ಕಳ್ಳಬಟ್ಟಿ ತಯಾರಿಕೆಯಲ್ಲಿ ಬೆಳಗಾವಿ ಪ್ರಥಮ!

7

ಕಳ್ಳಬಟ್ಟಿ ತಯಾರಿಕೆಯಲ್ಲಿ ಬೆಳಗಾವಿ ಪ್ರಥಮ!

Published:
Updated:
ಕಳ್ಳಬಟ್ಟಿ ತಯಾರಿಕೆಯಲ್ಲಿ ಬೆಳಗಾವಿ ಪ್ರಥಮ!

ಬೆಳಗಾವಿ: `ಅಬಕಾರಿ ಇಲಾಖೆಯಲ್ಲಿ 2012-13ನೇ ಸಾಲಿನಲ್ಲಿ ವಿವಿಧ ಮೂಲಗಳಿಂದ 11,200 ಕೋಟಿ ರೂಪಾಯಿ ರಾಜಸ್ವ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಡಿಸೆಂಬರ್ 24ರವರೆಗೆ 8012.65 ಕೋಟಿ ರೂಪಾಯಿ ಸಂಗ್ರಹಿಸಲಾಗಿದ್ದು, ಗುರಿ ಮೀರಿ ಸಾಧನೆ ಮಾಡಲಾಗುವುದು' ಎಂದು ಅಬಕಾರಿ ಇಲಾಖೆ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.ನಗರದಲ್ಲಿ ಗುರುವಾರ ಇಲಾಖೆಯ ಪ್ರಗತಿ ಪರಿಶೀಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, `ರಾಜ್ಯದಲ್ಲಿ 2048 ಕಳ್ಳಬಟ್ಟಿ ತಯಾರಿಕಾ ಕೇಂದ್ರಗಳಿದ್ದವು. ಈಗ ಕೇವಲ 91 ಕೇಂದ್ರಗಳಿದ್ದು, 78 ಸಣ್ಣ, 10 ಮಧ್ಯಮ ಹಾಗೂ 3 ದೊಡ್ಡ ಕೇಂದ್ರಗಳಿವೆ. ಬೆಳಗಾವಿ, ಬಾಗಲಕೋಟೆ ಹಾಗೂ ವಿಜಾಪುರ ಜಿಲ್ಲೆಗಳಲ್ಲಿ ಹೆಚ್ಚು ಕಳ್ಳಬಟ್ಟಿ ತಯಾರಿಸಲಾಗುತ್ತಿದೆ. ಬೆಳಗಾವಿಯಲ್ಲಿ ಮೊದಲಿದ್ದ 83 ಕಳ್ಳಬಟ್ಟಿ ಕೇಂದ್ರಗಳ ಪೈಕಿ ಈಗ ಕೇವಲ 41 ಮಾತ್ರ ಉಳಿದುಕೊಂಡಿದೆ' ಎಂದು ವಿವರ ನೀಡಿದರು.`ಕಳ್ಳಬಟ್ಟಿ ತಯಾರಿಕೆಯು ಕ್ಯಾನ್ಸರ್‌ನಂತೆ ಶೀಘ್ರದಲ್ಲಿ ಕಡಿಮೆಯಾಗದ ರೋಗವಾಗಿದೆ. ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ದೀರ್ಘಾವಧಿ ತಗಲುತ್ತದೆ. ಈಗಾಗಲೇ ಕಳ್ಳಬಟ್ಟಿ ತಯಾರಿಕಾ ಕೇಂದ್ರಗಳ ಮೇಲೆ ಮೇಲಿಂದ ಮೇಲೆ ದಾಳಿ ನಡೆಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ರಾಜ್ಯದಲ್ಲಿ 135 ತಾಲ್ಲೂಕುಗಳನ್ನು ಸಂಪೂರ್ಣ ವಾಗಿ ಕಳ್ಳಬಟ್ಟಿ ಮುಕ್ತವನ್ನಾಗಿ ಮಾಡಲು ಯಶಸ್ವಿಯಾಗಿದ್ದೇವೆ' ಎಂದು ಹೇಳಿದರು.`2011-12ನೇ ಸಾಲಿನಲ್ಲಿ 9,200 ಕೋಟಿ ರೂಪಾಯಿ ರಾಜಸ್ವ ಸಂಗ್ರಹಿಸುವ ಗುರಿ ಇತ್ತು. 9827.89 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಕಳೆದ ವರ್ಷ ಡಿಸೆಂಬರ್ 24ರ ಅವಧಿಯಲ್ಲಿ ಕೇವಲ 6508.66 ಕೋಟಿ ರೂಪಾಯಿ ಸಂಗ್ರಹಿಸಲಾಗಿತ್ತು.ಇಲಾಖೆಯಲ್ಲಿನ ಸೋರಿಕೆಯನ್ನು ತಡೆಗಟ್ಟುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಲಾಗುತ್ತಿದೆಯೇ ಹೊರತು, ಕುಡುಕರ ಸಂಖ್ಯೆ ಹೆಚ್ಚಾಗಿದೆ ಎಂದಲ್ಲ. ಇಲಾಖೆಯು ಮದ್ಯ ಸೇವಿಸುವಂತೆ ಪ್ರಚಾರ ಮಾಡುತ್ತಿಲ್ಲ' ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.`ಈ ವರ್ಷದ ಡಿ. 24ರವರೆಗೆ ರಾಜ್ಯದಲ್ಲಿ 40,559 ದಾಳಿಗಳನ್ನು ನಡೆಸಲಾಗಿದೆ. 8,125 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 4674 ಆರೋಪಿಗಳನ್ನು ಬಂಧಿಸಿ, 247 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 14 ಸಾವಿರ ಲೀಟರ್ ಕಳ್ಳಬಟ್ಟಿ ನಾಶಪಡಿಸಲಾಗಿದೆ' ಎಂದು ಹೇಳಿದರು. `ಬೆಳಗಾವಿ ವಿಭಾಗದಲ್ಲಿ 1295 ಪ್ರಕರಣಗಳನ್ನು ದಾಖಲಿಸಿಕೊಳ್ಳ ಲಾಗಿದ್ದು, 799 ಆರೋಪಿಗಳನ್ನು ಬಂಧಿಸ ಲಾಗಿದೆ. 1706 ಲೀಟರ್ ಭಾರತೀಯ ಮದ್ಯ ಹಾಗೂ 2144 ಲೀ. ಗೋವಾ ಮದ್ಯ ಜಪ್ತಿ ಮಾಡಲಾಗಿದೆ. 4884 ಲೀಟರ್ ಕಳ್ಳಬಟ್ಟಿ ಸಾರಾಯಿ ನಾಶ ಮಾಡಲಾಗಿದ್ದು, 11765 ಲೀ. ಬೆಲ್ಲದ ರಸಾಯನ ನಾಶ ಮಾಡಲಾಗಿದೆ' ಎಂದು ವಿವರ ನೀಡಿದರು.`ಬೆಳಗಾವಿ ವಿಭಾಗದಲ್ಲಿ ಮೊದಲಿದ್ದ 343 ಕಳ್ಳಬಟ್ಟಿ ಕೇಂದ್ರಗಳಲ್ಲಿ 281 ನಿರ್ಮೂಲನೆ ಮಾಡಲಾಗಿದೆ. ಬೆಳಗಾವಿಯಲ್ಲಿ 41, ಧಾರವಾಡ 6, ವಿಜಾಪುರ 2, ಬಾಗಲಕೋಟೆ 12 ಹಾಗೂ ಹಾವೇರಿ 1 ಸೇರಿದಂತೆ ವಿಭಾಗದಲ್ಲಿ ಇನ್ನೂ 62 ಕಳ್ಳಬಟ್ಟಿ ತಯಾರಿಕಾ ಕೇಂದ್ರಗಳಿವೆ. ಅವುಗಳನ್ನು ನಿರ್ಮೂಲನೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಹೇಳಿದರು.

ಅಬಕಾರಿ ಜಂಟಿ ಆಯುಕ್ತ ಎಂ. ಪ್ರಭುಸ್ವಾಮಿ ಈ ಸಂದರ್ಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry