ಕವಲು ಕೊಂಬಿನ ಅರ್ಥ-ಅನರ್ಥ

7

ಕವಲು ಕೊಂಬಿನ ಅರ್ಥ-ಅನರ್ಥ

Published:
Updated:

ಗೆಳೆಯರೇ, ನಿಮ್ಮ ಸುತ್ತಲಿನ ಜಗತ್ತಿನ ಹಲವಾರು ಸಾಕುಪ್ರಾಣಿಗಳು-ಹಸು ಎತ್ತು ಎಮ್ಮೆ ಕುರಿ ಮೇಕೆ ಇತ್ಯಾದಿ-ಹಾಗೂ ವನ್ಯ ಪ್ರಾಣಿಗಳಾದ ಜಿಂಕೆ, ಗೇಂಡಾ, ಜಿರಾಫ್ ಅಂತಹವು ಪಡೆದಿರುವ ಶಿರಾಲಂಕಾರಗಳನ್ನು ನೀವು ಗಮನಿಸಿದ್ದೀರಾ? ಚಾಟಿಯೋ, ಬಾಗಿಯೋ, ತಿರುಚಿಯೋ, ಕವಲು ಕವಲಾಗಿಯೋ ಬೆಳೆವ ಈ `ಅಲಂಕಾರ'ದಲ್ಲೂ ಎಷ್ಟೆಲ್ಲ ವೈವಿಧ್ಯ ಇದೆ, ಅಲ್ಲವೇ?

ವಾಸ್ತವ ಏನೆಂದರೆ ಧರೆಯ ನೆಲವಾಸಿ ಸಸ್ಯಾಹಾರಿ ಸ್ತನಿಗಳಲ್ಲಿ `ಸಮಗೊರಸಿನ ಪ್ರಾಣಿ'ಗಳದೇ ಒಂದು ವಿಶಿಷ್ಟ ವರ್ಗ. `ಆರ್ಟಿಯೋಡಾಕ್ಟೈಲಾ' ಎಂಬ ಈ ವರ್ಗದ ಎಲ್ಲ ಪ್ರಾಣಿಗಳೂ ಶಿರಾಲಂಕೃತವಾಗಿವೆ. ಈ ವರ್ಗದಲ್ಲಿ ಐದು ಕುಟುಂಬಗಳಿವೆ. ಮೂಗಿನ ಮೇಲಿಂದಲೇ ಚಾಚಿದ ಒಂದು ಅಥವಾ ಎರಡು ಕೊಂಬುಗಳನ್ನು ಪಡೆದ ಗೇಂಡಾ ಕುಟುಂಬ ಕುಟುಂಬ `ರ‌್ಹೈನೋಸಿರಾಟಿಡೇ' (ಚಿತ್ರ-1); ಒಂದೇ ರೀತಿಯ ಒಂದು ಜೊತೆ ಕೊಂಬುಗಳನ್ನು ಧರಿಸಿದ ಹಸು ಎಮ್ಮೆ ಕೋಣ ಮೇಕೆ ಇತ್ಯಾದಿಗಳ ಕುಟುಂಬ `ಬೋವಿಡೇ' (ಚಿತ್ರ-2); ಪ್ರತಿ ವರ್ಷ ಉದುರಿ (ಚಿತ್ರ-10) ಮತ್ತೆ ಬೆಳೆವ, ವಯಸ್ಸಿನಷ್ಟೇ ಕವಲುಗಳಿಂದ ಕೂಡಿದ (ಚಿತ್ರ-8) ಚಿತ್ರ ವಿಚಿತ್ರ ಆಕಾರಗಳ `ಕವಲು ಕೊಂಬು'ಗಳನ್ನು ಹೊಂದಿದ ಜಿಂಕೆ (ಚಿತ್ರ 4, 9), ಕ್ಯಾರಿಬೂ (ಚಿತ್ರ 6, 11), ಮೂಸ್ (ಚಿತ್ರ-13) ಇತ್ಯಾದಿ ಪ್ರಾಣಿಗಳ (ಚಿತ್ರ-5) ಕುಟುಂಬ `ಸೆರ್ವಿಡೇ'; ಕೊಂಬನ್ನು ಪಡೆದಿದ್ದರೂ ಪ್ರತಿ ವರ್ಷ ಉದುರಿಸಿ ನವೀಕರಿಸಿಕೊಳ್ಳುವ ಏಕೈಕ ಪ್ರಭೇದದ `ಆ್ಯಂಟಿಲೋಕೇಪ್ರಿಡೇ' ಮತ್ತು ಕೊಂಬೂ ಅಲ್ಲದ, ಕವಲು ಕೊಂಬೂ ಅಲ್ಲದ ಜೋಡಿ ಕುಬ್ಜ ಶಿರಾಲಂಕಾರದ ಜಿರಾಫ್ (ಚಿತ್ರ-3) ಮತ್ತು ಒಕಾಪಿಗಳ ಕುಟುಂಬ `ಜಿರಾಫಿಡೇ'.ಈ ಐದೂ ಕುಟುಂಬಗಳ ಪೈಕಿ `ಸೆರ್ವಿಡೇ' ಕುಟುಂಬದ ಶಿರಾಲಂಕಾರವಾದ `ಕವಲು ಕೊಂಬು' ಅರ್ಥ-ಅನರ್ಥಗಳ ಬಗೆಗೆ ಜೀವವಿಜ್ಞಾನಿಗಳಿಗೆ ವಿಪರೀತ ಕುತೂಹಲ. ಕವಲು ಕೊಂಬುಗಳ ಸೃಷ್ಟಿಯ ಹಿಂದಿರುವ ನಿಸರ್ಗದ ಉದ್ದೇಶ-ಅದೊಂದು ನಿಗೂಢ ಒಗಟು.ಏಕೆಂದರೆ ವಿಧ ವಿಧ ಆಕಾರ ಉದ್ದ ತೂಕ ವಿಸ್ತಾರಗಳಲ್ಲಿ, ಕವಲು ಕವಲಾಗಿ ಕೊಂಬೆ ರೆಂಬೆಗಳಂತೆ ಬೆಳೆವ ಹರಡುವ ಕವಲು ಕೊಂಬುಗಳು ಟೊಳ್ಳು ಟೊಳ್ಳು, ಬಹು ದುರ್ಬಲ. ಕವಲು ಕೊಂಬುಗಳು ಶಾಶ್ವತವೂ ಅಲ್ಲ. ಧರಿಸಿದ ಪ್ರಾಣಿಗೆ ದಿವ್ಯ ಗಾಂಭೀರ್ಯವನ್ನು ಒದಗಿಸುವ ಈ ಸುಂದರ ಸಂಕೀರ್ಣ ಅಲಂಕಾರ ವಾಸ್ತವವಾಗಿ ಅದೇ ಪ್ರಾಣಿಯ ಜೀವಹಾನಿಗೆ ಕಾರಣವಾಗಬಲ್ಲದು ಅಷ್ಟೆ!ಸೆರ್ವಿಡೇ ಕುಟುಂಬದ ಪ್ರಾಣಿಗಳಲ್ಲಿ ಪ್ರತಿ ವರ್ಷ `ಸಂತಾನ ಕಾಲದಲ್ಲಿ' ಗಂಡುಗಳ ನೆತ್ತಿಯ ಮೇಲೆ ಪೂರ್ಣ ಪ್ರಮಾಣದಲ್ಲಿ ಬೆಳೆದು ನಿಲ್ಲುವ ಈ ಅಲಂಕಾರ ಗಂಡುಗಳಿಗೆ ಆಕರ್ಷಕ ರೂಪವನ್ನು ಒದಗಿಸುವುದು ಹೌದು. ಆ ಕಾಲದಲ್ಲಿ ಪ್ರತಿ ಹಿಂಡಿನ ಪ್ರತಿ ಗಂಡು ಪ್ರಾಣಿಯೂ ತನ್ನ ಬಲ ಬಳಸಿ ಎಲ್ಲ ಪ್ರತಿಸ್ಪರ್ಧಿ ಗಂಡುಗಳನ್ನೂ ಹಿಮ್ಮೆಟ್ಟಿಸಿ, ಹಿಂಡಿನ ಎಲ್ಲ ಹೆಣ್ಣುಗಳನ್ನೂ ಆಕರ್ಷಿಸಿ ಏಕೈಕ `ಯಜಮಾನ' ಆಗಲು ಯತ್ನಿಸುತ್ತದೆ. ಹಾಗಾಗಿ ಪ್ರತಿ ಹಿಂಡಿನ ಎಲ್ಲ ವಯಸ್ಕ ಬಲಿಷ್ಠ ಗಂಡುಗಳೂ ಒಂದಕ್ಕೊಂದು `ವೈರಿಗಳೇ ಆಗುತ್ತವೆ. ಕಾಳಗ ಅನಿವಾರ್ಯವಾಗುತ್ತದೆ.ಇಂಥ ಸಮರಗಳಲ್ಲಿ ಸೆರ್ವಿಡೇ ಕುಟುಂಬದ ಗಂಡುಗಳು ಕಾಲುಗಳಿಂದ ಒದ್ದು ಪರಸ್ಪರ ತಲೆಗಳನ್ನು ಘಟ್ಟಿಸುತ್ತವೆ. ತಮ್ಮ ಅಷ್ಟೆಲ್ಲ ಚೆಂದದ ಬೃಹದಾಕಾರದ ಬಹು ಕವಲುಗಳ ಜೋಡಿ ಕೋಡುಗಳನ್ನು ಅವು ಶಸ್ತ್ರಗಳಂತೆ ಬಳಸುವುದಿಲ್ಲ. ಏಕೆಂದರೆ ಎದುರಾಳಿಯನ್ನು ತಡೆಯುವ, ತಿವಿಯುವ, ಒತ್ತರಿಸುವ ಬಲ ಈ ಕೊಂಬುಗಳಿಗಿಲ್ಲ. ಆದರೂ ಒಂದಕ್ಕೊಂದು ಡಿಕ್ಕಿ ಇಡುವಾಗ ಎಷ್ಟೋ ಬಾರಿ ತಲೆಯ ಮೇಲೆಲ್ಲ ಚಾಚಿ-ಹರಡಿ ನಿಂತ ಕವಲು ಕೊಂಬುಗಳು ಪರಸ್ಪರ ತೆಕ್ಕೆ ಬೀಳುತ್ತವೆ.ಬಹಳ ಸಂದರ್ಭಗಳಲ್ಲಿ ಬಿಡಿಸಿಕೊಳ್ಳಲೇ ಆಗದಂತೆ ತಗುಲಿಕೊಂಡು ಘಾಸಿಗೊಂಡು ನೋಯುತ್ತ ರಕ್ತ ಸುರಿಸುತ್ತವೆ (ಚಿತ್ರ-7). ಎರಡೂ ಬಲಿಷ್ಠ ಯುದ್ದಾಳುಗಳು ಹಾಗೆಯೇ ಒದ್ದಾಡಿ ಜೊತೆಯಾಗಿಯೇ ನೆಲಕ್ಕೊರಗಿ ಹುಲ್ಲು-ನೀರು ಇಲ್ಲದೆ ಬೇಟೆಗಾರರಿಗೆ ಸುಲಭದ ತುತ್ತಾಗುತ್ತವೆ. ಪರಿಣಾಮವಾಗಿ ಅತ್ಯುತ್ತಮ ಸಂತಾನಕ್ಕೆ ಮೂಲವಾಗಬಹುದಾಗಿದ್ದ ಗಂಡುಗಳು ಇಲ್ಲವಾಗಿ ಹಿಂಡಿನ ಆ ವರ್ಷದ ಸಂತಾನದ ಗುಣಮಟ್ಟ ಕುಸಿಯುತ್ತದೆ. ಎಂದರೆ ದುರ್ಬಲ ಮರಿಗಳು ಹುಟ್ಟುತ್ತವೆ. ಎಂಥ ಅನರ್ಥ! ಜೀವ ವಿಜ್ಞಾನಿಗಳ ಅಧ್ಯಯನಗಳ ಪ್ರಕಾರ ದಿನೇ ದಿನೇ ಕುಗ್ಗುತ್ತಿರುವ ಸೆರ್ವಿಡೇಗಳ ಸಂಖ್ಯೆಗೆ ವೈವಿಧ್ಯಕ್ಕೇ ಇದೇ ಒಂದು ಪ್ರಧಾನ ಕಾರಣ.ಕವಲು ಕೊಂಬುಗಳದು ಸುದೀರ್ಘ ಇತಿಹಾಸ. ಕವಲು ಕೊಂಬುಗಳು ಪ್ರಪ್ರಥಮವಾಗಿ ಸೃಷ್ಟಿಗೊಂಡದ್ದು ಈಗ್ಗೆ ಇಪ್ಪತ್ತೈದು ದಶಲಕ್ಷ ವರ್ಷ ಹಿಂದೆ, `ಮಯೋಸೀನ್ ಯುಗ'ದಲ್ಲಿ. ಆ ಯುಗದಲ್ಲಿ ಅವತರಿಸಿದ `ಡ್ರೈಕೋಸೀರಸ್' ಎಂಬ ಗೊರಸಿನ ಪ್ರಾಣಿಯೋ ಧರೆಯ ಪ್ರಪ್ರಥಮ `ಕವಲು ಕೊಂಬಿನ ಜೀವಿ'. ಪುಟ್ಟದಾದ ಮುಳ್ಳಿನಂತ ಕವಲುಗಳ ಕೊಂಬು ಅದರದಾಗಿತ್ತು. ಹೇಗೋ ಏನೋ ಅದೊಂದು ಯಶಸ್ವೀ ಪ್ರಯೋಗವೋ ಎಂಬಂತೆ ಬೃಹದಾಕಾರದ ಕವಲು ಕೊಂಬುಗಳ ಬಹುವಿಧ ಪ್ರಾಣಿಗಳು ಹುಟ್ಟಿಕೊಂಡುವು. ಕಳೆದ `ಹಿಮಯುಗ'ದಲ್ಲಿ ಸೃಷ್ಟಿಗೊಂಡಿದ್ದ `ಸೆರ್ವಸ್ ಮೆಗಾಸಿರಾಸ್'ನದು ಈವರೆಗಿನ ಅತ್ಯಂತ ಬೃಹತ್ ಕವಲು ಕೊಂಬಿನ ದಾಖಲೆ. ಅದರ ಕೊಂಬುಗಳ ಚಾಚು ಹತ್ತು ಅಡಿಗಿಂತ ಹೆಚ್ಚಿದ್ದು ತೂಕ ಎಪ್ಪತ್ತು ಕಿಲೋ ಮುಟ್ಟಿತ್ತು. ಎಂಥ ಶಿರೋಭಾರ ಶೃಂಗಾರ!ಅದೇನೇ ಇದ್ದರೂ ಕವಲು ಕೊಂಬುಗಳು ಆರಂಭದಿಂದಲೂ ಅಪಾಯದ, ಸ್ವವಿನಾಶದ ಸೃಷ್ಟಿಗಳೇ ಆಗಿರುವುದು ಸ್ಪಷ್ಟ. ಅದನ್ನೆಲ್ಲ ಪ್ರಕೃತಿಯೂ ಗಮನಿಸಿದೆ. ಆದ್ದರಿಂದಲೇ ಸೆರ್ವಿಡೇ ಪ್ರಭೇದಗಳ ಈ ಶಿರಶೃಂಗಾರಗಳನ್ನು ನಿರಪಾಯಕಾರಿಯಾಗುವಂತೆ ರೂಪಾಂತರಿಸುವ ಪ್ರಯೋಗಗಳನ್ನೂ ಪ್ರಕೃತಿ ಈಗಾಗಲೇ ಕೈಗೊಂಡಿದೆ. ಅದಕ್ಕೆ ಆಧಾರವಾಗಿ ಸೆರ್ವಿಡೇ ಕುಟುಂಬಕ್ಕೇ ಸೇರಿದ `ಕಸ್ತೂರಿ ಮೃಗ' ಮತ್ತು `ಚೈನೀಸ್ ವಾಟರ್ ಡೀರ್'ಗಳನ್ನು ವಿದ್ವಾಂಸರು ಉದಾಹರಿಸುತ್ತಾರೆ. ಕವಲು ಕೊಂಬಿನ ಪ್ರಾಣಿಗಳ ಕುಟುಂಬಕ್ಕೆ ಸೇರಿದ್ದರೂ ಇವೆರಡೂ ಪ್ರಾಣಿಗಳಲ್ಲಿ ಶರಶೃಂಗಗಳೇ ಇಲ್ಲ. ಅದಕ್ಕೆ ಬದಲಾಗಿ ಕೋರೆದಾಡೆಗಳಂತೆ ಬಾಯಿಂದ ಹೊರಕ್ಕೆ ಹಿಮ್ಮುಖನಾಗಿ ಬಾಗಿದ ಎರಡು ಕೊಂಬುಗಳು ಅವಕ್ಕಿವೆ.ಸ್ಪಷ್ಟವಾಗಿಯೇ ಈಗಾಗಲೇ ಸಾಕಷ್ಟು ಕಡಿಮೆ ಪ್ರಭೇದಗಳಿಗೆ ಇಳಿದಿರುವ ಕವಲು-ಕೊಂಬಿನ ಜೀವಿಗಳು ಭವಿಷ್ಯದಲ್ಲಿ ಮಾರ್ಪಟ್ಟ ಶಿರಾಲಂಕಾರಗಳನ್ನು ಪಡೆಯಲಿವೆ. ಇಲ್ಲವೇ ತಮ್ಮ ಅನರ್ಥಕಾರೀ ಶೃಂಗಾರಗಳಿಂದಾಗಿಯೇ ಅಳಿವ ಹಾದಿ ಹಿಡಿಯಲಿವೆ.ವ್ಯರ್ಥ ಅಲಂಕಾರದ ಫಲಿತ-ಎಂಥ ದುರಂತ! ಅಲ್ಲವೇ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry