ಕವಡಿಮಟ್ಟಿಯಲ್ಲಿ ವೀರಾವೇಶದ ಬಡಗಿ ಹಬ್ಬ

7

ಕವಡಿಮಟ್ಟಿಯಲ್ಲಿ ವೀರಾವೇಶದ ಬಡಗಿ ಹಬ್ಬ

Published:
Updated:

 ಮುದ್ದೇಬಿಹಾಳ: ಭಾರತೀಯರು ಬ್ರಿಟಿಷರ ವಿರುದ್ಧ ಕರ ನಿರಾಕರಣೆಯ ಕಥೆ ಕೇಳಿದ್ದೇವೆ. ಅದುವೇ ಕವಡಿಮಟ್ಟಿ ಗ್ರಾಮದಲ್ಲಿ ಇಂಗ್ಲಿಷರ ವಿರುದ್ಧ ಭೂ ಕರ ಕೊಡದೇ ಹೋರಾಡಿ ಪ್ರಾಣ ತೆತ್ತ ಜುಮ್ಮಣ್ಣ ಮುತ್ಯಾನ ಹೋರಾಟ. ಅದು ಮೈ ನವಿರೇಳಿಸುವ ಬಡಗಿಗಳ ಹೊಡೆದಾಟ.  ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈರಗುಡಿ ಹಬ್ಬ ಅಥವಾ ಬಡಗಿ ಹಬ್ಬದ ಹಿಂದೆ  ಅದ್ಭುತವಾದ ರೋಮಾಂಚನದ  ಕಥೆ ಇದೆ. ಈ ಹಬ್ಬ ಭಾನುವಾರ ಕವಡಿಮಟ್ಟಿಯಲ್ಲಿ ನಡೆಯಿತು.  501 ಬಡಿಗೆಗಳನ್ನು ಹಿಡಿದ  ಜನರ ಗುಂಪಿನ ಮಧ್ಯೆ `ದೇವರು~ ಬಂದ ವ್ಯಕ್ತಿ ಬಡಿಗೆ ಹಿಡಿದುಕೊಂಡು ತನಗೆ ಬಿರುಸಾಗಿ ಹೊಡೆಯುವ ನೂರಾರು ಜನರ ಹೊಡೆತಗಳನ್ನು ಸಹಿಸುತ್ತ ಸಾಗುವ ದೃಶ್ಯ ಯಾರಿಗಾದರೂ ಭಯ ಹುಟ್ಟಿಸುತ್ತದೆ.  ಇಂಥ ಮೈನವಿರೇಳಿಸುವ ಹೊಡೆದಾಟ ದಲ್ಲಿ ಗಾಯಗಳಾಗುವದು, ರಕ್ತ ಚಿಮ್ಮುವದು ಸಾಮಾನ್ಯ. ಆದರೆ ತಕ್ಷಣವೇ ಬಂಢಾರ (ಅಕ್ಕಿಯಿಂದ ಮಾಡಿದ ರೋಗ ನಿರೋಧಕ ಅರಿಶಿನ ) ಮಿಶ್ರಿತ ಬಾನ ಗಾಯವಾದ ವ್ಯಕ್ತಿಗೆ  ಲೇಪಿಸುವದರಿಂದ ಆತನಿಗೆ ಏನೂ ಆಗುವುದಿಲ್ಲ.  ಸುಮಾರು ಇಪ್ಪತ್ತೈದು ಜನರ ಆರು ಗುಂಪುಗಳು ಪ್ರತ್ಯೇಕವಾಗಿ  ಬಡಗಿಗಳಿಂದ ಕಾದಾಡುತ್ತ ಹೋಗುವುದನ್ನು ನೋಡಲು ಇಡೀ ಜಿಲ್ಲೆಯಲ್ಲದೇ ಬೇರೆ ಊರುಗಳ ಜನರೂ ಇಲ್ಲಿ ಸೇರಿದ್ದರು.ಪ್ರತಿ ಮೂರು ವರ್ಷಕ್ಕೊಮ್ಮೆ  ಗ್ರಾಮದಲ್ಲಿ ಆಚರಿಸುವ ಈ ಹಬ್ಬ ಈ ಮಧ್ಯೆ ನಿಂತು ಹೋಗಿತ್ತಾದರೂ ಈಗ ಕಳೆದ 12 ವರ್ಷಗಳಿಂದ ಮತ್ತೆ ಪ್ರಾರಂಭವಾಗಿದೆ.ಭಾನುವಾರ ಬೆಳಿಗ್ಗೆ ಮುತ್ಯಾನ ಕತೃ ಗದ್ದುಗೆಯಲ್ಲಿ ವಿಶೇಷ ಪೂಜೆ, ದೇವರ ಹೇಳಿಕೆಗಳು, ಉಕ್ಕಿನ ಗುಂಡುಗಳಿಂದ ಬಲವಾಗಿ ಬೆನ್ನಿಗೆ ಹೊಡೆದುಕೊಳ್ಳುವ ಪ್ರಕ್ರಿಯೆ ನಡೆದವು. ಜೋಡು ಪಲ್ಲಕ್ಕಿ ಯಲ್ಲಿ ಮುತ್ಯಾನ ಬೆಳ್ಳಿಯ ಮೂರ್ತಿಗಳ ಮೆರವಣಿಗೆ  ಕತೃ ಗದ್ದುಗೆಯ ದೇವಸ್ಥಾನದಿಂದ ಆರಂಭ ವಾಗಿ ಗ್ರಾಮದ ಪ್ರಮುಖ ಬೀದಿಗುಂಟ ಸಿಹಿನೀರಿನ ಬಾವಿಯವರೆಗೆ ಬಂದಿತು.  ಈ ಜಾತ್ರೆಯಲ್ಲಿ ಹಾಲುಮತ (ಕುರುಬ) ಸಮಾಜದ ಸಾವಿರಾರು ಜನ ಪಾಲ್ಗೊಂಡು ಭಕ್ತಿ ವೀರಾವೇಶದ ಪ್ರತಿ ರೂಪವಾಗಿ ಈ ಹಬ್ಬವನ್ನು ಆಚರಿಸುವ ಪರಿಪಾಠ ನಡೆದುಬಂದಿದೆ.ಬಡಗಿ ಹಬ್ಬದಲ್ಲಿ ಗ್ರಾಮದ ಪ್ರಮುಖರಾದ ತಮ್ಮಣ್ಣ ಪೂಜಾರಿ, ಹನುಮಂತ ಪೂಜಾರಿ, ದ್ಯಾಮಣ್ಣ ಸಿದ್ದಮಾನೆಪ್ಪ ಹೊಕ್ರಾಣಿ, ಭೀಮಣ್ಣ ಪೂಜಾರಿ, ಬಸಪ್ಪ ಇಣಚಗಲ್ಲ, ಎಚ್.ಟಿ.ಪೂಜಾರಿ, ಬಸವರಾಜ ಹೊಕ್ರಾಣಿ, ಬಸವರಾಜ ಬಿರಾದಾರ, ಮಾಳಪ್ಪ ಬಳಬಟ್ಟಿ, ನಿಂಗಪ್ಪಗೌಡ ಬಪ್ಪರಗಿ, ಮಲಕೇಂದ್ರಗೌಡ ಪಾಟೀಲ, ಸಿದ್ರಾಮಯ್ಯ ಮಠ, ಮಲ್ಲೇಶಪ್ಪ ಹಡಪದ, ಸಿದ್ರಾಮಪ್ಪ ವಾಲಿಕಾರ, ಚಂದಾಲಿಂಗ ಹಂಡರಗಲ್ಲ ಮೊದಲಾದವರು ಪಾಲ್ಗೊಂಡಿದ್ದರು.

ಬಡಗಿ ಹಬ್ಬದ ಹಿನ್ನೆಲೆ 

ಸುಮಾರು ನೂರು ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ಭೂಮಿ ಉಳುಮೆ ಮಾಡುತ್ತಿದ್ದ ರೈತ ಜುಮ್ಮಣ್ಣ ಬ್ರಿಟಿಷರಿಗೆ ಭೂಮಿಯ ಕರ ಕೊಡಲಿಕ್ಕಾಗದೇ ರಾತ್ರಿಯ ಹೊತ್ತು ಭೂಮಿ ಉಳುಮೆ ಮಾಡುತ್ತಿದ್ದನಂತೆ. ಇದನ್ನು ತಿಳಿದ ಬ್ರಿಟಿಷರು ಆತನ ಮೇಲೆ ದಾಳಿ ಮಾಡಿದಾಗ ಅವರ ವಿರುದ್ಧ ಏಕಾಂಗಿಯಾಗಿ ಜುಮ್ಮಣ್ಣ ಮುತ್ಯಾ ಎತ್ತಿನ ಗಾಡಿಯ ನೊಗ ಹಿಡಿದು ದೊಡ್ಡ ಹೋರಾಟ ಮಾಡಿದನಾದರೂ ಕೊನೆಗೆ ವಿರೋಧಿಗಳು ಕುತಂತ್ರದಿಂದ ತಲೆ ಕಡಿದು ಓಡಿ ಹೋದರಂತೆ.ಎಂದಿನಂತೆ  ಮರುದಿನ ಬೆಳಿಗ್ಗೆ ಜುಮ್ಮಣ್ಣನ ಸಹೋದರಿ ಬುತ್ತಿ ತೆಗೆದುಕೊಂಡು ಅಣ್ಣನನ್ನು ನೋಡಲು ಹೋದಾಗ ಅಣ್ಣನ ರುಂಡ ನೋಡಿ ಅಂಜುವಷ್ಟರಲ್ಲಿಯೇ  ರುಂಡವು ಮಾತಾಡಿ, ನನ್ನ ದೇಹವನ್ನು ಅಂತ್ಯಕ್ರಿಯೆ ಮಾಡುವಂತೆ ಮತ್ತು ನನ್ನ ನೆನಪಿಗೆ ವೀರಾವೇಶದ ಹಬ್ಬವನ್ನು ಬಡಿಗೆ ಹಬ್ಬದಂತೆ ಆಚರಿಸುವಂತೆ ಹೇಳಿ ವೀರ ಮರಣ ಹೊಂದಿದ ಎಂಬುದು ಪ್ರತೀತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry