ಕವಲುಗಳ ಅನಾವರಣ

7

ಕವಲುಗಳ ಅನಾವರಣ

Published:
Updated:
ಕವಲುಗಳ ಅನಾವರಣ

ಬೌರಿಂಗ್ ಇನ್‌ಸ್ಟಿಟ್ಯೂಟ್‌ನ ಕಾಂಪೌಂಡ್ ಸುತ್ತಲೂ ಇದ್ದ ಒಣ ಮರದ ಕೊಂಬೆಯೊಂದರಲ್ಲಿ ಕಪ್ಪುಹಕ್ಕಿಯೊಂದು ಗೂಡು ಕಟ್ಟಿತ್ತು. ತೆರೆದ ಆವರಣದಲ್ಲಿ ಅಬ್ಬರಿಸುತ್ತಿದ್ದ ಸಂಗೀತಕ್ಕೆ ಆ ಕಪ್ಪುಹಕ್ಕಿ ಬೆಚ್ಚಿ ಎದ್ದು ಕುಳಿತುಕೊಂಡಿತು. ಆನಂತರ ನಿಧಾನವಾಗಿ ಸಾವರಿಸಿಕೊಂಡು ಸಂಗೀತದ ಲಯಕ್ಕೆ ಅನುಗುಣವಾಗಿ ಅದೂ ದನಿಗೂಡಿಸಿತು.ಎರಡು ದಿನ ಫ್ಯಾಷನ್ ಶೋ ನೋಡಿ ಗೀಳುಹತ್ತಿಸಿಕೊಂಡಂತಿದ್ದ ಆ ಕಪ್ಪುಹಕ್ಕಿ ತನ್ನ ಗೆಳತಿಯನ್ನು ಎಬ್ಬಿಸಿ ಕೂರಿಸಿ, ಶೋ ನೋಡಲು ಅಣಿಯಾಯಿತು. ಶ್ವೇತವರ್ಣದ ಸುಂದರಿಯರು ಕ್ಯಾಟ್‌ವಾಕ್ ಮಾಡುತ್ತಾ ಕೈಯನ್ನು ಸೊಂಟದ ಮೇಲಿಟ್ಟು ಎದೆಯುಬ್ಬಿಸಿ ನಿಂತಾಗ ಆ ಕಪ್ಪುಹಕ್ಕಿ ಒಮ್ಮೆಲೇ ರೆಕ್ಕೆ ಬಿಚ್ಚಿ ಕುಪ್ಪಳಿಸುತ್ತಾ ಮೆಚ್ಚುಗೆ ಸೂಸುವ ಭಂಗಿ ತೋರಿತು.ಗೀತಾಂಜಲಿ ಪ್ರಾಯೋಜಿಸಿದ್ದ ಪ್ರಸಾದ್ ಬಿದಪ್ಪ ಫ್ಯಾಷನ್ ಶೋನ ಕೊನೆಯ ದಿನದಂದು ಫ್ಯಾಷನ್ ಪ್ರಿಯರು 14 ಮಂದಿ ಖ್ಯಾತ ವಸ್ತ್ರವಿನ್ಯಾಸಕರ ವಸ್ತ್ರವೈಭವನವನ್ನು ಕಣ್ತುಂಬಿಕೊಂಡರು. ವಿನ್ಯಾಸಕರು ಮತ್ತು ರೂಪದರ್ಶಿಗಳಿಗೆ ತಮ್ಮ ವಿನ್ಯಾಸ ಹಾಗೂ ಚೆಲುವನ್ನು ಪ್ರದರ್ಶಿಸುವ ಸುಗ್ಗಿಯಾದರೆ, ಫ್ಯಾಷನ್ ಪ್ರಿಯರಿಗೆ ಇವೆಲ್ಲವನ್ನೂ ಹೀರುವ ಹಿಗ್ಗು. ಕೊನೆ ದಿನದ ಶೋ ಕೇವಲ ಸುಂದರಿಯರ ಚೆಲುವಿನ ಮೆರವಣಿಗೆಗಷ್ಟೇ ಸೀಮಿತಗೊಳ್ಳದೆ, ಫ್ಯಾಷನ್ ಲೋಕದಲ್ಲಿನ ಹೊಸ ಕವಲುಗಳ ಅನಾವರಣಕ್ಕೂ ಸಾಕ್ಷಿಯಾಯಿತು.ಚಮತ್ಕಾರಿ ವಸ್ತ್ರ ವಿನ್ಯಾಸಕ್ಕೆ ಹೆಸರುವಾಸಿಯಾದ ಜೋಡಿ ಜೇಸನ್ ಚೆರಿಯನ್ ಮತ್ತು ಅಂಶು ಅರೋರಾ. ಇವರಿಬ್ಬರೂ ಕೂಡಿ ವಿನ್ಯಾಸಗೊಳಿಸಿದ್ದ ಹೊಸ ಬಗೆಯ ವಿನ್ಯಾಸದ ಪ್ರದರ್ಶನದೊಂದಿಗೆ ಶೋ ಆರಂಭಗೊಂಡಿತು. ಜೇಸನ್ ಮತ್ತು ಅಂಶು ಅವರ ಮೋಹಕ ವಸ್ತ್ರವಿನ್ಯಾಸಕ್ಕೆ ರೂಪದರ್ಶಿಗಳು ಮೈಯೊಡ್ಡಿದ್ದರು. ರ್‍ಯಾಂಪ್ ಮೇಲೆ ಬಾಗಿ ಬಳುಕಿದರು.ಯುವತಿಯರ ಕನಸಿಗೆ ರೆಕ್ಕೆ ಕಟ್ಟುವಂಥ ವಿನ್ಯಾಸ ಮಾಡಿದ್ದವರು ಅನು ನಾಗಪ್ಪ ಮತ್ತು ಸುಸಾನ್ ಫರ್ನಾಂಡಿಸ್. ನೀಲಿ ಬೆಳಕಿನ ಜಾಡಿನಲ್ಲಿ ಬೆನ್ನು ತೋರುವ ಬಟ್ಟೆ ತೊಟ್ಟು ಬಂದ ಬೆಡಗಿಯರೆಲ್ಲಾ ಫ್ಯಾಷನ್ ಪ್ರಿಯರ ಕಣ್ಣಿನಲ್ಲಿ ತಿಳಿ ನೀಲಿ ಕನಸುಗಳನ್ನು ಬಿತ್ತಿಹೋದರು. ಮಂಡಿಗಿಂತ ಮೇಲಿದ್ದ ಆ ಧಿರಿಸುಗಳು ಹಿಂಬದಿಯಲ್ಲಿ ತೆರೆದುಕೊಂಡಿದ್ದವು. ಎದುರಿನಿಂದ ಬಂದು ವಿನ್ಯಾಸ ಪ್ರದರ್ಶಿಸಿ ಹಿಂತಿರುಗಿ ಹೋಗುವಾಗ ರೂಪದರ್ಶಿಗಳ ತೆರೆದ ಬೆನ್ನು ಎಲ್ಲರ ಕಣ್ಣು ಕುಕ್ಕುತ್ತಿದ್ದವು. ನೀಲಿ ಬಣ್ಣದ ಬೆಳಕಿನಲ್ಲಿ ನೀಲಿನೀಲಿ ಕನಸುಗಳನ್ನು ಹೊತ್ತು ಬಂದ ಹುಡುಗಿಯರ ಕಣ್ಣುಗಳಲ್ಲಿ ಆತ್ಮವಿಶ್ವಾಸದ ಬುಗ್ಗೆ ಎದ್ದಿತ್ತು.ಅಮೆರಿಕೆಯ ಕಾಲೇಜೊಂದರಲ್ಲಿ ಫ್ಯಾಷನ್ ಪದವಿ ಪೂರೈಸಿರುವ ಅನು ನಾಗಪ್ಪ ಅವರ ಕಲೆಕ್ಷನ್‌ಗೆ ಫ್ಯಾಷನ್ ಪ್ರಿಯರು ಮೆಚ್ಚುಗೆಯ ಮುದ್ರೆ ಒತ್ತಿದರು. ವಿನ್ಯಾಸದಲ್ಲಿ ಸದಾ ಪ್ರಯೋಗಶೀಲತೆ ತೋರುವ ಅನು ಅವರ ಕ್ರಿಯಾಶೀಲತೆಗೆ ಶೋನಲ್ಲಿ ಪ್ರದರ್ಶನಗೊಂಡ ವಿನ್ಯಾಸಗಳೇ ಸಾಕ್ಷಿಯಾದವು. ಅನು ವಿನ್ಯಾಸ ಮಾಡಿದ್ದ ಕಟ್ಸ್ ಮತ್ತು ಪರ್ಫೆಕ್ಟ್ ಫಿಟ್ ವಸ್ತ್ರಗಳಲ್ಲಿ ರೂಪದರ್ಶಿಗಳ ಮೈಮಾಟ ಫ್ಯಾಷನ್‌ಪ್ರಿಯರ ಎದೆಬಡಿತ ಹೆಚ್ಚಿಸಿದ್ದವು.ಸುಸಾನ್ ಬಣ್ಣಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ. ಯಾವ್ಯಾವ ಬಣ್ಣಗಳ ಮಹತ್ವ ಏನು, ಅವುಗಳ ಪರಿಣಾಮ ಎಷ್ಟು ಎಂಬುದನ್ನು ಸೂಕ್ಷ್ಮವಾಗಿ ಅರಿತುಕೊಂಡಿರುವ ಅವರು ತಮ್ಮ ವಿನ್ಯಾಸದಲ್ಲಿ ಬಣ್ಣದೋಕುಳಿ ಆಡಿದರು. ಬಣ್ಣಗಳ ಕುರಿತ ತಮ್ಮ ಜ್ಞಾನವನ್ನೆಲ್ಲಾ ಎರಕಹೊಯ್ದು ವಿನ್ಯಾಸಗೊಳಿಸಿದ್ದ ವಸ್ತ್ರಗಳನ್ನು ತೊಟ್ಟಿದ್ದ ರೂಪದರ್ಶಿಗಳು ಬಣ್ಣಬಣ್ಣದ ಚಿಟ್ಟೆಗಳಂತೆ ಕಂಡರು.ಖ್ಯಾತ ವಸ್ತ್ರವಿನ್ಯಾಸಕಿ ಯಶಸ್ವಿನಿ ನಾಯಕ್ ಈ ಬಾರಿ ಪುರುಷರ ವಸ್ತ್ರವಿನ್ಯಾಸಕ್ಕೆ ಕೈಹಾಕಿದ್ದರು. ಗಾಢಕಪ್ಪು ಬಣ್ಣದ ತುಂಡು ಚೆಡ್ಡಿ, ಹೂವಿನ ಚಿತ್ರವಿದ್ದ ಬಣ್ಣಬಣ್ಣದ ಅಂಗಿಯನ್ನು ಧರಿಸಿ ಬಂದ ಪುರುಷ ರೂಪದರ್ಶಿಗಳನ್ನು ಕಂಡಾಗ ಮಹಿಳೆಯೊಬ್ಬರು, `ವ್ಹಾವ್!' ಅಂತ ಉದ್ಗರಿಸಿ ಕುಳಿತಲ್ಲಿಂದಲೇ ಹೂಮುತ್ತು ತೇಲಿಬಿಟ್ಟರು. ಮೈಯಲ್ಲಿ ಒಂದೂ ರೋಮವಿಲ್ಲದ ಪುರುಷ ಮಾಡೆಲ್‌ಗಳನ್ನು ಕಂಡ  ಕೆಲ ಹೆಣ್ಣು ಮಕ್ಕಲು ಕಿಸಕ್ಕನೆ ನಕ್ಕರೆ, ಮತ್ತೆ ಕೆಲವರು ಅವರತ್ತ ಆಸೆಗಣ್ಣು ಬೀರುತ್ತಿದ್ದರು.ಉಳಿದಂತೆ, ಸಮ್ಯಕ್ ಕಲೆಕ್ಷನ್‌ನ ಶೋ ಸ್ಟಾಫರ್ ಆಗಿ ರಘು ಮುಖರ್ಜಿ ಮತ್ತು ಅವಿವಾ ಬಿದಪ್ಪ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದಾಗ ಚಪ್ಪಾಳೆಯ ಸುರಿಮಳೆ. ವೈಜಯಂತಿ ಮಾಲಾ ಅವರನ್ನು ಕಂಡು ಕೆಲವರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ನಂತರ ವಧು ಸಂಗ್ರಹದಲ್ಲಿ ಮಿಂಚಿದ ರೂಪದರ್ಶಿಯರು ಅಲ್ಲೊಂದು ಮದುವೆ ಮನೆಯ ವಾತಾವರಣವನ್ನು ಸೃಷ್ಟಿಸಿದರು. ಹಾಗೆಯೇ, ಹಿರಿಯ ವಿನ್ಯಾಸಕಿ ದೀಪಿಕಾ ಗೋವಿಂದ್ ಅವರ ವಸ್ತ್ರ ವಿನ್ಯಾಸಕ್ಕೆ ಮೆಚ್ಚುಗೆಯ ರುಜು ಹಾಕಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry