ಕಳ್ಳ ಯಾರೆಂದು ಜನರೇ ನಿರ್ಧರಿಸಲಿ

7

ಕಳ್ಳ ಯಾರೆಂದು ಜನರೇ ನಿರ್ಧರಿಸಲಿ

Published:
Updated:

ಮೈಸೂರು: `ನನ್ನ ಆಸ್ತಿಯ ಬಗ್ಗೆ ತನಿಖೆ ಆಗಬೇಕು ಎಂಬ ಸಂಸದ ಅಡಗೂರು ಎಚ್. ವಿಶ್ವನಾಥ್ ಅವರ ಆಗ್ರಹವನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ. ಮಾತ್ರವಲ್ಲ; ಅವರೊಂದಿಗೆ ಬಹಿರಂಗ ಚರ್ಚೆಗೂ ಸಿದ್ಧನಿದ್ದೇನೆ. ನನ್ನ ಆಸ್ತಿ ದಾಖಲೆಗಳನ್ನು ಅವರು ತರಲಿ, ಅವರ ಆಸ್ತಿ ದಾಖಲೆಗಳನ್ನು ನಾನು ತರುತ್ತೇನೆ. ಯಾರು ಕಳ್ಳರು ಎಂಬುದನ್ನು ಜನರೇ ನಿರ್ಧರಿಸಲಿ~ ಎಂದು ಶಾಸಕ ಸಾ.ರಾ. ಮಹೇಶ್ ತಿರುಗೇಟು ನೀಡಿದರು.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಪ್ರತಿ ಬಾರಿ ಚುನಾವಣೆ ನಡೆದಾಗಲೂ ನನ್ನ ಆಸ್ತಿ ಬಹಿರಂಗ ಮಾಡಿದ್ದೇನೆ, ಪ್ರತಿ ವರ್ಷ ಲೋಕಾಯುಕ್ತರ ಮುಂದೆ ಕೂಡ ದಾಖಲೆ ನೀಡಿದ್ದೇನೆ. ಈ ಬಗ್ಗೆ ಸಂಸದರು ಬಹಿರಂಗ ಚರ್ಚೆಗೂ ತಯಾರಿಲ್ಲ, ಚಾಮುಂಡಿದೇವಿ ಮುಂದೆ ಪ್ರಮಾಣ ಮಾಡಲೂ ಸಿದ್ಧರಿಲ್ಲ. ಮತ್ತೇಕೆ ಆರೋಪ ಮಾಡುವುದು~ ಎಂದು ಅವರು ಪ್ರಶ್ನಿಸಿದರು.`ತಾಲ್ಲೂಕಿನ ಯಡಹಳ್ಳಿ ಗ್ರಾಮದಲ್ಲಿ 3 ಎಕರೆ 33 ಗುಂಟೆ ಜಮೀನನ್ನು 2010ರ ನವೆಂಬರ್ 8 ರಂದು ಸಂಸದರ ಕುಟುಂಬದವರಿಗೆ ಕ್ರಯ ಮಾಡಲಾಗಿದೆ. ಇದರ ಕಡತಗಳಿಗೆ ಕೂಡಲೇ ಅನುಮೋದನೆ ನೀಡುವಂತೆ ಸ್ವತಃ ವಿಶ್ವನಾಥ್ ಅವರೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಪತ್ರ ಬರೆದಿದ್ದಾರೆ.ದಾಖಲೆಗಳನ್ನು ಪರಿಶೀಲಿಸಿದರೆ ಇಲ್ಲಿ ಸಂಪೂರ್ಣ ಡಿ-ನೋಟಿಫಿಕೇಶನ್ ಮಾಡಿದ್ದು ಸ್ಪಷ್ಟವಾಗಿದೆ. ಸಂಸದರು ತಮ್ಮ ಈ ತಪ್ಪುಗಳನ್ನು ಮರೆ ಮಾಚಲು ಬೇರೊಬ್ಬರ ಮೇಲೆ ಆರೋಪ ಮಾಡುತ್ತಿದ್ದಾರೆ~ ಎಂದು ಮಹೇಶ್ ದೂರಿದರು.`2004ರಲ್ಲಿ ವಿಶ್ವನಾಥ್ ಅವರು ಸಚಿವರಾಗಿದ್ದಾಗ ಜಿಲ್ಲೆಯ ಕೆರೆ, ಕಾಲುವೆಗಳ ಹೂಳೆತ್ತಲು ರೂ. 2.5 ಕೋಟಿ ಅನುದಾನ ಬಂದಿತ್ತು. ಆದರೆ, ಒಂದೇ ಒಂದು ಕಾಮಗಾರಿ ನಡೆಸದ ವಿಶ್ವನಾಥ್ ಎಲ್ಲ ಹಣವನ್ನು ತಮ್ಮ ಚುನಾವಣೆಗಾಗಿಯೇ ಬಳಸಿಕೊಂಡಿದ್ದಾರೆ. ಇದು ಜಿಲ್ಲೆಯ ಜನತೆಗೆ ಗೊತ್ತಿರುವ ವಿಷಯ~ ಎಂದು ಶಾಸಕರು ಆರೋಪಿಸಿದರು. ಜೆಡಿಎಸ್ ಮುಖಂಡ ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ದ್ವಾರಕೀಶ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry