾಗಿ ಮುಂಗಾರು ಬಿತ್ತನೆ ಪೈರಿನ ಮಧ್ಯೆ `ಎಡೆ~ ಹೊಡೆಯುವ ಕೆಲಸದಲ್ಲಿ ತೊಡಗಿದ್ದಾರೆ.ಕೂಲಿ ಕಾರ್ಮಿಕರ ತೀವ್ರ ಕೊರತೆ ಎದುರಾಗಿದ್ದರಿಂದ ಹಾಗೂ ಕೂಲಿ ಆಳುಗಳು ಹೆಚ್ಚು ಕೂಲಿ ಕೇಳುತ್ತಿರುವುದರಿಂದ ರೈತರು ಬಿತ್ತನೆ ನಡೆಸಿದ ಹೊಲದಲ್ಲಿ ಪೈರಿನ ಮಧ್ಯೆ ಎಡೆ ಹೊಡೆಯುತ್ತಿದ್ದಾರೆ.
ಆಷಾಢ ಗಾಳಿಗೆ ಮಣ್ಣು ಬೇಗ ತೇವಾಂಶ ಕಳೆದು ಕೊಳ್ಳುತ್ತದೆ. ಈ ಸಂದರ್ಭದಲ್ಲಿ ಎಡೆ ಹೊಡೆಯುವುದರಿಂದ ಹೊಲದಲ್ಲಿನ ತೇವಾಂಶ ರಕ್ಷಣೆ ಹಾಗೂ ಕಳೆ ನಾಶ ಹೊಂದುತ್ತದೆ ಎಂದು ರೈತ ರಾಮಕೃಷ್ಣಪ್ಪ ಬೇಮಳಗಿ ಹೇಳುತ್ತಾರೆ.
ಕೂಲಿ ಕಾರ್ಮಿಕರು ಬೆಳೆಯ ಒಂದು ಸಾಲು ಕಳೆ ಕೀಳಲು 25 ರೂಪಾಯಿ ಕೇಳುತ್ತಿದ್ದಾರೆ. ಒಂದು ಎಕರೆ ಕಳೆ ಕೀಳಲು ಸಾವಿರಾರು ರೂಪಾಯಿ ವೆಚ್ಚ ತಗಲುತ್ತದೆ. ಆದರೆ ಇದರಿಂದ ಸುಲಭವಾಗಿ ಪಾರಾಗಲು ತಾವು `ಎಡೆ~ ಕೈಗೆ ಹಿಡಿದು ಕಳೆ ನಿಯಂತ್ರಣಕ್ಕೆ ಮುಂದಾಗಿರುವುದಾಗಿ ತಿಳಿಸಿದರು.
`ಎಡೆ ಹೊಡೆಯುವುದರಿಂದ ಹಲವಾರು ಅನುಕೂಲಗಳಿವೆ. ಎಡೆ ಹೊಡೆದ ವಾರಾಂತ್ಯದಲ್ಲಿಯೇ ಹೊಲದಲ್ಲಿನ ಪೈರು ಚೇತರಿಸಿಕೊಂಡು ಉತ್ತಮ ಬೆಳವಣಿಗೆ ಕಾಣುತ್ತದೆ. ಹೀಗಾಗಿ ತಾವು ಚಿಕ್ಕ ಪೈರಿನಲ್ಲಿಯೇ ಎಡೆ ಹೊಡೆಯುತ್ತಿರುವುದಾಗಿ~ ಅವರು ತಿಳಿಸಿದರು.
ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆ ನಡೆಸಿದ ಹೊಲಗಳಲ್ಲಿ ಪೈರು ಸಾಲು ಹರಿದಿದ್ದು ಕಳೆ ಕೀಳುವ ಹಾಗೂ ಎಡೆ ಹೊಡೆಯವ ಕಾರ್ಯ ಭರದಿಂದ ಎಲ್ಲಾ ಕಡೆಗಳಲ್ಲಿ ನಡೆಯುತ್ತಿದೆ.ತಾಲ್ಲೂಕಿನ ಐನಾಪೂರ, ಚಂದನಕೇರಾ, ರಾಣಾಪುರ, ಕೋಡ್ಲಿ, ರುಮ್ಮನಗೂಡ, ಚೇಂಗಟಾ, ಕೊಂಚಾವರಂ, ಶಾದಿಪೂರ, ನಿಡಗುಂದಾ, ಸುಲೇಪೇಟ, ಸಲಗರ ಬಸಂತಪೂರ, ತುಮಕುಂಟಾ ಮತ್ತಿತರ ಗ್ರಾಮಗಳ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳು ಚುರುಕಿನಿಂದ ಸಾಗಿವೆ.
ರೈತರು ಎಡೆ ಹೊಡೆದು, ಕಳೆ ಕೀಳುವುದರಲ್ಲಿ ಮತ್ತು ಅಳಿದುಳಿದ ಹೊಲ ಬಿತ್ತನೆಯಲ್ಲಿ ತೊಡಗಿದ್ದಾರೆ, ರೈತರ ನಿರೀಕ್ಷೆಯಂತೆ ಮುಂಗಾರು ಮಳೆ ಸುರಿದಿಲ್ಲ ಆದರೆ ಸ್ವಲ್ಪ ವಿಳಂಬವಾಗಿ ಮಳೆ ಸುರಿಯುವ ಮೂಲಕ ರೈತರಲ್ಲಿ ಮೂಡಿದ್ದ ನಿರಾಶೆಯ ಕಾರ್ಮೋಡ ಮಾಯವಾಗಿಸಿದೆ.
ಮಳೆ ಆಗಾಗ ನಿರೀಕ್ಷೆಯಂತೆ ಸುರಿಯುತ್ತಿರುವುದರಿಂದ ರೈತರಲ್ಲಿ ಸಂತಸ ಮನೆ ಮಾಡಿದೆ. ಇದರಿಂದ ಉಲ್ಲಸಿತರಾದ ನೇಗಿಲಯೋಗಿ ಕೃಷಿ ಚಟುವಟಿಕೆಗಳಲ್ಲಿ ನಿರತರಾದರೆ ಹಸಿರು ಸಿರಿಯತ್ತ ಭೂರಮೆ ಹೊರಳುತ್ತಿದ್ದಾಳೆ .ಹೀಗಾಗಿ ಜಾನುವಾರುಗಳ ಮೇವಿನ ಕೊರತೆಗೆ ನೈಸರ್ಗಿಕವಾಗಿ ಪರಿಹಾರ ಲಭಿಸಿದಂತಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.