ಬುಧವಾರ, ಜೂನ್ 23, 2021
30 °C

ಕವಿಗಳಿಗೆ ತಾಯ್ನೊಡು ಇಲ್ಲ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕವಿಗಳಿಗೆ ತಾಯ್ನೊಡು ಇಲ್ಲ...

`ಸಾಪ್ತಾಹಿಕ ಪುರವಣಿ~ ಜೊತೆ ಇಸ್ರೇಲ್ ದೇಶದ ಕವಿ ಆಮೀರ್ ಓರ್ಆಮೀರ್ ಓರ್ (1956) ಇಸ್ರೇಲ್ ದೇಶದ ಕವಿ. ಕಾವ್ಯಕ್ಕೆ ತಮ್ಮ ಜೀವನವನ್ನು ತೊಡಗಿಸಿಕೊಂಡವರು. ವರ್ಷದಲ್ಲಿ ಆರು ತಿಂಗಳು ದೇಶದಿಂದ ಹೊರಗೇ ಕಾವ್ಯಾಭಿಯಾನ ನಡೆಸುತ್ತಾರೆ. ಇತರ ದೇಶ, ಭಾಷೆಗಳಿಂದ ಕಾವ್ಯವನ್ನು ಮೊಗೆಮೊಗೆದು ಹಿಬ್ರೂ ಭಾಷೆಯ ಜೋಳಿಗೆ ತುಂಬಿಸುತ್ತಾರೆ.2000 ವರ್ಷಗಳು ಅನಾಥವಾಗಿದ್ದ ಭಾಷೆಗೆ ಮರುಜೀವ ಕೊಡುವ ಛಲ ಇತರೆ ಯಹೂದ್ಯರಿಗಿಂತಲೂ ಯಹೂದಿ ಕವಿಗಳಿಗೆ ಹೆಚ್ಚು. ಇದುವರೆಗೆ ಒಂಬತ್ತು ಕಾವ್ಯ ಸಂಕಲನಗಳನ್ನು ಪ್ರಕಟಿಸಿರುವ ಇವರು ಜಗತ್ತಿನಾದ್ಯಂತ 40 ಭಾಷೆಗಳಿಗೆ ಅನುವಾದಗೊಂಡಿದ್ದಾರೆ.  ಗ್ರಂಥರೂಪದಲ್ಲಿ 10 ಸಂಕಲನಗಳು ಬೇರೆ ಬೇರೆ ಭಾಷೆಗಳಲ್ಲಿ ಪ್ರಕಟಗೊಂಡಿವೆ.ಅವುಗಳಲ್ಲಿ 6 ಇಂಗ್ಲೀಷಿನಲ್ಲಿವೆ. `ದಿ ಸಾಂಗ್ ಆಫ್ ತಹೀರಾ~ (2001), `ದಿ ಮ್ಯೂಸಿಯಮ್ ಆಫ್ ಟೈಮ್~ (2007), `ಹಾರ್ಟ್ ಬೀಟ್~ (2010) ಅವುಗಳಲ್ಲಿ ಮುಖ್ಯವಾದುವು.ಓರ್, ತತ್ತ್ವಶಾಸ್ತ್ರ ಮತ್ತು ಕಂಪ್ಯಾರಿಟಿವ್ ರಿಲಿಜನ್‌ಗಳಲ್ಲಿ ಪದವಿ ಪಡೆದು ಜೆರುಸಲೇಮ್‌ನಲ್ಲಿರುವ ಹಿಬ್ರೂ ವಿಶ್ವವಿದ್ಯಾಲಯದಲ್ಲಿ ಪ್ರಾಚೀನ ಗ್ರೀಕ್ ಧರ್ಮವನ್ನು ಬೋಧಿಸುತ್ತಿದ್ದರು. ನಂತರ ತಾವೇ ಟೆಲ್ ಅವಿವ್‌ನಲ್ಲಿ ಹೆಲಿಕಾನ್ ಪೊಯಟ್ರಿ ಸ್ಕೂಲ್ ಅನ್ನು ಸ್ಥಾಪಿಸಿ, ಅಲ್ಲಿ ಕಾವ್ಯ ಮತ್ತು ಸೃಜನಾತ್ಮಕ ಬರವಣಿಗೆಯನ್ನು ಕಲಿಸುತ್ತಿದ್ದಾರೆ.

 

ಜಪಾನ್, ಯುರೋಪ್, ಅಮೆರಿಕಾ ಮುಂತಾದ ದೇಶಗಳ ವಿಶ್ವವಿದ್ಯಾಲಯಗಳು ಅವರನ್ನು ಆಹ್ವಾನಿಸಿ ಉಪನ್ಯಾಸಗಳನ್ನು ಏರ್ಪಡಿಸುತ್ತವೆ. ಫುಲ್ ಬ್ರೈಟ್ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು  ಅವರು ಪಡೆದುಕೊಂಡಿದ್ದಾರೆ.ಇತ್ತೀಚೆಗೆ `ಕೃತ್ಯ ಅಂತಾರಾಷ್ಟ್ರೀಯ ಕಾವ್ಯ ಸಮ್ಮೇಳನ~ದಲ್ಲಿ ಭಾಗವಹಿಸುವುದಕ್ಕಾಗಿ ತಿರುವನಂತಪುರಕ್ಕೆ ಬಂದಿದ್ದ ಇವರು ಬೆಂಗಳೂರಿಗೂ ಆಗಮಿಸಿದ್ದರು. ಸಾಹಿತ್ಯ ಅಕಾಡೆಮಿ ಆಹ್ವಾನಿತ ಕವಿಗಳೆದುರು ಇವರ ಕಾವ್ಯವಾಚನ ಏರ್ಪಡಿಸಿತ್ತು. ಈ ಸಂದರ್ಭದಲ್ಲಿ `ಸಾಪ್ತಾಹಿಕ ಪುರವಣಿ~ಗಾಗಿ ಆಮೀರ್ ಓರ್ ನೀಡಿದ ಸಂದರ್ಶನ ಇಲ್ಲಿದೆ.

ನೀವು ಕವಿತೆಗೆ ಒಲಿದದ್ದು ಹೇಗೆ?

ನಾನು ಕವಿತೆಗೆ ಒಲಿದದ್ದು ಬಾಲ್ಯದಲ್ಲಿಯೇ ಅಂದರೆ ನಿಮಗೆ ಆಶ್ಚರ್ಯವಾಗಬಹುದು. ನಾನು 7 ವರ್ಷದ ಹುಡುಗನಾಗಿದ್ದಾಗಲೇ, ಟೆಡ್ಡಿಬೇರ್ ಹಿಡಿದುಕೊಂಡು ಆಟವಾಡುತ್ತಿರುವಾಗಲೇ ನನ್ನ ತಾಯಿಗೆ ಠಿಛಿಚಿಛಿಚ್ಟ ಕುರಿತು ಕವಿತೆಯ ಮೂಲಕ ಹೇಳುತ್ತಿದ್ದೆನಂತೆ.ಅವರು ಅದನ್ನು ಬರೆದಿಟ್ಟುಕೊಳ್ಳುತ್ತಿದ್ದರಂತೆ. ಇದನ್ನು ನನ್ನ ತಾಯಿ ಬಹಳ ಕಾಲದವರೆಗೆ ನೆನಪಿಸಿಕೊಳ್ಳುತ್ತಿದ್ದರು. ಈ ಮೂಲ ಸೆಲೆಯೇ ನಾನು ಬೆಳೆದಂತೆ ಕಾವ್ಯದತ್ತ ಸೆಳೆಯಿತು.

ಆಧುನಿಕ ಕವಿಯಾದ ನೀವು ಅತ್ಯಂತ ಪ್ರಾಚೀನ ಭಾಷೆಯಾದ ಹೀಬ್ರೂ ಭಾಷೆಯಲ್ಲಿ ಕವಿತೆ ಬರೆಯುತ್ತಿದ್ದೀರಿ. ಅದು ಇತ್ತೀಚಿನ ಅಗತ್ಯಗಳಿಗೆ ಸಮರ್ಪಕ ಸಂವಹನ ಸಾಧನವಾಗಿ ಬಳಕೆಯಾಗುತ್ತಿದೆ ಎಂದು ನಿಮಗನ್ನಿಸುತ್ತದೆಯೆ ?ಹೀಬ್ರೂ ಭಾಷೆಯಲ್ಲಿ ಬರೆಯುವುದು ನನ್ನ ಅದೃಷ್ಟ ಎಂದುಕೊಂಡಿದ್ದೇನೆ. ಧಾರ್ಮಿಕ ಗ್ರಂಥವಾದ ಬೈಬಲ್ ಅನ್ನು ಬರೆದಿರುವುದು ಹೀಬ್ರೂ ಭಾಷೆಯಲ್ಲಿ. ಅದನ್ನು ಮೂಲ ಭಾಷೆಯಲ್ಲಿಯೇ ಓದುವ ಅದೃಷ್ಟ ಹೀಬ್ರೂ ಭಾಷಿಕನಿಗಿದೆ. 20ನೇ ಶತಮಾನದ ಆದಿಭಾಗದಲ್ಲಿ ಈ ಭಾಷೆಯನ್ನು ಪುನಃಶ್ಚೇತನಗೊಳಿಸಲಾಯಿತು.

 

ಅದನ್ನು ದಿನನಿತ್ಯದ ಭಾಷೆಯಾಗಿ ಬಳಸುವ ಮೂಲಕ 2000 ವರ್ಷಗಳ ಅಂತರವನ್ನು ಮುಚ್ಚಲಾಯಿತು. ಇದನ್ನು ವಿಸ್ತರಿಸಿ ಹೇಳುವುದಾದರೆ, ಕಿಂಗ್ ಡೇವಿಡ್ ಬದುಕಿದ್ದರೆ ಇವತ್ತಿನ ಹೀಬ್ರೂ ಕವಿತೆಯನ್ನು ಓದಲು ಅಷ್ಟೇನು ಕಷ್ಟಪಡಬೇಕಾಗಿರಲಿಲ್ಲ. ಹಾಗಾಗಿ ಬೈಬಲಿನ ಹಳೆಯ ಒಡಂಬಡಿಕೆಯ ಲಿಪಿಯ ಆರಂಭವೇ 4000 ವರ್ಷಗಳಷ್ಟು ಪ್ರಾಚೀನವಾದ ಹೀಬ್ರೂ ಕಾವ್ಯದ ಪ್ರಾರಂಭ ಎಂದು ಹೇಳಬಹುದು.

ಅಂದರೆ, ಬೈಬಲ್‌ನ ಮೂಲ ಭಾಷೆ ಹೀಬ್ರೂ ಆದ್ದರಿಂದ ಅದು ಇಂದಿಗೂ ಉಳಿದಿದೆ ಎಂದು ನಿಮ್ಮ ಅನಿಸಿಕೆಯೆ? ಲ್ಯಾಟಿನ್ ಅಥವಾ ಸಂಸ್ಕೃತ ಆ ಶಕ್ತಿಯನ್ನು ಕಳೆದುಕೊಳ್ಳಲು ಕಾರಣಗಳೇನು?ಹೀಬ್ರೂ ಭಾಷೆ ಅಥವಾ ಕಾವ್ಯ ಬೈಬಲ್ಲಿನ ಅವತರಣಿಕೆಯೊಂದಿಗೆ ನಿಲ್ಲಲಿಲ್ಲ. ಮೊದಲ ಶತಮಾನದಲ್ಲಿಯೆ ರೋಮನ್ನರು ಜೂಡಿಯಾವನ್ನು ನಾಶ ಮಾಡಿದ ಮೇಲೆ ಚದುರಿ ಹೋದ ಯಹೂದಿ ನೆಲೆಗಳಲ್ಲಿ (ಒಛಿಡಿಜಿ ಜಿಟ್ಟ) ಹೀಬ್ರೂ ಸಾಹಿತ್ಯ ಸೃಷ್ಟಿ ಮುಂದುವರೆಯಿತು.

 

ನಿರಂತರವಾಗಿ ಸೃಷ್ಟಿಯಾಗುತ್ತಲೇ ಇತ್ತು. ಮಧ್ಯೆ ಒಂದೆರಡು ಶತಮಾನಗಳ ಕಾಲ ಮರೆಯಾಗಿದ್ದರೂ ಬರಬರುತ್ತಾ ಈ ಭಾಷೆ ಸಾಮಾನ್ಯರ ನಿತ್ಯಬಳಕೆಯ ಭಾಷೆಯಾಯಿತು. ಪ್ರಾರ್ಥನೆಗೆ ಸೀಮಿತವಾಗಿದ್ದ ಭಾಷೆಯಲ್ಲಿ ಧಾರ್ಮಿಕ ಸಾಹಿತ್ಯ, ನಂತರದ ತಲೆಮಾರುಗಳಿಂದ ಕಾವ್ಯ ಮತ್ತಿತರ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಯಾಯಿತು.ಮುಖ್ಯವಾಗಿ ಇರಾಕ್, ಸ್ಪೇನ್, ಇಟಲಿ, ಯೆಮನ್, ಪೋಲೆಂಡ್, ಜರ್ಮನಿ ಹೀಗೆ ಆಯಾ ಪ್ರದೇಶಗಳ ಸೊಗಡನ್ನು ಹೀರಿಕೊಂಡು ಭಾಷೆ ಬೆಳೆಯುತ್ತಾ ಹೋಯಿತು. ಲ್ಯಾಟಿನ್ ಅಥವಾ ಸಂಸ್ಕೃತ ಸಾಮಾನ್ಯರ ಆಡುಭಾಷೆಯ ಶಾಬ್ದಿಕ ಮಿತಿಯಿಂದ ಸೊರಗಿದವು. ಆದ್ದರಿಂದ ಹೀಬ್ರೂ, ಮಾನವ ಇತಿಹಾಸದಲ್ಲಿಯೇ ಸತ್ತು ಮತ್ತೆ ಹುಟ್ಟಿದ ಏಕೈಕ ಭಾಷೆ ಎನಿಸಿಕೊಂಡಿದೆ.

ನಿಮ್ಮ ಪ್ರಕಾರ ಕಾವ್ಯ ಮತ್ತು ಜೀವನದ ಸಂಬಂಧವೇನು? ಕಾವ್ಯದಿಂದ ನಿಮ್ಮ ಜೀವನದಲ್ಲಾಗಿರುವ ಬದಲಾವಣೆಗಳೇನು?ಕವಿಯಾದವನು ಒಂದು ಸಂಸ್ಕೃತಿಯ ವಕ್ತಾರ. ಕವಿಗಳಿಗೆ ತಾಯ್ನೊಡೆಂಬುದು ಇಲ್ಲ. ಕವಿಗಳದೇ ಆದ ಒಂದು ಗಣರಾಜ್ಯವಿದೆ (epublic of Poets). ಅದರೊಳಗೆ ಮಾನವೀಯ ಪ್ರಜ್ಞೆಯೊಂದು ಕೆಲಸ ಮಾಡುತ್ತಿರುತ್ತದೆ. ಅವರು ಏನೂ ಮಾಡುತ್ತಿಲ್ಲವೆಂದು ಕಂಡರೂ ಏನೋ ಒಂದು ನಡೆಯುತ್ತಿರುತ್ತದೆ. ಭವಿಷ್ಯಕ್ಕೆ ಭಾಷ್ಯ ಬರೆಯುವವರು ಕವಿಗಳು.ಅವರಿಗೆ ಎಚ್ಚರದ ಕಿವಿಗಳು, ಕಣ್ಣುಗಳಿರುತ್ತವೆ. ಸಮಾಜದಲ್ಲಿ ಒಂದು ಮೌಲ್ಯವನ್ನು ಹುಡುಕಲು ಸದಾ ಪ್ರಯತ್ನಿಸುತ್ತಿರುತ್ತಾರೆ. ಇವೆಲ್ಲವೂ ಜೀವನಕ್ಕೆ ಸಂಬಂಧಪಟ್ಟವೆ. ಆದ್ದರಿಂದ ಕಾವ್ಯ ಜೀವನ್ಮುಖಿ.ಬದಲಾವಣೆ ಏನು ಅಂದರೆ, ನಾನು ಹೊರಗಿನದನ್ನು ಬದಲಾಯಿಸಲು ಸಾಧ್ಯವಿಲ್ಲದೇ ಇರಬಹುದು. ಆದರೆ ಹೊರಗಿನ ಬದಲಾವಣೆಗೆ ನನ್ನ ಕೊಡುಗೆಯಂತೂ ಇದ್ದೇ ಇರುತ್ತದೆ. ನನ್ನೊಳಗೆ ಆಗುವ ಬದಲಾವಣೆ ನಿರಂತರವಾದದ್ದು. ಕವಿಯಾಗಿ ನಾನು ಹೆಚ್ಚು ಹಂಬಲ್ ಆಗಿದ್ದೇನೆ. ಮನುಷ್ಯರನ್ನು ಪ್ರೀತಿಸುವುದನ್ನು ಕಲಿತಿದ್ದೇನೆ.  ಇವತ್ತಿನ ಸಮಾಜದಲ್ಲಿ ಕವಿಗಳ ಪಾತ್ರ ಜವಾಬ್ದಾರಿಯುತವಾದದ್ದು.

ಇಸ್ರೇಲ್, ಜಗತ್ತಿನ ಗಮನ ಸೆಳೆದಿರುವ ಪ್ರದೇಶ. ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಅತಿಸೂಕ್ಷ್ಮವಾದ ಪ್ರದೇಶ. ಹಲವು ಸಮುದಾಯಗಳ ಭಾವನಾತ್ಮಕ ಜಗ್ಗಾಟದಿಂದ ಜರ್ಜರಿತವಾಗಿರುವಂತೆ ಕಾಣುವ ದೇಶ. ಅಲ್ಲಿನ ಜನಜೀವನ ಹೇಗಿದೆ? 

ಹೌದು. ಅದೊಂದು ಸೂಕ್ಷ್ಮವಾದ ಪ್ರದೇಶ. ಯಹೂದಿಗಳಿಗೆ ಮಾತೃಭೂಮಿ ಎನ್ನುವುದಿರಲಿಲ್ಲ. ಅದನ್ನು ಬಹಳ ಕಷ್ಟಪಟ್ಟು ಸಂಪಾದಿಸಿದರು. ಅದನ್ನು ರಕ್ಷಿಸುವುದು ಪ್ರತಿಯೊಬ್ಬ ಯಹೂದಿಯ ಕರ್ತವ್ಯ. ಒಳಗಿರುವವರಲ್ಲಿ ಅಂತಹ ಒತ್ತಡವೇನೂ ಇಲ್ಲ. ಮುಸಲ್ಮಾನರು, ಕ್ರೈಸ್ತರು ಯಹೂದಿಗಳೊಂದಿಗೆ ಬೆರೆತು ಹೋಗುತ್ತಾರೆ.

 

ಆದರೆ ಹೊರಗಿನವರ ಪ್ರತಿರೋಧವೇ ಹೆಚ್ಚು. ಅದನ್ನು ಸಮರ್ಥವಾಗಿ ಇಸ್ರೇಲ್ ಎದುರಿಸುತ್ತಿದೆ.  ಪ್ರಪಂಚದ ಎರಡು ದೊಡ್ಡ ಧರ್ಮಗಳು ಅಲ್ಲಿ ಹುಟ್ಟಿವೆ ಎನ್ನುವುದು ಸಾಮಾನ್ಯ ವಿಷಯವಲ್ಲ. ಆದರೆ ಏಸುಕ್ರಿಸ್ತ ಒಬ್ಬ ಯಹೂದಿಯಾಗಿದ್ದ ಎಂಬುದನ್ನು ಯಾರೂ ಮರೆಯಬಾರದು. ಛಲದಿಂದ ಬದುಕುವ ಯಹೂದಿಗಳು ಕಷ್ಟ ಸಹಿಷ್ಣುಗಳು. ಯುವಪೀಳಿಗೆಗೆ ದೇಶ ಕಟ್ಟುವ ಸಂತೋಷವಿದೆ. 

ನಿಮ್ಮ ಮೂಲ ಯಾವುದು? ಇತಿಹಾಸದಲ್ಲಿ ಕುಖ್ಯಾತವಾಗಿರುವ ಹಾಲೋಕಾಸ್ಟ್ ಸಮಯದಲ್ಲಿ ನಿಮ್ಮ ಪೂರ್ವಿಕರ ಕುಟುಂಬ ಹೇಗೆ ನಿರ್ವಹಿಸಿತು?ನಾವು ಪೋಲೆಂಡ್ ದೇಶದ ಮೂಲದವರು. ಇಸ್ರೇಲ್‌ನಲ್ಲಿ ಸುಮಾರು 30 ಲಕ್ಷ ಪ್ರಜೆಗಳು ಅರಬ್ ದೇಶಗಳಿಂದ ಹೊರಹಾಕಲ್ಪಟ್ಟ ವಲಸಿಗರು. ಇಸ್ರೇಲ್ ಪೂರ್ವ ಮತ್ತು ಪಶ್ಚಿಮಗಳ ಸಂಗಮ ಪ್ರದೇಶ.ಯಹೂದಿ, ಕ್ರೈಸ್ತ ಪರಂಪರೆಯ ಭಾಷೆ ಮತ್ತು ಸಂಸ್ಕೃತಿಗೆ ಒಗ್ಗಿರುವ ಜನರಿದ್ದಾರೆ. ಇದು ಒಂದು ಸಮ್ಮಿಶ್ರ ಸಂಸ್ಕೃತಿಯಂತೆ ಕಂಡರೂ ಇಸ್ರೇಲಿನ ಹೆಚ್ಚಿನ ಜನ ಯೂರೋಪ್ ಮೂಲದವರು. ಐತಿಹಾಸಿಕವಾಗಿಯೂ ಇಸ್ರೇಲಿನ ಸೃಷ್ಟಿಕರ್ತರು ಯೂರೋಪಿಯನ್ನರೇ.ಇಲ್ಲಿಗೆ ಮೊದಲು ಬಂದವರು ಜಿಯೋನಿಸ್ಟ್‌ಗಳು, ಯೂರೋಪಿನ ಮಧ್ಯಮ ವರ್ಗದಿಂದ ಬಂದ ಅವರೆಲ್ಲರೂ ಕನಸಿಗರು, ದೂರದೃಷ್ಟಿಯುಳ್ಳವರು, ಸಾಹಸಿಗಳೂ ಆಗಿದ್ದರು. ಹೊಸ ಸಮಾಜವನ್ನು ಕಟ್ಟಲು ಬಂದವರಾಗಿದ್ದರು.

 

ನನ್ನ ಅಜ್ಜ ಅಜ್ಜಿಯರು ಆ ಚಳವಳಿಯ ಭಾಗವಾಗಿದ್ದರು. ನನ್ನ ಅಜ್ಜನನ್ನು ರಬ್ಬಿ ತರಬೇತಿಗೆಂದು ಧಾರ್ಮಿಕ ಶಾಲೆಗೆ ಸೇರಿಸಲಾಗಿತ್ತು. ಆದರೆ ಅವರು ಸಾಹಿತ್ಯ, ತತ್ತ್ವಶಾಸ್ತ್ರ, ಸಮಾಜ ಶಾಸ್ತ್ರ ಓದಿಕೊಂಡು ಜಿಯೋನಿಸ್ಟ್ ಚಳವಳಿಯಲ್ಲಿ ಸೇರಿಕೊಂಡರು.

 

ನಾನು ಹುಡುಗನಾಗಿದ್ದಾಗ ಅವರ ಜೊತೆ ಕುಳಿತು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ನನ್ನ ಅಜ್ಜ ಅವರ ಕುಟುಂಬದ ವಿರೋಧವನ್ನು ಲೆಕ್ಕಿಸದೇ ಇಸ್ರೇಲಿಗೆ ಬಂದ. ಹಾಗೆ ಬಂದದ್ದಕ್ಕಾಗಿ ಉಳಿದುಕೊಂಡ.

 

ಅವನ ಕುಟುಂಬದವರೆಲ್ಲರೂ ಪೋಲೆಂಡಿನ Concentration Campನಲ್ಲಿ ಆಹುತಿಯಾದರು. ಜಿಯೋನಿಸ್ಟ್ ಚಳವಳಿ ಒಂದು ಸಾಹಸಗಾಥೆ. ಈಗ ಇಸ್ರೇಲ್ ಒಂದು ದೊಡ್ಡ ನಿರಾಶ್ರಿತರ ಬಿಡಾರವಾಗಿದೆ. ಹಾಲೋಕಾಸ್ಟ್‌ನಲ್ಲಿ ಬದುಕುಳಿದವರು ಮತ್ತು ಅರಬ್ ಸಮುದಾಯ ಒಟ್ಟೊಟ್ಟಿಗೆ ಬದುಕುತ್ತಿದ್ದಾರೆ.ಒಟ್ಟಾರೆಯಾಗಿ ಆ ನರಮೇಧ (ಮಾನವ ಯಜ್ಞ) ಸ್ವತಂತ್ರ ಇಸ್ರೇಲ್ ಸ್ಥಾಪನೆಗೆ ಕಾರಣವಾಯಿತು.

ಬದುಕುಳಿಯುವ ಸಮಸ್ಯೆಯೇ ಪ್ರಧಾನವಾಗಿರುವ, ಯುದ್ಧಪೀಡಿತ ಹಿನ್ನೆಲೆಯುಳ್ಳ ನಿಮ್ಮ ಪರಿಸರವನ್ನು ನಿಮ್ಮ ಕಾವ್ಯ ಪ್ರತಿಫಲಿಸುವುದಿಲ್ಲ ಎಂಬ ಅನಿಸಿಕೆ ಕೆಲವರದು. ಅದಕ್ಕೆ ನಿಮ್ಮ ಉತ್ತರವೇನು?ಇದೊಂದು ಪೂರ್ವಗ್ರಹವುಳ್ಳ ನಂಬಿಕೆ. ನಾನು ಯುದ್ಧಪೀಡಿತ ಪ್ರದೇಶದಲ್ಲಿರುವುದರಿಂದ ಯುದ್ಧವನ್ನು ಅಥವಾ ರಕ್ತಪಾತವನ್ನು ಕುರಿತು ಬರೆಯಲೇಬೇಕೆಂಬ ನಿಯಮವೇನಿಲ್ಲ. ಹಾಗಂತ ಅದು ನನ್ನನ್ನು ಕಾಡುವುದಿಲ್ಲ ಎಂದೇನೂ ಅಲ್ಲ. ನಾನು ಮನುಷ್ಯಪರವಾದ ಕವಿತೆಗಳನ್ನು ಬರೆಯುತ್ತೇನೆ. ಪ್ರೇಮವನ್ನು ಕುರಿತು ಬರೆಯುತ್ತೇನೆ.ಅದು ನನ್ನ ಅನುಭವದ ಭಾಗವಾಗಿರುವುದರಿಂದ ಯಾವುದೋ ರೂಪದಲ್ಲಿ ಕವಿತೆಯ ಸಾಲಾಗುವುದು ಸಹಜ. ಯುದ್ಧಪಿಪಾಸುಗಳಿಗೂ ಇವು ಯಾವುವೂ ವರ್ಜ್ಯವಲ್ಲ. ನನ್ನ ಹಾಗೆ ಚ್ಟಿಟಛ್ಞಿ ಹಿನ್ನೆಲೆಯುಳ್ಳ ನೀವು ಕ್ರಾಂತಿಕಾರಿ ಕವಿಯೇ ಆಗಬೇಕೆನ್ನುವುದು ಒಳ್ಳೆಯ ಅಪೇಕ್ಷೆಯಲ್ಲ.

ಭಾರತದ ಬಗ್ಗೆ ನಿಮ್ಮ ಅನಿಸಿಕೆ ಏನು?ಮರಳುಗಾಡು ಮತ್ತು ಕಾಂಕ್ರೀಟ್ ಕಾಡುಗಳ ನಡುವೆ ಓಡಾಡುವ ನನಗೆ ಭಾರತ ಸ್ವರ್ಗದಂತೆ ಕಾಣುತ್ತಿದೆ. ಇಲ್ಲಿನ ಹಸಿರು, ಬೆಟ್ಟ, ಕಾಡು, ಕಾಡುಪ್ರಾಣಿಗಳನ್ನು ನೋಡುವುದರಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದೇನೆ. ಮೇಲಾಗಿ ಇದೊಂದು ಪ್ರಾಚೀನ ನಾಗರಿಕತೆ. ಇಷ್ಟು ವೈವಿಧ್ಯಮಯವಾಗಿ ಕಟ್ಟಿಕೊಂಡಿರುವ ಬದುಕು, ಸಂಸ್ಕೃತಿ ಬೇರೆಲ್ಲೂ ಕಾಣಲು ಸಿಗುವುದಿಲ್ಲ.  very interesting.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.