ಗುರುವಾರ , ಫೆಬ್ರವರಿ 25, 2021
31 °C
ನಗರದ ಲೀಲಾ ಪ್ಯಾಲೇಸ್‌ನಲ್ಲಿ ‘ಬೆಂಗಳೂರು ಕಾವ್ಯ ಉತ್ಸವ’ಕ್ಕೆ ಚಾಲನೆ

ಕವನ ವಾಚಿಸಿದ ಬಿಜೆಪಿ ಸಂಸದ ವರುಣ್‌ ಗಾಂಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕವನ ವಾಚಿಸಿದ ಬಿಜೆಪಿ ಸಂಸದ ವರುಣ್‌ ಗಾಂಧಿ

ಬೆಂಗಳೂರು: ‘ಆಟ ಗಲಾಟ’ ಸಂಸ್ಥೆಯು ನಗರದ ಲೀಲಾ ಪ್ಯಾಲೇಸ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ಬೆಂಗಳೂರು ಕಾವ್ಯ ಉತ್ಸವ’ದಲ್ಲಿ ಬಿಜೆಪಿ ಸಂಸದ ವರುಣ್‌ ಗಾಂಧಿ ಅವರು ‘ವಿಂಟರ್‌ ಗಾರ್ಡನ್‌’ ಎಂಬ ಕವನವನ್ನು ವಾಚಿಸಿದರು.‘ವಿಂಟರ್‌ ಗಾರ್ಡನ್‌’ ಕವಿತೆ ಬಗ್ಗೆ ವಿವರಿಸಿದ ವರುಣ್‌, ‘ನನ್ನ ಅಜ್ಜಿ ನಿಧನರಾದ ಕೆಲ ವರ್ಷಗಳ ಬಳಿಕ ಉತ್ತರಾಖಂಡ ರಾಜ್ಯಕ್ಕೆ ಭೇಟಿ ನೀಡಿದ್ದೆ. ಆಗ ಅಜ್ಜಿಯ ನೆನಪಾಯಿತು. ಅವರ ನೆನಪಿನಲ್ಲಿ ಈ ಕವಿತೆಯನ್ನು ರಚಿಸಿದೆ’ ಎಂದರು.‘ನನ್ನ ರಚನೆಯ ‘ದ ಅದರ್‌ನೆಸ್‌ ಆಫ್‌ ಸೆಲ್ಫ್‌’, ‘ಸ್ಟಿಲ್‌ನೆಸ್‌’ ಕೃತಿಗಳು ಈಗಾಗಲೇ ಪ್ರಕಟಗೊಂಡಿವೆ. ಈಗ ‘ಸರೆಂಡರ್‌’ ಎಂಬ ಕೃತಿಯನ್ನು ರಚಿಸುತ್ತಿದ್ದೇನೆ’ ಎಂದು ಅವರು, ‘ಧರ್ಮಕ್ಕಿಂತ ಮೀರಿದ ಅಮೂರ್ತ ಶಕ್ತಿಯನ್ನು ನಾನು ನಂಬುತ್ತೇನೆ. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕೆಂದು ಮನಸ್ಸು ಸದಾ ಹಂಬಲಿಸುತ್ತದೆ’ ಎಂದು ಹೇಳಿದರು.ಸಭಿಕರೊಬ್ಬರು, ‘ವರುಣ್‌ ಗಾಂಧಿ ಅವರು ಕವಿ ಎಂಬುದು ತಿಳಿದಿರಲಿಲ್ಲ. ತುಂಬ ಸೊಗಸಾದ ಹಾಗೂ ಅರ್ಥಪೂರ್ಣವಾದ ಕವಿತೆಯನ್ನು ವಾಚಿಸಿದರು. ಕವನದಲ್ಲಿ ಬಳಸಿದ ಪದಗಳು ಮೌಲ್ಯಯುತವಾಗಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಾಹಿತಿ, ಗೀತ ರಚನೆಕಾರ ಜಾವೇದ್ ಅಖ್ತರ್ ಅವರು ‘ಇನ್‌ ಅದರ್‌ ವರ್ಡ್ಸ್‌’ ಕೃತಿಯ ‘ವಕ್ಟ್‌್’ ಕವನವನ್ನು ವಾಚಿಸಿದರು. ಈ ಕವಿತೆ ಸಮಯದ ಮಹತ್ವವನ್ನು ಸಾರುತ್ತದೆ.ಅಖ್ತರ್‌ ಅವರು ಕಾವ್ಯದ ಬಗ್ಗೆ ಸಭಿಕರ ಜತೆ ಸಂವಾದ ನಡೆಸಿದರು. ‘ನಾನು ಸಾಹಿತ್ಯದ ಹಿನ್ನೆಲೆ ಇರುವ ಕುಟುಂಬದಿಂದ ಬಂದವನು. ನಮ್ಮ ಅಜ್ಜ, ತಂದೆ ಸಾಹಿತಿಗಳಾಗಿದ್ದರು.  ಮನೆಯಲ್ಲಿ ಕಾವ್ಯದ ಬಗ್ಗೆ ಚರ್ಚೆ ನಡೆಯುತ್ತಿತ್ತು. ನಾನು 13 ವರ್ಷದವನಿದ್ದಾಗಲೇ ಹಲವು ಪದ್ಯಗಳನ್ನು ಬಾಯಿಪಾಠ ಮಾಡಿಕೊಂಡಿದ್ದೆ’ ಎಂದು ನೆನಪು ಮಾಡಿಕೊಂಡರು.‘ಅರ್ಥಪೂರ್ಣವಾದ ಸ್ಕ್ರಿಪ್ಟ್‌ ಬರೆದರೆ ಯುವಕರಿಗೆ ಹಿಡಿಸುವುದಿಲ್ಲ ಎಂಬ  ಮಾತು ಚಿತ್ರರಂಗದಲ್ಲಿದೆ. ಆದರೆ, ಇದನ್ನು ನಾನು ಒಪ್ಪುವುದಿಲ್ಲ. ಅರ್ಥಪೂರ್ಣವಾದ ಸಂಭಾಷಣೆ, ಚಿತ್ರಕತೆ ಯುವಕರನ್ನು ಹೆಚ್ಚು ಸೆಳೆಯುತ್ತದೆ’ ಎಂದರು.‘ಬಾಲಿವುಡ್‌ನ ನಟ ರಾಜೇಶ್‌ ಖನ್ನಾ ಅವರು ಒಳ್ಳೆಯ ನಟರಲ್ಲ ಎಂದು  ಹಿರಿಯ ನಟ ನಾಸಿರುದ್ದೀನ್ ಷಾ ಅವರು ಟೀಕೆ ಮಾಡಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಖ್ತರ್‌, ‘ದಿಲೀಪ್‌ ಕುಮಾರ್‌, ಅಮಿತಾಭ್‌ ಬಚ್ಚನ್‌ ಅವರ ಬಗ್ಗೆಯೂ ನಾಸಿರುದ್ದೀನ್‌ ಷಾ ಟೀಕೆ ಮಾಡಿದ್ದಾರೆ. ಅವರು ಯಶಸ್ವಿ ವ್ಯಕ್ತಿಗಳನ್ನು ಎಂದೂ ಹೊಗಳಿಲ್ಲ’ ಎಂದರು.***

ಪ್ರತಿಯೊಬ್ಬರಿಗೂ ಕಷ್ಟದ ಅನುಭವ ಆಗಬೇಕು. ಇದು ಪ್ರೀತಿ ಮತ್ತು ದಯೆ ಗುಣಗಳನ್ನು ಬೆಳೆಸುತ್ತದೆ

-ವರುಣ್‌ ಗಾಂಧಿ,ಬಿಜೆಪಿ ಸಂಸದ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.